ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತೃತರ್ಪಣೆಯ ಮಹಾಕಾಲ: ಇಂದು ಮಹಾಲಯ ಅಮಾವಾಸ್ಯೆ

Published 13 ಅಕ್ಟೋಬರ್ 2023, 22:32 IST
Last Updated 13 ಅಕ್ಟೋಬರ್ 2023, 22:32 IST
ಅಕ್ಷರ ಗಾತ್ರ

ಪಿತೃಗಳು, ದೇವತೆಗಳು ಮತ್ತು ಋಷಿಗಳು ಭಾರತೀಯ ಜೀವನಪದ್ಧತಿಯಲ್ಲಿ ಶ್ರದ್ಧೇಯವಾದ ಹಲವು ಸಂಗತಿಗಳಲ್ಲಿ ಪ್ರಮುಖವಾದವು. ಜವಾಬ್ದಾರಿಯುತವಾದ ಗೃಹಸ್ಥನೊಬ್ಬನು ಪಿತೃ, ದೇವತಾ ಮತ್ತು ಋಷಿ – ಈ ಮೂವರ ಕುರಿತಾಗಿಯೂ ಮಾಡಬೇಕಾದ ಕರ್ತವ್ಯವನ್ನು ಸ್ಮೃತಿಗಳೂ ಕಲ್ಪಗ್ರಂಥಗಳೂ ಪದೇ ಪದೇ ಹೇಳಿದ್ದಿದೆ. ಅಂದರೆ ನಮ್ಮ ಮಾನವಜೀವಿತಕ್ಕೆ ನೆರವಾಗಿರುವ ಬಲುಮುಖ್ಯವಾದ ಸಂಗತಿಗಳಲ್ಲಿ ದೇವತೆಗಳು, ಪಿತೃಗಳು ಮತ್ತು ಋಷಿಗಳ ಪಾಲು ಬಲುದೊಡ್ಡದು. ಹೀಗಾಗಿ ಅವರ ಋಣದಿಂದ ಮುಕ್ತಿಹೊಂದುವ ಸಲುವಾಗಿ ಗೃಹಸ್ಥನೊಬ್ಬನು ಕರ್ತವ್ಯಬದ್ಧನೂ ಆಗುತ್ತಾನೆ. ತಿಳಿವನ್ನು ಕರುಣಿಸಿದ ಋಷಿಗಳಿಗೆ ತರ್ಪಣವರ್ಪಿಸಿ ತೃಪ್ತಿಗೈಯುವ ಸಲುವಾಗಿಯೇ ಭಾದ್ರಮಾಸದ ಶುಕ್ಲಪಂಚಮಿ ದಿನವನ್ನು ವಿಶೇಷವಾಗಿ ಹೇಳಲಾಗಿದೆ. ಇನ್ನು ದೇವತೆಗಳಿಗೆ ತೃಪ್ತಿತರುವ ನಾನ ಬಗೆಯ ಪೂಜೆಗಳೂ ವ್ರತಗಳೂ ಹಬ್ಬಗಳೂ ಕಾಮ್ಯಕರ್ಮಗಳೂ ಇವೆಯಷ್ಟೆ. ಒಂದಿಲ್ಲೊಂದು ಬಗೆಯಲ್ಲಿ ದೇವತಾಸಂತರ್ಪಣೆಯನ್ನು ದಿನವೂ ಆಚರಿಸುವ ಅವಕಾಶ ಇದೆಯೆನ್ನಬಹುದು. ಇನ್ನು ಉಳಿದಿದ್ದು ಪಿತೃಸಂತರ್ಪಣೆ.

ತಂದೆಯ ಮತ್ತು ತಾಯಿಯ ಹಿಂದಿನ ಏಳು ತಲೆಮಾರುಗಳನ್ನು ಪಿತೃಗಳೆಂದು ಗುರುತಿಸಲಾಗಿದೆ. ಕುಲದ ಉದ್ಧಾರ, ಕುಲದ ಕ್ಷೇಮ ಮತ್ತು ಶ್ರೇಯಸ್ಸುಗಳಿಗೆ ಇವರ ಹಾರೈಕೆ ಬಲುಮುಖ್ಯ. ದೇವತಾರ್ಚನೆಯ ಭಾಗವಾಗಿ ದಿನವೂ ಪಿತೃಗಳನ್ನು ನೆನೆದುಕೊಂಡು ನಮಸ್ಕರಿಸುವ ಪದ್ಧತಿ ಇದೆ. ಇದಲ್ಲದೆ, ಗತಿಸಿದ ಹಿರಿಯರಿಗಾಗಿ ಅವರ ಮರಣದ ತಿಥಿಯಂದು ವಾರ್ಷಿಕ ಶ್ರಾದ್ಧಾಚರಣೆಯನ್ನೂ ಅವರ ಮಕ್ಕಳು ಮಾಡುವ ಸಂಪ್ರದಾಯ ಇದೆ. ಇದರ ಹೊರತಾಗಿಯೂ ಪಿತೃಗಳಿಗಾಗಿಯೇ ವಿಶೇಷವೆಂದು ಗುರುತಿಸಲಾದ, ಅವರ ಸಂತರ್ಪಣೆಗೆ ಅರ್ಪಿತವಾದ ಒಂದಿಡೀ ಪಕ್ಷವೇ ಇರುವುದು, ಅಂದರೆ ಹದಿನೈದು ದಿನಗಳ ಕಾಲಾವಕಾಶ ಇರುವುದು ವಿಶೇಷ. ಭಾದ್ರಪದ ಮಾಸದ ಕೃಷ್ಣಪಕ್ಷವು ಪಿತೃತರ್ಪಣೆಗಾಗಿ ಇರುವ ಪಕ್ಷವಾದ್ದರಿಂದ ಪಿತೃಪಕ್ಷವೆಂತಲೂ ಕರೆಸಿಕೊಳ್ಳುತ್ತದೆ. ಕುಲದ ಮೃತ ಹಿರಿಯರು ಯಾರೇ ಇದ್ದರೂ ಅವರನ್ನು ನೆನೆದು ತರ್ಪಣವನ್ನು ಅರ್ಪಿಸಿ ಕರ್ತವ್ಯವನ್ನು ಪೂರೈಸುವ ಹೊತ್ತು ಇದು.

ಭಾರತಭೂಮಿಯ ನಾನಾ ತೀರ್ಥಕ್ಷೇತ್ರಗಳಲ್ಲಿ, ಅದರಲ್ಲಿಯೂ ನದೀಸಂಗಮ ಇರುವ ಕ್ಷೇತ್ರಗಳಲ್ಲಿ ಪಿತೃಪಕ್ಷದ ಹದಿನೈದು ದಿನಗಳು ಬಹಳೇ ಜನಜಂಗುಳಿ ಇದ್ದಿರುತ್ತದೆ. ಗತಿಸಿದ ತಮ್ಮ ಪಿತೃಗಳಿಗೆ ಪುಣ್ಯನದೀತೀರದಲ್ಲಿ ತರ್ಪಣ ಅರ್ಪಿಸುವುದಕ್ಕೆ ಗೃಹಸ್ಥರು ಮುಂದಾಗುತ್ತಾರೆ. ಈ ಮಾಸದ ಕೊನೆಯಲ್ಲಿ ಬರುವ ಅಮಾವಸ್ಯೆಯ ಹೊತ್ತಿಗಂತೂ ಈ ಜನಸಂದಣಿ ಇನ್ನಷ್ಟು ಬೆಳೆದಿರುತ್ತದೆ. ಈ ಅಮಾವಾಸ್ಯೆಯೇ ಮಹಾಲಯ ಅಮಾವಾಸ್ಯೆ, ಮತ್ತು ಪಿತೃಪಕ್ಷದ ಮುಕ್ತಾಯವೂ ಹೌದು.

ಬದುಕು ಒಂದು ಪುನರಾವರ್ತನಗೊಳ್ಳುವ ಮಹಾವರ್ತುಲ ಎಂಬ ಭಾರತೀಯ ದರ್ಶನಗಳ ಕಾಣ್ಕೆ. ಇದು ನಮ್ಮ ನಂಬುಗೆ, ಹಬ್ಬಗಳು, ಜೀವನದೃಷ್ಟಿ, ಮೌಲ್ಯಗಳು ಹಾಗೂ ಪೂರ್ಣ ಬದುಕನ್ನು ಪ್ರಭಾವಿಸಿದೆ. ಜೀವನಮಹಾಯಾತ್ರೆಯಲ್ಲಿ ಮಾನವ ದೇಹವನ್ನು ಧರಿಸಿ ಓಡಾಡಿ ಬದುಕಿಕೊಂಡಿರುವುದು ಸಣ್ಣದೊಂದು ಭಾಗ ಮಾತ್ರ; ಅದರ ಹೊರತಾಗಿಯೂ ಈ ಯಾತ್ರೆ ಮುಂದುವರಿಯುತ್ತದೆ ಎಂಬ ನಂಬುಗೆಯೇ ಪಿತೃಪ್ರಜ್ಞೆಯ ಮೂಲ. ಈ ಲೋಕದ ಬದುಕಿನಂತೆಯೇ ಜೀವನು ನಾನಾ ಅವಸ್ಥೆಯಲ್ಲಿ ನಾನಾ ಲೋಕಗಳನ್ನು ಹಾದು ಸಂಚಲಿಸುತ್ತಲೇ ಇರುತ್ತಾನೆ, ಮತ್ತು ಈ ಲೋಕದ ಕೊಡುಗೆಗಳು ಅವನನ್ನು ತೃಪ್ತವಾಗಿರಿಸುತ್ತವೆ; ತರ್ಪಣಕೊಟ್ಟವರನ್ನು ಆತ ಅನುಗ್ರಹಿಸುತ್ತಾನೆ ಎಂಬುದು ಸನಾತನಪ್ರಜ್ಞೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT