ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ | ಬ್ರಹ್ಮಸೂತ್ರದಲ್ಲಿದೆ ಜೀವನಸೂತ್ರ

ಅಕ್ಷರ ಗಾತ್ರ

ವೇದ, ವೇದಾಂತ, ಮಹಾಭಾರತ, 18 ಮಹಾಪುರಾಣ ಸೇರಿದಂತೆ ಹಲವು ಶಾಸ್ತ್ರಗಂಥಗಳನ್ನು ರಚಿಸಿದ ವ್ಯಾಸರನ್ನ ಹಿಂದೂ ಸನಾತನ ಧರ್ಮದ ಪ್ರವರ್ತಕರೆನ್ನಬಹುದು. ಸಪ್ತರ್ಷಿಮಂಡಲದಲ್ಲಿ ನಕ್ಷತ್ರಗಳಾಗಿರುವ ವಸಿಷ್ಠ-ಅರುಂಧತಿಯರ ಮಗ ಶಕ್ತಿಮಹರ್ಷಿ ಮತ್ತು ಅದೃಶ್ಯಂತಿ ಮಗ ಪರಾಶರ. ಪರಾಶರ ಮತ್ತು ಸತ್ಯವತಿ ಮಗನೇ ಕೃಷ್ಣ ದ್ವೈಪಾಯನ; ಅಂದರೆ ಕಪ್ಪುದ್ವೀಪದಲ್ಲಿ ಜನಿಸಿದವನು. ಮುತ್ತಾತ ವಸಿಷ್ಠರು ಋಗ್ವೇದದ ಹತ್ತು ಮಂಡಲಗಳಲ್ಲಿ ಏಳನೇ ಮಂಡಲ ರಚಿಸಿದರೆ, ಮುಮ್ಮಗ ಕೃಷ್ಣ ದ್ವೈಪಾಯನ ವೇದಗಳನ್ನು ನಾಲ್ಕು ಭಾಗ ಮಾಡಿ ವೇದವ್ಯಾಸರಾದರು. ಋಗ್ವೇದದ 5ನೇ ಮಂಡಲ ರಚಿಸಿದ ಸಪ್ತರ್ಷಿ ಅತ್ರಿ ಮತ್ತು ಅನಸೂಯ ಮಕ್ಕಳೇ ದತ್ತಾತ್ರೇಯ, ಚಂದ್ರ ಮತ್ತು ದೂರ್ವಾಸ ಮುನಿ. ತ್ರಿಮೂರ್ತಿಗಳಾದ ಬ್ರಹ್ಮ-ವಿಷ್ಣು-ಮಹೇಶ್ವರರ ಅಂಶದಿಂದ ಹುಟ್ಟಿದ ದತ್ತಾತ್ರೇಯ ನಾಥಪಂಥದ ಆದಿಗುರುವಾಗಿ ಅವಧೂತ ದತ್ತಗುರು ಅನ್ನಿಸಿಕೊಂಡಿದ್ದಾರೆ.

ವಿಷಯಕ್ಕೆ ತಕ್ಕಂತೆ ವೇದಗಳನ್ನು ವಿಭಾಗ ಮಾಡಿ ಸಂರಕ್ಷಿಸಿದ ವೇದವ್ಯಾಸರು ವೇದಾಂತವನ್ನು ರಚಿಸಿದ್ದಾರೆ. ಭಾರತೀಯ ಶಾಸ್ತ್ರಗ್ರಂಥಗಳು ಚರ್ವಿತಚರ್ವಣಗಳಲ್ಲ, ಅವು ಮಾನವರ ಬದುಕಿನ ಅರ್ಥಗರ್ಭಿತ ವಿವರಣೆಗಳುಳ್ಳ ತತ್ವಶಾಸ್ತ್ರಗಳು ಎಂಬುದನ್ನು ವೇದಾಂತಗಳಾದ ಉಪನಿಷತ್, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಮನದಟ್ಟುಮಾಡಿಸುತ್ತವೆ. ವಿಶ್ವ ಆಧ್ಯಾತ್ಮಿಕ ದರ್ಶನಶಾಸ್ತ್ರಕ್ಕೆ ಮುನ್ನಡಿ ಬರೆದಂತಿರುವ ಈ ವೇದಾಂತಗಳು ಸಾರ್ವಕಾಲಿಕ ಶ್ರೇಷ್ಠ ಗ್ರಂಥಗಳಾಗಿವೆ. ಪ್ರಸ್ಥಾನತ್ರಯಗಳೆನಿಸಿದ ಉಪನಿಷತ್‍ನ್ನು ಉಪದೇಶಪ್ರಸ್ಥಾನ ಮತ್ತು ಶ್ರುತಿಪ್ರಸ್ಥಾನವಾಗಿ, ಬ್ರಹ್ಮಸೂತ್ರವನ್ನು ಸೂತ್ರಪ್ರಸ್ಥಾನ ನ್ಯಾಯಪ್ರಸ್ಥಾನ ಮತ್ತು ಯುಕ್ತಿಪ್ರಸ್ಥಾನವಾಗಿ ಹಾಗೂ ಭಗವದ್ಗೀತೆಯನ್ನು ಸಾಧನಾ ಪರಸ್ಥಾನ ಮತ್ತು ಸ್ಮೃತಿಪ್ರಸ್ಥಾನವಾಗಿ ಗುರುತಿಸಲಾಗಿದೆ. ಆದಿ ಶಂಕರಾಚಾರ್ಯರು ಮತ್ತು ಮಧ್ವಾಚಾರ್ಯರು ಮೂರೂ ಪ್ರಸ್ಥಾನಗಳಿಗೂ ಭಾಷ್ಯ ಬರೆದಿದ್ದರೆ, ರಾಮಾನುಜಾಚಾರ್ಯರು ‘ಬ್ರಹ್ಮಸೂತ್ರ’ ಮತ್ತು ‘ಭಗವದ್ಗೀತೆ’ಗೆ ಮಾತ್ರ ಭಾಷ್ಯ ಬರೆದಿದ್ದಾರೆ.

ಬಾದರಾಯಣ ಬರೆದ ‘ಬ್ರಹ್ಮಸೂತ್ರ’ದಲ್ಲಿ ಒಟ್ಟು 555 ಸೂತ್ರಗಳಿವೆ. ಇವುಗಳನ್ನು ನಾಲ್ಕು ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಒಂದೊಂದು ಅಧ್ಯಾಯಕ್ಕೂ ನಾಲ್ಕು ಪಾದಗಳಿವೆ. ಈ ಪಾದಗಳಿಗೆ ಅಧಿಕರಣ ಮತ್ತು ಸೂತ್ರಗಳಿವೆ. ಮನೋವೈಜ್ಞಾನಿಕ, ಖಭೌತವಿಜ್ಞಾನ, ಅಧ್ಯಾತ್ಮತತ್ವಜ್ಞಾನದ ಮೂಲಕ ವಿಶ್ವದರ್ಶನ ಮಾಡಿಸುವ ಬ್ರಹ್ಮಸೂತ್ರ ಜಗತ್ತಿನ ಸೂತ್ರವಾಗಿದೆ. ಈ ಜಗತ್ತಿನ ಸೂತ್ರದಲ್ಲಿ ಜೀವಾತ್ಮಗಳ ಜೀವನಸೂತ್ರವೂ ಅಡಗಿದೆ. ಅದನ್ನು ತಿಳಿಯುವ ಗುಣಗ್ರಾಹಿ ಮನಸ್ಸಿರಬೇಕಷ್ಟೆ. ‘ಬ್ರಹ್ಮಸೂತ್ರ’ದ ಮೊದಲ ಅಧ್ಯಾಯವಾದ ಸಮನ್ವಯದಲ್ಲಿ ಹೇಳುವ ತತ್ವವಿಚಾರಗಳನ್ನು ನಮ್ಮ ಅನುಭವಗಳಿಗೆ ಅಳವಡಿಸಿಕೊಂಡರೆ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು. ಎರಡನೆಯದಾದ ಅವಿರೋಧಾಧ್ಯಾಯದಿಂದ ಯಾರಲ್ಲೂ ವಿರೋಧ ಕಟ್ಟಿಕೊಳ್ಳದೆ ನೆಮ್ಮದಿಯ ಜೀವನ ನಡೆಸಬಹುದು. ಮೂರನೆಯದಾದ ಸಾಧನಾಧ್ಯಾಯ ವಿವೇಚನೆಯಿಂದ ಬದುಕುವ ಮಾರ್ಗ ಕಲಿಸುತ್ತದೆ. ನಾಲ್ಕನೆಯದಾದ ಫಲಾಧ್ಯಾಯವು ಅನುಭವ-ಮಿತ್ರತ್ವ-ಸಾಧನೆಯಿಂದ ಬದುಕಿನಲ್ಲಿ ಉತ್ತಮ ಫಲಪಡೆಯಬಹುದೆಂಬುದನ್ನು ಹೇಳುತ್ತದೆ.

ಬ್ರಹ್ಮಜ್ಞಾನವನ್ನು ಜಗತ್ತಿನ ಜ್ಞಾನದಂತೆ ನೋಡಿದಂತೆಯೇ, ಬ್ರಹ್ಮಸೂತ್ರವನ್ನು ಬದುಕಿನ ಸೂತ್ರದಂತೆ ವಿಶ್ಲೇಷಿಸಿದರೆ ಜೀವನದ ‘ಸತ್ಯ’ದರ್ಶನವಾಗುತ್ತದೆ. ಯಾವುದೇ ಅನುಭವವಿಲ್ಲದೆ ಯಾವ ಕೆಲಸದಲ್ಲೂ ತೊಡಗಬಾರದು, ಮಾಡುವ ಕೆಲಸದಲ್ಲಿ ವಿರೋಧಾಭಾಸದ ಗಾಳಿ ಸುಳಿಯದಂತೆ ಎಚ್ಚರವಹಿಸಿ ಸಾಧನೆ ಮಾಡಿದರೆ, ಉತ್ತಮ ಫಲಿತ ಖಂಡಿತ ಸಿಗುತ್ತದೆ ಎಂಬುದನ್ನು ಬ್ರಹ್ಮಸೂತ್ರ ಸೂಚ್ಯವಾಗಿ ತಿಳಿಸುತ್ತದೆ. ಇದೇ ರೀತಿ ಭಾರತೀಯ ಶಾಸ್ತ್ರಗ್ರಂಥಗಳನ್ನೆಲ್ಲ ನಮ್ಮ ವಾಸ್ತವಿಕ ಬದುಕಿಗೆ ಒರೆಗಚ್ಚಿ ನೋಡಿದರೆ, ಅದರ ದಿವ್ಯಾಮೃತ ಸಿದ್ಧಿಸುತ್ತದೆ. ಬಿತ್ತುವ ಮುನ್ನ ಭೂಮಿ ಖಾಲಿಯಾಗೇ ಇರುತ್ತೆ. ಅಲ್ಲಿ ಅನುಭವಿ ಕೃಷಿಕ ಉತ್ತಿ-ಬಿತ್ತಿ ಶ್ರಮಪಟ್ಟಾಗಲೇ ಬೆಳೆ ಕಾಣುತ್ತೆ. ಹಾಗೇ, ಯಾವುದೇ ಶಾಸ್ತ್ರಗ್ರಂಥಗಳನ್ನು ಆನುಭಾವಿಕ ಪ್ರಜ್ಞೆಯಿಂದ ನೋಡಿದಾಗ ಮಾತ್ರ ಅಮೂಲ್ಯಸಾರ ಗೋಚರಿಸುತ್ತದೆ. ಹೀಗಾಗಿ ಸಾವಿರಾರು ವರ್ಷಗಳಿಂದ ಅನುಭವಜನ್ಯವಾಗಿ ಬಂದ ಶಾಸ್ತ್ರಗ್ರಂಥಗಳ ಜ್ಞಾನಾಮೃತ ಸವಿದವರು ಮಾತ್ರ ‘ಸಚ್ಚಿದಾನಂದ’ಭಾವದಲ್ಲಿ ಪ್ರಜ್ವಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT