ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವ ಪ್ರದಕ್ಷಿಣ ನಮಸ್ಕಾರವೇ ಶ್ರೇಷ್ಠ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಅಕ್ಷರ ಗಾತ್ರ

ಶಾಂತಿಕರ್ಮದಲ್ಲಿ ಶಿವನಿಗೆ ನೈವೇದ್ಯವನ್ನು ಮಾಡಿ ತಾಂಬೂಲವನ್ನರ್ಪಿಸಿ, ನೂರೆಂಟು ಪ್ರದಕ್ಷಿಣ ನಮಸ್ಕಾರಗಳನ್ನು ಶಿವನಿಗೆ ಮಾಡಬೇಕು. ಶಿವನಿಗೆ ಪ್ರದಕ್ಷಿಣ ನಮಸ್ಕಾರವನ್ನು ಮಾಡಿದರೆ, ಸಕಲ ಪಾಪಗಳೂ ನಾಶವಾಗುವುದು ಎಂದು ಸೂತಮುನಿ ತಿಳಿಸುತ್ತಾನಲ್ಲದೆ, ದುಃಖಕ್ಕೆ ರೋಗವೇ ಕಾರಣ. ಆ ರೋಗಕ್ಕೆ ಪಾಪವು ಕಾರಣ ಅಂತ ವಿವರಿಸುತ್ತಾನೆ. ಧರ್ಮದಿಂದಲೇ ಪಾಪಗಳು ನಾಶವಾಗುವುದು. ಶಿವನನ್ನುದ್ದೇಶಿಸಿ ಮಾಡುವಂತಹ ಪ್ರದಕ್ಷಿಣನಮಸ್ಕಾರ ಮುಂತಾದ ಧರ್ಮಕಾರ್ಯಗಳಿಂದ ಪಾಪಗಳನ್ನು ಹೋಗಲಾಡಿಸಬಹುದು. ಧರ್ಮಕಾರ್ಯಗಳಲ್ಲಿ ಪ್ರದಕ್ಷಿಣ ನಮಸ್ಕಾರವು ಶ್ರೇಷ್ಠವಾದುದು. ಜಪರೂಪವಾದ ಪ್ರಣವಮಂತ್ರವೂ ಕ್ರಿಯಾರೂಪ ಪ್ರದಕ್ಷಿಣೆಯಾಗಿರುತ್ತದೆ ಎನ್ನುತ್ತಾನೆ.

ಪ್ರಾಣಿಗಳಿಗೆ ಒದಗುವ ಜನನ ಮತ್ತು ಮರಣಗಳಿಗೆ ಮಾಯಾಚಕ್ರವೆಂದು ಹೆಸರು. ಶಿವನ ಬಲಿಪೀಠವು ಆ ಮಾಯಾಚಕ್ರದ ಸ್ವರೂಪವಾಗಿರುತ್ತದೆ. ಬಲಿಪೀಠದಿಂದ ಪ್ರಾರಂಭಿಸಿ ಶಿವದೇವಾಲಯವನ್ನು ಒಂದು ಸುತ್ತು ತಿರುಗಿ ಬಲಿಪೀಠದ ಬಳಿ ಬಂದು ನಮಸ್ಕಾರವನ್ನು ಮಾಡಬೇಕು. ಇದಕ್ಕೆ ಪ್ರದಕ್ಷಿಣವೆಂದು ಹೆಸರು. ಮಾತೃಗರ್ಭದಿಂದ ಜನಿಸುವುದೇ ಜನನ. ನಮಸ್ಕಾರವು ಆತ್ಮಸ್ವರೂಪವನ್ನು ಶಿವನಲ್ಲಿ ಅರ್ಪಿಸುವುದು. ಅಂದರೆ ಶಿವನೊಡನೆ ಐಕ್ಯವಾಗುವುದು. ಜನನ ಮತ್ತು ಮರಣ ಎಂಬ ಈ ದ್ವಂದ್ವವು ಶಿವನ ಮಾಯೆಯಿಂದ ನಿರ್ಮಿತವಾಗಿರುವುದು. ಶಿವನ ಮಾಯೆಯಿಂದ ಜನನ-ಮರಣವುಳ್ಳವನು ತಿರುಗಿ ಆತ್ಮಸ್ವರೂಪವನ್ನು ಪಡೆಯುವುದು ಕಷ್ಟ. ಅವನು ದೇಹವಿರುವವರೆಗೂ ಕ್ರಿಯೆಗಳಿಗೆ ಅಧೀನನಾಗಿಯೇ ಇರುವನು. ಅವನಿಗೆ ಬದ್ಧಜೀವನೆಂದು ಹೆಸರು. ಸ್ಥೂಲ, ಸೂಕ್ಷ್ಮ ಮತ್ತು ಕಾರಣ – ಈ ಮೂರು ಶರೀರಗಳನ್ನು ವಶದಲ್ಲಿಟ್ಟುಕೊಂಡಿರುವವನಿಗೆ ಮುಕ್ತಜೀವನೆಂದು ಹೆಸರು.

ಜಗತ್ತಿಗೆ ಪರಮಕಾರಣನಾದ ಶಿವನು ಜನ್ಮಮರಣರೂಪವಾದ ಈ ಮಾಯಾಚಿತ್ರವನ್ನು ನಿರ್ಮಿಸಿರುವನು. ಶಿವಮಾಯೆಯಿಂದ ಬಂದಿರುವ ಜನನಮರಣಗಳನ್ನು ಶಿವನೊಬ್ಬನು ಮಾತ್ರ ಹೋಗಲಾಡಿಸಲು ಸಮರ್ಥ. ಶಿವನು ನಿರ್ಮಿಸಿರುವ ಜನನಮರಣಗಳನ್ನು ಅವನಲ್ಲಿಯೇ ಸಮರ್ಪಿಸಬೇಕು. ಆದ್ದರಿಂದ ಶಿವನಿಗೆ ತುಂಬಾ ಪ್ರಿಯವಾದ ಪ್ರದಕ್ಷಿಣ ನಮಸ್ಕಾರ ಮಾಡಬೇಕು. ಪ್ರದಕ್ಷಿಣ ನಮಸ್ಕಾರಗಳೊಡನೆ ಷೋಡಶೋಪಚಾರಗಳಿಂದ ಪರಮಾತ್ಮನಾದ ಶಿವನಿಗೆ ಪೂಜೆಯನ್ನು ಮಾಡಿದರೆ ನಿಶ್ಚಯವಾಗಿಯೂ ಫಲ ಲಭಿಸುವುದು. ಪ್ರದಕ್ಷಿಣ ನಮಸ್ಕಾರಗಳಿಂದ ಹೋಗದಿರುವಂತಹ ಪಾಪವೇ ಭೂಮಿಯಲ್ಲಿಲ್ಲ. ಪ್ರದಕ್ಷಿಣದಿಂದಲೇ ಸಕಲ ಪಾಪಗಳನ್ನು ನಾವು ನಾಶಮಾಡಿಕೊಳ್ಳಬೇಕು. ಶಿವಪೂಜೆಯಲ್ಲಿ ನಿರತನಾದವನು ಮೌನಿಯೂ, ಸತ್ಯ ಅಸ್ತೇಯ ಮುಂತಾದ ಗುಣಗಳುಳ್ಳವನೂ ಆಗಿರಬೇಕು. ಕ್ರಿಯೆ, ತಪಸ್ಸು, ಜಪ, ಜ್ಞಾನ, ಧ್ಯಾನಗಳಲ್ಲಿ ಒಂದನ್ನೂ ಬಿಡದೆ ಆಚರಿಸಬೇಕು.

ಶಿವನ ಕ್ರಿಯೆಗೆ ಐಶ್ವರ್ಯ ಫಲ, ತಪಸ್ಸಿಗೆ ದಿವ್ಯವಾದ ದೇಹ ದೊರೆವುದು, ಜಪಕ್ಕೆ ಜ್ಞಾನ ಲಭ್ಯವಾದರೆ, ಧ್ಯಾನಕ್ಕೆ ಶಿವನ ಸಾನ್ನಿಧ್ಯವಿರುವ ಫಲಗಳು ಸಿಗುವುದು. ಕಾಲ–ದೇಶಗಳಿಗೆ ಅನುಗುಣವಾಗಿ ಮತ್ತು ತನ್ನ ಶರೀರ, ಧನಗಳಿಗೆ ಅನುಗುಣವಾಗಿ ಮಾಡಬೇಕು. ಕ್ರಿಯೆ ಮುಂತಾದ ಮುಕ್ತಿಸಾಧನಗಳನ್ನು ಶಿವಭಕ್ತನು ಯೋಗ್ಯತೆಯನ್ನು ಮೀರದೆ ಆಚರಿಸಬೇಕು. ನ್ಯಾಯವಾಗಿ ಸಂಪಾದಿಸಿದ ಧನದಿಂದ ಶಿವಕ್ಷೇತ್ರದಲ್ಲಿ ವಾಸಮಾಡಬೇಕು. ಜೀವಹಿಂಸೆಯಾಗದಿರುವಂತಹ ಮತ್ತು ಹೆಚ್ಚು ಕ್ಲೇಶಸಾಧ್ಯವಲ್ಲದಂತಹ ಆಹಾರವನ್ನು ಪಂಚಾಕ್ಷರಮಂತ್ರದಿಂದ ಜಪಿಸಿ ಸೇವಿಸಿದರೆ ಸುಖವಾಗುವುದು. ಬಡವನು ಭಿಕ್ಷಾನ್ನವನ್ನು ತಂದು ಸೇವಿಸಬಹುದು.

ಶಿವಭಕ್ತಿಯಿಂದ ತಂದ ಭಿಕ್ಷಾನ್ನವು ಶಿವಭಕ್ತಿಯನ್ನು ಹೆಚ್ಚಿಸುವುದು. ಭಿಕ್ಷಾನ್ನವು ಶಂಭುವಿನ ಸತ್ರವೆಂದು ಶಿವಯೋಗಿಗಳು ಹೇಳಿರುವರು. ಶುದ್ಧವಾದ ಪ್ರದೇಶದಲ್ಲಿ ಕುಳಿತು ಯಾರಿಗೂ ಕಾಣಿಸದಂತೆ ಮೌನವಾಗಿ ಶುದ್ಧವಾದ ಅನ್ನವನ್ನು ಸೇವಿಸಬೇಕು. ಬಹಿರಂಗವಾಗಿ ಸೇವಿಸಬಾರದು. ಶಿವಭಕ್ತರಿಗೆ ಶಿವಮಹಾತ್ಮೆಯನ್ನು ಹೇಳಬೇಕು. ಶಿವಮಂತ್ರದ ರಹಸ್ಯವನ್ನು ಶಿವನೇ ಬಲ್ಲವನು, ಇನ್ನಾರಿಗೂ ತಿಳಿಯದು. ಶಿವಭಕ್ತನು ನಿತ್ಯವೂ ಶಿವಲಿಂಗವನ್ನಾಶ್ರಯಿಸಿದರೆ ಶಿವಸ್ವರೂಪವನ್ನು ಪಡೆಯುವನು. ಚರವಾದ ಶಿವಲಿಂಗವನ್ನರ್ಚಿಸಿದರೆ ಮುಕ್ತಿಯು ಲಭಿಸುವುದು.

ವ್ಯಾಸಮುನಿಯು ನನಗೆ ಯಾವುದನ್ನು ಹೇಳಿದ್ದನೋ, ಅದೆಲ್ಲವನ್ನೂ ಸಂಕ್ಷೇಪವಾಗಿ ನಿಮಗೆ ಹೇಳಿರುವೆ. ಶಿವನು ನಮ್ಮೆಲ್ಲರಿಗೂ ಮಂಗಳವನ್ನುಂಟುಮಾಡಲಿ, ಶಿವಭಕ್ತಿಯು ನಮ್ಮಲ್ಲಿ ದೃಢವಾಗಲಿ. ಈ ಅಧ್ಯಾಯವನ್ನು ಪಠಿಸುವವರು ಕೇಳುವವರೂ ಶಿವನ ಅನುಗ್ರಹಕ್ಕೆ ಪಾತ್ರರಾಗಿ ಶಿವಸ್ವರೂಪಜ್ಞಾನವನ್ನು ಪಡೆಯುವರು – ಎಂದು ಪ್ರಯಾಗದ ಋಷಿಸಮೂಹಕ್ಕೆ ಸೂತಮುನಿ ತಿಳಿಸುವುದರೊಂದಿಗೆ ಶ್ರೀ ಶಿವಪುರಾಣದ ವಿದ್ಯೇಶ್ವರಸಂಹಿತೆಯ ಶಿವಲಿಂಗಮಹಾತ್ಮೆ ವರ್ಣನೆ ಎಂಬ ಹದಿನೆಂಟನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT