ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಸೌಂದರ್ಯ | ಕವಲುದಾರಿಯಲ್ಲಿ ಮೂಡುವ ಬೆಳಕು...

Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ತಿಳಿವಳಿಕೆ, ವಿದ್ಯೆ ಹೆಚ್ಚಾದಂತೆ ಸ್ಪಷ್ಟತೆ ಹೆಚ್ಚುತ್ತಾ ಹೋಗುತ್ತದೆಯೋ? ಅಥವಾ ಸಂಕೀರ್ಣತೆ, ಸಂದಿಗ್ಧತೆಗಳು ಅನುಭವಕ್ಕೆ ಬಂದು ಸಂಶಯಗಳೇ ಜಾಸ್ತಿ ಆಗುತ್ತವೆಯಾ

‘ಯಾವುದು ನಮ್ಮ ನಿಯಂತ್ರಣದಲ್ಲಿಲ್ಲವೋ ಅದನ್ನು ಒಪ್ಪಿಕೊಳ್ಳುವ ಶಾಂತತೆ, ಯಾವುದು ನಮ್ಮ ನಿಯಂತ್ರಣದಲ್ಲಿದೆಯೋ ಅದನ್ನು ಕಾರ್ಯಗತಗೊಳಿಸುವ ಧೈರ್ಯ ಮತ್ತು ಈ ಎರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ವಿವೇಕವ ನೀಡು ಪ್ರಭುವೇ’ – ಎಂಬುದೊಂದು ಪ್ರಸಿದ್ಧ ಪ್ರಾರ್ಥನೆ.

ಯಾವುದು ನಮಗೆ ಎಂದೆಂದಿಗೂ ಅಸ್ಪಷ್ಟವೇ ಆಗಿರುವ ವಿಷಯದಲ್ಲಿ ಈ ಪ್ರಾರ್ಥನೆಯಿಂದ ಸ್ಪಷ್ಟತೆ ಮೂಡೀತು. ಆದರೆ ಆ ಅಸ್ಪಷ್ಟತೆಯ ಅರಿವು ನಮ್ಮ ಬುದ್ಧಿಯನ್ನು ಮೀರಿದ್ದೇನೋ ಇದ್ದೇ ಇದೆಯೆಂಬ ವಿನಮ್ರತೆಯನ್ನೂ ಉಂಟುಮಾಡುತ್ತದೆ. ವಿನಮ್ರತೆಯೇ ಬದುಕಿನ ಅನೇಕ ನಿರ್ಧಾರಗಳನ್ನು, ಕ್ರಿಯೆಗಳನ್ನು, ರೀತಿ-ನೀತಿಗಳನ್ನು ಪ್ರೇರೇಪಿಸುವಂತಾದರೆ, ಅದೇ ಈ ಪ್ರಾರ್ಥನೆಯಿಂದಾಗುವ ಲಾಭ.

ತಿಳಿವಳಿಕೆ, ವಿದ್ಯೆ ಹೆಚ್ಚಾದಂತೆ ಸ್ಪಷ್ಟತೆ ಹೆಚ್ಚುತ್ತಾ ಹೋಗುತ್ತದೆಯೋ? ಅಥವಾ ಸಂಕೀರ್ಣತೆ, ಸಂದಿಗ್ಧತೆಗಳು ಅನುಭವಕ್ಕೆ ಬಂದು ಸಂಶಯಗಳೇ ಜಾಸ್ತಿ ಆಗುತ್ತವೆಯಾ?

ಸಂದಿಗ್ಧತೆಯ ಕವಲುದಾರಿಯಲ್ಲಿ ನಿಂತು ಯಾವ ದಾರಿಯನ್ನೂ ಆಯ್ದುಕೊಳ್ಳದೇ ನಿಲ್ಲಲು ಸಾಧ್ಯವಿಲ್ಲ. ನಡೆಯುತ್ತಲೇ ನಾವೆಲ್ಲಿಗೆ ಹೋಗುತ್ತಿದ್ದೇವೆ ಎಂಬ ತಿಳಿವಳಿಕೆಯನ್ನು ಪಡೆಯಬೇಕು; ನಡೆಯುತ್ತಿರುವ ಹಾದಿಯ ಪರಿಚಯ ಮಾಡಿಕೊಳ್ಳಬೇಕು.ಈ ಕ್ಷಣ ನಮ್ಮ ಅನುಭವ–ಬುದ್ಧಿಯ ಮಿತಿಯಲ್ಲಿ ನಾನೇನು ಮಾಡಬಲ್ಲೇನೋ ಅದನ್ನಷ್ಟೇ ಮಾಡಬಲ್ಲೆವು. ‘ಅದೇ ಸರಿ’ ಎಂಬ ನಿಶ್ಚಿತ ಜ್ಞಾನ ನಮಗಿರಲು ಸಾಧ್ಯವಿಲ್ಲ.ನಮ್ಮ ಕಲ್ಪನೆಯೂ ಸೀಮಿತವಾದದ್ದೇ. ಅದನ್ನು ಸೀಮಿತಗೊಳಿಸಿದ್ದು ನಮಗೇ ಅರಿವಿರದ ನಮ್ಮ ಮಿತಿಗಳೇ! ನಮ್ಮ ಅರಿವಿಗೆ ಬಾರದ ಮಿತಿಗಳು ಹಲವಾರು.ಅವುಗಳನ್ನು ಶೋಧಿಸುವುದಕ್ಕೇ ನಮ್ಮ ಜೀವಿತಾವಧಿಯನ್ನು ವ್ಯಯಿಸಿದರೂ ಸಾಕಾಗದೇನೋ? ಬದುಕಿಗೆ ಹಲವು ಮಿತಿಗಳಿವೆ; ಅವುಗಳ ಒಳಗೇ ನಾವು ಬದುಕಬೇಕು; ಬದುಕನ್ನು ಅರ್ಥಪೂರ್ಣವನ್ನಾಗಿಸಿಕೊಳ್ಳಬೇಕು. ಭೂತ, ಭವಿಷ್ಯ, ವರ್ತಮಾನಗಳ ಕುರಿತು ಪ್ರತಿಯೊಂದನ್ನೂ ಅರಿತ, ಸರ್ವಾಂತರ್ಯಾಮಿ, ಸರ್ವಶಕ್ತ ‘ದೇವರು’ ಇರಬಹುದೇನೋ? ಆದರೆ ದೇವರಿಗೆ ನಮ್ಮಂತೆ ‘ಬದುಕಿಲ್ಲ’.

ಎಲ್ಲವೂ ನಮ್ಮ ಕೈಯಲ್ಲೇ ಇದೆ ಎಂದುಕೊಂಡಾಗ ಉಂಟಾಗುವ ಆತ್ಮಸ್ಥೈರ್ಯ, ಹುಮ್ಮಸ್ಸು, ಹೋರಾಟದ ಮನೋಭಾವ ನಾವು ಮುನ್ನಡೆಯಲು ಬೇಕೇ ಬೇಕು. ಅದಿಲ್ಲದಿದ್ದರೆ ಎಲ್ಲವನ್ನೂ ‘ವಿಧಿ’, ‘ಹಣೆಬರಹ’ ಎನ್ನುತ್ತ, ನಿಷ್ಕ್ರಿಯತೆಯ ಕೂಪದಲ್ಲಿ ಕೊಳೆಯಬೇಕಾದೀತು. ನಮ್ಮ ವ್ಯಕ್ತಿತ್ವ ರೂಪುಗೊಳ್ಳುವುದೇ ಸ್ವತಂತ್ರ ನಿರ್ಧಾರಗಳನ್ನು ನಾವು ಹೇಗೆ ಕಾರ್ಯಗತಗೊಳಿಸುತ್ತೇವೆ ಮತ್ತು ನಮ್ಮ ಕ್ರಿಯಾಶೀಲತೆಯ ಕುರಿತಾದ ನಮ್ಮ ನಂಬಿಕೆ ಎಷ್ಟು ಆಳವಾದದ್ದು ಎನ್ನುವುದರಿಂದಲೇ. ಕ್ರಿಯಾಶೀಲತೆ ಎನ್ನುವುದು ‘ಎಲ್ಲವನ್ನೂ ಬದಲಾಯಿಸಿಬಿಡಬಲ್ಲೆ’ ಎಂಬ ಧೋರಣೆಯಲ್ಲ; ಅದು ನಮ್ಮ ಮಿತಿಗಳನ್ನು, ಅಸ್ಪಷ್ಟತೆಯನ್ನು ಅಲ್ಲಗೆಳೆಯುವಂಥದ್ದೂ ಅಲ್ಲ. ಮಿತಿಗಳ ಒಳಗೆ ನಾವೇನು ಮಾಡಬಲ್ಲೆವೋ ಅದನ್ನು ಮಾಡಿ, ಬಳಿಕ ನಮ್ಮ ಕೈ ಮೀರಿದ್ದನ್ನು ಶಾಂತವಾಗಿ ಒಪ್ಪಿಕೊಳ್ಳುವುದು.

ಯಾವುದೂ ನನ್ನ ನಿಯಂತ್ರಣದಲ್ಲಿಲ್ಲ ಎಂದು ನಂಬಿದವರು ಸದಾ ಎಲ್ಲದರಿಂದ ಓಡಿ ಹೋಗುತ್ತಾ ಸ್ವ-ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಎಲ್ಲವೂ ನನ್ನದೇ ಜವಾಬ್ದಾರಿ – ಎಂದು ನಂಬಿದವರು ಮಿತಿಗಳನ್ನು ಮೀರುವ ದುಸ್ಸಾಹಸಕ್ಕೆ ಕೈ ಹಾಕಿ ಸುಸ್ತಾಗಬೇಕಾದೀತು. ಆದರೆ ಈ ಎರಡರ ನಡುವಿನ ವಿವೇಕ ಮಾತ್ರ ಕೈ ಜಾರಿ ಹೋಗುತ್ತಲೇ ಇರುತ್ತದೆ. ನಮ್ಮ ದಾರಿಯಲ್ಲಿ ಅಡೆತಡೆಗಳು ಹೆಚ್ಚಾದಾಗ ಪ್ರಯತ್ನವನ್ನು ತೀವ್ರಗೊಳಿಸಬೇಕೇ ಅಥವಾ ದಾರಿಯನ್ನು ಬದಲಾಯಿಸಬೇಕೇ ಎಂಬುದು ಗಹನ ಪ್ರಶ್ನೆ. ಹಾಗಾಗಿ ಅಸ್ಪಷ್ಟತೆ, ಅಪರಿಪೂರ್ಣತೆಗಳಿಗೂ ನಮ್ಮ ಹೃದಯದಲ್ಲೊಂದು ಜಾಗ ನೀಡೋಣ. ಮಿತಿಗಳನ್ನೂ ಸ್ನೇಹದಿಂದಲೇ ನೋಡೋಣ; ಪ್ರಶ್ನೆಗಳನ್ನು ಪೋಷಿಸೋಣ. ಆಗ ಬದುಕಿಗೆ ಹೊಸ ಪ್ರಭೆ ಬಂದರೂ ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT