ಬುಧವಾರ, ಅಕ್ಟೋಬರ್ 21, 2020
26 °C

ನವರಾತ್ರಿ: ಶಕ್ತಿಪೂಜೆಯ ಹಬ್ಬ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ನಮ್ಮ ಜೀವನಕ್ಕೆ ಮುಖ್ಯವಾಗಿ ಏನು ಬೇಕು? ಮೊದಲಿಗೆ ಪ್ರಾಣ ಇರಬೇಕು; ಆ ಪ್ರಾಣಕ್ಕೆ ತ್ರಾಣ ಒದಗಬೇಕು. ಪ್ರಾಣ–ತ್ರಾಣಗಳ ಸಂಯೋಗವನ್ನೇ ಬಲ ಎನ್ನಬಹುದು. ಇದು ದೇಹಕ್ಕೆ ಅಸ್ತಿತ್ವವನ್ನು ಒದಗಿಸುವ ಮೊದಲ ಹಂತ. ಈ ಬಲವೊಂದೇ ಇದ್ದರೆ ನಮ್ಮ ಜೀವನಕ್ಕೆ ಸಾಕಾಗದು; ಹಲವು ಬಲಗಳ ಬೆಂಬಲ ನಮಗೆ ಬೇಕಾಗುತ್ತದೆ; ದೈಹಿಕ ಮಾನಸಿಕ ಬೌದ್ಧಿಕ ಬಲಗಳಲ್ಲದೆ, ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಬಲಗಳೂ ಬೇಕಾಗುತ್ತವೆ. ಈ ಎಲ್ಲ ಬಗೆಯ ಬಲಗಳನ್ನೂ ಒಂದಾಗಿ ಸೇರಿಸಿ ‘ಶಕ್ತಿ’ ಎಂದು ಕರೆಯಬಹುದು. ಶಕ್ತಿಯ ವಿವಿಧ ಆಯಾಮಗಳ ಆರಾಧನೆಗೆ ಮೀಸಲಾಗಿರುವ ಹಬ್ಬವೇ ನವರಾತ್ರಿ. ಇದು ಶಕ್ತಿಶಾರದೆಯ ಉತ್ಸವ.

ನವರಾತ್ರಿ: ಇದು ನಮ್ಮ ಜೀವನದಲ್ಲಿ ನವತ್ವವನ್ನು ತುಂಬುವಂಥದ್ದು. ಪ್ರಕೃತಿಮಾತೆಯ ಶಕ್ತಿರೂಪವನ್ನು ಆರಾಧಿಸುವುದೇ ಈ ಪರ್ವದ ವಿಶೇಷ. ‘ದುರ್ಗೋತ್ಸವ’ ಎಂದೂ, ‘ಶರನ್ನವರಾತ್ರ’ ಎಂದೂ ಇದಕ್ಕೆ ಹೆಸರುಂಟು. ಇದು ಒಂಬತ್ತು ದಿನಗಳ ಹಬ್ಬವಾದುದರಿಂದ ‘ನವರಾತ್ರಿ’; ಹತ್ತನೆಯ ದಿನವನ್ನು ‘ವಿಜಯದಶಮಿ’ ಎಂದು ಆಚರಿಸಲಾಗುತ್ತದೆ. ಈ ಹತ್ತು ದಿನಗಳ ಹಬ್ಬವೇ ‘ದಶಾಹ’; ಇದೇ ‘ದಸರಾ’ ಆಗಿರುವುದು. ದಸರಾ ನಮ್ಮ ನಾಡಹಬ್ಬವೂ ಹೌದು. ನಾಡಹಬ್ಬದಲ್ಲಿ ಶಕ್ತಿದೇವತೆಯನ್ನು ಚಾಮುಂಡಿಯ ಸ್ವರೂಪದಲ್ಲಿ ಆರಾಧಿಸಲಾಗುತ್ತದೆ.

ಪ್ರಕೃತಿಯಿಂದಲೇ ನಮ್ಮ ಎಲ್ಲ ಶಕ್ತಿಗಳ ಮೂಲಸ್ರೋತ. ಅವಳು ನಮಗೆ ಒಲಿದಾಗಲೇ ನಮ್ಮ ಬದುಕು ಹಗುರ, ಸುಖ, ಸಂತೋಷ, ಸುಂದರ; ಅವಳು ಮುನಿದಾಗ ಬದುಕು ಭಾರ, ನೋವು, ದುಃಖ, ಭಯಂಕರ. ಅವಳನ್ನು ಒಲಿಸಿಕೊಳ್ಳುವುದು ಎಂದರೆ ಶಕ್ತಿಯ ಸ್ವರೂಪವನ್ನು ಚೆನ್ನಾಗಿ ಅರಿತುಕೊಂಡು, ಅದಕ್ಕೆ ತಕ್ಕಂತೆ ಜೀವನವನ್ನು ರೂಪಿಸಿಕೊಳ್ಳುವುದು. ಹೀಗಾಗಿಯೇ ನವರಾತ್ರಿಯ ಮೊದಲ ಮೂರು ದಿನಗಳನ್ನು ಲಕ್ಷ್ಮಿಯ ಪೂಜೆಗೂ, ಅನಂತರದ ಮೂರು ದಿನಗಳನ್ನು ಸರಸ್ವತಿಯ ಪೂಜೆಗೂ, ಕೊನೆಯ ಮೂರು ದಿನಗಳನ್ನು ದುರ್ಗೆಯ ಪೂಜೆಗೂ ವಿನಿಯೋಗಿಸಲಾಗುತ್ತದೆ. 

ಇಲ್ಲಿ ಲಕ್ಷ್ಮೀ ನಮಗೆ ಬೇಕಾದ ಎಲ್ಲ ವಿಧದ ಭೌತಿಕ ಶಕ್ತಿ, ಎಂದರೆ ಸಂಪತ್ತನ್ನು ಸಂಕೇತಿಸುತ್ತಾಳೆ; ಸರಸ್ವತಿಯು ನಮಗೆ ಬೇಕಾದ ಬೌದ್ಧಿಕ ಶಕ್ತಿಯನ್ನು, ಎಂದರೆ ವಿದ್ಯಾಬುದ್ಧಿಗಳನ್ನು ಸಂಕೇತಿಸುತ್ತಾಳೆ; ದುರ್ಗೆಯು ನಮಗೆ ಬೇಕಾದ ದೈಹಿಕ ಶಕ್ತಿಯನ್ನು, ಎಂದರೆ ಆರೋಗ್ಯ–ಧೈರ್ಯಗಳನ್ನು ಸಂಕೇತಿಸುತ್ತಾಳೆ. ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನೂ ಈ ಮೂರು ತತ್ತ್ವಗಳು ಸಂಕೇತಿಸುತ್ತವೆ.

ನವರಾತ್ರಿಯ ಪ್ರತಿದಿನವೂ ದುರ್ಗಾಸಪ್ತಶತೀ ಪಾರಾಯಣದ ಜೊತೆಗೆ ನಾರಾಯಣ ಹೃದಯಪಾಠಗಳನ್ನು ಪಠಿಸಲಾಗುತ್ತದೆ. ರಾಮಾಯಣದ ಪಾರಾಯಣ ಮಾಡುವ ಕ್ರಮವೂ ಉಂಟು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು