ಗುರುವಾರ , ಮೇ 26, 2022
25 °C
ಭಾಗ – 3

ವೇದವ್ಯಾಸರ ಶಿವಪುರಾಣಸಾರ: ಸಾಕ್ಷಾತ್ ಶಿವನ ಸ್ವರೂಪ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವಪುರಾಣವನ್ನು ಕೇಳುವುದರಿಂದ ಮತ್ತು ಓದುವುದರಿಂದ ಪರಮೇಶ್ವರನಲ್ಲಿ ಭಕ್ತಿ ಉಂಟಾಗುವುದು. ಶಿವಾರಾಧನೆಯಿಂದ ಮುಕ್ತಿಫಲಗಳು ಸಿಗುವುದು. ಮನುಷ್ಯರಲ್ಲಿ ಮೃತ್ಯುಭಯ ಹೋಗಿ, ಅಮೃತ ಚೈತನ್ಯದ ಅಂಶ ಬರುವುದು ಎಂದು ವ್ಯಾಸರ ಪರಮಶಿಷ್ಯ ಸೂತಮುನಿ ತಿಳಿಸಿದ್ದಾನೆ. ಸೂತಮುನಿ ಹೇಳುವ ಪ್ರಕಾರ, ಶಿವಮಹಾಪುರಾಣಕ್ಕಿಂತ ಉತ್ತಮವಾದ ಪುರಾಣ ಮತ್ತೊಂದು ಭೂಮಿಯಲ್ಲಿಲ್ಲ. ಇದನ್ನ ಕೇಳಿದ ಜನರ ಮನಸ್ಸು ಶುದ್ಧಿ ಆಗುವುದಲ್ಲದೆ, ಸದ್ಗತಿ ಸಹ ಪಡೆಯುತ್ತಾರೆ. ಜೊತೆಗೆ ಶಿವನ ಕೃಪೆ ಸಹ ಸಿಗುವುದು. ಇವರಿಗೆ ಈ ಜನ್ಮ ಮಾತ್ರವಲ್ಲ, ಮುಂದಿನ ಏಳೇಳು ಜನ್ಮದಲ್ಲು ಮಹಾಪುಣ್ಯ ಸಿಗುತ್ತೆ. ಜೊತೆಗೆ ಸಕಲ ಐಶ್ವರ್ಯಗಳು ಲಭಿಸುತ್ತೆ ಅಂತ ಶಿವಪುರಾಣದ ಮಹಿಮೆಯನ್ನು ಕೊಂಡಾಡಿದ್ದಾನೆ.

ವ್ಯಾಸರು ಬರೆದ ಈ ಶಿವಪುರಾಣ ಸಾಕ್ಷಾತ್ ಶಿವನ ಸ್ವರೂಪವಾಗಿದೆ. ಇದನ್ನ ಪಾರಾಯಣ ಮಾಡುವುದರಿಂದ ಶಿವನನ್ನೆ ಪೂಜಿಸಿದಷ್ಟು ಪುಣ್ಯ ಸಿಗುವುದು ಎಂದು ಹೇಳಿರುವ ಸೂತಮುನಿ, ಶಿವಪುರಾಣ ಅದೆಷ್ಟು ಮಹತ್ವದ್ದು ಅನ್ನೋದನ್ನ ಸೂತ ಮುನಿ ಹೀಗೆ ವಿವರಿಸುತ್ತಾನೆ: ‘ರಾಜಸೂಯ ಯಾಗ, ನೂರು ಅಗ್ನಿಹೋಮ, ನೂರಾರು ಯಜ್ಞ–ಯಾಗಾದಿಗಳನ್ನು ಮಾಡಿದರೆ ಸಿಗುವ ಪುಣ್ಯಫಲಗಳು, ಶಿವಪುರಾಣದಲ್ಲಿ ಬರುವ ಶಂಭುವಿನ ಕತೆ ಒಂದನ್ನ ಕೇಳಿದರೆ ಸಾಕು, ಅಷ್ಟೂ ಪುಣ್ಯಫಲಗಳು ಬರುತ್ತೆ’. ಶಿವಪುರಾಣ ಅದೆಷ್ಟು ಪವಿತ್ರವೆಂದರೆ, ಶಿವಪುರಾಣ ಹೇಳುವವರ ಅಥವಾ ಕೇಳುವವರ ಪಾದಧೂಳಿ ಸಹ ಸರ್ವತೀರ್ಥ ಸ್ವರೂಪವಾಗಿರುತ್ತಂತೆ. ಶಿವಪುರಾಣ ಕೇಳಿದವರ ಪಾದಧೂಳಿ ಸೋಕಿದವರಿಗೂ ಸಹ ಪುಣ್ಯ ಸಿಗುತ್ತಂತೆ. ಮೋಕ್ಷಪ್ರಾಪ್ತಿಗೆ ಶಿವಪುರಾಣ ಕೇಳೋದಕ್ಕಿಂತ ಉತ್ತಮ ಮಾರ್ಗ ಮತ್ತೊಂದಿಲ್ಲ ಅಂತ ಸ್ವತಃ ದೇವಮಹರ್ಷಿ ಸನತ್ಕುಮಾರನೇ ಹೇಳಿದ್ದಾನೆ.

ಶಿವಪುರಾಣವನ್ನ ಯಾವಾಗಲೂ ಕೇಳುವುದಕ್ಕೆ ಸಾಧ್ಯವಾಗದಿದ್ದರೆ, ಪ್ರತಿದಿನ ಒಂದು ನಿರ್ದಿಷ್ಟ ಸಮಯ ಮಾಡಿಕೊಂಡು ಕೇಳಬಹುದು. ಪ್ರತಿ ದಿನ ಕೇಳಲು ಸಾಧ್ಯವಾಗದಿದ್ದರೆ, ವಿಶೇಷವಾದ ದಿನ ಅಥವಾ ಪುಣ್ಯಮಾಸಗಳಲ್ಲಿ ಕೇಳಬಹುದು. ಇಂಥ ವಿಶೇಷ ದಿನಗಳಲ್ಲೂ ಕೇಳಲಾಗದಿದ್ದರೆ, ಯಾವುದಾದರೊಂದು ದಿನ ಅಥವಾ ಒಂದು ಹೊತ್ತು ಅಥವ ಒಂದು ಕ್ಷಣ ಕೇಳಿದರೂ ಸಾಕು ಪುಣ್ಯಪ್ರಾಪ್ತಿಯಾಗುತ್ತೆ. ಒಂದು ಕ್ಷಣ ಶಿವಪುರಾಣ ಕೇಳಿದವರಿಗೆ ಎಂದೆಂದಿಗೂ ದುರ್ಗತಿ ಬರುವುದಿಲ್ಲ. ಶಿವಪುರಾಣ ಕೇಳೋ ಮನುಷ್ಯ, ತನ್ನ ಕರ್ಮಬಂಧವೆಂಬ ಘೋರಾರಣ್ಯವನ್ನ ದಹಿಸಿ, ಸಂಸಾರಸಾಗರವನ್ನ ದಾಟಿ ಮುಕ್ತಿ ಪಡೆಯುತ್ತಾನಂತೆ.

ಈಗಿನ ಕಲಿಯುಗದಲ್ಲಂತೂ ಮನುಷ್ಯರು ತಪ್ಪು ಮಾಡುವುದು ಹೆಚ್ಚು. ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಪಗಳನ್ನ ಮಾಡುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಪಾಪ ಪರಿಹಾರ ಮಾಡಲು, ಶಿವಪುರಾಣ ಕೇಳುವುದಕ್ಕಿಂತ ಮತ್ತೊಂದು ಸುಲಭ ಮಾರ್ಗ ಬೇರೊಂದಿಲ್ಲ. ಶಿವಪುರಾಣ ಪಾರಾಯಣಕ್ಕಿಂತ ಮತ್ತೊಂದು ಮೋಕ್ಷಮಾರ್ಗವಿಲ್ಲ ಅಂತಾನೆ ದೇವ ಮಹರ್ಷಿ ಸನತ್ಕುಮಾರ. ಶಿವಪುರಾಣದಲ್ಲಿ ಹೇಳಿರುವ ಕತೆಗಳು, ಉಪಾಖ್ಯಾನಗಳು, ಇತಿಹಾಸಗಳೆಲ್ಲವೂ ಪರಮ ಪವಿತ್ರವಾದವು. ಶಿವಪುರಾಣ ಕೇಳುವವರ ಮನದಲ್ಲಿ ಸಾಕ್ಷಾತ್ ಶಿವನೇ ನೆಲೆಸುತ್ತಾನಂತೆ. ವೇದವ್ಯಾಸರೇ ಬರೆದ ‘ಸ್ಕಂದಪುರಾಣ’ದಲ್ಲಿ ಶಿವಮಹಾಪುರಾಣ ಮಹಿಮೆಯನ್ನ ಅದೆಷ್ಟು ಕೊಂಡಾಡಲಾಗಿದೆ ಎಂದರೆ, ವೇದ, ಇತಿಹಾಸ, ತತ್ವಶಾಸ್ತ್ರಗಳಲ್ಲೆ ಶಿವಮಹಾಪುರಾಣ ಅತ್ಯಂತ ಶ್ರೇಷ್ಠವಾದ್ದೆಂದು ಹೇಳಲಾಗಿದೆ. ಆತ್ಮತತ್ವಬೋಧಕ ಪುರಾಣಗಳಲ್ಲೆಲ್ಲ ಶಿವಪುರಾಣ ಶ್ರೇಷ್ಠವಾದ್ದು ಅಂತ ಹೊಗಳಲಾಗಿದೆ. ಶಿವಪುರಾಣದ ಪಾರಾಯಣ ಯಾವ ಮನೆಯಲ್ಲಿ ನಡೆಯುವುದೋ, ಆ ಮನೆ ಪರಮ ಪವಿತ್ರ ಕ್ಷೇತ್ರವಾಗುವುದು ಎಂದು ಶಿವಪುರಾಣದ ಮಹಿಮೆಯನ್ನು ಕೊಂಡಾಡಲಾಗಿದೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು