ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾದಿ ಮುಹಮ್ಮದರ ಜೀವನ ದರ್ಶನ

ಈದ್ ಮಿಲಾದ್ ನಿಮಿತ್ತ ವಿಶೇಷ ಬರಹ
Last Updated 10 ನವೆಂಬರ್ 2019, 4:32 IST
ಅಕ್ಷರ ಗಾತ್ರ

ಮುಸ್ಲಿಮರ ನಂಬಿಕೆಯ ಪ್ರಕಾರ, ಈ ಜಗತ್ತಿನಲ್ಲಿ 1.24 ಲಕ್ಷಕ್ಕೂ ಹೆಚ್ಚು ಪ್ರವಾದಿಗಳು, ವಿವಿಧ ಕಾಲಮಾನ ಮತ್ತು ವಿವಿಧ ದೇಶಗಳಲ್ಲಿ ಆಗಿಹೋಗಿದ್ದಾರೆ. ‘ಮಾನವ ಕುಲದ ಮೊದಲ ಮನುಷ್ಯ ಮತ್ತು ಪ್ರವಾದಿ ಆದಂ (ಅ) ಆಗಿದ್ದರೆ, ಅಂತ್ಯಪ್ರವಾದಿ ಮುಹಮ್ಮದ್‌ (ಸ)’ ಎನ್ನುತ್ತದೆ ಮುಸ್ಲಿಮರ ಪವಿತ್ರ ಗ್ರಂಥ ಖುರ್‌ಆನ್‌. ‘ಪೈಗಂಬರೇ, ನಾನು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇನೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ’ (ಸಬಾ: 28 ಸೂಕ್ತ) ಎನ್ನುತ್ತದೆ ಖುರ್‌ಆನ್. ಭೂಮಿಯಲ್ಲಿ ಕೆಡುಕು ಮತ್ತು ದೌರ್ಜನ್ಯಗಳು ವಿಜೃಂಭಿಸಿದಾಗಲೆಲ್ಲಾ ದೇವನು ಮನುಷ್ಯರಲ್ಲೇ ಉತ್ತಮರನ್ನು ಪ್ರವಾದಿಗಳನ್ನಾಗಿ ಜನರ ರಕ್ಷಣೆಗಾಗಿ ನೇಮಿಸಿದ್ದಾನೆ. ಇಬ್ರಾಹಿಂ (ಅಬ್ರಹಾಂ), ಮೂಸಾ (ಮೋಸೆಸ್‌), ಈಸಾ (ಯೇಸು), ದಾವೂದ್‌ (ಡೇವಿಡ್‌), ನೂಹ್‌ (ನೋವಾ) ಎಲ್ಲರೂ ಪ್ರವಾದಿಗಳೆಂದು ಲೋಕದಾದ್ಯಂತ ಮುಸ್ಲಿಮರು ನಂಬುತ್ತಾರೆ.

ಪ್ರವಾದಿ ಮುಹಮ್ಮದರು ಕ್ರಿ.ಶ. 571 ಎಪ್ರಿಲ್ 22ರಂದು ಮಕ್ಕಾದಲ್ಲಿ ಜನಿಸಿದರು. ಎಳವೆಯಲ್ಲೇ ತಂದೆ–ತಾಯಿಯನ್ನು ಕಳೆದುಕೊಂಡು, ಎಂಟು ವರ್ಷ ವಯಸ್ಸಿನವರೆಗೆ ತಾತ ಅಬ್ದುಲ್ ಮುತಾಲಿಬ್‌ರ ಪೋಷಣೆಯಲ್ಲಿ ಬೆಳೆದರು. ನಂತರ ಚಿಕ್ಕಪ್ಪ ಅಬೂತಾಲಿಬ್ ಬಹಳ ಪ್ರೀತಿ-ವಾತ್ಸಲ್ಯದಿಂದ ಅವರನ್ನು ಸಾಕಿದರು. ಚಿಕ್ಕ ಪ್ರಾಯದಲ್ಲೇ ವ್ಯಾಪಾರದಲ್ಲಿ ಆಸಕ್ತಿ ಹೊಂದಿ ಸಿರಿಯಾಗೆ ಚಿಕ್ಕಪ್ಪನೊಂದಿಗೆ ಪ್ರಯಾಣಿಸಿದ್ದರು. ವ್ಯಾಪಾರದಲ್ಲಿ ಅತ್ಯಂತ ಪ್ರಾಮಾಣಿಕತೆಯನ್ನು ಮೆರೆದು ಮಕ್ಕಾದ ಎಲ್ಲ ಗೋತ್ರಗಳ ಜನರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬಾಲ್ಯದಿಂದಲೇ ಇವರ ಸತ್ಯಸಂಧತೆ, ವಿನಯಶೀಲತೆ ಜನರ ಗಮನ ಸೆಳೆದಿತ್ತು.

ಯೌವನಕ್ಕೆ ಬಂದಾಗ ಮಕ್ಕಾದ ಸಿರಿವಂತ ವಿಧವೆ ಖತೀಜಾ(ರ) ಅವರ ಕಡೆಯಿಂದ ವಿವಾಹ ಪ್ರಸ್ತಾಪ ಬಂತು. ಹಿರಿಯರ ಮಾತುಕತೆಯಂತೆ 40 ವರ್ಷ ವಯಸ್ಸಿನ ಖದೀಜಾರನ್ನು 25ರ ಹರೆಯದ ಮುಹಮ್ಮದರು ವಿವಾಹವಾಗುತ್ತಾರೆ. ಖದೀಜಾ ಅವರು ಬದುಕಿರುವವರೆಗೂ ಆ ದಾಂಪತ್ಯಜೀವನ ಸುಖಮಯವಾಗಿತ್ತು. ಅಂದು ಅರಬ್‌ನ ವಾತಾವರಣವು ಸಾಮಾಜಿಕವಾಗಿ ಕಲುಷಿತವಾಗಿತ್ತು. ಮದ್ಯಪಾನ, ಅಶ್ಲೀಲ ನೃತ್ಯ, ಜೂಜು ಯುವಕರ ಮನಸ್ಸನ್ನು ರಂಜಿಸುತ್ತಿದ್ದವು. ಬಲಶಾಲಿಯಾದವನು ದುರ್ಬಲನನ್ನು ದೋಚುವುದು ಸಕ್ರಮವೆಂಬಂತೆ ನಡೆದಿತ್ತು. ಸ್ತ್ರೀಯರನ್ನು ಜಾನುವಾರುಗಳಂತೆ ಮಾರುವುದು, ಕೆಲವು ಗೋತ್ರಗಳಲ್ಲಿ ಹೆಣ್ಣುಮಗುವನ್ನು ಜೀವಂತ ಹೂಳುವುದು ಸಾಮಾನ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಉತ್ತಮ ಚಾರಿತ್ರ್ಯ, ಗುಣನಡತೆ, ಸತ್ಯ ಮತ್ತು ನ್ಯಾಯಪಾಲನೆಯ ಮನೋಭಾವದಿಂದ ಮುಹಮ್ಮದ್ ಗೌರವಾರ್ಹರಾಗಿದ್ದರು. ಸಮಯ ಸಿಕ್ಕಿದಾಗ ಮಕ್ಕಾ ಹೊರವಲಯದ ಹಿರಾ ಎಂಬ ಗುಹೆಯಲ್ಲಿ ಧ್ಯಾನಮಗ್ನರಾಗುತ್ತಿದ್ದರು.

ದೇವದೂತ ಜಿಬ್ರೀಲರ ಮೂಲಕ ಅವತೀರ್ಣಗೊಂಡ ಖುರ್‌ಆನ್‌, ಮಾನವನ ಸಮಗ್ರ ಆಧ್ಯಾತ್ಮಿಕ ಮತ್ತು ಲೌಕಿಕ ಉನ್ನತಿಯ ಕುರಿತು ಮಾತನಾಡುತ್ತದೆ. ಮುಹಮ್ಮದರು ಅನಕ್ಷರಸ್ಥರು. ಆದರೆ ಖುರ್‌ಆನ್‌ ಮೂಲಕ ಅವರು ಮುಸ್ಲಿಮರಿಗೆ ನೀಡಿರುವ ಸಮಗ್ರ ಜೀವನಪದ್ಧತಿಯ ಪಾಠ ಒಂದು ಅದ್ಭುತವೇ ಸರಿ.ಚಾರಿತ್ರ್ಯಹೀನರಾಗಿದ್ದ ಅರಬರ ನೈತಿಕ ಮೌಲ್ಯಗಳ ಸಂರಕ್ಷಕರಾದ ಮುಹಮ್ಮದರು, ಇಡೀ ಮನುಕುಲವೇ ಒಂದು ಎಂದು ಸಾರಿದರು. ಧರ್ಮ, ಮೈಬಣ್ಣ, ಪ್ರಾದೇಶಿಕತೆಯ ಹಿನ್ನೆಲೆಯಲ್ಲಿ ಪರಸ್ಪರ ಮನುಷ್ಯರ ನಡುವೆ ಮೇಲು ಕೀಳು ಇಲ್ಲ ಎಂದು ಸಾರಿದರು. ಗುಲಾಮ ಪದ್ಧತಿಯನ್ನು ತೊಲಗಿಸಲು ಯತ್ನಿಸಿದರು. ‘ನೆರೆಮನೆಯಲ್ಲಿ ಹಸಿದವರಿದ್ದರೆ ಹೊಟ್ಟೆ ತುಂಬಾ ತಿಂದು, ಉಣ್ಣುವವನು ನನ್ನವನಲ್ಲ’ ಎನ್ನುವುದು ಅವರ ಪ್ರಸಿದ್ಧ ಸೂಕ್ತಿ. ಸರ್ವಶಕ್ತ, ನಿರಾಕಾರ, ಸ್ವಯಂಸಂಪೂರ್ಣನೂ ಆಗಿರುವ ಏಕದೇವನನ್ನು ಆರಾಧಿಸಿ ಎನ್ನುವುದು ಅವರ ಧರ್ಮಪ್ರಚಾರದ ತಿರುಳು.

ತಿನ್ನುವುದು, ನಿದ್ರಿಸುವುದು, ಸಂತಾನೋತ್ಪತ್ತಿ ಮತ್ತು ಲೌಕಿಕ ಜೀವನದ ಏರಿಕೆಯಷ್ಟೇ ಬದುಕಿನ ಗುರಿಯಲ್ಲ; ಕೆಡುಕನ್ನು ತಡೆಯುವ, ಅನ್ಯಾಯದ ವಿರುದ್ಧ ಹೋರಾಡುವ, ಮಾನವೀಯತೆಯೊಂದಿಗೆ ಜನಸೇವೆ ಮಾಡುವುದು ಬದುಕಿನ ಉದ್ದೇಶ ಆಗಿರಬೇಕೆಂದು ಸಾರಿದರು ಪ್ರವಾದಿ. ಸಂಪತ್ತಿನ ಕ್ರೋಢೀಕರಣ ಸಲ್ಲದು, ಅದು ಸಮಾಜದ ಬಡವರಿಗೂ ತಲುಪಬೇಕು ಎನ್ನುವುದಕ್ಕಾಗಿ ಸಂಪತ್ತಿನ ಕಡ್ಡಾಯ ದಾನ (ಝಕಾತ್‌) ವ್ಯವಸ್ಥೆ ಜಾರಿಗೆ ತಂದರು. ಬಡ್ಡಿಯನ್ನು ನಿಷೇಧಿಸಿದರು. ‘ಕಾರ್ಮಿಕನ ಬೆವರು ಭೂಮಿಗೆ ಬೀಳುವ ಮುನ್ನ ಅವನ ಕೂಲಿಯನ್ನು ಕೊಡಿರಿ’ ಎಂದು ಆದೇಶಿಸಿದರು.‘ಮೂವರು ಹೆಣ್ಣುಮಕ್ಕಳನ್ನು ಹೆತ್ತು, ಉತ್ತಮ ಶಿಕ್ಷಣ ನೀಡಿ, ಯೋಗ್ಯ ವರನಿಗೆ ವಿವಾಹ ಮಾಡಿಕೊಡುವ ಹೆತ್ತವರಿಗೆ ಸ್ವರ್ಗದ ಭರವಸೆ’ ನೀಡಿದರು. ಆಸ್ತಿಯಲ್ಲಿ ಮಹಿಳೆಗೆ ಹಕ್ಕು ನೀಡಿ, ವಿಧವಾ ವಿವಾಹವನ್ನು ಪ್ರೋತ್ಸಾಹಿಸಿದರು.

ಪ್ರವಾದಿತ್ವ ಲಭಿಸಿದ ಬಳಿಕ 23 ವರ್ಷಗಳಲ್ಲಿ ಇಸ್ಲಾಂ ಎಂಬ ಜೀವನಪದ್ಧತಿಯನ್ನು 12 ಲಕ್ಷ ಚದರ ಮೈಲಿ ವಿಸ್ತೀರ್ಣದ ಭೂಪ್ರದೇಶದಲ್ಲಿ ಪಸರಿಸಿದ ಯಶಸ್ವಿ ನಾಯಕ ಮುಹಮ್ಮದರು. ಇವತ್ತು ಜಗತ್ತಿನಾದ್ಯಂತ ಅವರ ಅನುಯಾಯಿಗಳಿದ್ದಾರೆ. ದೊಡ್ಡ ಸಾಮ್ರಾಜ್ಯದ ಅಧಿಪತಿಯಾಗಿದ್ದರೂ ಅವರು ಬಡವರಾಗಿ ಬದುಕಿದರು. ಚಾಪೆಯ ಮೇಲೆ ಮಲಗುತ್ತಿದ್ದರು, ತಮ್ಮ ಚಪ್ಪಲಿ ತಾವೇ ಹೊಲಿದುಕೊಳ್ಳುತ್ತಿದ್ದರು. ದನದ ಹಾಲು ಕರೆಯುತ್ತಿದ್ದರು, ಮನೆಯನ್ನು ಗುಡಿಸಿ ಶುಚಿ ಮಾಡುತ್ತಿದ್ದರು. ಪತ್ನಿಗೆ ಅಡುಗೆಯಲ್ಲಿ ನೆರವಾಗುತ್ತಿದ್ದರು. ಇಂದು ಮುಸ್ಲಿಂ ದೊರೆಗಳ, ಜನಪ್ರತಿನಿಧಿಗಳ ಐಶಾರಾಮದ ಜೀವನವನ್ನು ನಾವು ಕಾಣುತ್ತಿದ್ದೇವೆ. ಇದು ಪ್ರವಾದಿಯವರ ಸರಳ ಜೀವನಕ್ಕೆ ತದ್ವಿರುದ್ಧ ಸಂಗತಿಯಾಗಿದೆ.

ಪ್ರವಾದಿಯವರ ಹುಟ್ಟು ಮತ್ತು ಮರಣದ ದಿನ ಎರಡೂ ಇಸ್ಲಾಮಿಕ್‌ ಕ್ಯಾಲೆಂಡರಿನ ಪ್ರಕಾರ ಒಂದೇ ತಾರೀಕಿನಂದು (ರಬೀವುಲ್‌ ಅವ್ವಲ್‌ 12) ಬರುತ್ತದೆ. ಮನುಕುಲದ ಪ್ರವಾದಿಯೂ ಲೋಕನಾಯಕರೂ ಆದ ಅವರ ಆದರ್ಶ, ಸರಳತೆ, ದೇವವಿಶ್ವಾಸದ ಮಾದರಿಯನ್ನು ಅನುಸರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜಗೌರವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT