ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ: ಕಾಮದಹನದ ದಿನ

Published 24 ಮಾರ್ಚ್ 2024, 20:14 IST
Last Updated 24 ಮಾರ್ಚ್ 2024, 20:14 IST
ಅಕ್ಷರ ಗಾತ್ರ

ಬಣ್ಣಗಳಿಲ್ಲದ ಜಗತ್ತನ್ನು ಒಮ್ಮೆ ಊಹಿಸಿಕೊಳ್ಳಿ. ಬದುಕು ಎಷ್ಟೊಂದು ನೀರಸ ಎಂಬುದು ಕೂಡಲೇ ಅನುಭವಕ್ಕೆ ಬರುತ್ತದೆ. ಪ್ರಕೃತಿಯಲ್ಲಿ ರುವ ಬಣ್ಣಗಳು ನಮ್ಮ ಬದುಕಿನ ಸುಂದರ ತಾಣಗಳು. ಈ ತತ್ತ್ವದ ಅನುಸಂಧಾನವೋ ಎಂಬಂತೆ ಹೋಳಿಯ ಆಚರಣೆ ನಮ್ಮ ಸಂಸ್ಕೃತಿಯಲ್ಲಿ ಮೂಡಿಕೊಂಡಿದೆ. 

ಬಣ್ಣಗಳನ್ನು ಎರಚುವುದು, ಓಕಳಿ ಆಡುವುದು – ಇವು ಇಂದಿನ ಹೋಳಿಹಬ್ಬದ ಆಚರಣೆಯ ಪ್ರಧಾನ ಅಂಶವಾಗಿ ಕಾಣುತ್ತಿದೆ. ವಸಂತಕಾಲದ ಆಗಮನವನ್ನು ಸಂಭ್ರಮಿಸುವ ಬಗೆ ಇದು. ಪ್ರಕೃತಿಯ ವೈವಿಧ್ಯಕ್ಕೂ ಹೊಸತನಕ್ಕೂ ಚೇತನಕ್ಕೂ ಸಂಕೇತವೇ ವಸಂತಕಾಲ. ಅದರ ಸಂಭ್ರಮಾಚರಣೆಯೇ ಬಣ್ಣಗಳ ಆಟ. ಆದರೆ ಇದಿಷ್ಟೇ ಹೋಳಿ ಹಬ್ಬವಲ್ಲ; ಕಾಮದಹನವೇ ಹೋಳಿಯ ಪ್ರಧಾನ ಅಂಶ.

ಕಾಮದಹನದ ಕಥೆ ನಮಗೆಲ್ಲ ಗೊತ್ತಿದೆ. ಶಿವನು ತಪಸ್ಸಿಗೆ ಕುಳಿತ್ತಿದ್ದಾನೆ. ಅವನ ತಪಸ್ಸನ್ನು ಕೆಡಿಸಲು ದೇವತೆಗಳು ಮನ್ಮಥನನ್ನು ಶಿವನಲ್ಲಿಗೆ ಕಳುಹಿಸಿದ್ದಾರೆ. ದೇವತೆಗಳ ಕೋರಿಕೆಯಿಂದ ಉಬ್ಬಿಹೋದ ಮನ್ಮಥನು ಶಿವನ ಕಡೆಗೆ ತನ್ನ ಪುಷ್ಪಬಾಣವನ್ನು ಪ್ರಯೋಗಿಸಿದ. ಶಿವನ ತಪಸ್ಸಿಗೆ ಭಂಗ ಒದಗಿತು. ಕೋಪದಿಂದ ಅವನು ಮೂರನೆಯ ಕಣ್ಣನ್ನೇ ತೆರೆದುಬಿಟ್ಟ! ತಪಸ್ಸಿಗೆ ಅಡ್ಡಿ ಉಂಟುಮಾಡಿದ ಮನ್ಮಥ ಆ ಮೂರನೆಯ ಕಣ್ಣಿಗೆ ಬಿದ್ದ; ಕ್ಷಣಾರ್ಧದಲ್ಲಿ ಉರಿದುಹೋಗಿ ಬೂದಿಯಾಗಿ ಉಳಿದ.

ಈ ಕಥೆಗೆ ಹಲವು ಆಯಾಮಗಳ ಅರ್ಥಗಳೇ ಇವೆಯೆನ್ನಿ! ‘ಕಾಮ’ ಎಂಬ ತತ್ತ್ವದ ಬೇರೆ ಬೇರೆ ನೆಲೆಗಳನ್ನು ಇಲ್ಲಿ ಕಾಣಬಹುದು.

ಕಾಮ ಇಲ್ಲದೆ ಜಗತ್ತು ಮುಂದುವರೆಯುವಂತೆಯೇ ಇಲ್ಲ. ನಮ್ಮ ಬಯಕೆಗಳೆಲ್ಲವೂ ಕಾಮವೇ. ಸಾಮಾನ್ಯಾರ್ಥದಲ್ಲಿರುವ ಗಂಡು–ಹೆಣ್ಣುಗಳ ಆಕರ್ಷಣೆಯಷ್ಟೆ ಕಾಮವಲ್ಲ. ಈ ವಿಶಾಲಾರ್ಥದಲ್ಲಿಯೇ ಅದನ್ನು ನಮ್ಮ ಸಂಸ್ಕೃತಿಯಲ್ಲಿ ಪುರುಷಾರ್ಥವಾಗಿ ಕಾಣಿಸಿರುವುದು. ಆದರೆ ಈ ಕಾಮವು
ಸ್ವಾಭಾವಿಕವಾಗಿರಬೇಕು; ಪ್ರಕೃತಿಯ ನಿಯಮಗಳಿಗೂ ಸಂಸ್ಕೃತಿಯ ನಿಯಮಗಳಿಗೂ ವಿರುದ್ಧವಾಗಿರಬಾರದು. ಎಂದರೆ ಅಕಾಲದ ಕಾಮಕ್ಕೆ ಅವಕಾಶ ಸಲ್ಲದು. ಇಂಥ ಕಾಮ ನಮಗೆ ವೈರಿಯೇ ಹೌದು. ಒಳಿತನ್ನು ಉಂಟುಮಾಡುವ ಕಾಮವೂ ಇದೆ, ಒಳಿತನ್ನು ಕೆಡಿಸುವ ಕಾಮವೂ ಇದೆ.

ಸತಿಯನ್ನು ಕಳೆದುಕೊಂಡ ಪತಿ, ಎಂದರೆ ಶಿವನು ಲೋಕವಿಮುಖನಾಗಿ ತಪಸ್ಸಿಗೆ ಕುಳಿತ್ತಿದ್ದಾನೆ. ಇತ್ತ ಕಡೆ ಪಾರ್ವತಿಯೂ ಶಿವನನ್ನು ಮದುವೆಯಾಗಲು ತಪಸ್ಸನ್ನು ಮಾಡುತ್ತಿದ್ದಾಳೆ. ಎದುರಾಗಿರುವ ಕಂಟಕದಿಂದ ಜಗತ್ತು ಪಾರಾಗಬೇಕಾದರೆ ಶಿವ–ಶಕ್ತಿ ಒಂದಾಗಬೇಕು, ಎಂದರೆ ಪಾರ್ವತೀ–ಪರಮೇಶ್ವರರು ಮದುವೆಯಾಗಬೇಕು. ಆದರೆ ತಪಸ್ಸಿನಲ್ಲಿ ಕುಳಿತ ಶಿವನನ್ನು ಎಚ್ಚರಿಸಬಲ್ಲವರು ಯಾರು? ಪಾರ್ವತಿಯ ಕಡೆಗೆ ಅವನ ಮನಸ್ಸನ್ನು ತಿರುಗಿಸಬಲ್ಲವರು ಯಾರು? ಅದಕ್ಕೆ ಉತ್ತರವೇ ‘ಕಾಮ’. ಕಾಮನ ಜೊತೆಗೆ ‘ವಸಂತ’ನೂ ಸೇರಿಕೊಳ್ಳಬೇಕು. ಆದರೆ ದೇವತೆಗಳು ಅಕಾಲದಲ್ಲಿ ವಸಂತವನ್ನು ಸೃಷ್ಟಿಸಿದರು. ಕಾಮನು ಶಿವನ ಆಶ್ರಮದಲ್ಲಿ ತೋರಿಕೊಂಡ ಕಾಲವೂ ಅಕಾಲವೇ ಆಗಿತ್ತು. ಹೀಗಾಗಿಯೇ ಅವನು ಶಿವನಿಂದ ಸುಟ್ಟುಹೋದ. ಆದರೆ ಶಿವನು ಕರುಣಾಮಯಿ. ಅವನು ಮತ್ತೆ ಕಾಮನನ್ನು ಬದುಕಿಸಿದ; ಲೋಕಕ್ಷೇಮಕ್ಕೆ
ಕಾರಣನಾದ.

ಕಾಮಕ್ಕೆ ಎರಡು ರೂಪಗಳು. ಸಕಾಲದ ಕಾಮದಲ್ಲಿ ಲೋಕದ ಕ್ಷೇಮ ಅಡಗಿದೆ; ಆದರೆ ಅಕಾಲದ ಕಾಮದಿಂದ ಅಪಾಯವೇ ಎದುರಾಗುತ್ತದೆ. ಹೀಗಾಗಿ ನಾವು
ಹೋಳಿಹುಣ್ಣಿಮೆಯಂದು ಮನನ ಮಾಡಬೇಕಾದುದು, ‘ನಮ್ಮ ಬಯಕೆಗಳು ಇಂದು ಎತ್ತ ಸಾಗಿವೆ’. ಕಾಮನನ್ನು ಸುಡುವಾಗ ಕೆಟ್ಟ ಪದಗಳಿಂದ ಜನರು ಅವನನ್ನು ಬೈಯುವುದುಂಟು. ಇದು ಅಕಾಲದ ಕಾಮದ ನಿಂದನೆಯೇ ಹೌದು. ಈ ಆಚರಣೆಯ ಹಿಂದಿರುವ ಧ್ವನಿಯನ್ನು ಅರಿತುಕೊಂಡರೂ ಸಾಕು, ‘ಕಾಮದಹನ’ವು ನಮ್ಮ ಜೀವನದಲ್ಲಿ ಎಷ್ಟು ಅನಿವಾರ್ಯ ಎಂದು ನಮಗೆ ಅರಿವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT