ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮವೇ ಆಗಿದ್ದ ಯೇಸು

ಶ್ರೀ ರವಿಶಂಕರ ಗುರೂಜಿ
Published 24 ಡಿಸೆಂಬರ್ 2023, 15:12 IST
Last Updated 24 ಡಿಸೆಂಬರ್ 2023, 15:12 IST
ಅಕ್ಷರ ಗಾತ್ರ

ಪ್ರೇಮಕ್ಕೆ ರೂಪವಿಲ್ಲ ಅಥವಾ ನಾಮವಿಲ್ಲ. ಆದರೂ ಅದು ಎಲ್ಲಾ ನಾಮಗಳಲ್ಲಿ, ಎಲ್ಲಾ ರೂಪಗಳಲ್ಲಿ ಪ್ರಕಟವಾಗುತ್ತದೆ. ಪ್ರೇಮವು ಈ ಸೃಷ್ಟಿಯ ಅತೀ ದೊಡ್ಡ ರಹಸ್ಯ. ಇಡೀ ಸೃಷ್ಟಿಯಲ್ಲಿ ತುಂಬಿರುವ ಈ ಪ್ರೇಮವನ್ನು ಗಮನಿಸಲು ತೀಕ್ಷ್ಣವಾದ ದೃಷ್ಟಿ ಬೇಕು. ತನ್ನ ಮರಿಗೆ ಉಣಿಸುತ್ತಿರುವ ಒಂದು ಹಕ್ಕಿಯನ್ನು ನೋಡಿ. ಆ ಪುಟ್ಟ ಮರಿಯು ತನ್ನ ತಾಯಿಯ ಆಗಮನಕ್ಕಾಗಿ ಕಾಯುತ್ತಿರುತ್ತದೆ. ಅಲ್ಲಿ ಪ್ರೇಮವಿದೆ. ಮೀನುಗಳಲ್ಲಿ ಪ್ರೇಮವಿದೆ, ಆಕಾಶದಲ್ಲಿ, ನೀರಿನ ಕೆಳಗೆ, ಭೂಮಿಯ ಮೇಲೆ ಪ್ರೇಮವಿದೆ. ಬಾಹ್ಯಾಕಾಶದಲ್ಲಿ ಪ್ರೇಮವಿದೆ. ಧೈರ್ಯದೊಡನೆ ಪ್ರೇಮವು ಬರುತ್ತದೆ.

ಯೇಸುವಿನಲ್ಲಿ ಪ್ರೇಮದ ಅಭಿವ್ಯಕ್ತಿಯನ್ನು ಕಾಣಬಹುದು. ಈ ವಿಶ್ವದ ಅತೀ ಶಕ್ತಿಶಾಲಿಯಾದ ಬಲವೆಂದರೆ ಪ್ರೇಮ. ಆದರೂ ಪ್ರೇಮವು ನಮ್ಮನ್ನು ಅತೀ ದೀನರಾಗಿ ಮಾಡುತ್ತದೆ. ನಾವು ಪ್ರೇಮದಲ್ಲಿದ್ದಾಗ ಅತೀ ಬಲಹೀನರಾಗಿರುತ್ತೇವೆ. ಆದ್ದರಿಂದಲೇ ಮಾನವರ ಅತೀ ಚಿರಪರಿಚಿತ ಸಿದ್ಧಾಂತಗಳೆಲ್ಲವನ್ನೂ ಯೇಸು ಬದಿಗೆ ಸರಿಸಿಬಿಟ್ಟರು.

‘ಬಲಿಷ್ಠರೇ ಈ ಭೂಮಿಯನ್ನು ಪಡೆಯುತ್ತಾರೆ’ ಎನ್ನುವ ಬದಲಿಗೆ, ‘ಬಲಹೀನರೇ ಭೂಮಿಯನ್ನು ಎರವಲು ಪಡೆಯುತ್ತಾರೆ. ಬಲಹೀನರೇ ಸ್ವರ್ಗವನ್ನು ಪಡೆಯುತ್ತಾರೆ’ ಎಂದರು. ಪ್ರೇಮವು ಬಲವನ್ನು ತರುವುದರಿಂದ ಅವರಿಗೆ ಈ ರೀತಿಯಾಗಿ ನುಡಿಯುವ ಧೈರ್ಯ ಬಂದಿತು.

ನೀವು ಪ್ರಾಣಶಕ್ತಿಯಿಂದ ತುಂಬಿ ಸ್ಪಂದನಾಯುತರಾಗಿರದ ಹೊರತು, ಯೇಸುವಿನ ಬೋಧನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಕೇವಲ ಪರಿಕಲ್ಪಿತ ಜ್ಞಾನವಾಗುತ್ತದೆ. ಯೇಸುವನ್ನು ಅರ್ಥ ಮಾಡಿಕೊಳ್ಳಲು ನಾವು ಅವರೊಡನೆ ನಮ್ಮ ಹೃದಯದಿಂದ ಸಂಬಂಧವನ್ನು ಅನುಭವಿಸಬೇಕು. ನಮ್ಮ ಹೃದಯದಲ್ಲಿ ಅವರ ಅಸ್ತಿತ್ವವನ್ನು ಅನುಭವಿಸಬೇಕು. ಮನಸ್ಸಿಗೆ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೇವಲ ಹೃದಯಕ್ಕೆ ಮಾತ್ರ ಯೇಸುವನ್ನು ತಿಳಿಯಲು ಸಾಧ್ಯ. ಅಧಿಕಾರವಿದ್ದಾಗ ಪ್ರೇಮವಿರಲು ಸಾಧ್ಯವಿಲ್ಲ. ಪ್ರೇಮವಿದ್ದಾಗ ಅಧಿಕಾರದ ಅವಶ್ಯಕತೆ ಇರುವುದಿಲ್ಲ. ನಿಮ್ಮನ್ನು ಪ್ರೀತಿಸುವವರು ನಿಮ್ಮ ಮೇಲೆ ಹೆಚ್ಚು ಅಧಿಕಾರವನ್ನು ಹೊಈದಿರುತ್ತಾರೆ. ಅವರು ತಮ್ಮ ಬಾಹುಗಳನ್ನು ಚಾಚಿ, " ಬಾ. ನೀನು ನನ್ನ ಸ್ನೇಹಿತ. ಭಯ ಪಡಬೇಡ. ನನ್ನನ್ನು ಮೇಲೆಲ್ಲೋ ಕೂರಿಸಬೇಡ. ನಿನ್ನ ಹೃದಯಲ್ಲೊಂದು ಸ್ಥಳವನ್ನು ನನಗೆ ಕೊಡು. ನಿನ್ನ ಸುತ್ತಲೂ ಕಾಣುವ ಎಲ್ಲರಲ್ಲೂ ನನ್ನನ್ನು ನೋಡು. ನಾನು ನಿನ್ನನ್ನು ಪ್ರೀತಿಸುವಷ್ಷೇ ನೀನೂ ಸಹ ಎಲ್ಲರನ್ನೂ ಪ್ರೀತಿಸು. ನೀನು ನನ್ನನ್ನು ಪ್ರೀತಿಸುವಷ್ಷೇ ಎಲ್ಲರನ್ನೂ ಪ್ರೀತಿಸು. ಅದನ್ನು ಸುತ್ತಲೂ ಇರುವ ಎಲ್ಲರಿಗೂ ಹಂಚು" ಎಂದರು. ಪ್ರೇಮದ ಸಾಕಾರವೇ ಆಗಿದ್ದ ಅವರನ್ನು ಕಾಣಲು ನಿಮಗೆ ಬೇರೇನು ತಾನೇ ಬೇಕು?

ಒಂದು ಕೆರೋಲ್ನಲ್ಲಿರುವ ಸುಂದರವಾದ ವಾಕ್ಯವು, ‘ಸ್ವರ್ಗಕ್ಕೆ ಸರಿಸಮಾನವಾದ ಶಾಂತಿಯಲ್ಲಿ ಮಲಗು’ ಎನ್ನುತ್ತದೆ. ಇದರ ಅರ್ಥವಾಗುತ್ತವೇನು?

ಸಣ್ಣ ಮನಸ್ಸು ದೊಡ್ಡ ಮನಸ್ಸಿನ ಮಡಿಲಲ್ಲಿ ಮಲಗಿದಾಗ, ಸ್ವರ್ಗಕ್ಕೆ ಸರಿಸಮಾನವಾದಂತಹ ಶಾಂತಿಯಲ್ಲಿ ಮಲಗುತ್ತದೆ. ಸಣ್ಣ ಮನಸ್ಸು ಒಂದು ಮಗುವಿನಂತೆ. ಸದಾ ಕ್ರಿಯಾಶೀಲವಾಗಿರುತ್ತದೆ. ಅಳುತ್ತಿರುತ್ತದೆ, ಅದು ಬೇಕು, ಇದು ಬೇಕು ಎಂದು ತಗಾದೆ ಮಾಡುತ್ತಲೇ ಇರುತ್ತದೆ. ಅದು ಸದಾ ಅವಲಂಬಿಯಾಗಿರುತ್ತದೆ. ದೊಡ್ಡ ಮನಸ್ಸು ತಾಯಿಯಂತೆ. ಸಣ್ಣ ಮನಸ್ಸು ದೊಡ್ಡ ಮನಸ್ಸಿನಿಂದ ದೂರವಾದಾಗ, ಕೋಲಾಹಲದಲ್ಲಿ, ಗೊಂದಲದಲ್ಲಿ ಸಿಲುಕಿಕೊಳ್ಳುತ್ತದೆ. ಅಳಲು ಪ್ರಾರಂಭಿಸುತ್ತದೆ. ದೊಡ್ಡ ಮನಸ್ಸಿನೆಡೆಗೆ ಓಡಿ ಬರುತ್ತದೆ. ಆಗ ಶಾಂತಿಯನ್ನು , ಪರಿಹಾರವನ್ನು ಕಂಡುಕೊಳ್ಳುತ್ತದೆ. ಆಗ ಪುಟ್ಟ ಆತ್ಮವು, ಸಣ್ಣ ಮನಸ್ಸು ದೊಡ್ಡ ಮನಸ್ಸಿನ ಮಡಿಲಲ್ಲಿ, ವಿಶ್ವದ, ವೈಶ್ವಿಕ ಮನಸ್ಸಿನಲ್ಲಿ , ಸ್ವರ್ಗಕ್ಕೆ ಸರಿಸಮನಾದ ಶಾಂತಿಯಲ್ಲಿ ಮಲಗುತ್ತದೆ. ತಾಯಿ ಮತ್ತು ಮಗುವು ಜೊತೆಯಲ್ಲಿ ಇದ್ದಾಗ ಅದೇ ಪವಿತ್ರ. ತಾಯಿ ಮತ್ತು ಮಗುವು ಸ್ವರ್ಗಕ್ಕೆ ಸರಿಸಮವಾದ ಶಾಂತಿಯಲ್ಲಿದ್ದಾಗ, ಅದೇ ಧ್ಯಾನ. ನೀವು ಪ್ರೇಮವೆಂಬ ವಸ್ತುವಿನಿಂದ ಮಾಡಲ್ಪಟ್ಟಿರುವಿರಿ ಎಂದು ಗುರುತಿಸಿ. ಪ್ರತಿಯೊಬ್ಬರೂ ಸಹ ಈ ಭೂಮಿಯ ಮೇಲಿರುವ ಒಂದು ವಿಶೇಷ ಕೊಡುಗೆ. ನೀವೊಂದು ಕ್ರಿಸ್ಮಸ್ ಮರ. ಹಿಮ ಬೀಳುತ್ತಿರುವ ಸಮಯದಲ್ಲಿ ಇತರ ಎಲ್ಲಾ ಮರಗಳೂ ಬರುಡಾಗಿದ್ದಾಗ ನೀವು ಮಾತ್ರ ಹಚ್ಚಹಸಿರಾಗಿರುತ್ತೀರಿ ಮತ್ತು ನಿಮ್ಮ ಎಲ್ಲಾ ರಂಭೆಗಳೂ ಮೇಲ್ಮುಖವಾಗಿರುತ್ತವೆ. ಉಡುಗೊರೆಗಳನ್ನು, ಬೆಳಕನ್ನು ಹೊತ್ತು ತರುತ್ತೀರಿ, ನಿಮಗಾಗಿ ಅಲ್ಲ, ನಿಮ್ಮ ಸುತ್ತಲೂ ಇರುವವರಿಗಾಗಿ. ನೀವು ಹೊತ್ತುಕೊಂಡಿರುವ ಎಲ್ಲಾ ಉಡುಗೊರೆಗಳೂ ಸಹ ನಿಮಗಾಗಿ ಅಲ್ಲ, ಅದು ನಿಮ್ಮ ಸುತ್ತಲೂ ಇರುವವರಿಗಾಗಿ ಎಂದು ನೆನಪಿನಲ್ಲಿ ಇಟ್ಟುಕೊಳ್ಳಿ. ನಿಮ್ಮ ಬಳಿ ಬರುವ ಯಾರಿಗೇ ಆಗಲಿ ನಿಮ್ಮ ಉಡುಗೊರೆಗಳನ್ನು ಕೊಡಿ. ಹೀಗೆ ಮಾಡಿದಾಗ ನಿಮ್ಮ ಅವಶ್ಯಕತೆಗಳಲ್ಲವನ್ನೂ ಹೇಗೆ ನೋಡಿಕೊಳ್ಳಲಾಗುತ್ತದೆಂದು ನೋಡಿ/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT