ಗುರುವಾರ , ಮೇ 19, 2022
21 °C

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ: ಶಿವಲೋಕ ಸೇರಿದ ಗುಣನಿಧಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಗುಣನಿಧಿಯನ್ನು ನರಕಕ್ಕೆ ಕರೆದೊಯ್ಯದಂತೆ ತಡೆದ ಶಿವಗಣರು ‘ಎಲೈ ಯಮಭಟರೇ, ಪರಮ ಧಾರ್ಮಿಕನಾದ ಇವನನ್ನು ಬಿಡಿ. ಇವನು ದಂಡನೆಗೆ ಅರ್ಹನಾದವಲ್ಲ. ಇವನ ಪಾಪಗಳೆಲ್ಲವೂ ಸುಟ್ಟು ಬೂದಿಯಾಗಿವೆ’ ಎನ್ನುತ್ತಾರೆ. ಇದನ್ನು ಕೇಳಿ ಯಮಭಟರಿಗೆ ಆಶ್ಚರ್ಯವಾಗುತ್ತೆ. ’ಎಲೈ ಶಿವಗಣಗಳಿರಾ! ಇವನು ಬಹಳ ಕೆಟ್ಟ ಕೆಲಸಗಳನ್ನು ಮಾಡಿದವನು. ಇವನು ತನ್ನ ಕುಲದ ಆಚಾರವನ್ನೆಲ್ಲವನ್ನೂ ಬಿಟ್ಟು, ತಾಯಿತಂದೆಯರ ಮಾತನ್ನು ಕೇಳದೆ, ಸತ್ಯ-ಶೌಚಗಳನ್ನು ಮಾಡದವನು. ಈತನ ಹಿಂದಿನ ದುಷ್ಕೃತ್ಯ ಹಾಗಿರಲಿ. ಈಗ ಪ್ರತ್ಯಕ್ಷವಾಗಿಯೇ ನೋಡಿರಿ. ಶಿವನಿರ್ಮಾಲ್ಯವನ್ನು ಉಲ್ಲಂಘಿಸಿರುವನು. ನಿಮ್ಮಂಥವರು ಇವನನ್ನು ಮುಟ್ಟಲೂಬಾರದು’ ಎನ್ನುತ್ತಾರೆ.

‘ಶಿವನಿರ್ಮಾಲ್ಯವನ್ನು ಉಪಯೋಗಿಸುವವರು, ಅದನ್ನು ಕಡೆಗಣಿಸುವವರು ಮತ್ತು ನಿರ್ಮಾಲ್ಯವನ್ನು ನೀಡುವವರನ್ನು ಮುಟ್ಟಿದರೆ ಪಾಪವು ಲಭಿಸುವುದು. ವಿಷವನ್ನಾದರೂ ನೋಡಿ ಕುಡಿಯಬಹುದು. ಆದರೆ ಇಂಥವರನ್ನು ಮುಟ್ಟಬಾರದು. ಪ್ರಾಣ ಹೋಗುವಂಥ ಕಷ್ಟ ಏನೇ ಇದ್ದರೂ ಶಿವನ ಸ್ವತ್ತನ್ನು ಮುಟ್ಟಬಾರದು. ಅಂಥದರಲ್ಲಿ ಶಿವನ ನೈವೇದ್ಯವನ್ನು ಕದ್ದೊಯ್ಯುತ್ತಿದ್ದ ಇವನಿಗೆ ನರಕವೇ ಪ್ರಾಯಶ್ಚಿತ್ತ’ ಎನ್ನುತ್ತಾರೆ ಯಮಕಿಂಕರರು.

ಯಮಭಟರ ಮಾತನ್ನು ಕೇಳಿ ಶಿವನ ಪಾರಿಷದರು ಪರಶಿವನ ಪದಕಮಲಗಳನ್ನು ಧ್ಯಾನಿಸುತ್ತಾ ಶಿವಕಿಂಕರರಿಗೆ ಹೇಳುತ್ತಾರೆ: ‘ಎಲೈ ಯಮಕಿಂಕರರೇ, ಸೂಕ್ಷ್ಮ ದೃಷ್ಟಿಗಳು ಮಾತ್ರ ಗಮನಿಸಬಹುದಾದ, ಪರಮ ಸೂಕ್ಷ್ಮವಾದ ಶಿವಧರ್ಮಗಳು ಸ್ಥೂಲದೃಷ್ಟಿಯುಳ್ಳ ನಿಮ್ಮಂಥವರಿಗೆ ಗೋಚರವಾಗುವುದಿಲ್ಲ. ಈಗ ಪಾಪರಹಿತನಾಗಿರುವ ಗುಣನಿಧಿಯು ಮಾಡಿದ ಅಂತಹ ಪುಣ್ಯ ಕೆಲಸವೇನು ಎಂದಲ್ಲವೇ ನಿಮ್ಮ ಶಂಕೆ? ಸಾವಧಾನವಾಗಿ ಕೇಳಿರಿ. ಇವನು ರಾತ್ರಿ ತನ್ನ ಬಟ್ಟೆಯಂಚಿನಿಂದ ದೀಪದ ಬತ್ತಿಯನ್ನು ಮಾಡಿ ಬೆಳಗಿದ್ದರಿಂದ, ಅದುವರೆಗೂ ಲಿಂಗದ ಮೇಲೆ ಬೀಳುತ್ತಿದ್ದ ನೆರಳು ಹೋಗಲಾಡಿಸಲ್ಪಟ್ಟಿತು. ಇವನು ಮಾಡಿದ ಮತ್ತೊಂದು ದೊಡ್ಡ ಧರ್ಮವನ್ನೂ ಕೇಳಿರಿ. ಶಿವಪೂಜೆಯ ಕಾಲದಲ್ಲಿ ಭಕ್ತರು ಶಿವನಾಮಾವಳಿ ಕೀರ್ತನ ಮಾಡುತ್ತಿದ್ದಾಗ ಇವನು ಆ ಶಿವನಾಮಗಳನ್ನು ಆಲಿಸಲಿಲ್ಲವೇ? ಇದೇ ಅವನು ಮಾಡಿದ ಮತ್ತೊಂದು ಧರ್ಮ. ಶಿವರಾತ್ರಿಯ ಚತುರ್ದಶೀ ದಿವಸದಲ್ಲಿ ಭಕ್ತನು ವಿಧಿವತ್ತಾಗಿ ಪೂಜೆಮಾಡುತ್ತಿದ್ದುದನ್ನು ನೋಡಿದ್ದಾನೆ. ಅಲ್ಲಿಯವರೆಗೂ ಏನನ್ನೂ ತಿನ್ನದೆ ಉಪವಾಸವಿದ್ದು, ಶಿವನ ಸನ್ನಿಧಾನದಲ್ಲಿ ಸಂಯಮದಿಂದ ಕಾದಿದ್ದಾನೆ. ಈ ಪುಣ್ಯಪ್ರಭಾವದಿಂದ ಇವನು ಈಗ ನಮ್ಮೊಡನೆಯೇ ಶಿವಲೋಕಕ್ಕೆ ತೆರಳುವನು. ಅಲ್ಲದೆ ಕೆಲವು ಕಾಲ ಶಿವನ ಅನುಚರನಾಗಿ ಮಹಾಭೋಗಗಳನ್ನ ಅನುಭವಿಸುವನು. ಪಾಪಲೇಶವೂ ಇಲ್ಲದ ಗುಣನಿಧಿಯು ಮುಂದೆ ಕಳಿಂಗದೇಶದ ಅರಸನಾಗುವನು. ಇವನು ಈಗ ಶಿವನಿಗೆ ಬಹಳ ಬೇಕಾದವನಾಗಿದ್ದಾನೆ. ನೀವು ಬಂದ ದಾರೀ ಹಿಡಿದು ನಿಮ್ಮ ಲೋಕಕ್ಕೆ ತೆರಳಿರಿ’ ಎಂದರು ಶಿವಗಣರು.

ಈ ಪ್ರಸಂಗವನ್ನು ಬ್ರಹ್ಮನು ನಾರದನಿಗೆ ಹೀಗೆ ವಿವರಿಸುತ್ತಾನೆ: ‘ನಾರದ, ಶಿವದೂತರು ಹೇಳಿದ ಮಾತನ್ನು ಕೇಳಿ, ಆ ಯಮದೂತರು ತಮ್ಮ ಲೋಕಕ್ಕೆ ಹೊರಟುಹೋದರು. ನಡೆದ ವೃತ್ತಾಂತವನ್ನೆಲ್ಲ ಯಮನಿಗೆ ತಿಳಿಸಿದರು. ಇದಕ್ಕೆ ಯಮರಾಜ ತನ್ನ ಭಟರಿಗೆ ‘ಎಲೈ ಭಟರಿರಾ, ಎಚ್ಚರಿಕೆಯಿಂದ ನನ್ನ ಮಾತನ್ನು ಕೇಳಿರಿ. ಅದನ್ನೇ ನನ್ನ ಅಪ್ಪಣೆ ಎಂದು ತಿಳಿದು ಪ್ರೀತಿಯಿಂದ ನೆರವೇರಿಸಿ. ಯಾರು ಪ್ರಪಂಚದಲ್ಲಿ ವಿಭೂತಿಯನ್ನು ತ್ರಿಪುಂಡ್ರವಾಗಿ ಧರಿಸಿರುವರೋ, ಅವರೆಲ್ಲರನ್ನೂ ನೀವು ಬಿಟ್ಟುಬಿಡಿ. ಎಂದಿಗೂ ಅವರನ್ನು ಇಲ್ಲಿಗೆ ಕರೆತರಬೇಕಾಗಿಲ್ಲ. ಯಾರು ಬಿಳಿದಾದ ವಿಭೂತಿಯನ್ನು ಹಣೆಗೆ ಹಾಕಿಕೊಳ್ಳುವರೋ, ಅಥವಾ ಮೈಗೆ ಹಚ್ಚಿಕೊಳ್ಳುವರೋ, ಅವರೆಲ್ಲರನ್ನೂ ನೀವು ಬಿಟ್ಟುಬಿಡಬೇಕು. ಎಂದಿಗೂ ನರಕಕ್ಕೆ ಕರೆತರಬಾರದು. ಶಿವನ ವೇಷವನ್ನು ಧರಿಸಿರುವರೆಂದಾಗಲೀ ಅಥವಾ ಮತ್ತಾವ ಕಾರಣದಿಂದಲಾದರೂ ಆಗಲಿ, ಅವರೆಲ್ಲರನ್ನೂ ಬಿಟ್ಟುಬಿಡಬೇಕಲ್ಲದೆ, ಇಲ್ಲಿಗೆ ಎಂದಿಗೂ ಕರೆದುಕೊಂಡು ಬರಬಾರದು. ಲೋಕದಲ್ಲಿ ಯಾರು ರುದ್ರಾಕ್ಷಿಗಳನ್ನು ಧರಿಸುವರೋ, ಯಾರು ಜಟೆಗಳನ್ನು ಬಿಟ್ಟಿರುವರೋ, ಅವರೆಲ್ಲರ ತಂಟೆಗೂ ಹೋಗಬೇಡಿ. ಎಂದಿಗೂ ಅವರನ್ನು ಇಲ್ಲಿಗೆ ಕರೆತರಲಾಗದು. ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳಲು ಯಾರು ಶಿವನ ವೇಷವನ್ನು ಧರಿಸುವರೋ, ಅಂಥವರನ್ನೂ ನೀವು ಬಿಟ್ಟುಬಿಡಬೇಕಲ್ಲದೆ ಇಲ್ಲಿಗೆ ಕರೆತರಬಾರದು’ ಎಂದು ಆದೇಶಿಸುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು