ಮಂಗಳವಾರ, ಆಗಸ್ಟ್ 3, 2021
23 °C
ಆಚಾರ– ವಿಚಾರ

ಸಂಸ್ಕೃತಿ ಸಂಭ್ರಮ | ಆಯ್ಕೆಯ ಸ್ವಾತಂತ್ರ್ಯ

ಡಾ. ಕಿರಣ್ ವಿ. ಎಸ್‌. Updated:

ಅಕ್ಷರ ಗಾತ್ರ : | |

Prajavani

ಅಮೆರಿಕನ್ ಕಥೆಗಾರ ಫ್ರಾಂಕ್ ಸ್ಟಾಕ್ಟನ್ 1870ರ ದಶಕದಲ್ಲಿ ಒಂದು ಸಣ್ಣಕತೆಯನ್ನು ಪ್ರಕಟಿಸಿದರು.

ಒಂದೂರಿನಲ್ಲಿ ಒಬ್ಬ ರಾಜ. ಆತನಿಗೆ ಚಂದದ ಮಗಳು. ರಾಜಕುಮಾರಿಗೆ ಓರ್ವ ಸಾಮಾನ್ಯ ಸೈನಿಕನ ಮೇಲೆ ಒಲವಾಗಿದೆ. ರಾಜನಿಗೆ ಇದು ಇಷ್ಟವಿಲ್ಲ. ಆ ಸೈನಿಕನ ಮೇಲೆ ಏನೋ ಒಂದು ದೋಷವನ್ನು ಆರೋಪಿಸಿ ಶಿಕ್ಷೆಗೆ ಒಳಪಡಿಸುತ್ತಾನೆ. ಎರಡು ಬಾಗಿಲುಗಳಿರುವ ಒಂದು ಕೋಣೆಯಲ್ಲಿ ಸೈನಿಕನನ್ನು ಬಿಟ್ಟು, ಅವೆರಡರಲ್ಲಿ ಒಂದು ಬಾಗಿಲನ್ನು ತೆಗೆಯಬೇಕೆಂದು ಆಜ್ಞಾಪಿಸುತ್ತಾನೆ. ಒಂದು ಬಾಗಿಲಿನ ಹಿಂದೆ ಭಯಂಕರವಾದ ಹುಲಿಯಿದೆ. ಅದನ್ನು ತೆಗೆದರೆ, ಹುಲಿ ಸೈನಿಕನನ್ನು ಖಚಿತವಾಗಿ ಕೊಲ್ಲುತ್ತದೆ. ಎರಡನೆಯ ಬಾಗಿಲಿನ ಹಿಂದೆ ಓರ್ವ ಯುವತಿ ಇದ್ದಾಳೆ. ಆ ಬಾಗಿಲನ್ನು ತೆರೆದರೆ ಸೈನಿಕ ಆಕೆಯನ್ನು ಮದುವೆಯಾಗುವುದು ಕಡ್ಡಾಯ. ಮಹಡಿಯ ಮೇಲಿನಿಂದ ಎಲ್ಲರೂ ಈ ಪ್ರಸಂಗವನ್ನು ನೋಡುತ್ತಿದ್ದಾರೆ. ಯಾವ ಬಾಗಿಲಿನ ಹಿಂದೆ ಏನಿದೆ ಎಂಬುದನ್ನು ಕಡೆಯ ಕ್ಷಣದಲ್ಲಿ ಪತ್ತೆ ಮಾಡಿದ ರಾಜಕುಮಾರಿ, ಆ ಸೈನಿಕನಿಗೆ ದೂರದಿಂದಲೇ ಒಂದು ಬಾಗಿಲನ್ನು ತೆರೆಯುವ ಸೂಚನೆ ನೀಡುತ್ತಾಳೆ. ಸೈನಿಕ ಒಪ್ಪಿ, ಆ ಬಾಗಿಲು ತೆರೆಯುತ್ತಾನೆ. ಕಥೆ ಇಲ್ಲಿಗೆ ನಿಲ್ಲುತ್ತದೆ.

ಈ ಕಥೆಯ ಅಂತ್ಯವನ್ನು ಊಹಿಸುವುದು, ಆಯಾ ಓದುಗರ ಇಡೀ ಜೀವನದ ಅನುಭವಗಳ ಒಟ್ಟು ಸಾರವನ್ನು ತೋರುತ್ತದೆ ಎಂದು ತತ್ತ್ವಜ್ಞಾನಿಗಳ ಅಭಿಪ್ರಾಯ. ಕುತೂಹಲ ಎಂದರೆ, ‘ರಾಜಕುಮಾರಿ ಯಾವುದನ್ನು ಸೂಚಿಸಿರಬಹುದು’ ಎಂದು ಓದುಗರು ಆಲೋಚನೆ ಮಾಡುವುದಕ್ಕೂ, ‘ತಾವೇ ರಾಜಕುಮಾರಿಯ ಸ್ಥಾನದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆವು’ ಎನ್ನುವ ಎರಡು ಅಭಿಪ್ರಾಯಗಳ ನಡುವೆಯೇ ಬಹಳ ಓದುಗರಲ್ಲಿ ಭಿನ್ನಾಭಿಪ್ರಾಯ ಇರುತ್ತಿತ್ತು! ಈ ದ್ವಂದ್ವ ಕೂಡ ಅವರವರ ಮಾನಸಿಕತೆಯ ಚಿತ್ರಣವೇ!

ಆ ಅಮೆರಿಕನ್ ಲೇಖಕರಿಗೆ ಈ ಕಥೆಯ ಹಿಂದಿನ ತಾತ್ವಿಕತೆಯ ಪರಿಚಯ ಇತ್ತೋ ಇಲ್ಲವೋ ತಿಳಿಯದು! ಆದರೆ, ಪ್ರಾಚೀನ ತತ್ತ್ವಜ್ಞಾನಿಗಳು ಮುಕ್ತ ಚಿಂತನೆಯ ಪ್ರತಿಪಾದಕರಾಗಿದ್ದರು ಎಂಬುದು ಬಹಳ ಜನಕ್ಕೆ ತಿಳಿದಿರಲಿಕ್ಕಿಲ್ಲ. ಆಯ್ಕೆಯ ಮಹತ್ವಗಳನ್ನು ಸಾರುವ ಅನೇಕ ಪ್ರಮಾಣಗಳು ದೊರಕುತ್ತವೆ. ರಾಬರ್ಟ್ ಫ್ರಾಸ್ಟ್ ಅವರ ‘The Road not Taken’ ಕವಿತೆಯಾಗಲೀ, ಅಥವಾ ಹ್ಯಾರಿ ಪಾಟರ್ ಸರಣಿಯಲ್ಲಿ ಡಂಬಲ್ಡೋರ್ ಮಹಾಶಯ ಹೇಳುವ ‘It is our choices that show what we truly are, far more than our abilities’ ಎನ್ನುವ ಮಾತಾಗಲೀ, ಪ್ರಾಚೀನ ತತ್ತ್ವದ ಆಧುನಿಕ ಅವತಾರವೇ! ಪ್ರಾಚೀನ ತತ್ತ್ವಜ್ಞಾನ ನೀಡಿದಷ್ಟು ಆಯ್ಕೆಯ ಅವಕಾಶಗಳನ್ನು ಪ್ರಾಯಶಃ ಮಧ್ಯಕಾಲೀನ ಅವಧಿ ನೀಡಲಿಲ್ಲ. ಅದಕ್ಕೆ ಕಾರಣಗಳು ಏನೇ ಇದ್ದರೂ, ಆಯ್ಕೆಗಳ ಸ್ವಾತಂತ್ರ್ಯ ಬಹಳ ಮಹತ್ವದ್ದು.

ಆಯ್ಕೆ ಮತ್ತು ಆಯ್ಕೆಗಳ ಭ್ರಮೆಯ ನಡುವೆ ಕೂಡ ಇರುವ ವ್ಯತ್ಯಾಸ ಗಮನಾರ್ಹ. ಸ್ಟಾಕ್ಟನ್ ಅವರ ಕಥೆಯಲ್ಲಿ ಸೈನಿಕನಿಗೆ ಆಯ್ಕೆಯ ಭ್ರಮೆ ಇದೆ; ಆಯ್ಕೆಗಳಿಲ್ಲ! ನೈಜಾರ್ಥದಲ್ಲಿ ರಾಜಕುಮಾರಿಗೆ ಕೂಡ ಇರುವುದು ಆಯ್ಕೆಗಳ ಭ್ರಮೆಯೇ! ಅಂತೆಯೇ, ಓದುಗರಿಗೆ ಕೂಡ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು