ಬುಧವಾರ, ಅಕ್ಟೋಬರ್ 28, 2020
21 °C

ಸಚ್ಚಿದಾನಂದ ಸತ್ಯಸಂದೇಶ: ಸರ್ವರಲ್ಲೂ ಸದ್ಭಾವ ಮೂಡಲಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಹಿಂದೂಧರ್ಮಕ್ಕೆ ಆದಿಯು ಇಲ್ಲ, ಅಂತ್ಯವೂ ಇಲ್ಲ. ಇದು ಕಾಲಕ್ಕೆ ತಕ್ಕಂತೆ ರೂಪುಗೊಳ್ಳುತ್ತಾ ಬೆಳೆಯುತ್ತಿರುವುದರಿಂದ ಸನಾತನ ಧರ್ಮವೆಂದು ಕರೆಯಲಾಗುತ್ತದೆ. ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಈ ಧರ್ಮ ಮತ್ತು ಸಂಸ್ಕೃತಿ ಕಾಲದಿಂದ ಕಾಲಕ್ಕೆ ನವೀಕರಣವಾಗುತ್ತಾ ಸಾಗಿದೆ. ವಿಶ್ವದಲ್ಲೆ ಅತಿ ಪುರಾತನ ಧರ್ಮವೆಂದು ಪರಿಗಣಿಸಲಾದ ಹಿಂದೂಧರ್ಮ ಬದಲಾವಣೆಗೆ ಮೈಯೊಡ್ಡಿಯೂ ಬದುಕುಳಿದಿದೆ. ಈ ಬದಲಾವಣೆಗೆ ಮುಕ್ತವಾಗಿ ತೆರೆದುಕೊಂಡಿದ್ದರಿಂದಲೇ ಹಿಂದೂಧರ್ಮ ಪರಿಪಕ್ವವಾಗಿ ಬೆಳೆದು, ಈಗಲೂ ತನ್ನ ಗಟ್ಟಿ ಸತ್ವವನ್ನ ಉಳಿಸಿಕೊಂಡಿದೆ.

ಭಾರತೀಯ ಧಾರ್ಮಿಕ ತತ್ವಗಳು ಅತ್ಯಂತ ಸತ್ವಪೂರಿತವಾಗಿವೆ. ಈ ಜಗತ್ತಿನ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ಭಾರತೀಯ ಸಂಸ್ಕೃತಿ ದೃಷ್ಟಿಕೋನವು ಮಾನವರ ಹತ್ಯೆಯಷ್ಟೆ, ಇತರ ಪ್ರಾಣಿಗಳ ಹತ್ಯೆಯನ್ನೂ ಮಹಾಪಾಪ ಎಂದು ಸಾರಿತು. ಶುದ್ಧಸಾತ್ವಿಕವಾದ ಸಸ್ಯಾಹಾರ ಶ್ರೇಷ್ಠವೆಂದು ಹೇಳಲಾಯಿತು. ಇದು ‘ಅಹಿಂಸೆಯೆ ಪರಮೋಚ್ಛಧರ್ಮ’ ಎಂಬ ಅತ್ಯುತ್ತಮ ವಿಚಾರ ಸರಣಿಗೂ ನಾಂದಿಯಾಡಿತು. ಹೀಗಾಗಿ ಭಾರತೀಯ ಉಪಖಂಡದಲ್ಲಿ ಹುಟ್ಟಿದ ಧರ್ಮದ ವಿಚಾರ ಸಂಘರ್ಷಗಳು ಕಾಲದಿಂದ ಕಾಲಕ್ಕೆ ಔನ್ನತ್ಯದ ತುದಿ ತಲುಪುತ್ತಾ ಬಂದಿತ್ತು. ಆದರೆ, ಕಾಲಾಂತರದ ಮಧ್ಯೆ ಹುಟ್ಟಿಕೊಂಡ ಜಾತಿ-ಪಂಗಡಗಳು, ಅಸ್ಪೃಶ್ಯತೆಯಂಥ ನೀಚಕೃತ್ಯಗಳು ಭಾರತದ ಶ್ರೀಮಂತ ಪರಂಪರೆಯನ್ನು ಹಾಳು ಮಾಡಿತು.

ಬಸವಣ್ಣನವರು ಹೇಳಿದಂತೆ ‘ದಯೆ ಇಲ್ಲದ ಧರ್ಮ ಯಾವುದಯ್ಯಾ, ದಯೆಯೆ ಧರ್ಮದ ಮೂಲವಯ್ಯ’ ಎಂಬ ನುಡಿಮುತ್ತಿನಲ್ಲಿ ಮಾನವಧರ್ಮದ ತಿರುಳಿದೆ. ಕನಕದಾಸರು ಹೇಳಿದಂತೆ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ‘ ಎಂಬುದು ಸಾರ್ವಕಾಲಿಕ ಸತ್ಯ. ಇದನ್ನು ಅರ್ಥ ಮಾಡಿಕೊಂಡು ಭಾರತೀಯರು ಜಾತಿ ಸಂಕೋಲೆಯಿಂದ ಹೊರಬರಬೇಕು. ಇಲ್ಲಿ ಯಾರು ಮೇಲೂ ಇಲ್ಲ, ಕೀಳೂ ಇಲ್ಲ. ಪ್ರಾಣಿಗಳಲ್ಲೂ ದೇವರು ಕಾಣುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾನವರೊಳಗೆ ಭೇದ ಎಣಿಸುವುದು ಸರಿಯಲ್ಲ.

ಈ ದೇಶ ತ್ಯಾಗದ ಭಾರತ, ವಿಶ್ವಾಸದ ಭಾರತ. ಇಲ್ಲಿಗೆ ಬಂದ ಎಲ್ಲರಿಗೂ ಆಶ್ರಯ ಕೊಟ್ಟು ಸಲಹಿದೆ. ಇಲ್ಲಿ ಯಾರೂ ಬದುಕಲಾಗದೆ ಪಲಾಯನವಾಗಿಲ್ಲ. ನಾವು ವಿದೇಶಿಯರ ದಾಳಿಗೆ ತುತ್ತಾಗಿದ್ದೆ ಅನೈಕ್ಯದಿಂದ; ನಮ್ಮ ಶಾಂತಿ-ಸಂಯಮದಿಂದಲ್ಲ. ಶಾಂತಿ-ಸಹನೆ ನಮ್ಮ ದೌರ್ಬಲ್ಯದ ಸಂಕೇತವೂ ಅಲ್ಲ. ಅದು ಆತ್ಮನಿರ್ಭರತೆಗೆ ಹಾಕಿದ ಅಂಕಿತ. ಸಂಘಟಿತ ಹೋರಾಟದ ನಿಷ್ಫಲದಲ್ಲೂ, ಇಲ್ಲಿ ಮಾನವತೆಯ ಹೃದಯಗಳು ಅರಳಿ ಜಗತ್ತಿಗೆ ಉತ್ತಮ ಸಂದೇಶ ನೀಡುತ್ತಿವೆ. ಶಾಂತಿ-ಪ್ರೀತಿಯಿಂದಲೆ ಜಗತ್ತಿನ ಮನಗೆದ್ದ ನಾವು, ಎಲ್ಲರ ಧರ್ಮ-ಸಂಸ್ಕೃತಿ-ಭಾಷೆಗಳನ್ನು ಅರಗಿಸಿಕೊಂಡರೂ, ನಾವು ಭಾರತೀಯರಾಗೇ ಉಳಿದಿರುವುದು ನಮ್ಮ ಮಾನವಪ್ರೇಮ ತತ್ವದಿಂದ.

ಇಂಥ ಭವ್ಯ ಭಾರತದ ಸಂಸ್ಕೃತಿ ಕೆಲ ಸಂಕುಚಿತ ಭಾವಗಳಿಂದ ನಲುಗಬಾರದು. ನಮ್ಮ ಹಿರಿಯರು ಬಿಟ್ಟು ಹೋದ ಈ ಪವಿತ್ರವಾದ ನೆಲ, ಜಲ, ಪರಿಸರಗಳು ಜಾತೀಯತೆ-ಧರ್ಮಾಂಧತೆಯಲ್ಲಿ ಹಾಳಾಗಬಾರದು. ಭವಿಷ್ಯದ ಭಾರತ ಭವ್ಯವಾಗಿರಬೇಕಾದರೆ, ಭಾರತೀಯರು ತಮ್ಮಲ್ಲಿರುವ ಕ್ಷುಲ್ಲಕತನಗಳನ್ನು ಬದಿಗಿರಿಸಬೇಕು. ನಾವು ನಾವಾಗಿ ಪರಿವರ್ತಿತವಾದರೆ, ಭೇದ-ಭಾವ ತೊಡೆಯಬಹುದು. ಇಲ್ಲಿ ಎಲ್ಲರ ಸದ್ಭಾವನೆಗಳು ಮಿಲನವಾಗಬೇಕಷ್ಟೆ. ನಾವೆಲ್ಲಾ ಒಂದೇ ಎಂಬ ಭಾವ ಸ್ಫುರಿಸಿದರೆ, ತಾನಾಗೆ ಈ ದೇಶಕ್ಕೆ ಅಂಟಿರುವ ಜಾತಿ-ಧರ್ಮದ ತರತಮದ ಜಾಡ್ಯ ಅಳಿಯುತ್ತೆ. ಇಂಥ ದ್ವೇಷ ಅಳಿಸುವ-ದೇಶ ಬೆಳೆಸುವ ಸದ್ಭಾವನೆ-ವಿವೇಕಗಳನ್ನೇ ಸಚ್ಚಿದಾನಂದ ಸ್ವರೂಪನಾದ ಭಗವಂತನು ಮಾನವರಿಂದ ಬಯಸುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು