ಬೆಳಕಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಬಹುಶಃ ಮನುಷ್ಯನು ಅನುಭವಿಸಿದ ಮೊದಲ ಭಯ ಎಂದರೆ ಕತ್ತಲು ಎನಿಸುತ್ತದೆ. ಹೀಗೆಯೇ ಅವನಿಗೆ ದಕ್ಕಿದ ಮೊದಲ ಭರವಸೆ ಎಂದರೆ ಅದು ಬೆಳಕೇ ಇರಬೇಕು.

ಬೆಳಕನ್ನು ಸ್ವಾಗತಿಸುವ ಹಬ್ಬವೇ ದೀಪಾವಳಿ. ದೀಪಾವಳಿ ಎಂದರೆ ದೀಪಗಳ ಸಾಲು. ದೀಪಗಳೊಂದಿಗೆ ನಲಿಯುವ ಹಬ್ಬವೇ ದೀಪಾವಳಿ. ದೀಪ ಎಂದರೆ ಬೆಳಕು. ಬೆಳಕು ಇಲ್ಲ ಎಂದರೆ ಕತ್ತಲು. ಕತ್ತಲಿನಲ್ಲಿ ಜೀವನಯಾನ ಸುಲಭವಲ್ಲ. ಕತ್ತಲು ಎಂದರೆ ಅವಿದ್ಯೆ; ಬೆಳಕು ಎಂದರೆ ಜ್ಞಾನ. ಹೀಗಾಗಿ ನಮ್ಮ ಜೀವನಕ್ಕೆ ಬೇಕಾದ ಬೆಳಕಿನ, ಎಂದರೆ ಅರಿವಿನ ಮಹತ್ವವನ್ನು ತಿಳಿದು, ಅದನ್ನು ಸಂಭ್ರಮದಿಂದ ಆರಾಧಿಸುವ ಹಬ್ಬವೇ ದೀಪಾವಳಿ.

ಸೃಷ್ಟಿಯಲ್ಲಿ ನಿರಂತರವಾಗಿ ಕತ್ತಲು–ಬೆಳಕುಗಳ ಆಟ ನಡೆಯುತ್ತಲೇ ಇರುತ್ತದೆ. ‘ಕತ್ತಲು’ ಎಂಬುದು ಕೆಡಕು, ಭಯ ಮುಂತಾದ ಅನಿಷ್ಟಗಳನ್ನು ಸಂಕೇತಿಸಿದರೆ ‘ಬೆಳಕು’ ಎಂಬುದು ಒಳಿತು, ಅಭಯ ಮುಂತಾದ ಭರವಸೆ, ನೆಮ್ಮದಿ, ಧೈರ್ಯಗಳನ್ನು ಎತ್ತಿಹಿಡಿಯುತ್ತದೆ. ಅಷ್ಟೇಕೆ, ಸೃಷ್ಟಿಗೂ ಕತ್ತಲಿಗೂ ಬೆಳಕಿಗೂ ಸಂಬಂಧ ಇದೆ. ಹೀಗಾಗಿ ಎಲ್ಲ ಪ್ರಾಚೀನ ಸಂಸ್ಕೃತಿಗಳೂ ಬೆಳಕು–ಕತ್ತಲೆಯ ಸುತ್ತಾಟಕ್ಕೆ ತುಂಬ ಮಹತ್ವವನ್ನು ಕೊಟ್ಟಿವೆ. ನಮ್ಮ ಸಂಸ್ಕೃತಿಯಲ್ಲಂತೂ ಬೆಳಕು ಎಂಬ ತತ್ತ್ವಕ್ಕೆ ತುಂಬ ಮನ್ನಣೆಯಿದೆ. ಬೆಳಕಿನ ಎಲ್ಲ ವಿಧದ ಆರಾಧನೆಗಳೂ ದೀಪಾವಳಿಯ ಹಬ್ಬದಲ್ಲಿ ಹರಳುಗಟ್ಟಿವೆ.

ದೀಪಾವಳಿಗೆ ಸಂಬಂಧಿಸಿದ ಶ್ಲೋಕವೊಂದರ ತಾತ್ಪರ್ಯ ಹೀಗಿದೆ: ‘ಮೇಘನಾದ ಎಂದರೆ ಇಂದ್ರಜಿತ್, ಹೇಗೆ ರಾಮನೊಂದಿಗಿನ ಯುದ್ಧದಲ್ಲಿ ಶಾಂತನಾದನೋ, ಎಂದರೆ ಸೋಲನ್ನು ಅನುಭವಿಸಿ, ಮರಣವನ್ನು ಹೊಂದಿದನೋ ಹಾಗೆಯೇ ಮೇಘನಾದ, ಎಂದರೆ ಮೋಡದ ಸದ್ದು, ಗುಡುಗು ಕೂಡ ಈ ಕಾಲದಲ್ಲಿ, ಎಂದರೆ ದೀಪಾವಳಿಯ ಸಂದರ್ಭದಲ್ಲಿ ಶಾಂತವಾಗಿರುತ್ತದೆ.’ ಆ ಶ್ಲೋಕಕ್ಕೆ ಇನ್ನೂ ಒಂದು ರೀತಿಯಲ್ಲಿ ಅರ್ಥ ಮಾಡಬಹುದು: ‘ರಾಮಾಯಣದಲ್ಲಿ ದಶಾನನ, ಎಂದರೆ ಹತ್ತು ತಲೆಗಳ ರಾವಣನು ಸುಡಲ್ಪಟ್ಟಂತೆ ಈ ಹಬ್ಬದಲ್ಲಿ ದಶೆಗಳ, ಎಂದರೆ ಬತ್ತಿಗಳ ಮುಖವು ಉರಿಸಲ್ಪಡುತ್ತದೆ. ಅಂದು ರಾಮನು ಸಂತೋಷ ಪಟ್ಟಂತೆ, ಇಂದು ರಾಮನೂ ರಮಣಿಯರೂ ಸಂಭ್ರಮಿಸುತ್ತಾರೆ. ಹೀಗೆ ರಾಮಾಯಣದಂತೆ ರಮಣೀಯವಾಗಿರುವ ದೀಪಾವಳಿಯು ಎಲ್ಲರ ಪಾಪಗಳನ್ನೂ ಹೋಗಲಾಡಿಸಲಿ.’

ದೀಪಾವಳಿಯನ್ನು ದೇಶದ ಉದ್ದಗಲಕ್ಕೂ ಆಚರಿಸಲಾಗುತ್ತದೆ. ಆಚರಣೆಯ ವಿವರಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿದ್ದರೂ, ಆಶಯ ಮಾತ್ರ ಒಂದೇ ಆಗಿರುತ್ತದೆ: ಬೆಳಕಿನ ಆರಾಧನೆ. ಮೂರು ದಿನಗಳಲ್ಲಿ, ಕೆಲವರು ಐದು ದಿನಗಳಲ್ಲಿ, ಈ ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಪಿತೃಗಳ ಸ್ಮರಣೆಯೂ ಆಗುತ್ತದೆ; ಗೋವುಗಳ ಪೂಜೆಯೂ ನಡೆಯುತ್ತದೆ.

ನರಕಚತುರ್ದಶಿಯಂದು ವಿಶೇಷವಾದ ರೀತಿಯಲ್ಲಿ ಮೈ–ಮನಗಳನ್ನು ಕೊಳೆಯನ್ನು ತೊಳೆದುಕೊಂಡು ಬೆಳಕನ್ನು ಸ್ವಾಗತಿಸಲು ಸಿದ್ಧರಾಗುತ್ತೇವೆ. ನಮ್ಮ ಜೀವನದಲ್ಲಿ ಬಹಿರಂಗದ ಶುದ್ಧಿಯೂ ಮುಖ್ಯ, ಅಂತರಂಗದ ಶುದ್ಧಿಯೂ ಮುಖ್ಯ. ಇದನ್ನೇ ಸಂಕೇತಿಸುತ್ತಿದೆ ದೀಪಾವಳಿಯ ಅಭ್ಯಂಗಸ್ನಾನ.

ನರಕಾಸುರನ ಸೆರೆಯಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರನ್ನು ನರಕಚತುರ್ದಶಿಯಂದು ಶ್ರೀಕೃಷ್ಣನು ಬಿಡುಗಡೆಗೊಳಿಸಿ, ಅವರಿಗೆ ಹೊಸದಾದ ಜೀವನವನ್ನು ಕೊಟ್ಟ. ಈ ಸಂಭ್ರಮದ ಆಚರಣೆಯೂ ಇಂದಿನ ಹಬ್ಬದಲ್ಲಿ ಸೂಚಿತವಾಗಿದೆ. ಸ್ತ್ರೀ ಎಂದರೆ ನಮ್ಮ ಚೈತನ್ಯ, ಶಕ್ತಿ, ಬುದ್ಧಿ. ನಮ್ಮ ಜೀವನಕ್ಕೆ ತಾರಕವೂ ಪೋಷಕವೂ ಆದ ‘ಸ್ತ್ರೀ’ ನರಕದಲ್ಲಿ ಎಂದರೆ, ರಾಕ್ಷಸೀಪ್ರವೃತ್ತಿಗೆ ಬಲಿಯಾಗಿ ಬಂಧನದಲ್ಲಿದ್ದರೆ ನಮ್ಮ ಏಳಿಗೆ ಸಾಧ್ಯವಿಲ್ಲ. ಅವಳನ್ನು ನರಕದಿಂದ ಬಿಡುಗಡೆಗೊಳಿಸಬೇಕಾದುದು ನಮ್ಮ ಆದ್ಯಕರ್ತವ್ಯ. ಈ ಕಥೆಯ ಸಾಂಕೇತಿಕತೆ ಈ ಉದಾತ್ತ ತತ್ತ್ವವನ್ನು ಸೂಚಿಸುತ್ತಿದೆ.

ನಮ್ಮ ಜೀವನವು ಕತ್ತಲಿನ ಪಾಲಾಗಬಾರದು; ಅವಿದ್ಯೆ, ಅಹಂಕಾರ, ಬಂಧನ, ಭ್ರಷ್ಟಾಚಾರ, ಅನೀತಿಗಳಂಥ ಕತ್ತಲಿನ ಕಾರಣದಿಂದ ನಾವು ನರಕದ ಪಾಲಾಗಬಾರದು. ಇದೇ ನರಕಚತುರ್ದಶಿಯ ಆಚರಣೆಯ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.