ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನಿಂದ ರುದ್ರನ ಜನನ

ಭಾಗ 107
ಅಕ್ಷರ ಗಾತ್ರ

‘ಚತುರ್ವಿಂಶತಿ’ ಎಂಬ ಅಂಡ ಸೃಷ್ಟಿಸಿ, ಅದರೊಳಗೆ ವಿಷ್ಣು ಪ್ರವೇಶ ಮಾಡುವ ಮೂಲಕ ಸಚೇತನವಾದ ಬ್ರಹ್ಮಾಂಡವನ್ನ ನಿರ್ಮಿಸುತ್ತಾನೆ ಬ್ರಹ್ಮ. ಆದರೆ ಅವಿದ್ಯಾ, ಅಸ್ಮಿತ, ರಾಗ, ದ್ವೇಷ, ಮೋಹ ಮತ್ತಿತರ ಐದು ವಸ್ತುಗಳಿಂದ ದುಃಖಮಯವಾದ ಸೃಷ್ಟಿಯಾಗಿದ್ದರಿಂದ ಚಿಂತಿತನಾಗುತ್ತಾನೆ. ಆಗ ಬ್ರಹ್ಮ ಸತ್ವಗುಣ ಪ್ರಧಾನವಾದ ಸುಖಮಯವಾದುದನ್ನು ಸೃಷ್ಟಿಸಿದ. ಆ ಸೃಷ್ಟಿಯೇ ‘ದೇವಸರ್ಗ’. ಅದು ತುಂಬಾ ಸುಖಮಯವಾದುದು ಎಂದು ಬ್ರಹ್ಮ ತಿಳಿಸುತ್ತಾನೆ.

ದೇವಸರ್ಗ ಸಾಲದೆಂದು ಬ್ರಹ್ಮ ತನ್ನ ಪ್ರಭುವಾದ ಶಂಕರನನ್ನು ಪ್ರಾರ್ಥಿಸಿದಾಗ, ರಜೋಗುಣ ಪ್ರಧಾನವಾದ ಸೃಷ್ಟಿಯಾಯಿತು. ಇದೇ ‘ಮನುಷ್ಯಸರ್ಗ’. ಇದರ ಪ್ರವೃತ್ತಿ ಕೆಳಮುಖವಾಗಿರುವುದಾದರೂ, ಕರ್ಮಾನುಷ್ಠಾನ ಮತ್ತು ಜ್ಞಾನಾಭ್ಯಾಸಗಳಿಂದ ಮನುಷ್ಯರು ಶರೀರ ದಿಂದಲೇ ಸ್ವರ್ಗ ಮತ್ತು ಮುಕ್ತಿಗಳನ್ನು ಪಡೆಯಬಹುದು. ಆಮೇಲೆ ಮಹಾದೇವನ ಆಜ್ಞೆಯಂತೆ ತಾನು ಮಹಾಭೂತಗಳ ಸೃಷ್ಟಿ ಮಾಡಿದೆ. ಹೀಗೆ ತನ್ನಿಂದ ಐದು ವಿಧದ ಸೃಷ್ಟಿಗಳಾಯಿತು ಎಂದು ವಿವರಿಸುತ್ತಾನೆ.

ತನ್ನ ಪ್ರೇರಣೆಯಿಂದ ಪ್ರಕೃತಿಯಿಂದ ಮಹತ್‍ತತ್ವ, ಸೂಕ್ಷ್ಮಭೂತಗಳು ಮತ್ತು ವೈಕಾರಿಕ (ಸೂಕ್ಷ್ಮಭೂತಗಳಿಂದಾದ ಮಹಾಭೂತ ಸೃಷ್ಟಿ) ಎಂಬ ಮೂರು ಪ್ರಾಕೃತ ಸೃಷ್ಟಿಗಳಾದುವು. ಹೀಗೆ ಪ್ರಕೃತಿಸರ್ಗ, ವಿಕೃತಿಸರ್ಗಗಳು ಸೇರಿ ಎಂಟು ವಿಧವಾದ ಸೃಷ್ಟಿಗಳು ಆದವು. ಮುಂದೆ ಕೌಮಾರವೆಂಬ ಒಂಬತ್ತನೆಯ ಸರ್ಗವೂ ಆಯಿತು. ಅದು ಪ್ರಾಕೃತಸರ್ಗವೂ ವೈಕೃತಸರ್ಗವೂ ಆಗಿರುವುದು. ಈ ಒಂಬತ್ತು ಸರ್ಗಗಳಿಂದ ಭೇದ-ಪ್ರಭೇದಗಳನ್ನೊಳಗೊಂಡ ಅನೇಕ ವಿಧವಾದ ಸೃಷ್ಟಿಗಳಾದುವು. ಅವುಗಳನ್ನೆಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಸುಜ ನರ ಸರ್ಗವು ಚಿಕ್ಕದಾದುರಿಂದ ಅದನ್ನು ಮಾತ್ರ ಹೇಳುವೆನು; ಅದೇ ಕೌಮಾರಸರ್ಗ. ಅದರಿಂದಲೇ ಮುಂದೆ ಸನತ್ಕುಮಾರ ಮುಂತಾ ದವರ ಸರ್ಗವಾಗಿ ವೃದ್ಧಿಗೊಂಡಿತು. ಸನತ್ಕುಮಾರ ಮೊದಲಾದ ಐವರು ಕುಮಾರರು ನನ್ನ ಮಾನಸಪುತ್ರರು. ನನ್ನಂತೆ ಪೂಜ್ಯರು, ಮಹಾವಿರಕ್ತರು, ಮಹಾತಪಸ್ವಿಗಳು. ನಾನು ಸೃಷ್ಟಿಯನ್ನು ಮಾಡಿರಿ ಎಂದು ಆಜ್ಞೆಮಾಡಿದರೂ, ಅವರು ಸಂಸಾರದಲ್ಲಿ ಆಸಕ್ತಿಯಿಲ್ಲದೆ ಶಿವಧ್ಯಾನತತ್ಪರರಾಗಿ ಸೃಷ್ಟಿಯನ್ನು ಮಾಡಲೇ ಇಲ್ಲ. ಆ ಕುಮಾರರು ಸೃಷ್ಟಿಯನ್ನು ಮಾಡುವುದಿಲ್ಲವೆಂದು ಪ್ರತ್ಯುತ್ತರವನ್ನೂ ಕೊಟ್ಟರು. ಅದನ್ನು ಕೇಳಿ ನಾನು ತುಂಬಾ ಕೋಪ ಬಂದಿತು. ಆಗ ನನ್ನ ಕಣ್ಣುಗಳಿಂದ ಬಿಸಿಯಾದ ಕಣ್ಣೀರು ಉದುರಿದುವು.

ಈ ಸಂಕಷ್ಟ ಸಮಯದಲ್ಲಿ ನಾನು ವಿಷ್ಣುವನ್ನು ಸ್ಮರಿಸಿದೆ. ನನ್ನ ಮಾನಸಪುತ್ರರ ವೈರಾಗ್ಯವನ್ನು ತಿಳಿಸಿದೆ. ಶಿವನನ್ನು ಕುರಿತು ತಪವನ್ನಾಚರಿ ಸುವಂತೆ ವಿಷ್ಣು ಉಪದೇಶ ಮಾಡಿದ. ನಾನು ಘೋರ ತಪಸ್ಸನ್ನಾಚರಿಸಿದೆ. ಆಗ ನನ್ನ ಅವಿಮುಕ್ತವೆಂಬ ಲಲಾಟದೇಶದಿಂದ ತ್ರಿಮೂರ್ತಿಗಳಲ್ಲಿ ಶ್ರೇಷ್ಠನೂ, ಪರಮೇಶ್ವರನ ಪೂರ್ಣಾಂಶನೂ, ಅರ್ಧನಾರೀಶ್ವರನೂ ಆದಂತಹ ರುದ್ರನು ಜನಿಸಿದ. ಸಾಕ್ಷಾತ್ ಪರ ಮೇಶ್ವರ ಸ್ವರೂಪನೂ ತೇಜಸ್ವಿಯೂ ಪಾರ್ವತೀಪತಿಯೂ ಸರ್ವಜ್ಞನೂ ಸರ್ವಕರ್ತೃವೂ ನೀಲಲೋಹಿತ ಎಂಬ ಹೆಸರುಳ್ಳವನೂ ಆದಂತಹ ಆ ರುದ್ರನನ್ನು ನೋಡಿ ಹರ್ಷಗೊಂಡೆ. ಅವನನ್ನು ಕುರಿತು ನೀನು ಅನೇಕ ಪ್ರಜೆಗಳನ್ನು ಸೃಷ್ಟಿಸು – ಎಂದು ಹೇಳಿದೆ. ನನ್ನ ಮಾತಿನಂತೆ ದೇವದೇವ ನಾದ ಆ ಮಹೇಶ್ವರನು ತನ್ನಂತೇ ಇರುವ ಅನೇಕ ರುದ್ರಗಣಗಳನ್ನು ಸೃಷ್ಟಿಸಿದ.

‘ಓ ದೇವ, ಜನ್ಮ–ಮರಣಗಳಿಂದ ಕೂಡಿರುವ ಪ್ರಜೆಗಳನ್ನು ಸೃಷ್ಟಿಸು’ ಎಂದು ಹೇಳಿದೆ. ಮಹಾದೇವ ನಕ್ಕು ಹೇಳಿದ, ‘ಎಲೈ ಬ್ರಹ್ಮನೇ, ನಾನು ಜನ್ಮ–ಮರಣಗಳುಳ್ಳವರೂ ಪ್ರಾರಬ್ಧಕರ್ಮಕ್ಕೆ ಒಳಪಟ್ಟವರೂ ದುಃಖಸಮುದ್ರದಲ್ಲಿ ಮುಳುಗಿರುವವರೂ ಆದಂತಹ ಪ್ರಜೆಗಳನ್ನು ಸೃಷ್ಟಿಸಲಾರೆ. ಅಷ್ಟೇ ಅಲ್ಲ, ನಾನು ಗುರುರೂಪವನ್ನು ಧರಿಸಿ ದುಃಖ ಸಮುದ್ರದಲ್ಲಿ ಮುಳುಗುತ್ತಲಿರುವ ಪ್ರಜೆಗಳಿಗೆ ಒಳ್ಳೆಯ ಜ್ಞಾನವನ್ನು ಉಪದೇಶಿಸಿ ಅವರನ್ನು ಉದ್ಧರಿಸುವೆ. ಆದುದರಿಂದ ನೀನೇ ದುಃಖ ಮಯರಾದ ಪ್ರಜೆಗಳನ್ನು ಸೃಷ್ಟಿಸು. ನನ್ನ ಅನುಗ್ರಹದಿಂದ ನಿನಗೆ ಮಾಯೆಯ ಬಂಧವಾಗುವುದಿಲ್ಲ’ ಎಂದ ಮಹಾದೇವ ತನ್ನ ಗಣಗ ಳೊಡನೆ ಅಂತರ್ಧಾನನಾದ ಎಂದು ಬ್ರಹ್ಮ ನಾರದನಿಗೆ ಹೇಳುತ್ತಾನೆ. ಇಲ್ಲಿಗೆ ಶ್ರೀಶಿವಮಹಾಪುರಾಣದ ಏಳು ಸಂಹಿತೆಗಳಲ್ಲಿ ಎರಡನೆಯಾದ ರುದ್ರಸಂಹಿತೆಯ ಮೊದಲನೆಯ ಖಂಡವಾದ ಸೃಷ್ಟಿ ಉಪಾಖ್ಯಾನದಲ್ಲಿ ರುದ್ರಾವತಾರವರ್ಣನ ಎಂಬ ಹದಿನೈದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT