ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಸುಧಾರಿಸದೆ ದೇಶ ಸುಧೆ ಹರಿಸುವುದೇ?

ಅಕ್ಷರ ಗಾತ್ರ

ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಉನ್ನತ ಸಂಸ್ಕೃತಿ ಇದೆ. ಸಂಪದ್ಭರಿತವಾದ ನೆಲವೂ ಇದೆ. ವಿದ್ಯೆ-ಬುದ್ಧಿ ಇರುವ ಜನರೂ ಇದ್ದಾರೆ. ಹೀಗಿದ್ದರೂ ನಮ್ಮ ದೇಶ ಏಕೆ ಬಡವಾಗಿದೆ? ನೂರಾರು ವರ್ಷಗಳಿಂದ ಪರಕೀಯರ ದಬ್ಬಾಳಿಕೆಯಲ್ಲೇಕೆ ಬೆಂದಿತು? ಈ ಪ್ರಶ್ನೆಗಳನ್ನು ಪ್ರತಿಯೊಬ್ಬ ಭಾರತೀಯನೂ ಯೋಚಿಸಿದರೆ, ನಾವೆಲ್ಲಿ ತಪ್ಪು ಮಾಡಿದ್ದೇವೆಂಬ ಸತ್ಯ ಗೋಚರವಾಗುತ್ತದೆ. ದೇಶ ಮತ್ತು ದೇಹ ಬೇರೆ ಬೇರೆಯಲ್ಲ. ನಾವಿದ್ದ ಹಾಗೆ ದೇಶವೂ ಇರುತ್ತೆ. ನಾವು ದೇಶಕ್ಕೆ ಕೆಟ್ಟದ್ದನ್ನು ಕೊಟ್ಟು, ಕೆಟ್ಟದ್ದನ್ನು ಪಡೆಯುತ್ತಿದ್ದೇವಷ್ಟೆ.

‘ನಾವು ದೇಶಕ್ಕೆ ಕೆಟ್ಟದ್ದು ಮಾಡಿಲ್ಲ, ನಾವು ಅಪ್ಪಟ ದೇಶಭಕ್ತರು. ದೇಶದ ವಿಚಾರ ಬಂದಾಗ ನಾವು ಪ್ರಾಣತ್ಯಾಗಕ್ಕೂ ಸಿದ್ಧ’ ಅಂತೆಲ್ಲಾ ಹೇಳುತ್ತೇವೆ. ಆದರೆ, ನಮಗೆ ದೇಶಸೇವೆ, ದೇಶಪ್ರೇಮ, ದೇಶದ ಏಳ್ಗೆಯ ಒಳಾರ್ಥವೇ ತಿಳಿದಿಲ್ಲ. ದೇಶಸೇವೆ ಮಾಡುವುದೆಂದರೆ ಜೈಕಾರ ಹಾಕುವುದಲ್ಲ; ಧ್ವಜ ಹಿಡಿದು ಓಡಾಡುವುದಲ್ಲ; ನಾವು ನಿತ್ಯ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ಮತ್ತೊಬ್ಬರ ಕೇಡು ಬಯಸದ ನಿಃಸ್ವಾರ್ಥತೆ ಇರಬೇಕು. ನಾವು ಸುಧಾರಿಸಿದರೆ ಈ ಸಮಾಜ ಸುಧಾರಿಸುತ್ತದೆ. ಈ ಸಮಾಜ ಸುಧಾರಿಸಿದರೆ ಈ ನಾಡು ಸುಧಾರಿಸುತ್ತದೆ. ನಮ್ಮ ನಾಡು ಸುಧಾರಿಸಿದರೆ ನಮ್ಮ ದೇಶ ಸುಧಾರಣೆ ಕಾಣುತ್ತೆಂಬ ಪ್ರಜ್ಞೆ ಇರಬೇಕು. ‘ನಾವು ಸುಧಾರಣೆಗೊಳ್ಳದೆ ಈ ದೇಶ ಸುಧೆ ಹರಿಸುತ್ತದೆ’ ಎಂದು ಅಂದುಕೊಳ್ಳುವುದು; ಈ ದೇಶಕ್ಕೆ ಅಭಿವೃದ್ದಿಯಾಗುವಂಥ ಕೆಲಸ ಮಾಡದೆ, ಈ ದೇಶ ಉದ್ಧಾರವಾಗುತ್ತೆ ಅನ್ನೋದು ಭ್ರಮೆಯಷ್ಟೆ.

ದೇಶ ಉದ್ಧಾರವಾಗಿದೆಯೇ – ಎಂಬುದನ್ನು ನೋಡಲು ನಿಯತಕಾಲಿಕೆಗಳನ್ನು ನೋಡಬೇಕಿಲ್ಲ. ನಮ್ಮನ್ನು ನಾವು ನೋಡಿಕೊಂಡರೆ, ನಮ್ಮ ಸಮಾಜವನ್ನು ಗಮನಿಸಿದರೆ ಈ ದೇಶ ಯಾವ ಸ್ಥಿತಿಯಲ್ಲಿದೆ ಎಂಬುದು ಅರ್ಥವಾಗುತ್ತದೆ. ನಾವು ನಿಃಸ್ವಾರ್ಥವಾಗಿ ಒಳ್ಳೆಯ ನಾಯಕರನ್ನು ಆರಿಸದೆ, ಅವರಿಂದ ನಿಃಸ್ವಾರ್ಥವಾದ ಕೆಲಸ ನಿರೀಕ್ಷಿಸುವುದು ಹೇಗೆ ಸಾಧ್ಯವಿಲ್ಲವೋ, ಹಾಗೆ ನಾವು ಸಾಮುದಾಯಿಕವಾಗಿ ಬೆಳೆಯದೆ, ಈ ದೇಶ ಬೆಳೆಯುತ್ತದೆಂದು ನಿರೀಕ್ಷಿಸಲಾಗದು. ನಾವು ಮಾಡುವ ತಪ್ಪುಗಳಿಂದ ಈ ದೇಶದ ಹಣೆಯ ಮೇಲೆ ಪೆಟ್ಟು ಬೀಳುತ್ತದೆ ಎಂಬುದನ್ನು ಮರೆಯಬಾರದು.

ಇತಿಹಾಸದಿಂದ ಭಾರತೀಯರು ಪಾಠ ಕಲಿತಂತೆ ಕಾಣಿಸುತ್ತಿಲ್ಲ. ಜಾತಿತಾರತಮ್ಯದಲ್ಲಿ ನಾವು ವಿದ್ಯೆ-ಹುದ್ದೆ ಹಂಚಿದ್ದರಿಂದ ನಮ್ಮ ದೇಶ ನೂರಾರು ವರ್ಷಗಳಿಂದ ದಟ್ಟ ದರಿದ್ರವಾಯಿತು. ಈಗ ಹಣದ ತರತಮದಲ್ಲಿ ವಿದ್ಯೆ-ಹುದ್ದೆಗಳನ್ನು ಹಂಚುತ್ತಿದ್ದೇವೆ. ಅವುಗಳನ್ನು ಅನರ್ಹರಿಗೆ ಬಿಕರಿಗಿಟ್ಟು ಪ್ರತಿಭಾವಂತರಿಗೆ ಅನ್ಯಾಯ ಮಾಡುತ್ತಿದ್ದೇವೆ. ಹಣದಿಂದ ವಿದ್ಯೆ-ಹುದ್ದೆ ಗಿಟ್ಟಿಸಿದವರಿಂದ ದೇಶ ಹಿಂದುಳಿಯುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತದ ಸಾಧನೆ ಶೂನ್ಯವಾಗುತ್ತಿದೆ.

ಪ್ರತಿವರ್ಷ ಶಸ್ತ್ರ ಖರೀದಿಗೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದೇವೆ. ಆ ಹಣದ ಅಲ್ಪ ಭಾಗವನ್ನು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿದರೆ ಈ ದೇಶ ಸ್ವಂತವಾಗಿ ಆಧುನಿಕ ಶಸ್ತ್ರಗಳನ್ನು ಉತ್ಪಾದಿಸಬಹುದು. ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬಿಯಾಗಿ ಬೆಳೆಯಬಹುದು. ಬೇವು ನೆಟ್ಟು ಮಾವು ಬಯಸಿದಂತೆ, ದೇಶದ ಅಭಿವೃದ್ದಿಗೆ ಬೇಕಾದ ಬೀಜ ಬಿತ್ತದೆ, ದೇಶ ಉದ್ಧಾರದ ಕನಸು ಕಾಣುತ್ತಿದ್ದೇವೆ. ಇಂಥ ಭ್ರಮಾಚಿತ್ತ ಕಳೆದು, ವಾಸ್ತವತೆಯ ಬಿಂಬಕ್ಕೆ ನೈಜತೆಯ ಹಂಬು ನೀಡುವ ಪ್ರಗತಿಚಿತ್ತ ಪ್ರತಿಯೊಬ್ಬರಲ್ಲೂ ಮೂಡಬೇಕು. ಅಂಥ ಸತ್‌ಚಿತ್ತದವರಲ್ಲಿ ಮೂಡುವ ಚಿತ್ರವೇ ‘ಸಚ್ಚಿದಾನಂದ ಸ್ವರೂಪ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT