ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ದೇವತೆಗಳ ಹಿಂಸಿಸಿದ ತಾರಕ

ಭಾಗ –212
ಅಕ್ಷರ ಗಾತ್ರ

ತಂದೆ–ತಾಯಿಯರ ಅನುಮತಿ ಪಡೆದ ತಾರಕ ಮಧುವನ ಎಂಬ ದಂಡಕಾರಣ್ಯದಲ್ಲಿ ಹಲವು ರೀತಿಯ ಕಠಿಣ ತಪವನ್ನು ಆಚರಿಸಿದ. ಅಗ್ನಿಯ ಮಧ್ಯದಲ್ಲಿ ನಿಂತು ನೂರು ವರ್ಷ, ಕೇವಲ ಕೈಯ್ಯೊಂದರಿಂದಲೇ ತಲೆಕೆಳಗಾಗಿ ನಿಂತು ನೂರು ವರ್ಷ, ಮರದ ರೆಂಬೆಯ ಸಹಾಯದಿಂದ ತಲೆಕೆಳಗಾಗಿ ಜೋತುಬಿದ್ದು, ಅದರ ಕೆಳಗೆ ಬೆಂಕಿ ಉರಿಸಿ ಹೊಗೆ ಸೇವಿಸುತ್ತಾ ನೂರು ವರ್ಷಗಳವರೆಗೆ ತಪಸ್ಸು ಮಾಡಿದ.

ಹೀಗೆ ಮಹಾಕಠಿಣವಾದ ತಪವನ್ನು ಆಚರಿಸುವಾಗ ತಾರಕನ ಶಿರಸ್ಸಿನಿಂದ ಪ್ರಕಾಶಮಾನವಾದ ಮಹಾ ತೇಜಸ್ಸು ಹೊರಟಿತು. ಅದು ಮಹಾಉಪದ್ರವನ್ನು ಉಂಟುಮಾಡುವಂತ್ತಿತ್ತು. ಆ ತೇಜಸ್ಸು ದೇವಲೋಕಗಳನ್ನು ತಾಕಿದಾಗ ಅವು ಕರಕಲಾದವು. ಇದನ್ನು ನೋಡಿ ದೇವತೆಗಳು ದುಃಖಪಟ್ಟರು. ಇಂದ್ರನಂತೂ ಭಯಭೀತನಾದ. ಇಂದ್ರಪದವಿಯನ್ನು ಕಸಿದುಕೊಳ್ಳುವ ದುರುದ್ದೇಶದಿಂದಲೇ ತಾರಕ ತಪವನ್ನ ಆಚರಿಸುತ್ತಿದ್ದಾನೆ ಎಂದು ಚಿಂತಿತನಾದ. ಅಕಾಲದಲ್ಲಿ ತಾರಕಾಸುರ ಇಡೀ ಬ್ರಹ್ಮಾಂಡವನ್ನೇ ನಾಶ ಮಾಡುವನೆಂದು ದೇವರ್ಷಿಗಳು ಆತಂಕಿತರಾದರು. ದೇವತೆಗಳು ಮತ್ತು ದೇವರ್ಷಿಗಳು ಬ್ರಹ್ಮನಿಗೆ ನಡೆಯುತ್ತಿರುವ ವೃತ್ತಾಂತವೆಲ್ಲವನ್ನು ನಿವೇದಿಸಿದರು. ಆಗ ಬ್ರಹ್ಮ ತಾರಕಾಸುರನು ತಪಸ್ಸು ಮಾಡುತ್ತಿರುವ ಸ್ಥಳಕ್ಕೆ ವರವನ್ನು ಕೊಡಲು ತೆರಳಿ, ‘ಎಲೈ ಅಸುರನೇ, ಬೇಕಾದ ವರವನ್ನು ಕೇಳಿಕೊ’ ಎಂದ. ತಾರಕ ‘ಮೊದಲನೆಯದಾಗಿ ಈ ಜಗತ್ತಿನಲ್ಲಿ ನನಗಿಂತಲೂ ಬಲಿಷ್ಠನಾಗಿ ಯಾವ ಪುರುಷನೂ ಇರಬಾರದು. ಎರಡನೆಯದಾಗಿ ಶಿವನ ವೀರ್ಯದಿಂದ ಜನಿಸಿದ ಕುಮಾರ ಸೇನಾಪತಿಯಾಗಿ ಬಂದು ನನ್ನ ಮೇಲೆ ಅಸ್ತ್ರವನ್ನು ಪ್ರಯೋಗಿಸಿದರೆ ಮಾತ್ರ ನನಗೆ ಮರಣವಾಗಬೇಕು’ ಎಂದು ಕೋರಿದ.

ಬ್ರಹ್ಮ ‘ತಥಾಸ್ತು’ ಎಂದಾಗ ಆ ದೈತ್ಯ ತಾರಕಾಸುರ ತುಂಬಾ ಸಂತೋಷ ದಿಂದ ಶೋಣಿತಪುರ ಎಂಬ ತನ್ನ ರಾಜಧಾನಿಗೆ ಮರಳಿದ. ಅಲ್ಲಿ ಬ್ರಹ್ಮನ ಆಜ್ಞೆಯಂತೆ ದೈತ್ಯಗುರುವಾದ ಶುಕ್ರಾಚಾರ್ಯ ತನ್ನ ಶಿಷ್ಯ ತಾರಕಾಸುರನನ್ನು ಮೂರು ಲೋಕಗಳಿಗೂ ಚಕ್ರವರ್ತಿಯಾಗಿ ಪಟ್ಟಾಭಿಷೇಕ ಮಾಡಿದ. ತಾರಕಾಸುರ ಮೂರುಲೋಕಗಳಿಗೂ ಒಡೆಯನಾಗಿ ದೇವತೆಗಳು, ಋಷಿಗಳು ಮತ್ತು ಜನರನ್ನು ಪೀಡಿಸತೊಡಗಿದ. ಇಂದ್ರ ಮೊದಲಾದ ಲೋಕಪಾಲರನ್ನು ಹೆದರಿಸಿ, ಅವರಿಂದ ಸಂಪದ್ಭರಿತ ರತ್ನಗಳನ್ನು ಕಿತ್ತುಕೊಂಡ. ತಾರಕನಿಗೆ ಹೆದರಿದ ಇಂದ್ರ ತನ್ನ ಪಟ್ಟದ ಆನೆಯಾದ ಐರಾವತವನ್ನು ಕೊಟ್ಟ. ಐಶ್ವರ್ಯಕ್ಕೆ ಅಧಿಪತಿಯಾದ ಕುಬೇರ ತನ್ನ ನವನಿಧಿಗಳನ್ನು ಕೊಟ್ಟು
ತಾರಕನಿಗೆ ಶರಣು ಎಂದ.

ವರುಣ ತನ್ನ ಬಳಿ ಇದ್ದ ಉತ್ತಮವಾದ ಬಿಳಿಯ ಕುದುರೆಗಳನ್ನು ಕೊಟ್ಟು ಕೈ ಮುಗಿದ. ದೇವಋಷಿಗಳು ಕಾಮಧೇನುವನ್ನು ಕೊಟ್ಟರೆ, ಸೂರ್ಯನು ಉಚ್ಚೈಶ್ರವಸ್ಸೆಂಬ ದಿವ್ಯಾಶ್ವವನ್ನು ಕೊಟ್ಟ. ಸಮುದ್ರಗಳೂ ಭಯದಿಂದ ತಾರಕನಿಗೆ ತಮ್ಮಲ್ಲಿರುವ ರತ್ನಗಳನ್ನು ಕೊಟ್ಟು ಕೈಮುಗಿದವು. ದೇವತೆಗಳು ಮತ್ತು ಪಿತೃದೇವತೆಗಳ ಉತ್ತಮವಾದ ವಸ್ತುಗಳೆಲ್ಲವನ್ನೂ ದುರಾತ್ಮನಾದ ತಾರಕ ಕಿತ್ತುಕೊಂಡ. ಕಂಡ ಕಂಡ ಬೆಲೆಬಾಳುವ ವಸ್ತುಗಳೆಲ್ಲವನ್ನು ತಾರಕಾಸುರ ದೋಚಿದ್ದರಿಂದ ಮೂರು ಲೋಕಗಳೂ ನಿಸ್ಸಾರವಾದವು.

ಸೂರ್ಯ ತನ್ನ ಶಾಖ ತಾಕದಂತೆ ತಾರಕಾಸುರನಿಗೆ ಪ್ರಕಾಶಿಸುತ್ತಿದ್ದರೆ, ಚಂದ್ರ ತಂಪಾದ ಬೆಳದಿಂಗಳನ್ನು ಚೆಲ್ಲುತ್ತಿದ್ದ. ವಾಯು ಸಾವಾಕಾಶವಾಗಿ ಬೀಸುತ್ತಿದ್ದ. ಹೀಗೆ ಮೂರು ಲೋಕಗಳನ್ನೂ ತನ್ನ ವಶಮಾಡಿಕೊಂಡ ತಾರಕ ತಾನೇ ಇಂದ್ರನಾದ. ದೇವತೆಗಳೆಲ್ಲರನ್ನೂ ಸ್ವರ್ಗದಿಂದ ಓಡಿಸಿ, ಅವರ ಸ್ಥಾನದಲ್ಲಿ ದೈತ್ಯರನ್ನು ನಿಯಮಿಸಿದ.

ಹೀಗೆ ತಾರಕಾಸುರನಿಂದ ಪೀಡಿಸಲ್ಪಟ್ಟ ದೇವತೆಗಳು ಕಾಪಾಡುವವರಿಲ್ಲದೆ, ಬ್ರಹ್ಮನಿಗೆ ಮೊರೆ ಹೋದರು ಎಂಬಲ್ಲಿಗೆ ಶ್ರೀ ಶಿವಮಹಾಪುರಾಣದ ಪಾರ್ವತೀಖಂಡದಲ್ಲಿ ಹದಿನೈದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT