ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಹಣವೋ ಗುಣವೋ

Last Updated 30 ಜನವರಿ 2021, 1:17 IST
ಅಕ್ಷರ ಗಾತ್ರ

ವೃತ್ತಂ ಯತ್ನೇನ ಸಂರಕ್ಷೇತ್‌ ವಿತ್ತಮಾಯಾತಿ ಯಾತಿ ಚ ।

ಅಕ್ಷೀಣೋ ವಿತ್ತತಃ ಕ್ಷೀಣಃ ವೃತ್ತತಸ್ತು ಹತೋ ಹತಃ ।।

ಇದರ ತಾತ್ಪರ್ಯ ಹೀಗೆ:

‘ಪ್ರಯತ್ನಪೂರ್ವಕವಾಗಿ ತನ್ನ ಚಾರಿತ್ರವನ್ನು ರಕ್ಷಿಸಿಕೊಳ್ಳಬೇಕು. ಹಣವೇನು, ಬರುತ್ತದೆ, ಹಾಗೆಯೇ ಹೋಗುತ್ತದೆ ಕೂಡ. ಒಳ್ಳೆಯ ಚಾರಿತ್ರವನ್ನು ಉಳ್ಳವನು ಕ್ಷೀಣನಾದರೂ ಕ್ಷೀಣನಲ್ಲ; ಬಡವನಲ್ಲ. ಯಾರ ನಡತೆಯು ಕೆಟ್ಟಹೋಗಿದೆಯೋ ಅವನು ಹಣವಂತನಾದರೂ ದರಿದ್ರನೇ ಹೌದು, ಮಾತ್ರವಲ್ಲ, ಅವನು ಸತ್ತ ಹಾಗೆಯೇ ಹೌದು.’

ಹಣ ಮುಖ್ಯವೋ ಗುಣ ಮುಖ್ಯವೋ – ಎಂದರೆ ಗುಣವೇ ಮುಖ್ಯ ಎನ್ನುತ್ತಿದೆ ಸುಭಾಷಿತ.

ಚಾರಿತ್ರ, ಎಂದರೆ ನಮ್ಮ ವ್ಯಕ್ತಿತ್ವ, ಅದನ್ನು ಕಾಪಾಡಿಕೊಳ್ಳಬೇಕು. ಏಕೆಂದರೆ ವ್ಯಕ್ತಿತ್ವವನ್ನು ಕೆಡಿಸಬಲ್ಲಂಥ ಆಮಿಷಗಳು ಪ್ರತಿ ಕ್ಷಣವೂ ಜೀವನದಲ್ಲಿ ಎದುರಾಗುತ್ತಲೇ ಇರುತ್ತವೆ. ಆದುದರಿಂದಲೇ ಸುಭಾಷಿತ ಹೇಳುತ್ತಿದೆ: ಪ್ರಯತ್ನಪೂರ್ವಕವಾಗಿ ಚಾರಿತ್ರವನ್ನು ರಕ್ಷಿಸಿಕೊಳ್ಳಬೇಕು.

ಎಲ್ಲ ಆಮಿಷಗಳಿಗಿಂತಲೂ ದೊಡ್ಡ ಆಮಿಷ ಎಂದರೆ ಹಣದ ಆಮಿಷ. ಈ ಒಂದು ಆಮಿಷದಿಂದ ಎಲ್ಲ ಅಮಿಷಗಳೂ ಶುರುವಾಗುತ್ತವೆ. ಮಾತ್ರವಲ್ಲ, ಹಣ ಎಲ್ಲ ಅನಿಷ್ಟಗಳಿಗೂ ಮೂಲವೂ ಆಗಬಲ್ಲದು. ಹೀಗಾಗಿಯೇ ಸುಭಾಷಿತ ಹಣದ ಬಗ್ಗೆಯೇ ಹೇಳುತ್ತಿರುವುದು. ಹಣ ಇಂದು ಬರುತ್ತದೆ, ನಾಳೆ ಹೋಗುತ್ತದೆ. ಹೋದ ಹಣವನ್ನು ಸಂಪಾದಿಸಬಹುದು, ಸಂಪಾದಿಸಿದ ಹಣ ಹೊರಟೂ ಹೋಗಬಹುದು. ಆದುದರಿಂದಲೇ ಸುಭಾಷಿತ ಹೇಳುತ್ತಿರುವುದು, ಹಣ ಇದ್ದವರು ಶ್ರೀಮಂತರಲ್ಲ, ಚಾರಿತ್ರ, ಎಂದರೆ ಗುಣ ಇದ್ದವರೇ ಶ್ರೀಮಂತರು. ಹೀಗೆಯೇ ಹಣ ಇಲ್ಲದವನು ಬಡವನೂ ಅಲ್ಲ; ಯಾರಿಗೆ ವ್ಯಕ್ತಿತ್ವ – ಚಾರಿತ್ರ – ಇಲ್ಲವೋ ಅವನೇ ಬಡವ ಎಂದು ಹೇಳುತ್ತಿರುವುದು. ಇಷ್ಟೇ ಅಲ್ಲ, ಹಣವನ್ನು ಕಳೆದುಕೊಂಡವನು ಬಡವನಲ್ಲ; ಚಾರಿತ್ರವನ್ನು ಕಳೆದುಕೊಂಡವನೇ ಬಡವ, ಮಾತ್ರವಲ್ಲ, ಅವನು ಇದ್ದರೂ ಸತ್ತಂತೆಯೇ ಎಂದು ತೀರ್ಮಾನಿಸಿದೆ ಸುಭಾಷಿತ.

ಎಲ್ಲ ಗುಣಗಳೂ ಹಣವನ್ನು ಆಶ್ರಯಿಸುತ್ತವೆ ಎಂಬ ಮಾತಿದೆ. ಆದರೆ ಸುಭಾಷಿತ ಹೇಳುತ್ತಿದೆ, ಒಳ್ಳೆಯ ನಡತೆ ಇದ್ದರೆ ಎಲ್ಲ ರೀತಿಯ ಸಿರಿಸಂಪತ್ತುಗಳೂ ಇದ್ದಂತೆಯೇ ಹೌದು ಎಂದು.

ಇಂದು ನಾವು ಹಣಕ್ಕೆ ಕೊಡುವಷ್ಟು ಪ್ರಾಧಾನ್ಯವನ್ನು ಬೇರೆ ಯಾವುದಕ್ಕೂ ಕೊಡದಿರುವಂಥ ಪರಿಸ್ಥಿತಿಯನ್ನು ನಿರ್ಮಿಸಿಕೊಂಡಿದ್ದೇವೆ. ಹೀಗಾಗಿಯೇ ನಮಗೆ ಪರಸ್ಪರ ಒಬ್ಬರಲ್ಲಿ ಇನ್ನೊಬ್ಬರಿಗೆ ನಂಬಿಕೆ ಇಲ್ಲವಾಗುತ್ತಿದೆ. ನಮ್ಮ ನಗು, ಮಾತು, ಗೌರವ – ಎಲ್ಲವೂ ನಟನೆಯ ಭಾಗವಾಗುತ್ತಿದೆ. ಈ ಎಲ್ಲದರ ಹಿಂದೆ ಹಣವೇ ಅಡಗಿರುತ್ತದೆ. ನಾವು ಮತ್ತೆ ಆ ಹಣದ ಸ್ಥಳದಲ್ಲಿ ಗುಣವನ್ನು ಪ್ರತಿಷ್ಠಾಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT