ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಸ್ನಾನ: ನದಿ, ಹೊಳೆ ದಂಡೆಯಲ್ಲಿ ಭೋಜನ

ಬೆಳಗಾವಿಯಲ್ಲಿ ಮಕರ ಸಂಕ್ರಾಂತಿ ಆಚರಣೆ ವಿಶೇಷ
Last Updated 13 ಜನವರಿ 2020, 9:54 IST
ಅಕ್ಷರ ಗಾತ್ರ

ಬೆಳಗಾವಿ: ಕ್ಯಾಲೆಂಡರ್‌ ವರ್ಷದ ಮೊದಲ ಹಬ್ಬ ಮಕರ ಸಂಕ್ರಾತಿಯನ್ನು ಗಡಿ ನಾಡಿನ ಜನರು ವಿಶೇಷವಾಗಿ ಆಚರಿಸುತ್ತಾರೆ. ಕುಟುಂಬದವರು, ಸ್ನೇಹಿತರು, ಬಂಧುಗಳು ಸೇರಿ ನದಿ, ಹೊಳೆಗಳ ದಂಡೆಗಳಲ್ಲಿ ಊಟ ಸೇವಿಸಿ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.

ಎಳ್ಳು–ಬೆಲ್ಲದೊಂದಿಗೆ ಸಂಭ್ರಮವನ್ನೂ ಹಂಚಿಕೊಳ್ಳುವ ಜನರು, ಸುಗ್ಗಿ ಹಬ್ಬವನ್ನು ಅರ್ಥಪೂರ್ಣ ಹಾಗೂ ಆರೋಗ್ಯಕರ ಶೈಲಿಯಲ್ಲಿ ಆಚರಿಸುವುದು ಇಲ್ಲಿನ ಸಂಪ್ರದಾಯವಾಗಿದೆ.

ವಿವಿಧ ಬಗೆಯ ತಿನಿಸುಗಳನ್ನು ಸಿದ್ಧಪಡಿಸಿಕೊಂಡು ಕುಟುಂಬದವರೆಲ್ಲರೂ ನದಿಗಳು ಅಥವಾ ಹೊಳೆಗಳಿಗೆ ತೆರಳಿ ಪುಣ್ಯಸ್ನಾನ ಮಾಡಿ ದೇವರಿಗೆ ನಮಿಸುತ್ತಾರೆ. ಬಳಿಕ ಎಲ್ಲರೂ ಸೇರಿ ಊಟ ಮಾಡಿ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ವಾಪಸಾಗುತ್ತಾರೆ. ಅಂದು ವಿವಿಧ ಕಡೆಗಳಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವಗಳು ಕೂಡ ನೆರವೇರುತ್ತವೆ.

ಬಗೆ ಬಗೆಯ ತಿನಿಸುಗಳು:ಸಜ್ಜೆ, ಜೋಳದ ಖಡಕ್ ರೊಟ್ಟಿ, ಎಣ್ಣೆಗಾಯಿ ಬದನೆಕಾಯಿ, ವಿವಿಧ ಕಾಳುಗಳಿಂದ ಸಿದ್ಧಪಡಿಸಿದ ಪಲ್ಯ, ‌‌‌‌ಮೊಸರು, ಶೇಂಗಾ, ಗುರೆಳ್ಳು ಚಟ್ನಿ, ಶೇಂಗಾ ಹೋಳಿಗೆ, ಶೇಂಗಾ ಚಟ್ನಿ, ಈ ಸಂದರ್ಭದಲ್ಲಿ ಸಿಗುವ ಅವರೆಕಾಳುಗಳು ಹಾಗೂ ಸೊಪ್ಪುಗಳಿಂದ ತಯಾರಿಸಿದ ಪಲ್ಯಗಳು, ಬೇಳೆಯ ಹೋಳಿಗೆ, ಕೆಂಪು ಚಟ್ನಿ, ಜುನಕದವಡೆ, ಮಾದೇಲಿ, ಮೊಸರನ್ನ, ಖರಜಿಕಾಯಿ... ಹೀಗೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಸವಿಯುವುದಕ್ಕೆ ‘ಹಬ್ಬವೇ’ ಸರಿ. ನೆರೆಹೊರೆಯ ಮನೆಗಳಿಗೂ ಈ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.

ಮಲಪ್ರಭಾ, ಘಟಪ್ರಭಾ, ಕೃಷ್ಣಾ, ಹಿರಣ್ಯಕೇಶಿ, ಮಾರ್ಕಂಡೇಯ... ಹೀಗೆ ನದಿ ತೀರದಲ್ಲಿರುವ ದೇವಸ್ಥಾನಗಳಿಗೆ ಜನರು ಅಂದು ಭೇಟಿ ಕೊಡುತ್ತಾರೆ. ಸಾವಿರಾರು ಜನರು ಬರುವುದರಿಂದ ಸ್ಥಳಗಳಲ್ಲಿ ವ್ಯಾಪಾರಿಗಳು ತಾತ್ಕಾಲಿಕ ಅಂಗಡಿಗಳನ್ನು ಹಾಕುವುದರಿಂದ ಜಾತ್ರೆ ವಾತಾವರಣ ನಿರ್ಮಾಣವಾಗುತ್ತದೆ. ಸುಗ್ಗಿಯ ಸಮಯವಾದ್ದರಿಂದ ರೈತರಿಗೆ ಎಲ್ಲಿಲ್ಲದ ಸಂತೋಷ. ಬೆಳೆಗಳಿಗೆ ಪೂಜೆ ಸಲ್ಲಿಸಿ, ಭೂಮಿ ತಾಯಿಗೂ ನಮಿಸುತ್ತಾರೆ. ತಮ್ಮ ಮಿತ್ರ ದನ, ಕರು, ಎಮ್ಮೆಗಳಿಗೂ ಪೂಜೆ ಸಲ್ಲಿಸುತ್ತಾರೆ.

ವಿವಿಧೆಡೆ ಹೋಗುತ್ತಾರೆ:ಬೆಳಗಾವಿ ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿ, ರಕ್ಕಸಕೊಪ್ಪ ಜಲಾಶಯ, ಬೈಲಹೊಂಗಲ ತಾಲ್ಲೂಕಿನ ಸಿದ್ದನಕೊಳ್ಳ, ಖಾನಾಪುರ ತಾಲ್ಲೂಕಿನ ಹಬ್ಬಾನಟ್ಟಿ, ಅಸೋಗ, ಸವದತ್ತಿಯ ನವಿಲುತೀರ್ಥ ಜಲಾಶಯದ ಪ್ರದೇಶ, ಸೊಗಲ, ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಉದ್ಯಾನ ಹೀಗೆ... ವಿವಿಧೆಡೆ ನೂರಾರು ಮಂದಿ ಕುಟುಂಬ ಸಮೇತ ಬರುತ್ತಾರೆ. ಮಹಿಳೆಯರು ಗಂಗೆಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸುತ್ತಾರೆ. ಮನೆಯಿಂದ ತಂದಿದ್ದ ಬುತ್ತಿಯಲ್ಲಿನ ಆಹಾರ ಪದಾರ್ಥಗಳನ್ನು ಉದ್ಯಾನ ಅಥವಾ ಮರದ ನೆರಳಲ್ಲಿ ಕುಳಿತು ಒಟ್ಟಾಗಿ ಸವಿದು ಖುಷಿ ಪಡುತ್ತಾರೆ. ಬೆಳಗಾವಿಯ ಕ್ಯಾಂಪ್‌ ಪ್ರದೇಶದಲ್ಲಿರುವ ಮಿಲಿಟರಿ ಮಹಾದೇವ ದೇಗುಲದ ಉದ್ಯಾನದಲ್ಲೂ ಜನರು ದೇಸಿ ಶೈಲಿಯ ಊಟ ಸವಿಯುತ್ತಾರೆ. ಕೆಲವರು ಪಕ್ಕದ ಜಿಲ್ಲೆಗಳಿಗೆ ಪಿಕ್‌ನಿಕ್‌ಗೂ ಹೋಗುತ್ತಾರೆ.

ಮೂಡಲಗಿ ತಾಲ್ಲೂಕಿನ ಭೈರನಟ್ಟಿಯ ಪುಣ್ಯಕ್ಷೇತ್ರ ರಾಮತೀರ್ಥದಲ್ಲಿ ಸಂಕ್ರಮಣದ ಹಬ್ಬದ ಅಂಗವಾಗಿ ಜನರು ಪುಣ್ಯ ಸ್ನಾನ ಮಾಡುತ್ತಾರೆ. ಚಾಲುಕ್ಯರ ಶಿಲ್ಪ ಮಾದರಿಯಲ್ಲಿರುವ ರಾಮಲಿಂಗೇಶ್ವರ ಗುಡಿಯು ಸುಂದರ ಕೆತ್ತನೆಯಿಂದ ಪುರಾತನ ಐತಿಹ್ಯ ಬಿಂಬಿಸುತ್ತಿದೆ. ಮೂರೇ ದೊಡ್ಡ ಕಲ್ಲುಗಳಿಂದ ದೇವಾಲಯಗಳನ್ನು ನಿರ್ಮಿಸಿರುವುದು ವಿಶೇಷ. ‘10 ಅಡಿ ಉದ್ದಗಲದ ಮತ್ತು ಕೇವಲ 6 ಅಡಿ ಆಳ ಇರುವ ಹೊಂಡದಲ್ಲಿ ವರ್ಷದ 12 ತಿಂಗಳುಗಳೂ ಚೆನ್ನಾಗಿರುವ ನೀರು ಇರುತ್ತದೆ. ಬತ್ತದ ಹೊಂಡವೆಂದೇ ಪ್ರಸಿದ್ಧಿ ಗಳಿಸಿದೆ. ಈ ತೀರ್ಥದ ನೀರನ್ನು ಮೈಮೇಲೆ ಹಾಕಿಕೊಂಡರೆ, ಮಿಂದರೆ ಚರ್ಮ ವ್ಯಾದಿಗಳು ವಾಸಿಯಾಗುತ್ತವೆ’ ಎನ್ನುವ ನಂಬಿಕೆ ಭಕ್ತರಲ್ಲಿದೆ.

ಎಂ.ಕೆ. ಹುಬ್ಬಳ್ಳಿ ಬಳಿ ಮಲಪ್ರಭಾ ತೀರದಲ್ಲಿರುವ ಶರಣೆ ಗಂಗಾಂಬಿಕೆ ಐಕ್ಯಸ್ಥಳಕ್ಕೆ ಸಂಕ್ರಾಂತಿಯಂದು ಸಾವಿರಾರು ಮಂದಿ ಬರುತ್ತಾರೆ. ಮಲಪ್ರಭಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಗಂಗಾಂಬಿಕೆಯ ದರ್ಶನ ಪಡೆಯುತ್ತಾರೆ.

ಕೆಲವು ಕಾಲೇಜುಗಳಲ್ಲೂ ಸಂಕ್ರಾಂತಿ ಸಹ ಭೋಜನ ಕಾರ್ಯಕ್ರಮಗಳು, ಸವದತ್ತಿ ತಾಲ್ಲೂಕು ಮುನವಳ್ಳಿಯ ಮಲಪ್ರಭಾ ನದಿಯಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ತೆಪ್ಪೋತ್ಸವ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT