ಶನಿವಾರ, ಫೆಬ್ರವರಿ 27, 2021
30 °C

ದಿನದ ಸೂಕ್ತಿ: ಒಂಬತ್ತು ಗುಟ್ಟುಗಳು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಆಯುರ್ವಿತ್ತಂ ಗೃಹಚ್ಛಿದ್ರಂ ಸಾಹಸಂ ಮಂತ್ರಮೌಷಧಮ್‌ ।

ತಪೋ ದಾನಾವಮಾನೌ ಚ ನವ ಗೋಪ್ಯಾನಿ ಕಾರಯೇತ್‌ ।।

ಇದರ ತಾತ್ಪರ್ಯ ಹೀಗೆ: ‘ಆಯುಸ್ಸು, ಹಣ, ಮನೆಯಲ್ಲಿಯ ಜಗಳ, ದುಡುಕಿನಿಂದಾದ ಕಾರ್ಯ, ಮಂತ್ರ, ಔಷಧ, ತಪಸ್ಸು, ದಾನ, ಅವಮಾನ – ಈ ಒಂಬತ್ತನ್ನು ರಹಸ್ಯವಾಗಿ ಇಟ್ಟಿರಬೇಕು.’

ನಾವು ಕೆಲವೊಂದನ್ನು ರಹಸ್ಯವಾಗಿರಿಸಿಕೊಳ್ಳಬೇಕು, ಕೆಲವೊಂದನ್ನು ಬಯಲುಮಾಡಬೇಕು. ನಾವು ರಹಸ್ಯವಾಗಿರಿಸಿಕೊಳ್ಳಬೇಕಾದವುಗಳನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ. ಅಂಥ ಒಂಬತ್ತು ಸಂಗತಿಗಳನ್ನು ಅದು ಪಟ್ಟಿ ಮಾಡಿದೆ.

ಆಯುಸ್ಸನ್ನು ಹೇಳಬಾರದು. ನೀನು ಇಷ್ಟು ದಿನ ಬದುಕುವೆ – ಎಂದು ಯಾರಿಗೂ ಹೇಳಬಾರದು. ಬಹುಶಃ ವೈದ್ಯರು, ಜ್ಯೌತಿಷಿಗಳನ್ನು ಉದ್ದೇಶದಲ್ಲಿಟ್ಟುಕೊಂಡು ಸುಭಾಷಿತ ಇದನ್ನು ಹೇಳುತ್ತಿರಬಹುದು. ಯಾರಿಗೂ ಇನ್ನೊಬ್ಬರ ಆಯುಸ್ಸು ಇಷ್ಟೇ ಎಂದು ಗೊತ್ತಿರಲು ಸಾಧ್ಯವಿಲ್ಲ. ಹೀಗಿರುವಾಗ ಒಬ್ಬರ ಆಯುಸ್ಸಿನ ಬಗ್ಗೆ ಸುಳ್ಳು ಹೇಳುವ ಮೂಲಕ ಅವರನ್ನು ಭೀತಿಗೆ ಒಡ್ಡಬಾರದು.

ನಮ್ಮಲ್ಲಿರುವ ಹಣ ಎಷ್ಟು ಎಂಬುದನ್ನು ರಟ್ಟು ಮಾಡಬಾರದು. ಇಂಥ ಘೋಷಣೆ ನಮಗೆ ಅಪಾಯವನ್ನು ಉಂಟುಮಾಡುವುದು ಖಂಡಿತ. ಮೋಸಗಾರರಿಗೆ, ಕಳ್ಳರಿಗೆ ನಾವಾಗಿ ಆಹ್ವಾನವನ್ನೂ ಕೊಟ್ಟಂತಾಗುತ್ತದೆ.

ಸಂಸಾರದ ಜಗಳವನ್ನು ನಾಲ್ಕು ಜನರಲ್ಲಿ ಹಂಚಿಕೊಂಡರೆ ನಮ್ಮ ಕುಟುಂಬದ ಮರ್ಯಾದೆಯೇ ಹೋಗುತ್ತದೆ. ಇದರಿಂದ ನಮ್ಮ ಬಗ್ಗೆ ತಾತ್ಸಾರವೂ ಮೂಡಬಹುದು. ಮನೆಯಲ್ಲಿ ಒಗ್ಗಟು ಇಲ್ಲ ಎಂಬ ಕಾರಣದಿಂದ ಶತ್ರುಗಳೂ ಅವಕಾಶವನ್ನು ಉಪಯೋಗಿಸಿಕೊಂಡು ನಮಗೆ ಕೇಡು ಬಗೆಯಲು ಸಿದ್ಧರಾಗಬಹುದು.

ನಮ್ಮ ದುಡುಕಿನಿಂದಾದ ಕಾರ್ಯವನ್ನೂ ಇನ್ನೊಬ್ಬರಲ್ಲಿ ಹಂಚಿಕೊಳ್ಳಬಾರದು. ಏಕೆಂದರೆ ನಮ್ಮ ಮಾನಸಿಕ ಸ್ಥಿತಿಯ ಬಗ್ಗೆಯೇ ಇದರಿಂದ ಜನರಲ್ಲಿ ಸಂಶಯ ಮೂಡಬಹುದು.

ಮಂತ್ರವನ್ನು ರಹಸ್ಯವಾಗಿರಿಸಬೇಕು ಎಂಬ ನಂಬಿಕೆ ಇದೆ. ಮಂತ್ರ ಎಂದರೆ ನಮ್ಮ ಆಲೋಚನೆ, ತಂತ್ರ ಎಂದೂ ಅರ್ಥಮಾಡಬಹುದು. ನಾವು ಯಾವುದಾದರೊಂದು ಕೆಲಸಕ್ಕೆ ಮಾಡಿಕೊಂಡ ಸಿದ್ಧತೆಯನ್ನು ಇತರರಿಗೆ ಹೇಳಿದರೆ ಅವರು ಆ ಕೆಲಸಕ್ಕೆ ವಿಘ್ನಗಳನ್ನು ಸೃಷ್ಟಿಸುವ ಅಪಾಯವೂ ಇರುತ್ತದೆ.

ಔಷಧವನ್ನು ಹೇಗೆ ಬಳಸಬೇಕೋ ಹಾಗೆಯೋ ಬಳಸಬೇಕು; ಅದಕ್ಕೆ ತಕ್ಕ ತಿಳಿವಳಿಕೆ ಬೇಕು. ಹೀಗಾಗಿ ಔಷಧದ ಗುಟ್ಟನ್ನು ಎಲ್ಲರಿಗೂ ಹಂಚಬಾರದು. ಹೀಗೆ ಹಂಚುವುದರಿಂದ ಜನರಿಗೆ ಅಪಾಯವೇ ಸಂಭವಿಸಬಹುದು.

ತಪಸ್ಸು ನಾವು ಮಾಡುವ ಸಾಧನೆ. ನಮ್ಮ ಸಾಧನೆಯನ್ನು ನಾವೇ ಹೇಳಿಕೊಳ್ಳಬಾರದು. ಇದರಿಂದ ನಮ್ಮ ಬಗ್ಗೆ ಜನರಿಗೆ ತಿರಸ್ಕಾರ ಹುಟ್ಟಬಹುದು; ನಾವು ಅಹಂಕಾರಿಗಳೆಂಬ ಅಪವಾದಕ್ಕೂ ತುತ್ತಾಗಬಹುದು.

ನಾವು ಇತರರಿಗೆ ಮಾಡಿರುವ ದಾನದ ಬಗ್ಗೆಯೂ ಜನರಿಗೆ ಹೇಳಬಾರದು. ದಾನ ತೆಗೆದುಕೊಂಡವನ ಆತ್ಮಾಭಿಮಾನಕ್ಕೂ ಇದು ಭಂಗ ತರಬಹುದು. ಮಾತ್ರವಲ್ಲ, ನಾವು ನಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಿದ್ದೇವೆ ಎಂಬ ಲೋಕಾಪವಾದವೂ ಇದರಿಂದ ಬರಬಹುದು. ಪುಣ್ಯವೂ ನಶಿಸುತ್ತದೆ ಎಂಬ ನಂಬಿಕೆ ಇದೆ.

ಇನ್ನು ತನಗಾದ ಅವಮಾನ. ಇದನ್ನು ಯಾರು ತಾನೆ ಹೇಳಿಕೊಂಡಾರು? ಹೇಳಿಕೊಂಡರೆ ಜನರ ದೃಷ್ಟಿಯಲ್ಲಿ ನಾವು ಸಣ್ಣವರಾಗುತ್ತೇವೆ. ನಾವು ಮಾಡುವ ಎಷ್ಟೋ ಒಳ್ಳೆಯ ಕೆಲಸಗಳಿಗೆ ಇದರಿಂದ ಅಡ್ಡಿಯಾಗುವ ಸಾಧ್ಯತೆಗಳೂ ಎದುರಾಗುತ್ತವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು