ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಶಿವನ ಮೆಚ್ಚಿದ ಸ್ತ್ರೀಯರು

ಭಾಗ 269
ಅಕ್ಷರ ಗಾತ್ರ

ಮೇನಾದೇವಿಗೆ ಶಿವನನ್ನು ಕುರೂಪಿ ಎಂದು ತಿಳಿದಿದ್ದಕ್ಕೆ ಪಶ್ಚಾತ್ತಾಪವಾಯಿತು. ದೇವತೆಗಳು, ಮುನಿಗಳೆಲ್ಲ ಹೇಳಿದರೂ ನಂಬದೆ ಶಿವನ ರೂಪವನ್ನು ಅವಹೇಳನ ಮಾಡಿದ್ದಕ್ಕೆ ಶಿವನಲ್ಲಿ ಕ್ಷಮೆ ಕೋರಿದಳು. ‘ಮಹೇಶ್ವರ, ನಿನ್ನಂತಹ ವರನನ್ನು ಪಡೆಯಲು ನನ್ನ ಪುತ್ರಿ ಏಕೆ ಘೋರತಪಸ್ಸು ಮಾಡಿದಳೆಂಬುದು ನನಗೀಗ ಅರ್ಥವಾಯಿತು. ಮಗಳ ತಪಸ್ಸಿನ ಪ್ರಭಾವದಿಂದ ನೀನು ಕಲ್ಯಾಣವಾಗಲು ನಮ್ಮ ಮನೆಗೇ ಬಂದಿರುವೆ. ಇದು ನನ್ನ ಮತ್ತು ಕುಟುಂಬದ ಸುಕೃತಫಲ ಎಂದು ನಂಬಿದ್ದೇನೆ. ನಿನ್ನಂಥ ಅಳಿಯನನ್ನು ಪಡೆದ ನಾನು ಮತ್ತು ನನ್ನ ಪತಿ ಧನ್ಯರು. ನಿನ್ನನ್ನು ಸರಿಯಾಗಿ ತಿಳಿಯದೆ, ಮಹಾಪಾಪಕರವಾದ ಶಿವನಿಂದೆ ಮಾಡಿರುವೆ. ಆ ಪಾಪವನ್ನು ಕ್ಷಮಿಸಿ, ಪ್ರಸನ್ನನಾಗು’ ಎಂದು ಕೋರಿದಳು.

ಅಷ್ಟರಲ್ಲಿ ಶಿವನ ಸೌಂದರ್ಯದ ಸುದ್ದಿ ಹಿಮವಂತನ ರಾಜಧಾನಿಗೆಲ್ಲ ಹರಡಿ ಅನೇಕ ಸ್ತ್ರೀಯರು ತಮ್ಮ ಕೆಲಸಗಳನ್ನೆಲ್ಲಾ ಅರ್ಧದಲ್ಲೇ ಬಿಟ್ಟು ಶಿವನನ್ನು ನೋಡಲು ಬಂದರು. ಸ್ತ್ರೀಸಮೂಹದವರೆಲ್ಲ ಯಾವ ರೀತಿ ಆತುರಾತುರದಿಂದ ಧಾವಿಸಿ ಬಂದರೆಂದರೆ, ಓರ್ವ ಮಹಿಳೆ ಸ್ನಾನಮಾಡುತ್ತಿದ್ದವಳು ಶಂಕರನನ್ನು ನೋಡುವ ಕುತೂಹಲದಿಂದ ಸ್ನಾನಚೂರ್ಣವನ್ನು ಕೈಯಲ್ಲಿ ಹಿಡಿದುಕೊಂಡೇ ಬಂದಳು. ಇನ್ನೋರ್ವ ಸ್ತ್ರೀ ತನ್ನ ಮಗುವಿಗೆ ಹಾಲು ಕುಡಿಸುವುದನ್ನು ಬಿಟ್ಟು ಬಂದಿದ್ದಳು. ಗೃಹಿಣಿಯೊಬ್ಬಳು ತನ್ನ ಪತಿಗೆ ಬೀಸುತ್ತಿದ್ದ ಚಾಮರವನ್ನು ಕೈಯಲ್ಲಿ ಹಿಡಿದುಕೊಂಡೇ ಶಿವನನ್ನು ನೋಡಲು ಬಂದಿದ್ದಳು. ಒಡ್ಯಾಣವನ್ನು ಕಟ್ಟಿಕೊಳ್ಳುತ್ತಿದ್ದ ಮಹಿಳೆ ಒಡ್ಯಾಣವನ್ನು ಕೈಯ್ಯಲ್ಲೇ ಹಿಡಿದುಕೊಂಡು ಬಂದರೆ, ಶಿವನನ್ನು ನೋಡುವ ಆತುರದಲ್ಲಿ ಒಬ್ಬಳು ಸೀರೆಯನ್ನು ಅಸ್ತವ್ಯಸ್ತವಾಗಿ ಉಟ್ಟುಕೊಂಡು ಬಂದಿದ್ದಳು. ಒಟ್ಟಾರೆ, ಪಟ್ಟಣದ ಸ್ತ್ರೀಯರೆಲ್ಲ ಶಿವನ ಸುಂದರ ರೂಪ ನೋಡಲು ಲಗುಬಗೆಯಿಂದ ಓಡೋಡಿ ಬಂದಿದ್ದರು. ಶಿವನ ಸುಂದರರೂಪವವನ್ನು ನೋಡಿದ ಸ್ತ್ರೀಯರೆಲ್ಲ ಸಂತೋಷಸಾಗರದಲ್ಲಿ ಮುಳುಗಿದರು. ತಮ್ಮ ಹೃದಯದಲ್ಲಿ ಶಿವನ ಮೂರ್ತಿಯನ್ನು ಸ್ಥಾಪಿಸಿಕೊಂಡು ಕೃತಾರ್ಥರಾದರು.ಶಿವನನ್ನು ದರ್ಶನಮಾಡಿದ ಜನರ ನೇತ್ರಗಳು ಸಫಲವಾದವು ಎಂದು ಹಲವು ಸ್ತ್ರೀಯರು ಹೇಳಿದರೆ, ಇನ್ನೂ ಹಲವರು ಶಿವನ ರೂಪವನ್ನು ನೋಡಿದವರೆಲ್ಲರ ಜನ್ಮ ಸಾರ್ಥಕವಾಯಿತು ಅನ್ನುತ್ತಿದ್ದರು.

ಪಾರ್ವತಿ-ಶಿವರ ಮದುವೆಗಾಗಿ ಬ್ರಹ್ಮ ಮಾಡಿದ ಶ್ರಮ ಸ್ತುತ್ಯಾರ್ಹವಾದುದು. ಬ್ರಹ್ಮ ಯೋಗ್ಯವಾದ ಕಾರ್ಯವನ್ನು ಮಾಡಿದ್ದಾನೆ. ಈ ಜೋಡಿಯನ್ನು ಸೇರಿಸಲು ಪ್ರಯತ್ನಪಟ್ಟವರೆಲ್ಲರ ಶ್ರಮವೂ ಸಾರ್ಥಕವಾಯಿತು. ತಪಸ್ಸು ಮಾಡದೆ ಜನರಿಗೆ ಶಿವನ ದರ್ಶನವಾಗಲಾರದು. ಈಗ ಅನಾಯಸವಾಗಿ ಎಲ್ಲರಿಗೂ ಶಿವನ ದರ್ಶನವಾಗಿ ಕೃತಾರ್ಥರಾಗಿದ್ದಾರೆ. ಹಿಂದೆ ಲಕ್ಷ್ಮೀದೇವಿಯು ನಾರಾಯಣನನ್ನು ಪಡೆದಂತೆ, ಸರಸ್ವತಿದೇವಿಯು ಬ್ರಹ್ಮನನ್ನು ಸತಿಯನ್ನಾಗಿ ಪಡೆದಂತೆ, ಈಗ ಪಾರ್ವತೀದೇವಿಯು ಶಂಕರನನ್ನು ಪಡೆದು ಧನ್ಯಳಾದಳು. ಇಂಥ ದೈವಾಂಶ ಸಂಭೂತರಾದ ವಧು ಪಾರ್ವತಿ ಮತ್ತು ವರ ಶಿವನನ್ನು ನೋಡಿದ ಪುರದ ಮಹಿಳೆಯರಾದ ನಾವೆಲ್ಲರೂ ಧನ್ಯರಾದೆವು ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಮೇನಾದೇವಿ ಮತ್ತು ಹಿಮವಂತರ ಭಾಗ್ಯವನ್ನು ಕೊಂಡಾಡಿದರು. ನಗರದ ಸ್ತ್ರೀಯರು ಚಂದನಾಕ್ಷತೆಗಳಿಂದ ಶಿವನನ್ನು ಅರ್ಚಿಸಿ ಆದರದಿಂದ ಬರಮಾಡಿಕೊಂಡರು. ದೇವತೆಗಳು ಮೊದಲಾದವರು ಧನ್ಯತಾಭಾವ ತೋರಿದರು.

ಇಲ್ಲಿಗೆ ಪಾರ್ವತೀಖಂಡದ ನಲವತ್ತೈದನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT