ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಪೂಜೆ | ದಶಾವತಾರಿಗೆ ದಶಾಲಂಕಾರ

Last Updated 30 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ದೇವರು ಯಾವ ರೂಪದಲ್ಲಿ, ಹೆಸರಿನಲ್ಲಿದ್ದೇನು? ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ಆರಾಧಿಸುತ್ತೇವಲ್ಲಾ. ಹಾಗೆಯೇ ಇಲ್ಲೊಂದು ಆರಾಧನೆ ಇದೆ. ಇಲ್ಲಿ ದಸರಾ ಹಬ್ಬದಲ್ಲಿ ಹತ್ತು ದಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇವರಿಗೆ ಹತ್ತು ಬಗೆಯ ಅಲಂಕಾರ ಮಾಡಿ ಭಕ್ತಿ ಅರ್ಪಿಸುತ್ತಾರೆ ಭಕ್ತರು.

ಇಂದಿರಾನಗರದಲ್ಲಿರುವ ಲಕ್ಷ್ಮೀ ನರಸಿಂಹ ದೇಗುಲದಲ್ಲಿ ನವರಾತ್ರಿಯಲ್ಲಿ ಮೂಲ ವಿಗ್ರಹಕ್ಕೆ ನಿತ್ಯವೂ ವಿಷ್ಣುವಿನ ಒಂದೊಂದು ಅವತಾರದ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ನರಸಿಂಹಸ್ವಾಮಿ ಜೊತೆಗಿರುವ ಲಕ್ಷ್ಮಿ ದೇವಿಗೂ ವಿಶೇಷ ಪೂಜೆ. ಅವಳೂ ಹತ್ತು ದಿನಗಳ ಕಾಲ ಹತ್ತು ಬಗೆಯಲ್ಲಿ ಅಲಂಕರಿಸಿಕೊಂಡು ಅವತರಿಸುತ್ತಾಳೆ.

ದುರ್ಗೆಯ ಬದಲು ನರಸಿಂಹನಿಗೆ ಅಲಂಕಾರವೇ ಎಂದು ಕೇಳಬಹುದು. ಹಾಗೇನಿಲ್ಲ, ಪುರಾಣದಲ್ಲಿ ಹುಡುಕಿದರೆ ಬ್ರಹ್ಮ, ವಿಷ್ಣು, ಈಶ್ವರ ಈ ಮೂವರೂ ಆದಿ ಮಾಯೆಯ ಸೃಷ್ಟಿಗಳೇ ಅಲ್ಲವೇ? ಹಾಗಿರುವಾಗ ತಾಯಿಯ ಆರಾಧನೆ ದೊಡ್ಡ ಮಟ್ಟದಲ್ಲೇ ನಡೆಯುತ್ತದೆ. ಅದೇ ಹೊತ್ತಿನಲ್ಲಿ ಆಕೆಯ ಸೃಷ್ಟಿಯಾದ ವಿಷ್ಣುವಿಗೂ ಒಂದು ಭಕ್ತಿ ಸಮರ್ಪಣೆ ನಡೆಯುತ್ತದೆ‘ ಎಂಬುದು ಭಕ್ತರ ಸಮಜಾಯಿಷಿ.

‘ದುರ್ಗೆ ಅವತರಿಸಿದ್ದೂ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ. ವಿಷ್ಣುವಿನ ಹತ್ತು ಅವತಾರಗಳು ದುಷ್ಟ ನಿಗ್ರಹ ಮತ್ತು ಸೃಷ್ಟಿಯ ಪಾಲನೆಯೇ ಆಗಿತ್ತು. ಹಾಗಿರುವಾಗ ಅವನ 10 ಅವತಾರಗಳನ್ನು ಅಲಂಕಾರದ ಮೂಲಕ ಕಣ್ತುಂಬಿಕೊಳ್ಳಲು ಖುಷಿ ಎನಿಸುತ್ತದೆ’ ಎಂದು ನುಡಿಯುತ್ತಾರೆ ಈ ಪರಿಕಲ್ಪನೆಯ ರೂವಾರಿ ಆಯುರ್ವೇದ ವೈದ್ಯೆ ಡಾ.ಸುಮಾ.

ಸುಮಾ ಮತ್ತು ಅವರ ತಂಡ ಪ್ರತಿದಿನ ಈ ಅಲಂಕಾರದಲ್ಲಿ ತೊಡಗುತ್ತದೆ. ಪ್ರತಿ ರಾತ್ರಿ 9 ಗಂಟೆಯಿಂದ ಅಲಂಕಾರ ನಡೆಯುತ್ತದೆ. ಮರುದಿನ ಬೆಳಿಗ್ಗೆ 7ರಿಂದ ಭಕ್ತರು ದರ್ಶನ ಪಡೆಯುತ್ತಾರೆ.

‘ಅರಿಶಿನ, ಲೋಹ, ಚಂದನ, ಹೂವು, ಒಣ ಹಣ್ಣು, ವಿಶೇಷ ಮಣಿಗಳು, ಶ್ರೀಗಂಧ, ಕುಂಕುಮ, ತುಳಸಿ ಹಾಗೂ ಅಗತ್ಯವೆನಿಸಿದ ಅಲಂಕಾರಿಕ ಪರಿಕರಗಳನ್ನು ಬಳಸುತ್ತೇವೆ. ಮೂಲ ವಿಗ್ರಹ ಲಕ್ಷ್ಮೀ ನರಸಿಂಹ ಸ್ವಾಮಿಯದ್ದು. ಅದರ ಸೌಂದರ್ಯ ಹಾಗೂ ದೈವೀಕತೆಗೆ ಅಡ್ಡಿಯಾಗದಂತೆ ಅಲಂಕಾರ ಮಾಡಲಾಗುತ್ತದೆ. ಈ ಅವಧಿಯಲ್ಲಿ ಶುದ್ಧತೆ, ಪಾವಿತತ್ರ್ಯತೆಗೂ ತುಂಬಾ ಮಹತ್ವ ಇದೆ’ ಎಂದರು ಸುಮಾ.

ನವರಾತ್ರಿಯ ಮೊದಲನೇ ದಿನ ಮತ್ಸ್ಯಾವತಾರ, ಎರಡನೇ ದಿನ ಕೂರ್ಮಾವತಾರ, ಮೂರನೇ ದಿನ ವರಾಹ, ನಾಲ್ಕನೇ ದಿನ ನರಸಿಂಹನ ವಿಶೇಷ ಅಲಂಕಾರವನ್ನು ಮಾಡಿದ್ದಾರೆ. ಐದನೇ ದಿನ ವಾಮನ, ನಂತರ ಪರಶುರಾಮ, ರಾಮ, ಬಲರಾಮ, ಕೃಷ್ಣ ಹಾಗೂ ಕಲ್ಕಿಯ ಅವತಾರ ಮಾಡಲು ಅಣಿಯಾಗಿದ್ದಾರೆ.

‘ಎರಡು ದಶಕಗಳಿಂದ ಇಸ್ಕಾನ್‌ನೊಂದಿಗೆ ಒಡನಾಟ ಹೊಂದಿರುವ ಸುಮಾ ಅಲ್ಲಿ ಸ್ವಯಂಸೇವಕರಾಗಿದ್ದಾರೆ. ವಿಜಯ ದಶಮಿ ಎಂದರೆ ರಾಮನ ಗೆಲುವನ್ನೂ ಪ್ರತಿನಿಧಿಸುವುದರಿಂದ ಈ ಅಲಂಕಾರ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ದೇಗುಲಗಳಲ್ಲಿ ವಿಷ್ಣುವಿನ ದಶಾವತಾರವನ್ನು ಪ್ರತಿನಿಧಿಸಿ ಪೂಜೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಅವರು.

ದೇವರ ಮೂರ್ತಿ, ಅಲಂಕಾರಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸುಮಾ ಅವರು ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ, ರಾಧೆಯರ ಮಣ್ಣಿನ ಮೂರ್ತಿ ಸಿದ್ಧಪಡಿಸಿ ಪುಣೆ ಹಾಗೂ ವಿಜಯವಾಡದ ದೇಗುಲಗಳಿಗೆ ನೀಡಿದ್ದರು.

ನವರಾತ್ರಿಯ ಎಲ್ಲ ದಿನ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಭಕ್ತರಿಗೆ ವಿಷ್ಣುವಿನ ಅವತಾರ ದರ್ಶನಕ್ಕೆ ಅವಕಾಶ ಇರಲಿದೆ.ನರಸಿಂಹನ ಇತರ ಅಲಂಕಾರಗಳನ್ನೂ ನೋಡಬೇಕೇ? ಇಂದಿರಾನಗರದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಹೋಗಿಬನ್ನಿ.

ಎಲ್ಲಿದೆ ದೇವಾಲಯ: ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿನ ಮೂರನೇ ಕ್ರಾಸ್‌ನಲ್ಲಿರುವ ಇಎಸ್‌ಐ ಆಸ್ಪತ್ರೆ ಸಮೀಪದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT