ಭಾನುವಾರ, ಸೆಪ್ಟೆಂಬರ್ 19, 2021
27 °C

ನಾಳೆ ಎನ್ನುವ ಫಲ

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

‘ವೇದಪಾರಾಯಣದ ಫಲ ಗಂಗಾದಿ ತೀರ್ಥಸ್ನಾನಫಲ ಕೃಚ್ಫ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ ಮೇದಿನಿಯನೊಲಿದಿತ್ತ ಫಲ ವಸ್ತ್ರಾದಿ ಕನ್ಯಾದಾನ ಫಲವಹುದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ’.

ಕುಮಾರವ್ಯಾಸ ತನ್ನ ಭಾರತಕತೆ ಕೇಳಿದವರಿಗೆ, ಓದಿದವರಿಗೆ ಇಂತಹ ಫಲ ಪ್ರಾಪ್ತಿಯಾಗುವುದು ಎಂದಿದ್ದಾನೆ. ಎಲ್ಲ ಪುರಾಣಕಥೆಗಳ, ಸ್ತ್ರೋತ್ರಗಳ ಕೊನೆಯಲ್ಲಿ ಫಲಶ್ರುತಿಯಿರುವುದನ್ನು ನೋಡುತ್ತೇವೆ. ಆಟೋಟದ ಕೊನೆಯಲ್ಲಿ ಪಾರಿತೋಷಕ ಇಟ್ಟಂತೇ ಫಲ ಎನ್ನುವ ಎರಡಕ್ಷರದ ಶಬ್ದ ಇಡೀ ಬದುಕಿನ ಓಟಕ್ಕೆ ಉಸಿರಿದ್ದಂತೆ ಕಾಣುತ್ತದೆ.

‘ಫಲ’ಕ್ಕೆ ಶಬ್ದಾರ್ಥ ಹಣ್ಣು, ಎಳೆಗಾಯಿ, ಬೆಳೆ, ಫಸಲು, ಲಾಭ, ಸಂಪಾದನೆ, ಪ್ರಯೋಜನ, ಗುರಿ, ಸಂತತಿ, ಭೋಗ, ದಾನ, ಮುಟ್ಟು, ಕತ್ತಿಯ ಅಲಗು – ಹೀಗೆ ಐವತ್ತಕ್ಕೂ ಹೆಚ್ಚಿನ ಅರ್ಥಗಳನ್ನು ನಿಘಂಟು ನಮ್ಮ ಮುಂದಿಟ್ಟು ಈ ಎರಡಕ್ಷರದ ಶಬ್ದದ ದೊಡ್ಡ ವ್ಯಾಪ್ತಿಯನ್ನು ತೆರೆದಿಡುತ್ತದೆ. ಈ ಎಲ್ಲ ಶಬ್ದಗಳನ್ನು ಸರಪಳಿಯಂತೇ ಜೋಡಿಸಿ, ಒಂದಾಗಿಸಿ ಹೇಳಿದಾಗ ನಮ್ಮ ಪೂರ್ಣ ಬದುಕೇ ಆಗುತ್ತದೆ. ಅಷ್ಟಕ್ಕೂ ನಮ್ಮ ಬದುಕು ಪ್ರಕೃತಿ ಮತ್ತು ಪುರುಷನ ಪ್ರೀತಿಯ ಫಲವೇ ಅಲ್ಲವೇ?

ಈ ಫಲ ಎನ್ನುವ ಮಂತ್ರದಂಡ ಇಡೀ ಮನುಜಕುಲವನ್ನು ಮುನ್ನಡೆಸುತ್ತಿದೆ. ಆದರೆ ‘ಫಲ’ದ ಸರಿಯಾದ ಅರ್ಥ ಅರಿಯದೇ ಮನುಜಕುಲ ಅದದೇ ಪ್ರಾಂಗಣದಲ್ಲಿ ಯೋಚನೆ ಮಾಡದೇ ಪ್ರದಕ್ಷಿಣೆ ಹಾಕುತ್ತಿದೆ. ಪುರಂದರದಾಸರ ಕೀರ್ತನೆಯೊಂದು ಮನುಷ್ಯನ ಮನಸ್ಸಿನ ದಶಾವತಾರಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ‘ಬೇವು ಬೆಲ್ಲದೊಳಿಡಲೇನು ಫಲ, ಹಾವಿಗೆ ಹಾಲೆರೆದೇನು ಫಲ’ – ಈ ಕೀರ್ತನೆಯಲ್ಲಿ ಮನುಷ್ಯ ಮಾಡಬೇಕಾದ ಕನಿಷ್ಠ ಕರ್ತವ್ಯಗಳನ್ನು ಜ್ಞಾಪಿಸುತ್ತಾ ಯಾವುದೋ ಫಲದ ಭ್ರಮೆಯಲ್ಲಿ ಮಾಡುವ ಆಚರಣೆಗಳನ್ನು ಪ್ರಶ್ನಿಸಿದ್ದಾರೆ. ಕ್ರಿಯೆಗೊಂದು ಪ್ರತಿಕ್ರಿಯೆ ಇದ್ದಂತೇ ನಮ್ಮ ಬದುಕಿನ ಪ್ರತಿ ಹೆಜ್ಜೆಗೂ ಒಂದು ಫಲವಿದೆ. ಓದಿಗೊಂದು ಫಲ, ಮಾತಿಗೊಂದು ಫಲ, ಮೌನಕ್ಕೂ ಒಂದು ಫಲ.

ದಾನ, ಫಲವನ್ನು ಕೊಡುತ್ತದೆ, ನಮ್ಮನ್ನು ಕಾಯುತ್ತದೆ ಎನ್ನುವ ನಂಬಿಕೆಯಿದೆ. ದೊರೆಗಳು ಬಿಟ್ಟ ಉಂಬಳಿಗಳು, ನೆಟ್ಟ ಮರಗಳು, ಕಟ್ಟಿದ ದೇವಾಲಯಗಳು, ತೋಡಿದ ಕೆರೆಗಳು ಎಲ್ಲವೂ ಕರ್ಮವೆಂದುಕೊಂಡೋ ಫಲದ ಅಪೇಕ್ಷೆಯಿಂದಲೋ ನಡೆದ ಸತ್ಕಾರ್ಯಗಳು. ‘ಮಾ ಫಲೇಶು ಕದಾಚನ’ ಕೃಷ್ಣನ ಮಾತು ಕರ್ಮವನ್ನಷ್ಟೇ ಮಾಡು ಎಂದು ಹೇಳಿದರೂ ಜೊತೆಯಲ್ಲಿ ಕರ್ಮಕ್ಕಂಟಿಕೊಂಡಿರುವ ಫಲದ ಪೂರ್ಣ ಚಿತ್ರಣವನ್ನೂ ನೀಡುತ್ತಾನೆ. ಇಂದಿನ ಮಾರ್ಗಣೆಯೇ ನಾಳಿನ ಫಲ! ಫಲವೇ ಫಲಿತಾಂಶವೂ ಹೌದು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು