ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವರಪೂಜೆ ಮಾಡಿದ ಹಿಮವಂತ

ಭಾಗ 271
ಅಕ್ಷರ ಗಾತ್ರ

ಮೇನಾದೇವಿ ಶಂಕರನಿಗೆ ಆರತಿ ಬೆಳಗಿ ಅರಮನೆಯೊಳಗೆ ಸ್ವಾಗತ ನೀಡಿದ್ದನ್ನು ನೋಡಿ ದೇವತೆಗಳು ಹರ್ಷಗೊಂಡರು. ಹಿಮವಂತ ದಂಪತಿಗಳು ಸಕಲ ಗೌರವ ಮತ್ತು ಶಾಸ್ತ್ರದೊಂದಿಗೆ ಶಿವನಿಗೆ ವರಪೂಜೆಯ ಕಾರ್ಯವನ್ನು ನೆರವೇರಿಸಿದರು.

ವರಪೂಜೆ ಸ್ವೀಕರಿಸಿದ ನಂತರ ದೇವತೆಗಳು ಮತ್ತು ಗಣಪರಿವಾರದೊಂದಿಗೆ ಶಿವ ತನಗಾಗಿ ಕಲ್ಪಿಸಿದ್ದ ವಾಸಸ್ಥಾನಕ್ಕೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಮೇನಾದೇವಿ ತನ್ನ ಅರಮನೆಗೆ ಬಂದಾಗ ಅಂತಃಪುರಸ್ತ್ರೀಯರು ಕುಲದೇವತೆಯನ್ನು ಪೂಜಿಸಲು ಗಿರಿಜೆಯನ್ನು ಹೊರಗೆ ಕರೆದುಕೊಂಡು ಹೋದರು. ಸರ್ವಾಲಂಕಾರ ಭೂಷಿತಳಾಗಿದ್ದ ಗಿರಿಜೆ ಮಂದಹಾಸವನ್ನು ಬೀರುತ್ತಾ ತುಂಬಾ ಮನೋಹರಳಾಗಿ ಕಾಣಿಸುತ್ತಿದ್ದಳು. ನೀಳವಾದ ಕೇಶರಾಶಿ ಗಿರಿಜೆಯ ಮುಖಾರವಿಂದವನ್ನು ಮತ್ತಷ್ಟು ಸುಂದರವಾಗಿಸಿದ್ದವು. ರಮ್ಯವಾದ ಕರ್ಣಪತ್ರವೆಂಬ ಕರ್ಣಾಭರಣವನ್ನು ಕೊರಳಿಗೆ ಧರಿಸಿದ್ದರೆ, ಕಸ್ತೂರೀ ಮಿಶ್ರಿತವಾದ ಕುಂಕುಮವನ್ನು ಹಣೆಗೆ ಇಟ್ಟುಕೊಂಡಿದ್ದಳು. ಅತ್ಯಮೂಲ್ಯವಾದ ರತ್ನಹಾರವು ಅವಳ ಎದೆಯಲ್ಲಿ ಮಿರುಗುತ್ತಿತ್ತು. ಅವಳ ಕೈಗಳನ್ನು ರತ್ನಖಚಿತವಾದ ಕಡಗ ಮತ್ತು ಕಂಕಣಗಳು ಅಲಂಕರಿಸಿದ್ದವು.

ಅವಳ ರತ್ನದೋಲೆಗಳ ಪ್ರಭೆಯು ಅವಳ ಸುಂದರವಾದ ಕಪೋಲಗಳಲ್ಲಿ ಹರಡಿ, ಆಕರ್ಷಕವಾಗಿ ಕಾಣಿಸುತ್ತಿತ್ತು. ದಾಳಿಂಬೆಯಂಥ ದಂತಪಂಕ್ತಿಗಳು ಬಹು ಸುಂದರವಾಗಿ ಅವಳ ಮುಖಕ್ಕೆ ಹೊಂದುತ್ತಿದ್ದವು. ಅಪೂರ್ವವಾದ ದಂತಕಾಂತಿಯಿಂದ ಪಾರ್ವತಿ ಮುಖ ಬೆಳಗುತ್ತಿದ್ದರೆ, ಅವಳ ಕೆಳದುಟಿಯು ಬಿಂಬಫಲದಂತೆ ಶೋಭಿಸುತ್ತಿತ್ತು. ಅವಳು ರತ್ನ ಕಂಚುಕವನ್ನು ತೊಟ್ಟು, ಒಂದು ಕೈಯಲ್ಲಿ ರತ್ನಗನ್ನಡಿಯನ್ನು, ಮತ್ತೊಂದು ಕೈಯಲ್ಲಿ ವಿನೋದಕ್ಕಾಗಿ ಕಮಲವನ್ನು ಹಿಡಿದಿದ್ದಳು.

ಚಂದನ, ಅಗರು, ಕಸ್ತೂರಿಗಳಿಂದ ಮಿಶ್ರಿತವಾದ ಅರಿಶಿನವನ್ನು ಪಾರ್ವತಿ ಲೇಪಿಸಿಕೊಂಡಿದ್ದಳು. ಅವಳ ಕಾಲಿನಲ್ಲಿ ತೊಟ್ಟಿದ್ದ ಕಡಗವು ಸುಂದರವಾಗಿ ಮೂಡಿತ್ತು. ಪಾರ್ವತಿ ಹೆಜ್ಜೆ ಇಟ್ಟಾಗೆಲ್ಲ ಅದು ಕಿವಿಗೆ ಇಂಪಾಗುವಂತೆ ಧ್ವನಿ ಮಾಡುತ್ತಿತ್ತು. ಅವಳ ಅಂಗಾಲಿಗೆ ಕೆಂಬಣ್ಣ ಹಚ್ಚಲಾಗಿತ್ತು. ಅವಳ ಒಡ್ಯಾಣ ಮನೋಹರವಾಗಿ ಕಾಣಿಸುತ್ತಿತ್ತು.

ಹೀಗೆ ಅತಿಲೋಕಸುಂದರಿಯಂತೆ ಕಂಗೊಳಿಸುತ್ತಿದ್ದ ಜಗನ್ಮಾತೆ ಗಿರಿಜಾದೇವಿಯನ್ನು ತಾಯಿ ಮೇನಾದೇವಿಯೊಡನೆ ನೋಡಿದ ದೇವತೆಗಳೆಲ್ಲರೂ ಭಕ್ತಿಯಿಂದ ನಮಿಸಿದರು. ತನ್ನ ಕಣ್ಣ ಮುಂದೆಯೇ ಕುಲದೇವತಾ ಪೂಜೆಗೆ ಹೋಗುತ್ತಿದ್ದ ಸೌಂದರ್ಯದ ಖನಿ ಗಿರಿಜೆಯನ್ನು ಓರೆಗಣ್ಣಿನಿಂದ ನೋಡಿದ ಪರಶಿವ ಸಂತುಷ್ಟನಾದ. ಸತೀದೇವಿಯಂತೆಯೇ ಇರುವ ಪಾರ್ವತಿಯನ್ನು ನೋಡಿ, ಅವನು ಹಿಂದಿನ ತನ್ನ ವಿರಹದುಃಖವನ್ನು ಮರೆತು ಉಲ್ಲಸಿತನಾದ. ಗಿರಿಜೆಯನ್ನು ನೋಡುತ್ತಾ ಪರಶಿವ ಪರವಶನಾದಂತೆ ಮೈಮರೆತು ನಿಂತ.

ಅತ್ತ ಪಾರ್ವತಿ ಅಂತಃಪುರದ ಸ್ತ್ರೀಯರೊಡನೆ ಬಂದು ಕುಲಾಚಾರದಂತೆ ನಗರದ ಹೊರಗಿರುವ ಕುಲದೇವತೆಯನ್ನು ಪೂಜಿಸಿದಳು. ನಂತರ ಸುಮಂಗಲಿಯರೊಡನೆ ತನ್ನ ತಂದೆಯ ಅರಮನೆಯನ್ನು ಪ್ರವೇಶಿಸಿದಳು. ಶಂಕರ ಸಹ ವರಪೂಜೆಯ ನಂತರ ಹಿಮವಂತನು ಕಲ್ಪಿಸಿದ ತನ್ನ ಸ್ಥಾನಕ್ಕೆ ವಿಷ್ಣು, ಬ್ರಹ್ಮ, ಇಂದ್ರಾದಿ ದೇವತೆಗಳು, ವಸಿಷ್ಠ ಮತ್ತಿತರ ಮುನಿಗಳು ಹಾಗೂ ಸಿದ್ಧಪುರುಷರೊಂದಿಗೆ ತೆರಳಿದ.

ವರ ಶಂಕರನ ಬಿಡಾರದಲ್ಲಿ ಎಲ್ಲ ದೇವತೆಗಳು ಮತ್ತು ಶಿವಗಣಗಳು ತಂಗಿದ್ದರು. ಅಲ್ಲಿ ಹಿಮವಂತ ಅತಿಥಿಗಳಿಗೆ ಸಕಲ ಅನುಕೂಲಗಳನ್ನೂ ಕಲ್ಪಿಸಿಕೊಟ್ಟಿದ್ದ.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ನಲವತ್ತಾರನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT