ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳ್ಳು ಅಮಾವಾಸ್ಯೆಯೂ, ಭೂಮಿ ತಾಯಿ ಸೀಮಂತವೂ..

Published 12 ಜನವರಿ 2024, 21:24 IST
Last Updated 12 ಜನವರಿ 2024, 21:24 IST
ಅಕ್ಷರ ಗಾತ್ರ

ಎಳ್ಳು ಅಮಾವಾಸ್ಯೆಯನ್ನು ಭೂಮಿ ತಾಯಿಗೆ ಸೀಮಂತ ಮಾಡುವ ದಿನದ ರೀತಿಯಲ್ಲಿ ಆಚರಿಸುವುದು ವಿಶಿಷ್ಟ. ಭೂಮಿ, ನೀರು ಹಾಗೂ ನೀರೇಯನ್ನು ಸಮಾನವಾಗಿ ಪೂಜಿಸುವ, ಮೂರನ್ನೂ ಸಮೀಕರಿಸಿ ಆರಾಧಿಸುವ ವಿಶಿಷ್ಟ ಆಚರಣೆಯಿದು.

ಸೀಮಂತದಲ್ಲಿ ಸಮೃದ್ಧಿಯ ಸಂಕೇತವಾಗಿರುವ ಹಣ್ಣು ಹಂಪಲಗಳನ್ನು, ಆಹಾರಗಳನ್ನು ನೀಡುವಂತೆ ಎಳ್ಳಮಾವಾಸ್ಯೆಯ ದಿನ ಭೂತಾಯಿಗೆ ಹೊಲದಲ್ಲಿ  ಪೂಜಿಸಲಾಗುತ್ತದೆ.

ಬೇಸಿಗೆಕಾಲದ ಪೂರ್ವಾರ್ಧದಲ್ಲಿ ಈ ಅಮಾವಾಸ್ಯೆ ಬರುವುದು. ಸಂಕ್ರಮಣಕ್ಕಿಂತ ಮೊದಲು. ಸುಗ್ಗಿ ಕಾಲದಲ್ಲಿ. ಆಗ ಎಲ್ಲ ಕಡೆ ಭೂಮಿ  ಬೆಳೆಗಳಿಂದ ನಳನಳಿಸುತ್ತಿರುತ್ತದೆ. ಚಳಿ ತೀವ್ರವಾಗಿರುತ್ತದೆ. ಮನುಷ್ಯನ ಜೀರ್ಣಾಂಗಗಳು ಸಂಕುಚಿತಗೊಳ್ಳುತ್ತವೆ. ಜೀರ್ಣಕ್ರಿಯೆ ಸಹ ಸರಾಗವಾಗಿರುವುದಿಲ್ಲ. ದೇಹ ಬೆಚ್ಚಗಿಡುವ ಆಹಾರ ಪದಾರ್ಥಗಳ ಸೇವನೆಯಿಂದ ಅದನ್ನು ಸರಿದೂಗಿಸಲಾಗುತ್ತದೆ

ಅವರೆಬೀಜ, ಕಡಲೆಬೀಜ, ವಟಾಣಿ, ತೊಗರಿ ಬೀಜ, ನೆಂಕಿ ಕಾಳು ಸೇವಿಸಲಾಗುತ್ತದೆ. ಅಂಬಲಿ, ಜೋಳದ ಬಾನಾ, ಸಜ್ಜಿ ರೊಟ್ಟಿ, ಬಿಳಿಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಅಕ್ಕಿ ಹುಗ್ಗಿ, ಕನೋಲಿ, ಕರಜಿಕಾಯಿ ಮಾಡಲಾಗುತ್ತದೆ.

ವಿಶೇಷವಾಗಿ ಅವರೆಬೀಜ, ಕಡಲೆ ಬೀಜ, ವಟಾಣಿ, ತೊಗರಿ ಬೀಜ, ನೆಂಕಿ ಕಾಳು, ಮೆಂತಿಪಲ್ಯ, ಪಾಲಕ್, ಹುಳಿಚಿಕ್ಕಿ, ಹಸಿ ಹುಣಸೆ, ಈರುಳ್ಳಿ ಸೊಪ್ಪು, ಕೊತ್ತಂಬರಿ, ಕರಿಬೇವು, ಬೆಳ್ಳುಳ್ಳಿ, ಕಡಲೆ ಹಿಟ್ಟು ಮೊದಲಾದವುಗಳಿಂದ ‘ಭಜ್ಜಿ’ ತಯಾರಿಸುತ್ತಾರೆ.

ಇದಿಲ್ಲದೆ ಹಬ್ಬ ಅಪೂರ್ಣ. ಬೆಳ್ಳುಳ್ಳಿ ಕಾಯಿಸಿದ ಎಣ್ಣೆ ಹಾಕಿಕೊಂಡು ಭಜ್ಜಿಯೊಂದಿಗೆ ಸವಿಯುವುದೇ ಸಗ್ಗಸುಖ. ಪಚನಕ್ರಿಯೆಗೆ ಈ ಖಾದ್ಯ ಸಹಕಾರಿ ಎಂಬುದನ್ನು ವೈದ್ಯಕೀಯ ಕ್ಷೇತ್ರದವರೂ ಒಪ್ಪುತ್ತಾರೆ.

ಎಳ್ಳು ಅಮಾವಾಸ್ಯೆಯ ಹಿಂದಿನ ದಿನ ಕಾಯಿಪಲ್ಯ ದಿನವೆಂದು ಆಚರಿಸುತ್ತಾರೆ. ಅಂದರೆ, ಭಜ್ಜಿ ಸೇರಿದಂತೆ ಇತರೆ ಖಾದ್ಯಗಳನ್ನು ತಯಾರಿಸುವ ದಿನ ಎಂದರ್ಥ. ದಿನವಿಡೀ ಕಾಯಿಪಲ್ಯ, ಕಾಳು ಸ್ವಚ್ಛಗೊಳಿಸಿ, ಭಜ್ಜಿ, ರೊಟ್ಟಿ, ಅಂಬಲಿ, ಜೋಳದ ಬಾನಾ ತಯಾರಿಸುತ್ತಾರೆ. ಮರುದಿನ ತಯಾರಿಸಿದ ಎಲ್ಲ ಖಾದ್ಯಗಳನ್ನು ಬಿದಿರಿನಿಂದ ತಯಾರಿಸಿದ ಹೊಸ ಬುಟ್ಟಿಯಲ್ಲಿ ಸಂಗ್ರಹಿಸಿ, ತಲೆಯ ಮೇಲೆ ಇಟ್ಟುಕೊಂಡು ಹೊಲಕ್ಕೆ ಕೊಂಡೊಯ್ಯುತ್ತಾರೆ. ಅವರೊಂದಿಗೆ ಕುಟುಂಬದ ಎಲ್ಲ ಸದಸ್ಯರು ದೇವರ ಸ್ಮರಣೆ ಮಾಡುತ್ತ ಹೋಗುತ್ತಾರೆ. ಹೀಗೆ ಹೋಗುವಾಗ ಹಿಂತಿರುಗಿ ನೋಡುವುದಿಲ್ಲ. ಯಾರೊಂದಿಗೂ ಮಾತನಾಡುವುದಿಲ್ಲ. ಹೊಲದಲ್ಲಿ ಜೋಳದ ಕಳಿಕೆಯಿಂದ ಮಾಡಿರುವ ಕೊಂಪೆಯಲ್ಲಿ ಇಡುತ್ತಾರೆ.

ಕಬ್ಬು, ಬಿಳಿ ಜೋಳದ ದಂಟು, ಕಡಲೆ, ಕುಸುಬಿ, ಅಗಸಿ, ಗೋಧಿ ತೆನೆಗಳಿಂದ ಕೊಂಪೆಯನ್ನು ಸಿಂಗರಿಸುತ್ತಾರೆ. ಲಕ್ಷ್ಮಿ, ಭೂದೇವಿ, ಸರಸ್ವತಿ, ಪಾರ್ವತಿ ಹಾಗೂ ಭವಾನಿಯ ಪ್ರತೀಕವಾಗಿ ಐದು ಮಣ್ಣಿನ ಹೆಂಟೆ ಅಥವಾ ಕಲ್ಲುಗಳನ್ನಿಟ್ಟು ಗೋಧಿ ಹಿಟ್ಟಿನಿಂದ ಮಾಡಿದ ಹಣತೆ ದೀಪ ಬೆಳಗಿಸಿ ಪೂಜಿಸುತ್ತಾರೆ. ಕೊಂಪೆಯಲ್ಲಿ ಇರಿಸಿದ ವಿವಿಧ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿದ ದ್ರವರೂಪದ ಆಹಾರವನ್ನು ನೀರಿನ ತಂಬಿಗೆಯಲ್ಲಿ ತೆಗೆದುಕೊಂಡು ಕೊಂಪೆಯ ಸುತ್ತ ಜೋಳದ ದಂಟಿನಿಂದ ಚರಗ ಚೆಲ್ಲುತ್ತಾರೆ. ಮುಂದಿದ್ದಾತ ‘ವಲಿಗ್ಯಾ.. ವಲಿಗ್ಯಾ.. ಎಂದರೆ ಹಿಂದಿರುವ ವ್ಯಕ್ತಿ ‘ಚಾಲೋಂ ಪಲಿಗ್ಯಾ’ ಎನ್ನುವರು.

ಕೊನೆಯಲ್ಲಿ ಸರಗವನ್ನು ಚೆಲ್ಲಿ ಕೊಂಪೆಗೆ ನಮಸ್ಕಾರ ಮಾಡಿ, ಮನೆಯ ಮುತ್ತೈದೆಯವರು ಕನೊಲಿ, ಕರಜಿಕಾಯಿ ಅವರ ಬೆನ್ನ ಮೇಲಿಡುವರು. ದೇವರಿಗೆ ನಮಸ್ಕರಿಸುವ ವ್ಯಕ್ತಿ ಎಡಗೈಯಿಂದ ಪಡೆದು ತಿನ್ನುವನು. ನಂತರ ಎಲ್ಲರೂ ಕುಳಿತು ಸಾಮೂಹಿಕವಾಗಿ ಊಟ ಮಾಡುವರು. ಬಂಧು ಬಾಂಧವರು, ನೆರೆಹೊರೆಯವರು, ಸ್ನೇಹಿತರನ್ನು ಹೊಲಕ್ಕೆ ಕರೆಸಿ ಉಣಬಡಿಸಲಾಗುತ್ತದೆ. ಕಬ್ಬು, ಕಡ್ಡಿ (ಹಸಿಕಡಲೆಗೆ ಕಡ್ಡಿ ಎಂದು ಕರೆಯಲಾಗುತ್ತದೆ) ಸೇರಿದಂತೆ ಹೊಸ ಫಸಲನ್ನು ಕೊಟ್ಟು ಕಳಿಸುತ್ತಾರೆ. 

ಹೆಣ್ಣು ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸುತ್ತಾರೆ. ಗಂಡು ಮಕ್ಕಳು ಗಾಳಿಪಟ ಹಾರಿಸುತ್ತಾರೆ. ಸಂಜೆ ಅಗ್ನಿಕುಂಡದಲ್ಲಿ ಹಾಲುಕ್ಕಿಸುತ್ತಾರೆ. ಬುಟ್ಟಿ ಕೊಂಪೆಯಲ್ಲಿ ದೀಪ ಹಚ್ಚಿಕೊಂಡು ಅದನ್ನು ತಲೆಯ ಮೇಲೆ ಇಟ್ಟುಕೊಂಡು ಮನೆಗೆ ವಾಪಸಾಗುತ್ತಾರೆ. ಮನೆ ತಲುಪುವವರೆಗೆ ಎಲ್ಲೂ ನಿಲ್ಲುವುದಿಲ್ಲ. 

ಮಲ್ಲಪ್ಪ ಹೊಸಮನೆ ಅವರ ಹೊಲದಲ್ಲಿ ಚರಗಾ ಚೆಲ್ಲುತ್ತಿರುವುದು
ಮಲ್ಲಪ್ಪ ಹೊಸಮನೆ ಅವರ ಹೊಲದಲ್ಲಿ ಚರಗಾ ಚೆಲ್ಲುತ್ತಿರುವುದು
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಬಳಿ ಎಳ್ಳುಅಮಾವಾಸ್ಯೆ ಅಂಗವಾಗಿ ಶುಕ್ರವಾರ ಹೊಲದಲ್ಲಿ ಪೂಜೆ ಸಲ್ಲಿಸಲಾಯಿತು
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಬಳಿ ಎಳ್ಳುಅಮಾವಾಸ್ಯೆ ಅಂಗವಾಗಿ ಶುಕ್ರವಾರ ಹೊಲದಲ್ಲಿ ಪೂಜೆ ಸಲ್ಲಿಸಲಾಯಿತು
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಬಳಿ ಎಳ್ಳುಅಮಾವಾಸ್ಯೆ ಅಂಗವಾಗಿ ಶುಕ್ರವಾರ ಭೀಮಶಂಕರ ಅವರ ಹೊಲದಲ್ಲಿ ಕುಟುಂಬದ ಸದಸ್ಯರು ಕುಳಿತು ಸಾಮೂಹಿಕವಾಗಿ ಊಟ ಮಾಡಿದರು
ಪ್ರಜಾವಾಣಿ ಸಂಗ್ರಹ ಚಿತ್ರಗಳು: ತಾಜುದ್ದೀನ್‌ ಆಜಾದ್‌
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಬಳಿ ಎಳ್ಳುಅಮಾವಾಸ್ಯೆ ಅಂಗವಾಗಿ ಶುಕ್ರವಾರ ಭೀಮಶಂಕರ ಅವರ ಹೊಲದಲ್ಲಿ ಕುಟುಂಬದ ಸದಸ್ಯರು ಕುಳಿತು ಸಾಮೂಹಿಕವಾಗಿ ಊಟ ಮಾಡಿದರು ಪ್ರಜಾವಾಣಿ ಸಂಗ್ರಹ ಚಿತ್ರಗಳು: ತಾಜುದ್ದೀನ್‌ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT