ಭಾನುವಾರ, ಜನವರಿ 19, 2020
23 °C
ಮರಳಿದೆ ಸಂಕ್ರಾಂತಿ

ಮಕರ ಸಂಕ್ರಾಂತಿ ಮತ್ತು ಆರೋಗ್ಯದ ಮಹತ್ವ

ಡಾ. ಸತ್ಯನಾರಾಯಣ ಭಟ್ ಪಿ. Updated:

ಅಕ್ಷರ ಗಾತ್ರ : | |

ಮರಳಿದೆ ಸಂಕ್ರಾಂತಿ

ಧನುರ್ಮಾಸದ ಕುಳಿರ್ಗಾಳಿಯ ನಸುಕಿನಲ್ಲಿಯೇ ಎದ್ದು ಬಿಡಿ. ಎದ್ದ ಅನಂತರ ಬಗೆ ಬಗೆಯ ಪೂಜಾ ಕೈಂಕರ್ಯ ಕೈಗೊಂಡು ಪುನೀತರಾಗುವವರು ಹಲವರು. ಇದು ಕೇವಲ ಸತ್ವಗುಣವನ್ನು ಹೆಚ್ಚಿಸಲು ಮಾತ್ರ ಸಹಕಾರಿ ಅಲ್ಲ. ಚಳಿಗಾಲದಲ್ಲಿ ಮುಂಜಾವಿನಲ್ಲೇ  ಎಚ್ಚರಗೊಳ್ಳುವುದು ಖಂಡಿತ ಉತ್ತಮ ಸಂಪ್ರದಾಯ. ಆಯುರ್ವೇದದ ಗ್ರಂಥಗಳಲ್ಲಿ ದೈನಂದಿನ ಮೊದಲ ಮೆಟ್ಟಿಲು ಬ್ರಾಹ್ಮೀ ಮುಹೂರ್ತದಲ್ಲಿ ಏಳುವ ಸಂಭ್ರಮ; ಅದನ್ನೇ ಸುಖದ ಹಿತದ ಆಯುಷ್ಯದ ಮೊದಲ ದಿನಚರಿ ಎಂದಿವೆ.

ಚಳಿಗಾಲದ ನಿದ್ದೆಯಲ್ಲಿ ಸದ್ದಿಲ್ಲದ ಹೃದಯಾಘಾತ ಮತ್ತು ಸಾವು–ನೋವು ಇಳಿ ಹರೆಯದ ಮಂದಿ ಎದುರಿಸುವ ಬಹು ದೊಡ್ಡ ಸವಾಲು. ಅದರ ತಡೆಗೆ ನಮ್ಮವರು ಕಂಡುಕೊಂಡ ಕ್ರಿಯಾಶೀಲ ಬದುಕಿನ ಪುಟ್ಟ ಆಚರಣೆಯೇ ಧನುರ್ಮಾಸದ ಸಾತ್ವಿಕ ಸಂಪ್ರದಾಯ. ಮುಂಜಾವಿನ ಪೂಜಾವಿಧಿ. ಆದರೆ ಅದು ಅಷ್ಟಕ್ಕೇ ನಿಲ್ಲದು. ನಿಮ್ಮ ಆಹಾರಪದ್ಧತಿಗೂ ಅನ್ವಯವಾಗುವ ಹಲವು ಕಿವಿಮಾತು ಮನೆಮನೆಯಲ್ಲಿದೆ. ಅದೇ ನಮ್ಮ ಹಬ್ಬಗಳ ಸಾಲಿನ ಅಡುಗೆಮನೆಯ ಆಚಾರ. ಅಗೋ, ಇದೀಗ ತಾನೇ ಮುಕ್ಕೋಟಿ ದ್ವಾದಶೀ ಕಳೆಯಿತಲ್ಲ. ಸ್ವರ್ಗದ ಬಾಗಿಲು ತೆಗೆಯಿತಲ್ಲ. ಮನದೊಳಗಿನ ರಾಕ್ಷಸರು ತಮಸ್ಸು ಮತ್ತು ರಜಸ್ಸು. ಅವರನ್ನು ಗೆಲ್ಲಬಲ್ಲ ಹಾದಿ ಪೂಜೆ, ವ್ರತ, ಧ್ಯಾನಾಚರಣೆ ಮಾತ್ರ. ಜನವರಿ ತಿಂಗಳ ಹನ್ನೆರಡರಂದು ಜನಿಸಿದ ಸ್ವಾಮಿ ವಿವೇಕಾನಂದರ ಒಂದು ವಾಣಿ ಇದೆ. ‘ನಿಮ್ಮ ದೇಹದ ದಂಡನೆ, ವ್ಯಾಯಾಮ, ಸುತ್ತಾಟ, ಸಂಚಾರ – ಇವೆಲ್ಲ ಒಳ್ಳೆಯದೇ. ಆದರೆ ಮನಸ್ಸು ಮಾತ್ರ ಚಂಚಲವಾಗಬಾರದು. ಅದು ಸ್ಥಿರವಾಗಿರಲಿ.’ ಅಂತಹ ಸ್ಥಿತಿಗೆ ಎಂತಹ ಆಹಾರ ಬೇಕು? ಅದು ನಮ್ಮ ಪೂರ್ವಿಕರಿಗೆ ತಿಳಿದಿತ್ತು. ಮಕರ ಸಂಕ್ರಾಂತಿಯ ಆಚರಣೆ ತುಂಬ ಅಂತಹದೇ ವಿಚಾರಗಳಿವೆ.

ಹೇಮಂತದ ಹಿಮಗಾಳಿಯ ಗಳಿಗೆಗಳು ಇದೀಗ ಮುಗಿದಿವೆ. ಈಗ ಮುಂಜಾವಿನ ಮಂಜು ಹನಿಯಷ್ಟೆ ತೊಟ್ಟಿಕ್ಕುವ ಶ್ರಾಯ. ಇನ್ನೇನು ಕ್ರಮೇಣ ಸೂರ್ಯಕಿರಣಗಳ ಪ್ರಖರತೆ. ರಥಸಪ್ತಮಿ ಕಳೆದ ಮೇಲೆ ಸೂರ್ಯಕಿರಣಗಳಿಗೆ ಮತ್ತೆ ಏರುವ ತೀಕ್ಷ್ಣತೆ. ಹೀಗಾಗಿ ಇಂತಹ ಸಂಕ್ರಮಣಸ್ಥಿತಿಯಲ್ಲಿ ನಮ್ಮ ಆಹಾರದ ಅಭ್ಯಾಸಗಳನ್ನು ಕ್ರಮೇಣ ಬದಲಾಯಿಸುವ ಅಗತ್ಯ ಇದೆ. ಅದೇ ಸಂಕ್ರಾಂತಿಯ ಪರ್ವಕಾಲ.

ಆಯುರ್ವೇದದ ಪ್ರಮುಖ ಆಧಾರಸ್ತಂಭ ಚರಕಸಂಹಿತೆ. ಹೇಮಂತದ ಎಲ್ಲ ಬಗೆಯ ಆಚರಣೆಗಳು ಶಿಶಿರಋತುವಿಗೆ ಮುಂದುವರೆಯುತ್ತವೆ. ಆದರೆ ಜೊತೆಗೆ ಆಹಾರದ ಮಟ್ಟಿಗೆ ಕೊಂಚ ಎಚ್ಚರ ಅತ್ಯಗತ್ಯ. ಖಾರ, ಕಹಿ ಮತ್ತು ಒಗರುರಸಗಳಿಗೆ ಕಡಿವಾಣ ಇರಲಿ. ಹಾಗಾದರೆ ಸೇವನೆಗೆ ಹಿತವಾದ ಆಹಾರದ ರಸಗಳಾವುವು? ಈ ಪ್ರಶ್ನೆ ಸಹಜ. ಮಧುರ, ಹುಳಿ ಮತ್ತು ಉಪ್ಪು ರುಚಿಯ ಆಹಾರ ಖಂಡಿತ ಪಥ್ಯವೆನಿಸುತ್ತದೆ.

ಕಬ್ಬು, ಸಕ್ಕರೆಗಿಂತ ಸಿಹಿಯಾದವು ಬೇರೆ ಇಲ್ಲ. ಅಂತಹ ಕಬ್ಬು ಮತ್ತು ಸಕ್ಕರೆಯ ಬಳಕೆಗೆ ಸಂಕ್ರಾಂತಿ ನೆನಪಿಸುತ್ತದೆ. ಇಂದಿನ ಹೊಸ ಪೀಳಿಗೆ ಮಂದಿಗೆ ಸಿಹಿ ಎಂದರಾಗದು. ಎಳೆಯ ಮಕ್ಕಳೂ ಸಿಹಿ ಎಂದರೆ ಮೂಗು ಮುರಿಯುವುದು ಕಂಡಿದ್ದೇನೆ. ಅದಕ್ಕಾಗಿಯೇ ಬಗೆಬಗೆಯ ನಾನಾ ಆಕಾರಗಳ ಸಕ್ಕರೆ, ಬೆಲ್ಲದ ಅಚ್ಚು ಆಕಾರಗಳ ಆಕರ್ಷಣೆ ಹಾದಿಯಿದೆ. ಎಳ್ಳು ನಮ್ಮ ಅತಿ ಮುಖ್ಯ ಎಣ್ಣೆಯ ಮೂಲ. ಅದು ಅಡುಗೆಯ ಉತ್ತಮ ಸಂಭಾರ ಸಹ. ಅದರ ಕ್ಯಾಲೊರಿ ಶಕ್ತಿ ಉತ್ಪಾದನೆ ದೇಹಕ್ಕೆ ಖಂಡಿತ ಬೇಕು. ಅದು ಚಳಿಯ ದಿನಗಳ ಅಗತ್ಯ. ದ್ವಿದಳ ಧಾನ್ಯಗಳು ನಮ್ಮ ಅಡುಗೆಯ ಆಡಂಬರವೇ ಸೈ. ಆದರೆ ಬೇಳೆಗಳ ಬಳಕೆಗೆ ಆಯುರ್ವೇದ ಇತಿಮಿತಿ ಹೇರುತ್ತದೆ. ಹೆಸರು ಬೇಳೆಗೆ ಮಾತ್ರ ಇಂತಹ ಕಟ್ಟು ಪಾಡು ಇಲ್ಲವೇ ಇಲ್ಲ. ಅದು ಹುಗ್ಗಿಯ ರೂಪದ ಅನ್ನದ ಸಂಗಡ ಬಳಸುವೆವು. ಹೆಸರುಬೇಳೆಯ ಖಾರದ ಪೊಂಗಲ್ ತಯಾರಿಕೆಗೆ ಕಾಳುಮೆಣಸು ಬಹಳ ಯೋಗ್ಯ. ಅದು ಹಿತಮಿತವಾಗಿ ಉಂಡ ಅನ್ನದ ಪಚನಕ್ರಿಯೆಗೆ ಪೂರಕ. ಸಿಹಿ ಪೊಂಗಲ್ ಸಂಗಡ ಬೆಲ್ಲದ ಮಾಧುರ್ಯವಿದೆ. ಧಾರಾಳ ಬಳಸುವ ತುಪ್ಪದ ಘಮಲಿದೆ. ಇಂತಹ ಆಹಾರ ಮುಂದಿನ ಯುಗಾದಿ ಪರ್ಯಂತ ಸೇವನೆಗೆ ಅತಿ ಹಿತ. ಅಂತಹ ಅರ್ಥಪೂರ್ಣ ಆಚರಣೆಯ ಮೊದಲ ಮಜಲು ಸಂಕ್ರಾಂತಿಯ ಸಡಗರದ ಅಡುಗೆ.

ರಾಮಾಯಣಕಾವ್ಯದ ಮುಗ್ಧೆ ಬೇಡತಿ ಕಾದಿದ್ದಳು ರಾಮನ ಬರುವಿಕೆಗೆ. ಶ್ರೀರಾಮನಿಗೆ ಅವಳಿತ್ತ ಎಲಚಿಯ ಎಂಜಲು ಹಣ್ಣಿನ ಕತೆ ನಿಮಗೆ ಗೊತ್ತು. ಅದರ ಸಂಸ್ಕೃತದ ಹೆಸರು ಬದರಿ. ಸಂಕ್ರಮಣ ಕಾಲದ ಕಾಡಿನ ಹಣ್ಣು. ಆ ಕಾಲದಲ್ಲಿ ಮರದ ಬುಡ ತುಂಬ ಕಳಿತು ಉದುರಿದ ಎಲಚಿಯ ರಂಗೋಲಿ ಇದ್ದೀತು. ಅದು ಕೂಡ ಕುಸುಮಬಾಲೆಯರು ಬೀರುವ ಎಳ್ಳಿನ ತಟ್ಟೆಯಲ್ಲಿರುತ್ತದೆಯಲ್ಲ! ಒಂದಿಷ್ಟೂ ಕಲಬೆರಕೆ ಇರದ ಬೋರೆಯ ಹೆಮ್ಮರದ ಹಣ್ಣು ಸದ್ಯ ಶ್ರಮನಿವಾರಕ. ರಾಮನ ಅಲೆದಾಟದ ದಣಿವು ಕಳೆಯಲು ಶಬರಿ ನೀಡಿದ ಹಣ್ಣಿದು. ಅಂತಹ ಹಣ್ಣು ಸಂಕ್ರಾಂತಿಯಂದು ಮಾತ್ರ ಅಲ್ಲ; ಅದು ಲಭ್ಯವಿದ್ದಷ್ಟು ದಿನವೂ ತಿನ್ನಲು ಶಕ್ಯ. ದೇಹ ಮತ್ತು ಮನದ ಶ್ರಮದ ಪರಿಹಾರದ ದಿವ್ಯೌಷಧ ಕಾಡಿನ ಈ ಹಣ್ಣು. ಇದು ಮಧುಮೇಹಿಗಳಿಗೂ ಪರಮ ಪಥ್ಯ. ನರನಾರಾಯಣರ ಬದರೀ–ಕೇದಾರದಿಂದ ದಿಲ್ಲಿಯ ಬದರ್‌ಪುರ್ ಪರ್ಯಂತ ಒಂದೊಮ್ಮೆ ಇಂತಹ ಹಣ್ಣು ಹೇರಳವಾಗಿತ್ತು. ನರವಾನರರ ಕಾಡಿನ ಆಹಾರವಾಗಿತ್ತು. ಅಂತಹ ಬದರೀ ಅಥವಾ ಎಲಚಿಯ ಹಣ್ಣು ತಿನ್ನಿರಿ. ಆರೋಗ್ಯವಂತರಾಗಿರಿ. ಇಂತಹ ಆಚರಣೆಗಳ ಸಂಕ್ರಾಂತಿ ನಾಡಿಗೆಲ್ಲ ಶುಭ ತರಲಿ. ಎಲ್ಲರೂ ನಿರೋಗಿಗಳಾಗಲಿ. ಆರೋಗ್ಯ ಆಸ್ಪತ್ರೆಗಳಲ್ಲಿ ಮದ್ದಿನಂಗಡಿಗಳಲ್ಲಿ ಕೊಂಡುಕೊಳಲಾಗದ ವಸ್ತು. ನಮ್ಮ ಆಚಾರ–ಆಹಾರಗಳೇ ಪರಮೌಷಧಗಳು!

(ಡಾ.ಸತ್ಯನಾರಾಯಣ ಭಟ್ ಪಿ.) (13 ಜನವರಿ 2018ರಂದು ಪ್ರಜಾವಾಣಿಯಲ್ಲಿ ಪ್ರಕಟಿತ)

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು