ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ: ಇದು ಕಾಮನಹಬ್ಬವೂ ಹೌದು

Last Updated 27 ಮಾರ್ಚ್ 2021, 23:30 IST
ಅಕ್ಷರ ಗಾತ್ರ

ಹೋಳಿಹಬ್ಬ ಎಂದರೆ ನಮಗೆಲ್ಲ ಸಂತಸ. ಬಣ್ಣದ ಓಕುಳಿಯಲ್ಲಿ ಮಿಂದು ನಲಿಯಬಹುದು ಎಂಬುದು ಸಂತಸಕ್ಕೆ ಕಾರಣ. ಆದರೆ ಇದಿಷ್ಟೇ ಹೋಳಿಹಬ್ಬದ ಆಚರಣೆಯಲ್ಲ; ಕಾಮದಹನವೂ ಈ ಹಬ್ಬದ ಭಾಗವೇ; ಇದರ ಜೊತೆಗೆ ಸೇರಿಕೊಂಡಂತೆ ರತಿವಿಲಾಪ, ಕಾಮನ ಮರುಹುಟ್ಟುಗಳೂ ಸೇರಿಕೊಳ್ಳುತ್ತವೆ. ಇದರ ಜೊತೆಗೆ ಪ್ರಕೃತಿಯೂ ಸಂಭ್ರಮದಲ್ಲಿರುತ್ತದೆ; ಏಕೆಂದರೆ ವಸಂತದ ಆಗಮನಕ್ಕೆ ಅದು ಸಜ್ಜಾಗಿರುತ್ತದೆ.

ಹೋಳಿಹಬ್ಬದ ಮೂಲ ಏನೆಂಬುದನ್ನು ಪುರಾಣಗಳು ಕಾಣಿಸಿವೆ. ಹೋಳಿಕಾ ಎಂಬುವವಳು ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಸಹೋದರಿ. ದುಷ್ಟೆಯಾಗಿದ್ದ ಅವಳನ್ನು ಪ್ರಹ್ಲಾದನು ಬೆಂಕಿಯ ಮೂಲಕ ಸುಟ್ಟುಹಾಕಿದ ದಿನವೇ ಹೋಳಿಹಬ್ಬವಾಯಿತು. ಹೀಗೆಯೇ ಢುಂಢಾ ಎಂಬ ರಾಕ್ಷಸಿಯೂ ಸಂಹಾರ ಆದ ನೆನಪಿನ ಉತ್ಸವವೇ ಇದು ಎಂದೂ ಪುರಾಣದ ಕಥೆಯಿದೆ. ಈ ಎಲ್ಲಕ್ಕಿಂತಲೂ ವಿಶಿಷ್ಟವಾದುದು ಕಾಮದಹನ; ಶಿವನು ಕಾಮನನ್ನು ಸುಟ್ಟ ದಿನದ ಸಂಭ್ರಮಾಚರಣೆಯೇ ಹೋಳಿಯ ಆಚರಣೆಯ ಮುಖ್ಯ ತಾತ್ಪರ್ಯ.

ಕಾಮನನ್ನು ಸುಡುವುದು ಎಂದರೆ ಕಾಮವನ್ನು ಸುಟ್ಟಂತೆಯೇ ಹೌದು. ಆದರೆ ಕಾಮವನ್ನು ಸುಡುವುದು ಅಷ್ಟು ಸುಲಭವೆ? ಸುಲಭ ಎಂದು ಅಂದುಕೊಂಡರೂ, ಹೀಗೆ ಸುಡುವುದು ಸಾಧುವೆ? ಕಾಮವಿಲ್ಲದೆ ಜೀವನವೇ ಇಲ್ಲದಿರುವಾಗ ಕಾಮನನ್ನು ಸುಟ್ಟ ಮೇಲೆ ಜೀವ ಮತ್ತು ಜೀವನ ಉಳಿಯುವುದಾದರೂ ಹೇಗೆ? ಹೀಗೆಲ್ಲ ಪ್ರಶ್ನೆಗಳು ಏಳುವುದು ಸಹಜ. ಇದಕ್ಕೂ ಮೊದಲು ಕಾಮ ಎಂದರೇನು, ಶಿವನು ಭಸ್ಮ ಮಾಡಿದ ಕಾಮ ಎಂಥವನು ಎಂಬುದನ್ನು ನಾವು ಅನುಸಂಧಾನಿಸಬೇಕು.

ನಮ್ಮಲ್ಲಿ ಪುರುಷಾರ್ಥಗಳ ಕಲ್ಪನೆ ಇದೆಯಲ್ಲವೆ? ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ – ಇವೇ ಪುರುಷಾರ್ಥಗಳು. ಮನುಷ್ಯನ ಏಳಿಗೆಗೆ ಒದಗುವ ಎಲ್ಲ ವಿವರಗಳೂ ಪುರುಷಾರ್ಥಗಳೇ ಹೌದು. ಇದರಲ್ಲಿ ಕಾಮವೂ ಸೇರಿದೆ. ಕಾಮ ಎಂದರೆ ಕೇವಲ ಹೆಣ್ಣು–ಗಂಡುಗಳ ನಡುವೆ ಉಂಟಾಗುವ ಆಕರ್ಷಣೆ, ಸೆಳೆತ ಮಾತ್ರವೇ ಅಲ್ಲ; ಅದು ನಮ್ಮ ಎಲ್ಲ ಬಯಕೆಗಳನ್ನೂ ಪ್ರತಿನಿಧಿಸುತ್ತದೆ. ನಾವು ನಮ್ಮ ಜೀವನದ ಏಳಿಗೆಗೆ, ಸಂತಸಕ್ಕೆ ಒದಗುವ ಎಲ್ಲ ಬಯಕೆಗಳೂ ಪೂಜ್ಯವೇ. ಆದರೆ ಅವುಗಳಿಗೆ ಒಟ್ಟು ಕಟ್ಟುಪಾಡು ಇರಬೇಕು, ವ್ಯವಸ್ಥೆ ಇರಬೇಕು, ಕಾಲ–ದೇಶಗಳ ಔಚಿತ್ಯ ಇರಬೇಕು. ಇದನ್ನೇ ಧರ್ಮ ಎಂದು ಕರೆದಿರುವುದು. ಎಂದರೆ ಕಾಮವೂ ಕೂಡ ಧರ್ಮಬದ್ಧವಾಗಿರಬೇಕು; ‘ಧರ್ಮಾವಿರುದ್ಧೋ ಭೂತೇಷು ಕಾಮೋsಸ್ಮಿ ಭರತರ್ಷಭ‘ – ಪ್ರಾಣಿಗಳಲ್ಲಿ ಧರ್ಮಕ್ಕೆ ವಿರುದ್ಧವಲ್ಲದ ಕಾಮವು ನಾನಾಗಿದ್ದೇನೆ – ಎಂದಿದ್ದಾನೆ, ಗೀತೆಯಲ್ಲಿ ಶ್ರೀಕೃಷ್ಣ.

ಆದರೆ ಶಿವನು ಸುಟ್ಟ ಕಾಮ ಇಂಥ ಕಾಮನಲ್ಲ; ಅವನು ಧರ್ಮಕ್ಕೆ ವಿರುದ್ಧವಾಗಿ ಕಾಣಿಸಿಕೊಂಡವನು. ಇದು ಹೇಗೆಂದರೆ, ಶಿವನು ತಪಸ್ಸಿನಲ್ಲಿ ತೊಡಗಿರುವಾಗ ಅವನ ತಪಸ್ಸನ್ನು ಕೆಡಿಸಲೆಂದು ದೇವತೆಗಳು ಕಾಮ, ಎಂದರೆ ಮನ್ಮಥನನ್ನು ಅವನಲ್ಲಿಗೆ ಕಳುಹಿಸುತ್ತಾರೆ. ಮನ್ಮಥನು ಅಕಾಲದಲ್ಲಿ ವಸಂತವನ್ನು ಸೃಷ್ಟಿಸಿ, ಶಿವನ ಏಕಾಗ್ರತೆಯನ್ನು ಭಂಗಗೊಳಿಸಲು ಉದ್ಯುಕ್ತನಾಗುತ್ತಾನೆ. ಆದರೆ ಈ ಅಕಾಲ ಕಾಮನನ್ನು ಶಿವನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟುಹಾಕುತ್ತಾನೆ. ಬಳಿಕ ಶಿವನಿಂದಲೇ ಅವನಿಗೆ ಮರುಹುಟ್ಟು ಕೂಡ ಒದಗುತ್ತದೆಯೆನ್ನಿ!

ಹೋಳಿಯ ಆಚರಣೆಯ ಭಾಗವಾಗಿ ಕಾಮದಹನವೂ ನಡೆಯುತ್ತದೆ; ಕಾಮನ ಮರುಹುಟ್ಟೂ ನಡೆಯುತ್ತದೆ. ಎಂದರೆ ಅಧಾರ್ಮಿಕವಾದ, ಅಕಾಲಿಲವಾದ ಕಾಮನ ಭಸ್ಮವಾದುದ್ದೂ ಸಂಭ್ರಮಕ್ಕೆ ಕಾರಣ; ಜೀವನಕ್ಕೆ ಪೂರಕವಾದ ಕಾಮನ ಹುಟ್ಟು ಕೂಡ ಸಂಭ್ರಮಕ್ಕೆ ಕಾರಣ. ಈ ಎರಡೂ ಸಂಭ್ರಮಗಳೂ ಹೋಳಿಯ ಆಚರಣೆಯ ಹಿನ್ನೆಲೆಯಲ್ಲಿವೆ. ಹೀಗಾಗಿಯೇ ಹೋಳಿಯನ್ನು ಕಾಮನಹಬ್ಬ ಎಂದೂ ಕರೆದಿದ್ದಾರೆ. ಅಧರ್ಮಮೂಲವಾದ ಕಾಮವನ್ನು ಸುಟ್ಟುಹಾಕಿದಾಗ, ಜೀವನವು ಸಂಭ್ರಮದ ಆಚರಣೆಗೆ ಸಿದ್ಧವಾಗುತ್ತದೆ; ಆಗ ಕಾಣಿಸಿಕೊಳ್ಳುವ ಕಾಮ, ಅದು ಪುರುಷಾರ್ಥವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT