ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಸಿದವರ ಸ್ಮರಣೆಯಲ್ಲಿ ಪಿತೃಪಕ್ಷ

Last Updated 13 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಪ್ರತಿವರ್ಷವೂ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯಲಾಗುತ್ತದೆ. ಆಡುಭಾಷೆಯಲ್ಲಿ ಇದನ್ನು ಪಕ್ಷವೆಂದೇ ಕರೆಯುವ ರೂಢಿಯಿದೆ. ಇದನ್ನು ಮಹಾಲಯ ಪಕ್ಷವೆಂದೂ ಹೇಳುತ್ತಾರೆ. ಈ ವರ್ಷ ಸೆಪ್ಟೆಂಬರ್‌ 3ರಿಂದ 17ರ ವರೆಗೆ ಇದು ವ್ಯಾಪಿಸಿದೆ.

ಇವತ್ತಿನ ಸ್ಥಿತಿ ಏನೇ ಇರಲಿ, ಪ್ರತಿಯೊಬ್ಬನೂ ಪ್ರತಿದಿನವೂ ತನಗೆ ಸಂಬಂಧಿಸಿದ ಗುರು–ಹಿರಿಯರನ್ನು ನೆನೆಯಬೇಕೆಂಬ ರೂಢಿಯೊಂದಿದೆ. ಗತಿಸಿದವರನ್ನು ನಿತ್ಯತರ್ಪಣದಿಂದ ಸಂತೋಷಗೊಳಿಸುವುದು ಒಂದಾದರೆ, ವಾರ್ಷಿಕವಾಗಿ ಶ್ರಾದ್ಧ-ತರ್ಪಣವನ್ನು ಮಾಡುವುದು ಇನ್ನೊಂದು. ಸಾಮಾನ್ಯವಾಗಿ ದಕ್ಷಿಣಾಯನದ ಮಧ್ಯಭಾಗದಲ್ಲಿ ಈ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಾಗಿದೆ. ಇಲ್ಲಿ ಅಧಿಕಾರಿಯೆಂದರೆ, ಕರ್ಮಾಧಿಕಾರವುಳ್ಳವನು. ಹೆಚ್ಚಾಗಿ ಹಿರಿಯ ಮಗನು ಅದನ್ನು ಮಾಡಿದರೆ, ಉಳಿದ ಮಕ್ಕಳು ಅದರಲ್ಲಿ ಭಾಗವಹಿಸುತ್ತಾರೆ. ತಂದೆ–ತಾಯಿಗಳಿರುವವರು ತರ್ಪಣ–ಶ್ರಾದ್ಧಾದಿಗಳನ್ನು ಮಾಡುವುದಿಲ್ಲ. ಅಷ್ಟೇ ಅಲ್ಲ, ಅದನ್ನು ಮಾಡಿಸುವ ರೂಢಿಯೂ ಇಲ್ಲ.

ಇಲ್ಲಿ ಒಂದು ಸಮಸ್ಯೆಯಿದೆ. ವಂಶವೃಕ್ಷದ ಪರಿಚಯ ಇದ್ದರೆ ಮಾತ್ರ ಶ್ರಾದ್ಧಾದಿಗಳನ್ನು ನೆರವೇರಿಸಬಹುದು. ಆದರೆ ಎಲ್ಲರಿಗೂ ಆ ಭಾಗ್ಯವಿರುವುದಿಲ್ಲ. ಕೆಲವರಿಗೆ ತಮ್ಮ ತಂದೆ ತಾಯಿ ಗುರು ಹಿರಿಯರ ಪರಿಚಯವೇ ಇರುವುದಿಲ್ಲ.

ಇದಕ್ಕೆ ಮಹಾಭಾರತದಲ್ಲಿ ಒಂದು ಸುಂದರವಾದ ಉದಾಹರಣೆಯಿದೆ. ಕರ್ಣನು ನಿಜವಾಗಿ ಕ್ಷತ್ರಿಯ ಕುಲದವನಾದರೂ ಅವನು ರಾಧೇಯನಾಗಿ ಬೆಳೆದಿದ್ದಾನೆ. ಅವನ ತಂದೆ ಯಾರು, ಮುಖ್ಯವಾಗಿ ತಾಯಿ ಯಾರು ಎಂಬುದೇ ಅವನಿಗೆ ತಿಳಿದಿರುವುದಿಲ್ಲ. ಅವನು ದುರ್ಯೋಧನನ ಕೃಪೆಯಿಂದಾಗಿ ರಾಜನೇ ಆದರೂ ಪಿತೃಕರ್ಮಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಜೀವನದ ಸಂಧ್ಯೆಯಲ್ಲಿ ತನ್ನ ನಿಜವಾದ ಹಿನ್ನೆಲೆಯ ಪರಿಚಯವಾದರೂ ಅದಕ್ಕೆ ರಾಜಕೀಯದ ಬಣ್ಣವಿತ್ತು. ಸ್ವತಃ ಶ್ರೀಕೃಷ್ಣನೇ ಹೇಳಲಿ, ಕುಂತಿಯು ಬಂದು ಮಗನೆಂದು ಗೋಳಾಡಲಿ, ಅದೆಲ್ಲಾ ಯುದ್ಧತಂತ್ರವೆಂದೇ ಊಹಿಸಬೇಕಾದ ಅನಿವಾರ್ಯತೆ ಕರ್ಣನಿಗಿತ್ತು. ಯುದ್ಧದಲ್ಲಿ ವೀರೋಚಿತವಾದ ಮರಣವನ್ನಪ್ಪಿದ ಕರ್ಣನು ಸಹಯೋಧರೊಂದಿಗೆ ಸ್ವರ್ಗಲೋಕಕ್ಕೆ ಹೋದರೆ ಅವನಿಗೆ ಅಚ್ಚರಿ ಕಾದಿತ್ತು. ಎಲ್ಲರಿಗೂ ಷಡ್ರಸೋಪೇತವಾದ ಆಹಾರವನ್ನು ನೀಡಿದರೆ, ಕರ್ಣನಿಗೆ ಕೇವಲ ಚಿನ್ನದ ಆಭರಣಗಳನ್ನು ನೀಡಲಾಗುತ್ತಿತ್ತು. ಉಳಿದವರೆಲ್ಲರೂ ಅನ್ನದಾನ ಮಾಡಿ ಪಿತೃಗಳನ್ನು ಪ್ರಸನ್ನಗೊಳಿಸಿದ್ದರು. ಆದರೆ ಕರ್ಣನಿಗೆ ಆ ಭಾಗ್ಯವಿರಲಿಲ್ಲ. ಅವನಿಗೆ ತನ್ನ ಪಿತೃಪಿತಾಮಹಾದಿಗಳ ಹೆಸರೇ ಗೊತ್ತಿರಲಿಲ್ಲ. ಅವನು ದಾನಶೂರನೇ ಆಗಿದ್ದರೂ, ಧಾರಾಳವಾಗಿ ಬಂಗಾರ ದಾನ ಮಾಡಿದ್ದರೂ ಅನ್ನದಾನ ಮಾಡಿರಲಿಲ್ಲ. ಅದನ್ನು ಅವನು ಸ್ವರ್ಗಲೋಕದ ಅಧಿಪತಿಯಾದ ಇಂದ್ರನಲ್ಲಿ ವಿಜ್ಞಾಪಿಸಿದ. ಅವನು ಕರ್ಣನಿಗೆ ಹದಿನೈದು ದಿನಗಳ ಅವಕಾಶ ನೀಡಿ, ಪಿತೃಶ್ರಾದ್ಧಾದಿಗಳನ್ನು ಪೂರೈಸಿ ಬರುವಂತೆ ಆದೇಶಿಸಿದ. ಕರ್ಣನಿಗೆ ದೊರೆತ ಹದಿನೈದು ದಿನಗಳೇ ಪಕ್ಷ, ಪಿತೃಪಕ್ಷ, ಮಹಾಲಯ ಎಂದೆಲ್ಲಾ ಪ್ರಸಿದ್ಧವಾಗಿವೆ. ಅಲ್ಲಿಂದ ಈ ಆಚರಣೆ ಸಾರ್ವತ್ರಿಕವಾಯಿತು ಎನ್ನಲಾಗಿದೆ.

ಈ ಕತೆಯನ್ನು ಅರ್ಥೈಸಿದರೆ, ಗಮನಾರ್ಹವಾದ ಹಲವು ಅಂಶಗಳು ಹೊಳೆಯುತ್ತವೆ. ಒಂದು: ಈ ದಿನಗಳಲ್ಲಿ ಅಪರಿಚಿತರಾದ ಪಿತೃಗಳಿಗೂ ಶ್ರಾದ್ಧವನ್ನು ಮಾಡಬಹುದಾದ ಸದವಕಾಶವಾದರೆ, ಜಾತಿ–ನೀತಿಗಳೆಲ್ಲವನ್ನೂ ಮೀರಿ ಗತಿಸಿದ ಬಾಂಧವರಿಗೆ ಸಂತೋಷವನ್ನು ಉಂಟುಮಾಡುವುದು ಇನ್ನೊಂದು. ಮಕ್ಕಳು ಗತಿಸಿದ ಹಿರಿಯರಿಗೆ ಕೃತಜ್ಞರಾಗಿರುವುದು ನಿಜವೇ ಆದರೂ ಅವರು ಜೀವನದ ಬಿರುಗಾಳಿಗೆ ಸಿಲುಕಿ ಏನನ್ನೂ ಮಾಡಲು ಸಾಧ್ಯವಾಗದಿರಬಹುದು. ಉಳ್ಳವನು ಶಿವಾಲಯವನ್ನೇ ಮಾಡಬಹುದಾದರೂ, ಇಲ್ಲದವನು ಮಹಾಲಯವನ್ನೂ ಮಾಡಲಾರದ ದುಸ್ಥಿತಿಯಿರಬಹುದು. ಇದನ್ನು ಹೊರತುಪಡಿಸಿಯೂ ಕೆಲವು ಮಕ್ಕಳು ನಾಸ್ತಿಕರಾಗಿ ನಂಬಿಗೆಯನ್ನು ಕಳೆದುಕೊಳ್ಳುವುದೂ ಉಂಟು. ಮದುವೆಯಾದ ಹೆಣ್ಣು ಗಂಡನ ಮನೆಯ ಪರಿಸರಕ್ಕೆ ಹೊಂದಿಕೊಳ್ಳಬೇಕಾಗುವುದರಿಂದ, ತನ್ನ ಮಕ್ಕಳ ಲಾಲನೆ–ಪೋಷಣೆ ಮಾಡಬೇಕಾಗಿರುವುದರಿಂದ ತಂದೆ-ತಾಯಿಯ ಅಪೇಕ್ಷೆಯನ್ನು ಪೂರ್ಣಗೊಳಿಸುವುದು ಕೆಲವೊಮ್ಮೆ ಸಾಧ್ಯವಾಗಲಾರದು. ಇಂತಹ ಹಲವಾರು ಸನ್ನಿವೇಶಗಳಲ್ಲಿ ಮಹಾಲಯ ಶ್ರಾದ್ಧ ಎಲ್ಲರನ್ನೂ ಪ್ರಸನ್ನಗೊಳಿಸುವ ಸುಲಭೋಪಾಯವಾಗುತ್ತದೆ. ಅದರ ಅನುಷ್ಠಾನದಿಂದ ಗೊತ್ತಿರಲಿ, ಗೊತ್ತಿಲ್ಲದಿರಲಿ – ಗತಿಸಿದವರೆಲ್ಲರಿಗೂ ಅನ್ನ-ನೀರು ದೊರೆಯುತ್ತದೆ. ಇಲ್ಲಿ ಅನ್ನ-ನೀರು ಕೊಟ್ಟರೆ ಮಾತ್ರ ಪರಲೋಕದಲ್ಲಿ ನೀರು ಲಭಿಸುತ್ತದೆ. ಇದು ಯಾವುದೋ ಒಂದು ಜಾತಿಗೆ ಸೀಮಿತವಾದುದಲ್ಲ. ಇದಕ್ಕೆ ಬೇಕಾದುದು ಜಾತಿಯಲ್ಲ, ಶ್ರದ್ಧೆ. ಶ್ರದ್ಧೆಯಿಲ್ಲದೆ ಇದನ್ನು ಮಾಡಿದರೂ ಫಲವಿಲ್ಲ. ಈ ಕಾರಣದಿಂದಲೇ ಇದನ್ನು ಶ್ರಾದ್ಧವೆನ್ನುತ್ತಾರೆ. ಅದನ್ನು ಮಂತ್ರ ಸಹಿತವಾಗಿ ಮಾಡುವಂತೆ, ಮಂತ್ರವಿಲ್ಲದೆಯೂ ಮಾಡುತ್ತಾರೆ. ಸ್ವತಃ ತಾವೇ ಮಾಡಲು ಸಾಧ್ಯವಿಲ್ಲದಿದ್ದರೆ, ಬೇರೆಯವರಿಂದಲೂ ಮಾಡಿಸುತ್ತಾರೆ.

ವರ್ಷದ 24 ಪಕ್ಷಗಳಲ್ಲಿ ಬೇರೆ ಯಾವ ಪಕ್ಷಗಳಿಗೂ ಇಲ್ಲದ ವಿಶೇಷತೆ ಪಿತೃಪಕ್ಷಕ್ಕಿದೆ. ಈ ಸಮಯದಲ್ಲಿ ಉಗುರು ತೆಗೆಯಬಾರದು, ಸ್ತ್ರೀಸಂಗ ಮಾಡಬಾರದು, ಯಾವುದೇ ವಿನೂತನ ಕಾರ್ಯವನ್ನು ಆರಂಭಿಸಬಾರದು, ಕೊಡಕೊಳ್ಳುವ ವ್ಯವಹಾರ ಮಾಡಬಾರದು – ಇತ್ಯಾದಿ ನಿಯಮಗಳು ಎಲ್ಲರಿಗೂ ತಿಳಿದಿವೆ. ಶ್ರೀಮದ್ಭಾಗವತವನ್ನು, ಭಗವದ್ಗೀತೆಯನ್ನು, ಗರುಡ ಪುರಾಣವನ್ನು, ಕಠೋಪನಿಷತ್ತನ್ನು ಓದುವುದು ಅಥವಾ ಓದಿಸುವುದು ಶ್ರೇಯಸ್ಕರವೆಂಬ ಭಾವನೆ ಭಾರತೀಯರಲ್ಲಿದೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ಇಂದಿನ ಆವಶ್ಯಕತೆಗಳಲ್ಲೊಂದು.

ಪೂರ್ವಜರ ಅನುಗ್ರಹ

ಸಂಸ್ಕೃತದಲ್ಲಿ ‘ಪಿತೃ’ ಎಂಬ ಶಬ್ದ ಸಾಮಾನ್ಯವಾಗಿ ತಂದೆ ಎಂಬ ಅರ್ಥದಲ್ಲಿ ಇದ್ದರೂ, ಅದಕ್ಕೆ ಪೂರ್ವಜ ಎಂಬ ಅರ್ಥವೂ ಇದೆ. ತಂದೆ ಹಾಗೂ ತಂದೆಯ ಸ್ಥಾನದಲ್ಲಿ ಇರುವವನು ಪಿತೃ ಎಂಬುದೊಂದಾದರೆ, ತಂದೆ ತಾಯಿ ಹಾಗೂ ಹಿಂದಿನ ತಲೆಮಾರಿನ ಎಲ್ಲಾ ಹಿರಿಯರನ್ನೂ ಪಿತೃ ಶಬ್ದದಿಂದಲೇ ಹೇಳಲಾಗುತ್ತದೆ. ಪಿತೃಪಕ್ಷ ಎಂಬಲ್ಲಿ ಈ ವಿಶಾಲವಾದ ಅರ್ಥವೇ ಇದೆ. ಅದು ಪೂರ್ವಜರ ಪಕ್ಷವಾದುದರಿಂದ ಹಾಗೆಯೇ ಪ್ರಸಿದ್ಧವಾಗಿದೆ. ಈ ಸಂದರ್ಭದಲ್ಲಿ ಪೂರ್ವಜರ ದೃಷ್ಟಿ ತಮ್ಮ ಮನೆ ಅಥವಾ ಮನೆತನದ ಮೇಲಿರುತ್ತದೆ ಎಂಬ ನಂಬಿಕೆಯಿದೆ. ಆಗ ಅವರನ್ನು ಸಂತೋಷಗೊಳಿಸಿದರೆ, ಅವರ ಅನುಗ್ರಹವನ್ನು ಸಂಪಾದಿಸಬಹುದು; ಅದಲ್ಲದಿದ್ದರೆ ಅವರ ಕೋಪಕ್ಕೆ ತುತ್ತಾಗಬಹುದು.

ಕೃತಜ್ಞತೆಯೇ ಮೂಲದ್ರವ್ಯ

ಪಿತೃಪಕ್ಷದ ಒಂದೊಂದು ದಿನದಲ್ಲಿಯೂ ಶ್ರಾದ್ಧವನ್ನು ಮಾಡಬಹುದಾದರೂ ಅಮಾವಾಸ್ಯೆಯು ಅತ್ಯಂತ ಶ್ರೇಷ್ಠವೆನ್ನಲಾಗಿದೆ. ಅದು ಸರ್ವ ಪಿತೃ ಅಮಾವಾಸ್ಯೆ. ಅಂದರೆ, ಎಲ್ಲಾ ಪಿತೃಗಳ ತಿಥಿ. ಹಿಂದೆ ಹೇಳಿದಂತೆ, ಅದು ಎಲ್ಲಾ ಮಾತೃಗಳ ತಿಥಿಯೂ ಹೌದು. ಸಂಸ್ಕೃತದಲ್ಲಿ ಏಕಶೇಷ ಎಂಬ ಸಮಾಸವಿದೆ. ಮಾತೆಯೂ ಪಿತೃವೂ ಸೇರಿದರೆ, ಪಿತೃ ಎಂದಷ್ಟೇ ಉಳಿಯುತ್ತದೆ. ತಮ್ಮ ವಂಶದ ಗತಿಸಿದವರೆಲ್ಲರಿಗೂ ಒಂದೇ ಪ್ರಯತ್ನದಿಂದ ಶ್ರಾದ್ಧ ಮಾಡಬಹುದು. ಇದಕ್ಕಾಗಿ ಬೇಕಾಗಿರುವುದು ಹಣವಲ್ಲ, ಕೃತಜ್ಞತೆ. ಅದಕ್ಕೆ ಪ್ರತಿಯಾಗಿ ಪಿತೃಗಳು ಆರೋಗ್ಯವನ್ನೂ ಆಯುಷ್ಯವನ್ನೂ ಸಂಪತ್ತನ್ನೂ ಸಂತಾನವನ್ನೂ ದಯಪಾಲಿಸುತ್ತಾರೆ ಎಂದು ಪುರಾಣಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT