ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಗಲೂ ಇರಲಿಲ್ಲ, ರಾತ್ರಿಯೂ ಇರಲಿಲ್ಲ’

ವಚನಾಮೃತ
Last Updated 15 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸೃಷ್ಟಿಪೂರ್ವದಲ್ಲಿ ಜಗತ್ತಿಗೆ ಕಾರಣವೂ ಅವ್ಯಕ್ತವೂ ಅಗೋಚರವೂ ಆದ ಅಸತ್ ಇರಲಿಲ್ಲ. ಸೃಷ್ಟಿಗೆ ಮೂಲಭೂತವಾದ, ಇಂದ್ರಿಯಗಳಿಗೆ ದಕ್ಕುವ ಪಂಚಭೂತಾದಿಗಳೂ (ಸತ್) ಇರಲಿಲ್ಲ.

ಕನ್ನಡ ಜನಪದ ಮತ್ತು ವಾ‍ಙ್ಮಯದ ಮೇಲೆ ವಚನಗಳ ಪ್ರಭಾವ ತುಂಬ ಹಿರಿದು.

ವಚನಕಾರರು ಆಧ್ಯಾತ್ಮ ವಿಚಾರವಿಮರ್ಶೆಯಲ್ಲಿ, ಅದನ್ನು ಪ್ರಸ್ತುತ ಪಡಿಸುವಲ್ಲಿ ಅಪೂರ್ವ ವೈವಿಧ್ಯವನ್ನು ತೋರಿಸಿದ್ದಾರೆ; ತಮ್ಮ ಅನುಭವವನ್ನು ಪದ್ಯಗಳಲ್ಲಿ ಕಟ್ಟಿ ನಮ್ಮ ಮುಂದಿರಿಸಿದ್ದಾರೆ. ಅವು ಪ್ರಾಚೀನ ಋಷಿಮುನಿಗಳ ಚಿಂತನಾ ಪ್ರವಾಹದಂತೆಯೇ ಪರಿಶುದ್ಧ; ಅಂಜಿಕೆಯಿಲ್ಲದ, ಗೊಂದಲವಿಲ್ಲದ ಧೀರತ್ವದಿಂದ ಪ್ರಕಟಗೊಂಡಿವೆ. ನಮ್ಮ ಜನಸಮುದಾಯದಲ್ಲಿ ಭಾವಸ್ಪಂದನೆಯು ಕಾಲದೇಶಗಳಿಗೆ ಪಕ್ಕಾಗಿ ಅದರನುಸಾರವಾಗಿ ಇದ್ದರೂ, ಚಿಂತನಾವಿಧಾನವು ಭಾರತೀಯ ಆಧ್ಯಾತ್ಮಧಾರೆಗೆ ಅನುಗುಣವಾಗಿಯೇ ಹೊಮ್ಮಿದೆ. ಅದು ಈ ನೆಲದ ವೈಶಿಷ್ಟ್ಯ ಕೂಡ. ಅದು ಆಳ್ವಾರುಗಳ ಕಾಲ ಆಗಿರಬಹುದು, ವಚನರಚನೆಯ ದಿನಗಳಾಗಿರಬಹುದು ಅಥವಾ ಹರಿದಾಸರ ಪರಂಪರೆಯಿರಬಹುದು. ಈ ಮಾತಿಗೆ ಉದಾಹರಣೆಯಾಗಿ ‘ಮಾತಿಂಗೆ ಅಳವಡದ ಮಹಿಮ’ನೆಂದೇ ಖ್ಯಾತನಾದ ಅಲ್ಲಮಪ್ರಭುವಿನ ವಚನವೊಂದನ್ನು ಗಮನಿಸೋಣ:

ಆದಿಆಧಾರವಿಲ್ಲದಂದು ಹಮ್ಮುಬಿಮ್ಮುಗಳಿಲ್ಲದಂದು,

ಸುರಾಳನಿರಾಳಗಳಿಲ್ಲದಂದು ಶೂನ್ಯನಿಶ್ಯೂನ್ಯವಿಲ್ಲದಂದು,

ಸಚರಾಚರವೆಲ್ಲಾ ರಚನೆಗೆ ಬಾರದಂದು,

ಗುಹೇಶ್ವರಾ, ನಿಮ್ಮ ಶರಣನುದಯಿಸಿದನಂದು!

ಭಾವಾರ್ಥ: ‘ಜಗತ್ತಿನ ಸೃಷ್ಟಿ ಮತ್ತು ಅದಕ್ಕೆ ಕಾರಣನಾದ ಕರ್ತನೂ, ಸೃಷ್ಟಿಗೆ ಕಾರಣವಾದ ಅಹಂಭಾವ ಮತ್ತು ಸೃಷ್ಟಿಯ ಮೇಲಿನ ಮಮತೆಯೂ, ಸೃಷ್ಟಿಯಲ್ಲಿನ ಗ್ರಹ ತಾರಾದಿ ಸ್ಥೂಲವೂ ವೇದಶಾಸ್ತ್ರಾದಿ ಸೂಕ್ಷ್ಮವಿಚಾರಗಳೂ, ಜೀವ-ಶಿವರ ಉಪಸ್ಥಿತಿಯೂ, ಜಡಚೇತನ ವಸ್ತುಗಳ ರಚನೆಯೂ ಮುಂತಾಗಿ ಯಾವುದೂ ಇಲ್ಲದ ಎಲ್ಲವನ್ನು ಮೀರಿದ ಸಂದರ್ಭದಲ್ಲಿ, ಆ ಪರಮಶೂನ್ಯದಿಂದ ಅವಿರ್ಭವಿಸಿದ್ದು ಶರಣ/ಪರಶಿವ ತತ್ತ್ವ. ಅದರಿಂದಲೇ ನಂತರ ದೇಶಕಾಲಗಳೂ, ಅಗಾಧ ವಿಶ್ವವೂ, ಜೀವಜಗತ್ತೂ ಹುಟ್ಟಿಕೊಂಡವು. ಹೀಗೆ ತನ್ನ ಶಾಶ್ವತ ನೆಲೆಯನ್ನು ಅನ್ವೇಷಿಸುವ ದೀರ್ಘ ಮಂಥನದಲ್ಲಿ, ಈ ಜೀವವೂ ಆ ಮಹಾತತ್ತ್ವದ ಅವಿಭಾಜ್ಯ ಅಂಗ ಎಂದು ಅರಿತುಕೊಳ್ಳುವುದೇ ಆಧ್ಯಾತ್ಮಸಾಧನೆಯ ಮೊದಲ ಹೆಜ್ಜೆ.’

ಎಲ್ಲವನ್ನೂ ಇಲ್ಲವಾಗಿಸುತ್ತಾ ಹೊರಟಾಗ ದೊರೆಯುವುದು ಆ ಘನಮಹಿಮವಾದ ಬ್ರಹ್ಮವಸ್ತು ಮಾತ್ರ. ಇದನ್ನೇ ಉಪನಿಷತ್ ಋಷಿಗಳು ನೇತಿ ನೇತಿ ಎನ್ನುತ್ತಾ ಹೊರಟಾಗ ಕಂಡುಕೊಂಡ ಅನ್ವೇಷಿಸಿದ ಮಹತ್ತತ್ತ್ವ. ಹೀಗೆ ಜಗತ್ತಿನ ಸೃಷ್ಟಿಸ್ಥಿತಿಲಯಚಕ್ರದ ಮೂಲವವನ್ನು ಅರಸುವ ತುಡಿತವನ್ನು ನಾವು ಋಗ್ವೇದ ಸಂಹಿತೆಯ ನಾಸದೀಯ ಸೂಕ್ತದಲ್ಲೂ ನೋಡಬಹುದು. ಅದರ ಸುಂದರ ಸಾಮ್ಯತೆಯನ್ನು ಮೇಲಿನ ವಚನದಲ್ಲಿ ಕಾಣಬಹುದು.

ನಾಸದಾಸೀನ್ನೋ ಸದಾಸೀತ್ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್|

ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಂ||

ನಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಅಸೀತ್ಪ್ರಕೇತಃ|

ಆನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ||

ಭಾವಾರ್ಥ: ‘ಸೃಷ್ಟಿಪೂರ್ವದಲ್ಲಿ ಜಗತ್ತಿಗೆ ಕಾರಣವೂ ಅವ್ಯಕ್ತವೂ ಅಗೋಚರವೂ ಆದ ಅಸತ್ ಇರಲಿಲ್ಲ. ಸೃಷ್ಟಿಗೆ ಮೂಲಭೂತವಾದ, ಇಂದ್ರಿಯಗಳಿಗೆ ದಕ್ಕುವ ಪಂಚಭೂತಾದಿಗಳೂ (ಸತ್) ಇರಲಿಲ್ಲ. ಯಾವ ಲೋಕವೂ ಆಕಾಶವೂ ಇರಲಿಲ್ಲ. ಇವೆಲ್ಲವನ್ನೂ ಆವರಿಸಿದ್ದ ಗಹನವೂ ಅಗಾಧವೂ ಆದ ಸೃಷ್ಟಿದ್ರವ್ಯವು (ಆಪ್, ನೀರು ) ಇದ್ದೀತೇನೋ?! ಸೃಷ್ಟಿಪೂರ್ವದಲ್ಲಿ ಮರಣವೂ ಅಮರತ್ವವೂ ಇರಲಿಲ್ಲ, ಹಗಲೋ ರಾತ್ರಿಯೋ ಎಂಬ ಪರಿಜ್ಞಾನ ಇರಲಿಲ್ಲ. ಆಗ ಇದ್ದದ್ದು ಆ ಬ್ರಹ್ಮವಸ್ತು ಮಾತ್ರ. ಅದು ತನ್ನ ಮಾಯಾಸಾಮರ್ಥ್ಯದಿಂದ ಜಡವಸ್ತುವಿಗೆ ಚೈತನ್ಯ ತುಂಬಿತು.’

ಸೃಷ್ಟಿಯೇ ಇರಲಿಲ್ಲ ಎಂಬುದು ಸ್ಪಷ್ಟವಿದ್ದರೂ ಒಂದು ಜಡಶರೀರವಿತ್ತೇ ಎಂಬುದರ ಬಗ್ಗೆ ಇಲ್ಲಿ ಸಂದೇಹವಿದೆ. ಈ ವಿಚಾರವನ್ನೇ ಅಲ್ಲಮಪ್ರಭುವು ಇನ್ನೊಂದು ವಚನದಲ್ಲಿ ತನ್ನ ಸಿದ್ಧಾಂತಕ್ಕನುಗುಣವಾಗಿ ‘ಆಧಾರದೊಳಗಣ ವಿಭೂತಿಯಂ ತೆಗೆದು ಭೂಮಿಯ ನೆಲೆಗೊಳಿಸಿ’ ಎಂದು ಹೇಳುತ್ತ, ಪರಶಿವ/ಪರಬ್ರಹ್ಮ ಅಸ್ತಿತ್ವವು ತನ್ನಲ್ಲೇ ಅಭಿನ್ನವಾಗಿ ನೆಲೆಸಿದ್ದ ಶಕ್ತಿಯನ್ನು ಸಚೇತನ ಮಾಡಿ ಸೃಷ್ಟಿಕಾರ್ಯಕ್ಕೆ ತೊಡಗಿಸಿತೆಂದು ವಿವರಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT