ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಾ ಕೈವಲ್ಯಮಯಿ ಬರಹ: ಸಹನೆಯಿಂದ ಸಿದ್ದಿ

Last Updated 2 ಸೆಪ್ಟೆಂಬರ್ 2022, 12:32 IST
ಅಕ್ಷರ ಗಾತ್ರ

ಉಗ್ಗು ದನಿಯ ಕುಗ್ಗು ನುಡಿಯ ಹುಡುಗನಾದ ಡಿಮೋಸ್ತನೀಸ್ ವಾಗ್ಮಿಯಾಗಲು ದೃಢ ನಿಶ್ಚಯ ಮಾಡಿದಾಗ ಅವನು ಹಲವು ತೊಡಕುಗಳನ್ನು ಎದುರಿಸಬೇಕಿತ್ತು. ಉಗ್ಗು ಅವನನ್ನು ಬಾಧಿಸುತ್ತಿತ್ತು. ದೀರ್ಘವಾದ ವಾಕ್ಯವನ್ನು ಒಮ್ಮೆಲೇ ಹೇಳುವ ಸಾಮರ್ಥ್ಯ ಅವರನಿಗಿರಲಿಲ್ಲ. ನಿರಂತರ ಪ್ರಯತ್ನದಿಂದ ಅವನು ಈ ದೌರ್ಬಲ್ಯಗಳನ್ನು ಗೆದ್ದುಬಿಟ್ಟ.

ಒಬ್ಬ ವೈದ್ಯನ ಹೇಳಿಕೆಯಂತೆ ನಾಲಗೆಯ ಮೇಲೆ ಬೆಣಚು ಕಲ್ಲುಗಳನ್ನಿಟ್ಟು ಸ್ಪಷ್ಟವಾಗಿ ಗಟ್ಟಿಯಾಗಿ ಶಬ್ದಗಳನ್ನು ಉಚ್ಚರಿಸ ತೊಡಗಿದ! ಎತ್ತರವಾದ ಬೆಟ್ಟಗಳನ್ನು ಏರಿಳಿಯುತ್ತಾ ದೀರ್ಘವಾಗಿರುವ ಉಸಿರೆಳೆಯುವ ಅಭ್ಯಾಸವನ್ನು ಮಾಡಿ, ಅತ್ಯಂತ ಉದ್ದವಾದ ವಾಕ್ಯಗಳನ್ನೂ ತಡೆಯಿಲ್ಲದೆ ಉಚ್ಚರಿಸತೊಡಗಿದ! ದಿನವೂ ಸಮುದ್ರದ ಬಳಿ ನಿಂತು ಸಮುದ್ರ ಘೋಷವನ್ನು ಮೀರಿಸುವ ದನಿಯಿಂದ ಮಾತುಗಾರಿಕೆಯನ್ನು ಅಭ್ಯಸಿಸಿದ! ಕಾಯಿದೆ, ಕಾನೂನು ಗ್ರಂಥಗಳನ್ನೂ, ಗ್ರೀಕ್ ಮಹಾಕಾವ್ಯಗಳನ್ನೂ ದಿನದಲ್ಲಿ 16 ಗಂಟೆಗಳಿಗೂ ಮಿಕ್ಕಿ ಅಧ್ಯಯನ ನಡೆಯಿಸಿದ! ತನ್ನ ಅಧ್ಯಯನ ಕಾಲದಲ್ಲಿ ಆತ ಜನರೊಂದಿಗೆ ಬೆರೆಯುತ್ತಿರಲಿಲ್ಲ. ಜನರೊಡನೆ ಯಾವತ್ತೂ ವ್ಯವಹಾರದಿಂದ ತನ್ನ ಅಭ್ಯಾಸಕ್ಕೆ ವಿಘ್ನ ಬರ ಕೂಡದೆಂದು ತಲೆಯನ್ನು ಅರ್ಧ ಬೋಳಿಸಿ ವಿಕಾರ ಮಾಡಿಕೊಂಡು ನೆಲಮಾಳಿಗೆಯಲ್ಲಿ ಕುಳಿತಿರುತ್ತಿದ್ದ! ಪ್ರಭಾವಿ ಹಾವಭಾವ ಮತ್ತು ಅಂಗಾಭಿನಯಕ್ಕಾಗಿ ದೊಡ್ಡ ನಿಲುಗನ್ನಡಿ ಎದುರು ದಿನವೂ ನಾಟಕ ನಡೆಸುತ್ತಿದ್ದ! ಮೂರು ವರ್ಷಗಳ ಅಜ್ಞಾತವಾಸದಿಂದ ಆತ ಹೊರಬಿದ್ದಾಗ ಜ್ಞಾನನಿಧಿಯಾಗಿದ್ದ!

ಗ್ರೀಕ್ ದೊರೆ ಫಿಲಿಪ್ ಹೇಳಿದ ‘ಇಡೀ ಜಗತ್ತನ್ನೇ ಜಯಿಸಬಹುದು, ಆದರೆ ಡಿಮೋಸ್ತನೀಸ್‌ನ ನಾಲಗೆಯನ್ನು ಜಯಿಸುವುದು ಅಸಾಧ್ಯ’.

ವಾಗ್ದೇವಿ ಅವನ ನಾಲಿಗೆಯಲ್ಲಿ ನಲಿದೊಲಿದು ನರ್ತಿಸುತ್ತಿದ್ದಳು. ಡಿಮೋಸ್ತನೀಸ್ನ ತಾಳ್ಮೆ ಮತ್ತು ಸಾಹಸ ಅದ್ವಿತೀಯವಾಗಿತ್ತು. ತತ್ಪರಿಣಾಮವಾಗಿ ಆತನು ಪಡೆದ ಫಲವೂ ಅದ್ವಿತೀಯವಾಗಿತ್ತು.

‘ಮಹತ್ಕಾರ್ಯಗಳು ಹಠಾತ್ ಬಲದಿಂದಲ್ಲ, ನಿರಂತರ ಪರಿಶ್ರಮದಿಂದ ಸಾಧ್ಯವಾಗಿವೆ’ ಎಂದು ಹೇಳಿದ್ದಾರೆ.

‘ಹಿಡಿದ ಕೆಲಸವನ್ನು ಪರಿಪೂರ್ಣಗೊಳಿಸುವ ದೃಢ ನಿರ್ಧಾರವೇ ಬಲಿಷ್ಠನಿಗೂ, ದುರ್ಬಲರನಿಗೂ ಇರುವ ಅಂತರವನ್ನು ಸೂಚಿಸುತ್ತದೆ’ ಎಂದು ಕಾರ್ಲೈಲ್ ಹೇಳಿದ್ದಾನೆ.

‘ನಿರಂತರ ಸಾಧನೆ ಎಲ್ಲ ಕಷ್ಟಗಳನ್ನು ದೂರ ಮಾಡುವುದು’ ಎಂದು ಒಂದು ಲ್ಯಾಟಿನ್ ಗಾಧೆ ಹೇಳುತ್ತದೆ. ‘ಸರಿಯಾದ ಮತ್ತು ಉತ್ಸಾಹ ಪೂರಿತ ಪ್ರಯತ್ನದಿಂದ ಪಡೆಯಲು ಸಾಧ್ಯವಾಗದ ವಸ್ತು ಯಾವುದು ಈ ಪ್ರಪಂಚದಲ್ಲಿಲ್ಲ’ ಎಂಬುದು ಯೋಗವಾಸಿಷ್ಠರ ಅಭಿಮತ.

-ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಶ್ರೀಶಾರದಾ ಆಶ್ರಮ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT