ಬದುಕಿನ ನಿಸ್ಸಾರವನ್ನು ಕಳೆಯಲು ಆಗಾಗ ಸಂಭ್ರಮದ ಕ್ಷಣಗಳನ್ನು ಹುಟ್ಟು ಹಾಕಬೇಕು. ಆ ಕಾರಣವಾಗಿಯೆ ನಮ್ಮಲ್ಲಿ ಅನೇಕ ಹಬ್ಬಗಳು. ದೀಪಾವಳಿ ಭಾರತದೆಲ್ಲೆಡೆಯೂ ಆಚರಿಸುವ ಹಬ್ಬ. ವಿವಿಧ ಪ್ರದೇಶದಲ್ಲಿ ವಿವಿಧ ಆಚರಣೆಯಿಂದ ವಿಶಿಷ್ಟವಾದದ್ದು. ಬದುಕಿನ ಕತ್ತಲೆ ಕಳೆದು ಬೆಳಕು ಮೂಡುವ ಸಂಕೇತವಾಗಿ ದೀಪಮಾಲೆಯಾದರೆ ನಕ್ಷತ್ರಗಳಿಗೇ ಸ್ಪರ್ಧಿಸುವಂತೆ ಆಕಾಶ ದೀಪಗಳು ಬುಟ್ಟಿಯಲ್ಲಿ ಬೆಳಗುತ್ತವೆ.
ತರತರಹದ ತಿಂಡಿಗಳು ಅಕ್ಕಪಕ್ಕದವರೊಂದಿಗೆ ಬಂಧು ಬಾಂಧವರೊಂದಿಗೆ ಹಂಚಿಕೊಂಡು ಮೆಲ್ಲುವ ಬಗೆ ಒಂದು ತೆರನಾದ ಸುಖವಾದರೆ ಆಟ, ಮೋಜು ಮಸ್ತಿಯಲ್ಲಿ ಜೀವನದ ಕಷ್ಟ, ನೋವನ್ನು ಕೆಲವು ಸಮಯವಾದರೂ ಮರೆತಾಗ ಬಾಳ ಪಯಣಕ್ಕೆ ಒಂದಷ್ಟು ಚೈತನ್ಯ ಒಗ್ಗೂಡಿಸಿಕೊಂಡಂತೆ.
ಕಾಲಮಾನಕ್ಕೆ ಅವಸರದ ಬದುಕಿಗೆ ಕೆಲವು ರೂಢಿಗಳು ಬದಲಾಗಿವೆ. ಸಂಪ್ರದಾಯಗಳೂ ಅನಕೂಲಸಿಂಧುವಾಗಿವೆ. ಇದು ಅನಿವಾರ್ಯವೂ ಹೌದು.
ಕಲ್ಯಾಣ ಕರ್ನಾಟಕದ ದೀಪದ ಹಣತೆಯಲ್ಲಿ ಹಲವು ಬಣ್ಣದ ಬೆಳಕು. ನಮ್ಮಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ದನಗಳಿಗೆ ಕಿಚ್ಚು ಹಾಯಿಸುವುದು ಪದ್ಧತಿಯಿದೆ. ಮನೆಯ ಅಂಗಳದಲ್ಲಿ ತಲೆಬಾಗಿಲಿನ ಎದಿರು ಸೊಪ್ಪು, ಸದೆ, ಕುಳ್ಳು, ಕಟ್ಟಿಗೆಯಿಂದ ಕಿಚ್ಚನ್ನು ಸಿದ್ಧಗೊಳಿಸಿ ದನಗಳನ್ನು ಆ ಕಿಚ್ಚಿನ ಮೇಲೆ ಹಾದುಹೋಗುವಂತೆ ಪ್ರೇರೇಪಿಸುತ್ತಾರೆ. ದನಗಳು ಕಿಚ್ಚು ಹಾದು ತಲೆಬಾಗಿಲಿಂದ ಹೊರಗೆ ಓಡಿಹೋಗುತ್ತವೆ. ಸ್ವಲ್ಪ ಸಮಯದ ನಂತರ ಅವನ್ನು ಕೊಟ್ಟಿಗೆಗೆ ತಂದು ಮೇವು ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಇದು ಕೂಡ ವಿಶೇಷ ಪದ್ಧತಿ.
ಮಳೆಗಾಲ ಮುಗಿದು ಚಳಿಗಾಲದ ಪ್ರಾರಂಭದ ದಿನಗಳಿವು. ಮಳೆಗಾಲ ಹಲವು ಜೀವಿಗಳ ಸೃಷ್ಟಿಗೆ ಕಾರಣವಾಗುವುದು. ಸೊಳ್ಳೆ, ನೊಣ, ಉಣ್ಣೆ ಇಂತಹ ಕಣ್ಣಿಗೆ ಕಾಣುವ ಹಾಗೂ ಕಾಣದ ಕೋಟ್ಯಾನುಕೋಟಿ ಜೀವಿಗಳು ಹುಟ್ಟುತ್ತವೆ. ದನದ ಮೈಯಲ್ಲಿ ಹುಟ್ಟಿದ ಉಣ್ಣೆಗಳು ರಕ್ತಹೀರಿ ದನಗಳನ್ನು ಅಶಕ್ತಗೊಳಿಸುತ್ತವೆ. ಇಂತಹ ಕಿಚ್ಚು ಹಾಯುವುದರಿಂದ ಉಣ್ಣೆಗಳು ಉದುರಿ ಮನೆಯ ಹೊರಗೆ ಬಿದ್ದು ಸಾಯುತ್ತವೆ. ಹೀಗೆ ಒಡಲೊಳಗೆ ಅರ್ಥಪೂರ್ಣ ಬೀಜವನ್ನಿಟ್ಟುಕೊಂಡ ಪದ್ಧತಿಗಳು ಇನ್ನೂ ರೂಢಿಯಲ್ಲಿರುವುದು ವಿಶೇಷ.
ಹೆಣ್ಣುಮಕ್ಕಳು ಹುಟ್ಟಿರುವ ಮನೆಯಲ್ಲಿ ಪಾಂಡವರನ್ನು, ಕೋಲನಕುಂತಿಯನ್ನು ಮಾಡುವ ಪದ್ಧತಿಯೂ ವಿಶೇಷವಾದುದು. ದೀಪಾವಳಿ ಪಾಡ್ಯದಂದು ಮನೆಯ ಅಂಗಳವನ್ನು ಸೆಗಣಿಯಿಂದ ಸಾರಿಸಿ ರಂಗೋಲಿಯ ಚಿತ್ತಾರ ಬರೆದು ಬೆಳುಬೆಳಿಗ್ಗೆ ಸೆಗಣಿಯಿಂದಲೆ ಮನೆಯಲ್ಲಿರುವ ಪುಟ್ಟ ಹುಡುಗಿಯರ ಸಂಖ್ಯೆಯ ಪ್ರಕಾರ ಗೊಂಬೆಗಳನ್ನು ಮಾಡಿ ಮನೆಯ ತಲೆಬಾಗಿಲ ಹೊಸ್ತಿಲ ಅಕ್ಕಪಕ್ಕದಲ್ಲಿಟ್ಟು ಅವುಗಳಿಗೆ ಆ ಮಕ್ಕಳಿಂದಲೆ ಕಣಗಿಲೆ, ಸೇವಂತಿಗೆ ಹೂವಿಂದ ಅಲಂಕರಿಸಿ ಪೂಜೆಮಾಡುತ್ತಾರೆ. ಆನಂತರ ಸಂಜೆ ಆ ಗೊಂಬೆಗಳ ನಡುವೆ ಪಟಾಕಿಗಳನ್ನಿಟ್ಟು ಹಾರಿಸುತ್ತಾರೆ. ಈ ಆಚರಣೆಗೂ ಪಾಂಡವರಿಗೂ ಯಾವ ಸಂಬಂಧವಿದೆಯೋ. ಅದನ್ನು ತಿಳಿದುಕೊಳ್ಳುವ ಕುತುಹಲವಿದೆಯಾದರೂ ಹೇಳುವವರಿಲ್ಲದ ಅನಿವಾರ್ಯ. ನಮ್ಮಲ್ಲಿ ಈ ಹಬ್ಬಗಳ ಪದ್ಧತಿಗಳನ್ನು ಯಾವುದೋ ವಿಶಿಷ್ಟವಾದ ಕಾರಣದಿಂದಲೆ ಆಚರಿಸಲಾಗುತ್ತದೆ. ಕೆಲವು ರೂಢಿಗನುಗುಣವಾಗಿ ಬಂದಿರುತ್ತವೆ. ಕೆಲವು ಪುರಾಣದ ನೆನಪುಗಳಾದರೆ ಕೆಲವು ಮನೋರಂಜನೆ, ಸಹಬಾಳ್ವೆಯ ದ್ಯೋತಕ. ಕೆಲವಂತೂ ಆರೋಗ್ಯ ರಕ್ಷಣೆ, ನಿಸರ್ಗ ರಕ್ಷಣೆಗೆ ಪೂರಕವಾದುವು. ಹೀಗೆ ನಮ್ಮ ಪ್ರದೇಶದ ಹಲವು ಹಬ್ಬಗಳು ಆಯಾ ವಾತಾವರಣಕ್ಕೆ ಸಲ್ಲುವ ಆಚರಣೆಗಳನ್ನೊಳಗೊಂಡಿರುವುದು ಗಮನಾರ್ಹ ಸಂಗತಿ. ಅರ್ಥ ತಿಳಿದು ಆಚರಿಸುವಲ್ಲಿ ಹೆಚ್ಚು ಸಾರ್ಥಕತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.