ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Eid Milad 2023 | ಈದ್‌ ಮಿಲಾದ್‌ನ ಮಹತ್ವ

ಇಸ್ಲಾಂನ ಪ್ರಮುಖ ಹಾಗೂ ಕೊನೆಯ ಪ್ರವಾದಿಗಳಾದ ಮಹಮ್ಮದ್ (ಸಅ಼) ಅವರ ಜನ್ಮದಿನಾಚರಣೆ ಇಂದು
Published 27 ಸೆಪ್ಟೆಂಬರ್ 2023, 22:35 IST
Last Updated 27 ಸೆಪ್ಟೆಂಬರ್ 2023, 22:35 IST
ಅಕ್ಷರ ಗಾತ್ರ

ನಿರೂಪಣೆ: ಚಾಂದ್ ಬಾಷಾ ಅರಸೀಕೆರೆ

ಪ್ರವಾದಿಗಳೆಂದೂ ತಮ್ಮ ಹುಟ್ಟುಹಬ್ಬವನ್ನು ಆಚರಿಸುವ ವಿಚಾರವಾಗಿ ಎಲ್ಲಿಯೂ ಹೇಳಿಕೊಂಡವರಲ್ಲ. ಪ್ರವಾದಿಗಳು ಮಕ್ಕಾದ ಖುರೈಶ್ ಬುಡಕಟ್ಟಿಗೆ ಸೇರಿದ, ತಂದೆ ಅಬ್ದುಲ್ಲಾ ಹಾಗೂ ತಾಯಿ ಆಮಿನಾರವರಿಗೆ ಕ್ರಿ. ಶ. 571ರಲ್ಲಿ ಜನಿಸಿದರು. ಪ್ರವಾದಿಗಳ ಜನನಕ್ಕಿಂತ ಮೊದಲೇ ಅವರ ತಂದೆ ನಿಧನರಾಗಿದ್ದರೆ, ಪ್ರವಾದಿಗಳ ಆರನೆೇ ವಯಸ್ಸಿಗೆ ತಾಯಿ ಆಮಿನಾ ಅಸುನೀಗುತ್ತಾರೆ. ಅನಂತರ ತಾತ ಹಾಗೂ ಚಿಕ್ಕಪ್ಪನವರ ಮುತುವರ್ಜಿಯಲ್ಲಿ ಪ್ರವಾದಿಗಳು ಕುರಿಕಾಯುವ ಕಾಯಕದಲ್ಲಿ ತಮ್ಮ ಬಾಲ್ಯವನ್ನು ಕಳೆಯುತ್ತಾರೆ.

ಮಕ್ಕಾನಗರವು ಕವಿಗಳ, ಭಾಷಣಕಾರರ ತಾಣವಾಗಿದ್ದರೂ ಪ್ರವಾದಿಗಳು ಯಾವುದೇ ಶಾಲೆಗೆ ಹೋಗಲಿಲ್ಲ; ಧಾರ್ಮಿಕ ಚರ್ಚೆಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಲೂ ಇಲ್ಲ. ಅವರು ಸದಾ ಪ್ರಕೃತಿಯೊಂದಿಗೆ ಏಕಾಂತದಲ್ಲಿ ಇರುವುದನ್ನು ಬಯಸುತ್ತಿದ್ದರು. ಪ್ರವಾದಿಗಳು ತಮ್ಮ ನಲವತ್ತನೇ ವಯಸ್ಸಿಗೆ ಬಂದಾಗ, ಧ್ಯಾನ–ಪ್ರಾರ್ಥನೆಗಾಗಿ ಮಕ್ಕಾದ ಆಚೆಗಿರುವ ಹಿರಾ ಎಂಬ ಬೆಟ್ಟದ ಗುಹೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿ ದೇವಚರ ಜಿಬ್ರೀಲ್ ಅವರು ಪ್ರತ್ಯಕ್ಷರಾಗಿ, ಪ್ರವಾದಿಗಳಿಗೆ ಜ್ಞಾನವನ್ನು ಬೋಧಿಸುತ್ತಾರೆ. ದೇವಚರರಿಂದ ದೊರಕಿದ ದೈವಸಂದೇಶವು ಪ್ರವಾದಿಗಳ ತುಟಿಯಲ್ಲಿ ದಿವ್ಯವಚನವಾಗಿ ಕುರ್‌ಆನ್ ಎಂಬ ಪವಿತ್ರ ಗ್ರಂಥವಾಗಿ ಅವತೀರ್ಣಗೊಳ್ಳುತ್ತದೆ.

ಪ್ರವಾದಿಗಳು ಸಂಪೂರ್ಣ ಮನುಕುಲ ಒಂದೇ ಎಂದು ಸಾರಿ, ಸಮಾನತೆಯ ಆದೇಶವಿತ್ತು, ಪರಸ್ಪರ ಪ್ರೀತಿಯೇ ಧರ್ಮದ ಸಾರವೆಂದು ಸಾರಿದ ಮಾನವತಾವಾದಿ. ಮನುಷ್ಯರು ಪರಸ್ಪರ ಸಹೋದರರಂತೆ ಬಾಳಬೇಕೆಂದು
ಪ್ರೇರಣೆಯನ್ನಿತ್ತವರು. ಪ್ರವಾದಿಗಳು ತತ್ವಜ್ಞಾನಿಗಳು, ಸಮಾಜಸುಧಾರಕರು; ಅವರು ದಯಾಪರತೆ, ಔದಾರ್ಯ, ಸಂವೇದನಾಶೀಲತೆ, ದೈವಭಕ್ತಿ, ಪರಿಶ್ರಮ, ಪ್ರಾಮಾಣಿಕತೆಗಳೆಂಬ ಗುಣಗಳ ಒಡೆಯರಾಗಿದ್ದರು. ತಮ್ಮ ಶತ್ರುಗಳನ್ನೂ ಗೌರವದಿಂದ ಕಾಣುತ್ತಿದ್ದರು. ಜ್ಞಾನಾರ್ಜನೆ ಪ್ರತಿ ಮುಸ್ಲಿಂ ಸ್ತ್ರೀ–ಪುರುಷರ ಕರ್ತವ್ಯವಾಗಿದೆ ಎಂದು ತಿಳಿಸಿ ಶಿಕ್ಷಣದ ಮಹತ್ವವನ್ನು ಅವರು ಎತ್ತಿಹಿಡಿದಿದ್ದಾರೆ.

ಪ್ರವಾದಿಗಳ ನಡವಳಿಕೆಯಲ್ಲಿ ದಯಾಪರತೆ, ನಮ್ರತೆ, ನಿಃಸ್ವಾರ್ಥ, ತಾಳ್ಮೆ ಹಾಗೂ ಔದಾರ್ಯಗಳು ವ್ಯಾಪಕವಾಗಿ ಗೋಚರಿಸುತ್ತಿದ್ದವು. ಅವರು ಮಿತಭಾಷಿಗಳು; ತಾವು ಮಾತನಾಡಿದಾಗಲೆಲ್ಲ ಕೇವಲ ವಿವೇಚನೆಯ ಮಾತನ್ನೇ ಆಡುತಿದ್ದರು.  ತಮ್ಮ ಪ್ರಿಯಪುತ್ರ ಇಬ್ರಾಹಿಂ ಮರಣ ಹೊಂದಿದ ದಿನ ಸೂರ್ಯಗ್ರಹಣವಾಗಿರುತ್ತದೆ. ಬಂದ ನೆಂಟರಿಷ್ಟರೆಲ್ಲ ಭಗವಂತ ತನ್ನ ವೈಯಕ್ತಿಕ ಸಂತಾಪವನ್ನು ಗ್ರಹಣದ ಮುಖೇನ ಸೂಚಿಸುತ್ತಿದ್ದಾನೆ ಎಂದು ಹೇಳುತ್ತಾರೆ. ಆಗ ಪ್ರವಾದಿಗಳು ‘ಗ್ರಹಣವೆಂಬುವುದು ಪ್ರಕೃತಿಯ ವಿದ್ಯಮಾನಗಳಲ್ಲಿ ಒಂದು; ಮನುಷ್ಯರ ಜೀವನ್ಮರಣಗಳಿಗೂ ಅದಕ್ಕೂ ಸಂಬಂಧವನ್ನು ಕಲ್ಪಿಸದಿರಿ’ ಎನ್ನುತ್ತಾರೆ.

ಮಹಿಳೆಯರಿಗೆ ಸಂಪೂರ್ಣ ಗೌರವ ಹಾಗೂ ಮುಕ್ತ ಸ್ವಾತಂತ್ರ್ಯವನ್ನು ಘೋಷಿಸಿದವರು ಪ್ರವಾದಿಗಳು. ಎಲ್ಲರೂ ತಮ್ಮ ನೆರೆಹೊರೆಯವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕೆಂದು ಸೂಚಿಸುತ್ತಾರೆ. ಜೀವನದ ಪ್ರತಿ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ನಿರ್ವಹಿಸಬೇಕು; ಏನೇ ಸಂಕಷ್ಟ ಎದುರಾದರೂ ಸತ್ಯವನ್ನೇ ನುಡಿಯಬೇಕು ಎಂದಿದ್ದಾರೆ.

ಪ್ರವಾದಿಗಳ ಜನ್ಮದಿನೋತ್ಸವ ಎಂದರೆ ವೈಮನಸ್ಯಗಳನ್ನು ದೂರವಿಟ್ಟು, ನೆರೆಹೊರೆಯವರ ಜೊತೆ ಶಾಂತಿ, ಸೌಹಾರ್ದತೆ, ಪರಸ್ಪರ ಪ್ರೀತಿಯಿಂದ ಬದುಕುವುದು; ಬಡವರು, ರೋಗಿಗಳು, ವೃದ್ಧರು, ಅನಾಥರು, ತಬ್ಬಲಿಗಳ, ಹಸಿದವರ ಸೇವೆಯೇ ಪರಮೋಚ್ಚ ಸೇವೆಯೆಂದು ನಂಬುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT