ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚಾರ ವಿಚಾರ| ‘ಭೂತದ ಬಾಯಲ್ಲಿ ಭಗವದ್ಗೀತೆ’

Last Updated 17 ಜನವರಿ 2020, 19:45 IST
ಅಕ್ಷರ ಗಾತ್ರ

ಧೂರ್ತನ ಲಕ್ಷಣವನ್ನು ಸಂಸ್ಕೃತ ಸುಭಾಷಿತವೊಂದು ಹೀಗೆ ವರ್ಣಿಸುತ್ತದೆ:

ಮುಖಂ ಪದ್ಮದಲಾಕಾರಂ ವಚಶ್ಚನ್ದನ ಶೀತಲಮ್ /
ಹೃತ್ ಕರ್ತರಿಸಮಂ ಚಾತಿವಿನಯಂ ಧೂರ್ತಲಕ್ಷಣಮ್//

(ತಾವರೆಯೆಸಳಿನಂತಹ ಮೊಗ, ನುಡಿಯೋ ಚಂದನದ ತಂಪು, ಎದೆಯಲ್ಲಿ ಮಸೆಗತ್ತರಿ - ಅತಿವಿನಯವೇ ಧೂರ್ತಲಕ್ಷಣ.)

ಚಾರ್ಲ್ಸ್ ಡಿಕನ್ಸ್ ತನ್ನ ಡೇವಿಡ್ ಕಾಪರ್ಫೀಲ್ಡ್ ಕಾದಂಬರಿಯಲ್ಲಿ ಉರಯ್ಯ ಹೀಪ್ (Uriah Heep) ಎಂಬ ಧೂರ್ತಶಿಖಾಮಣಿಯ ಪಾತ್ರವನ್ನು ಚಿತ್ರಿಸುತ್ತಾನೆ. ಆತನ ಅತಿವಿನಯ, ಹಾವು ಬಳುಕಿದಂತೆ ಮೈಕೈ ಡೊಂಕಿಸುವ ಹಾವಭಾವ, ಒಳಗೇ ಥಣ್ಣನೆ ಹರಿಯುವ, ಕತ್ತುಕೊಯ್ಯುವ ಕಪಟ, ಅದನ್ನು ಮುಚ್ಚುವ ಸುಳಿನಗೆ, ಸಿಹಿಮಾತು - ಈ ಪಾತ್ರ, ಮೇಲಿನ ಸುಭಾಷಿತಕ್ಕೆ ಉದಾಹರಣೆಯಂತಿದೆ. ತನ್ನ ಉದ್ದೇಶಸಾಧನೆಗೆ ಈತ ಯಾವ ಸುಳ್ಳನ್ನಾದರೂ ಹೇಳಬಲ್ಲ, ಯಾರನ್ನಾದರೂ ಬಲಿಗೊಡಬಲ್ಲ, ಶಿಕ್ಷೆಗೊಳಗಾದಾಗಲೂ ಅದೊಂದು ಮಹಾಪ್ರಾಯಶ್ಚಿತ್ತವೆಂಬಂತೆ ಪ್ರದರ್ಶಿಸುತ್ತಾ, ಮಹಾಧಾರ್ಮಿಕನಂತೆ ನಟಿಸಬಲ್ಲ. ಅಡಿಗಡಿಗೆ ಧರ್ಮಗ್ರಂಥಗಳಿಂದ ಉದ್ಧರಿಸುತ್ತಾ, ತಾನೇ ನಂಬದ ನೀತಿಯನ್ನು ಬೋಧಿಸುತ್ತಾ ಕೇಳುಗರನ್ನು ಮೆಚ್ಚಿಸಿ ಆ ಮೆಚ್ಚುಗೆಯನ್ನೇ ತನ್ನ ಚಿಮ್ಮುಗಲ್ಲಾಗಿ ಬಳಸಿಕೊಳ್ಳಬಲ್ಲ. ಎ. ಎನ್. ಮೂರ್ತಿರಾಯರ 'ಆಷಾಢಭೂತಿ' ನಾಟಕದಲ್ಲಿಯೂ ಇಂಥದೇ ಒಂದು ಚಿತ್ರಣವನ್ನು ಕಾಣಬಹುದು.

ಇಂಥ ಕಪಟ ಧರ್ಮ ಶ್ರವಣವನ್ನು Devil quoting from the scripture ಎನ್ನುತ್ತಾರೆ. ಬಹುಶಃ ಈ ನಾಣ್ನುಡಿಗೆ ಮೂಲವಾಗಿರಬಹುದಾದ ಶೇಕ್ಸ್ಪಿಯರ್ ಮಹಾಕವಿಯ ಮಾತುಗಳನ್ನು ನೋಡಿ (‘ದ ಮರ್ಚೆಂಟ್ಸ್ ಆಫ್ ವೆನಿಸ್"’ನಾಟಕದಲ್ಲಿ):

The devil can cite Scripture for his purpose. An evil soul producing holy witness, is like a villain with a smiling cheek, a goodly apple rotten at the heart.
(ತನಗನುಕೂಲವೆನ್ನುವುದಾದರೆ ದೆವ್ವವೂ ದೈವವಾಕ್ಯಗಳನುದ್ಧರಿಸಿ ಕೊಟ್ಟೀತು. ದೇವರಾಣೆಯಿಡುವ ದುರಾತ್ಮ, ನಗೆಮೊಗದ ಖಳ, ಒಳಗೇ ಕೊಳೆತಿರುವ ದೈವೀಫಲ.)

ಬಹುಶಃ ಇದರಿಂದಲೇ ಪ್ರೇರಿತವಾಗಿರಬಹುದಾದ ಕನ್ನಡ ನಾಣ್ನುಡಿಯೊಂದು ಪ್ರಸಿದ್ಧವಾಗಿದೆ - ‘ಭೂತದ ಬಾಯಲ್ಲಿ ಭಗವದ್ಗೀತೆ’ ಭಗವದ್ಗೀತೆಯೂ ಭೂತವೂ ಸ್ವಭಾವತಃ ಪರಸ್ಪರ ವಿರುದ್ಧ ವಿಷಯಗಳು. ಭಗವದ್ಗೀತೆಯದು ಧರ್ಮಮಾರ್ಗವಾದರೆ, ಅಧರ್ಮವೇ ಭೂತದ ಧರ್ಮ. ಆದರೆ ಅಧರ್ಮಗಾಮಿಯಾದ ಭೂತವು ತನ್ನ ಬಲಿಪಶುವನ್ನು ನಂಬಿಸಿ ಸೆಳೆದೊಯ್ಯಲು ಭಗವದ್ಗೀತೆಯ ಅಗತ್ಯವಿದ್ದರೆ, ಅದನ್ನು ಬಳಸಲೂ ಹಿಂಜರಿಯದು. ತಕ್ಕಂಥದ್ದೊಂದು ವೇಷ, ಭಾಷೆ ಹೊಂದಿಸಿಕೊಂಡರಾಯಿತು - ಭೂತವು ಇದರಲ್ಲೆಲ್ಲ ಎತ್ತಿದ ಕೈ.

ಅಂದಹಾಗೆ, ಇಲ್ಲಿ ದೆವ್ವವೆಂಬುದೊಂದು ಸಂಕೇತವಷ್ಟೇ. ದೈವ ದೆವ್ವಗಳೆರಡೂ ನಮ್ಮಲ್ಲಿಯೇ, ನಮ್ಮ ನಡುವೆಯೇ ಇವೆಯಲ್ಲವೇ? ಯಾವುದು ಏನು ಎಂಬುದನ್ನು ಒರೆಹಚ್ಚಿ ನೋಡಬೇಕಷ್ಟೇ; ಅದರಲ್ಲೂ ಭೂತಗಳೇ ಭಗವದ್ಗೀತೆಯನ್ನು ಜೋರುಜೋರಾಗಿ ಪಠಿಸುವ ಈ ಕಾಲದಲ್ಲಂತೂ ಈ ಎಚ್ಚರ ಅತ್ಯವಶ್ಯ. ಈ ಸುಭಾಷಿತ ಎಚ್ಚರದ ಗುಳಿಗೆಯಂತೆ ಕೆಲಸ ಮಾಡಬಹುದೇನೋ:

ಅಹೋ ದುರ್ಜನಸಂಸರ್ಗಾತ್ ಮಾನಹಾನಿಃ ಪದೇ ಪದೇ /

ಪಾವಕೋ ಲೋಹಸಂಗೇನ ಮುದ್ಗರೈರಭಿತಾಡ್ಯತೇ//

(ಆಹಾ! ದುರ್ಜನಸಂಸರ್ಗದಿಂದ ಪದೇಪದೇ ಮಾನಹಾನಿಯೇ ಸರಿ; ಲೋಹಸಂಗದಿಂದ ಅಗ್ನಿಗೂ ಸುತ್ತಿಗೆ ಪೆಟ್ಟು ಬೀಳುವಂತೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT