ಶುಕ್ರವಾರ, ಮೇ 14, 2021
25 °C

ಪ್ರಜಾವಾಣಿ ಕನ್ನಡಧ್ವನಿ: ವಚನವಾಣಿಗಿಂದು 100ರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಪತ್ರಿಕಾಲೋಕದಲ್ಲಿಯೇ ವಿನೂತನ ಪ್ರಯೋಗವಾಗಿ ಪ್ರಜಾವಾಣಿಯು 'ಕನ್ನಡ ಧ್ವನಿ' ಹೆಸರಿನಲ್ಲಿ ಪಾಡ್‌ಕಾಸ್ಟ್ ಚಾನೆಲ್ ಆರಂಭಿಸಿದ್ದು, ಇದರ ಮೂಲಕ ನಿತ್ಯವೂ ಮೂಡಿಬರುತ್ತಿರುವ ವಚನವಾಣಿ ದೈನಿಕ ಸರಣಿಗೆ ಇಂದು (ಏ.10) ದಾಖಲೆಯ ನೂರನೆಯ ಕಂತಿನ ಸಡಗರ. ಅಂತರ್ಜಾಲದ ಮೂಲಕ ದೇಶ-ವಿದೇಶಗಳಿಗೆ ತಲುಪುತ್ತಿರುವ ಈ 'ಕನ್ನಡ ಧ್ವನಿ' ಕಾರ್ಯಕ್ರಮಗಳನ್ನು ಇದುವರೆಗೆ ಮೂರು ಲಕ್ಷದಷ್ಟು ಮಂದಿ ಕೇಳುಗರು ಕೇಳಿದ್ದಾರೆಂಬುದು ಮತ್ತೊಂದು ಅಪರೂಪದ ದಾಖಲೆ.

ವಚನಗಳನ್ನು ಇಲ್ಲಿ ಆಲಿಸಿರಿ: ಕನ್ನಡ ಧ್ವನಿ ಪಾಡ್‍ಕಾಸ್ಟ್ ಚಾನೆಲ್ 

ಹನ್ನೆರಡನೆಯ ಶತಮಾನದಲ್ಲಿ ಕನ್ನಡದ ಶರಣರು ರಚಿಸಿದ ವಚನಗಳು, ಇತಿಹಾಸದಲ್ಲೇ ನಡೆದ ಮೊಟ್ಟಮೊದಲ ಸಮಗ್ರ ಕ್ರಾಂತಿಯ ಉಪಉತ್ಪನ್ನಗಳು. ಸ್ಥಗಿತ ವ್ಯವಸ್ಥೆಯನ್ನು ಪ್ರಶ್ನಿಸಿ, ಪ್ರತಿಭಟಿಸಿ, ನಿರಾಕರಿಸಿದ್ದಷ್ಟೇ ಅಲ್ಲದೆ, ಪರ್ಯಾಯ ಸಮಾಜ ರಚನೆಯ ಉದ್ದೇಶವನ್ನಿಟ್ಟುಕೊಂಡು, ಬಸವಣ್ಣನವರ ನೇತೃತ್ವದಲ್ಲಿ ಅಸಂಖ್ಯ ಶರಣರು ನಡೆಸಿದ ಹೋರಾಟದ ಪ್ರತಿಬಿಂಬಗಳಂತಿರುವ ಈ ವಚನ ಪಂಥವು, ಸಾಹಿತ್ಯಕವಾಗಿ ಅಪರೂಪದ ಪ್ರಕಾರವಾಗಿದೆ. ವಚನಗಳಲ್ಲಿರುವ ಕ್ರಾಂತಿ ಮತ್ತು ಪ್ರಗತಿಯ ಆಶಯವು ವರ್ತಮಾನಕ್ಕಷ್ಟೇ ಅಲ್ಲ, ಯಾವ ಕಾಲಕ್ಕಾದರೂ ಪ್ರಸ್ತುತವಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಸಮಾಜದ ಎಲ್ಲ ವರ್ಗಗಳ ವಿಚಾರವಂತರು ಒಗ್ಗೂಡಿ ನಡೆಸಿದ ಶರಣಕ್ರಾಂತಿಯ ಇತಿಹಾಸವು ಅವರು ರಚಿಸಿದ ವಚನಗಳಲ್ಲಿ ದಾಖಲಾಗಿದ್ದು, ಆ ಕಾರಣಕ್ಕಾಗಿಯೇ ಅವು ಕಾಲದ ನಿರಂತರತೆಯಲ್ಲಿ ನಿತ್ಯವೂ ಚರ್ಚೆಗೆ ಒಳಗಾಗುತ್ತಿವೆ.

ಇಂಥ ವಚನಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಹೊಸ ಚರಿತ್ರೆಯನ್ನೇ ನಿರ್ಮಿಸಿವೆ. ದೊರೆತಿರುವ ಇಪ್ಪತ್ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಚನಗಳನ್ನೊಳಗೊಂಡ ಅನೇಕ ಸಂಗ್ರಹ-ಸಂಪಾದನೆಗಳು ಪ್ರಕಟವಾಗಿವೆ. ವಚನಗಳನ್ನು ಕುರಿತ ಸಂಶೋಧನೆ, ವಿಮರ್ಶೆ, ವಿಶ್ಲೇಷಣೆ-ಸಾಕಷ್ಟು ಪ್ರಮಾಣದಲ್ಲಿ ನಡೆದಿದೆ, ನಡೆಯುತ್ತಿದೆ. ಇದರಲ್ಲಿ ಹಲವಾರು ವಚನಗಳನ್ನು ಹೆಸರಾಂತ ಸಂಗೀತಗಾರರು ಹಾಡಿ ನಾಡಿಗೆಲ್ಲ ಪರಿಚಯಿಸಿದ್ದಾರೆ. ಹೀಗಿದ್ದರೂ, ಅಪಾರವಾಗಿರುವ ವಚನಸಾಗರದ ಒಂದು ಹನಿಯಷ್ಟೂ ವಚನಗಳನ್ನು ಹಾಡಲಾಗಿಲ್ಲ. ಅದರಲ್ಲೂ, ಕಾಯಕಜೀವಿಗಳ, ದಲಿತ, ಅಸ್ಪೃಶ್ಯ ವರ್ಗಗಳ ಶರಣರ ಮತ್ತು ಮಹಿಳೆಯರ ವಚನಗಳನ್ನು ಹಾಡಿದ್ದಂತೂ ತುಂಬ ಕಡಿಮೆಯೆ. ಇಂಥ ವಚನಗಳನ್ನೇ ಆಯ್ದು, ವಿನೂತನ ಪಾಡ್‌ಕಾಸ್ಟ್ ತಂತ್ರಜ್ಞಾನದ ಮೂಲಕ ಜನತೆಗೆ ತಲುಪಿಸುತ್ತಿರುವ ಪ್ರಜಾವಾಣಿಯ ವಚನವಾಣಿ ಕಾರ್ಯಕ್ರಮ ಸರಣಿಯು ಕನ್ನಡ ಪತ್ರಿಕಾ ಪ್ರಪಂಚದಲ್ಲಿ ಒಂದು ಅಪೂರ್ವ ದಾಖಲೆ.

ಇದನ್ನೂ ಆಲಿಸಿರಿ- ವಚನವಾಣಿ Podcast: ಮೇಘ ಮರೆಯಾಗಿ ಚಂದ್ರನಿದ್ದನೆಂದಡೆ...

ವಚನವಾಣಿಯ ಪ್ರತಿದಿನದ ಸಂಚಿಕೆಯಲ್ಲಿ ನಿತ್ಯವೂ ಒಂದೊಂದು ಹೊಸ ವಚನವನ್ನು ಜಗತ್ತಿಗೇ ತಲುಪಿಸಲಾಗುತ್ತಿದೆ. ಇದರಲ್ಲಿ ಈವರೆಗೆ ಕೇಳಿರದ ಮತ್ತು ಗಮನಿಸಿರದ ವಚನಗಳನ್ನೇ ಅಳವಡಿಸಲಾಗುತ್ತಿರುವುದು ವಿಶೇಷ. ಪ್ರತೀ ಕಾರ್ಯಕ್ರಮದಲ್ಲಿ ಮೊದಲು ಆಯಾ ವಚನದ ವಾಚನ ಇದ್ದು, ನಂತರ, ಒಂದೂವರೆ ನಿಮಿಷದ ಅವಧಿಯಲ್ಲಿ ಆ ವಚನವನ್ನು ವಿಶ್ಲೇಷಿಸಲಾಗುತ್ತದೆ. ಅನಂತರ ಆ ವಚನಕ್ಕೆ ಸಂಗೀತ ಸಂಯೋಜಿಸಿ ಹಾಡಲಾಗುತ್ತದೆ. ಹತ್ತು ನಿಮಿಷ ಅವಧಿಯಲ್ಲಿ ಇಡೀ ವಚನದ ಒಟ್ಟು ಸ್ವರೂಪ, ಅರ್ಥ ಮತ್ತು ಸಂದೇಶವು, ಮಾತು ಮತ್ತು ಹಾಡಿನ ಮೂಲಕ ಬಿತ್ರರವಾಗುತ್ತಿರುವುದು ಒಂದು ಅಪರೂಪದ ಕ್ರಮ. ಗಂಟೆಗಟ್ಟಲೇ ಚರ್ಚಿಸಬಹುದಾದ ವಚನಗಳ ಆಂತರ್ಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕೇಳುಗರಿಗೆ ಒದಗಿಸುತ್ತಿರುವ ಈ ಪ್ರಯತ್ನವು ಎಲ್ಲರ ಗಮನ ಸೆಳೆದಿದೆ.

ವಚನ ಸಾಹಿತ್ಯದ ಆಳವಾದ ಅಧ್ಯಯನ, ಸಂಶೋಧನೆ ವಿಮರ್ಶೆ, ವಿಶ್ಲೇಷಣೆಯ ಕಾರ್ಯವನ್ನು ನಿರಂತರ ಮಾಡಿಕೊಂಡು ಬಂದು, ಈ ಕ್ಷೇತ್ರಕ್ಕೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ರಚಿಸಿರುವ ಡಾ. ಬಸವರಾಜ ಸಾದರ ಅವರ ಪರಿಕಲ್ಪನೆಯ ಪರಿಣಾಮವಾಗಿ ರೂಪ ಪಡೆದಿರುವ ಈ ಸರಣಿಯು, ಅವರದೇ ವಾಚನ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ. ಅತ್ಯಂತ ಸರಳ ಮತ್ತು ಸುಲಭವಾಗಿ ಇಡೀ ವಚನದ ಸಾರವನ್ನು ಕಟ್ಟಿಕೊಡುತ್ತಿರುವ ಅವರು, ಕೇಳುಗರಿಗೆ ಅರ್ಥವಾಗುವ ಶೈಲಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡುತ್ತಿದ್ದಾರೆ. ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ, ಬೆಂಗಳೂರು ಆಕಾಶವಾಣಿಯ ನಿರ್ದೇಶಕರಾಗಿ ನಿವೃತ್ತರಾಗಿರುವ ಅವರ ಮಾಧ್ಯಮ ಕ್ಷೇತ್ರದ ಅನುಭವವು ಈ ಸರಣಿಯ ನಿರ್ಮಾಣದಲ್ಲಿ ಮಹತ್ವದ ಪ್ರೇರಣೆಯಾಗಿದೆ. ವಚನವಾಣಿ ಸರಣಿಯು ಆಕಾಶವಾಣಿಯ ಕಾರ್ಯಕ್ರಮಗಳಿಗೆ ಪರ್ಯಾಯದಂತಿರುವುದು ಗಮನಿಸಬೇಕಾದ ವಿಚಾರ.

ಈ ಸರಣಿಯ ಮತ್ತೊಂದು ಮಹತ್ವದ ಅಂಶವೆಂದರೆ, ಆಯಾ ವಚನಗಳನ್ನು ನಿತ್ಯವೂ ಹಾಡಿನ ಮೂಲಕ ಪ್ರಸಾರ ಮಾಡುತ್ತಿರುವುದು. ನಾಡಿನ ಹೆಸರಾಂತ ಯುವ ಸಂಗೀತಗಾರರಾಗಿರುವ ಡಾ. ಕುಮಾರ್ ಕಣವಿ ಅವರು ಪ್ರತಿದಿನವೂ ಒಂದೊಂದು ವಚನಕ್ಕೆ ರಾಗ ಸಂಯೋಜಿಸಿ, ಹಾಡುವ ಮೂಲಕ ಅನನ್ಯ ಸಾಧನೆ ಮಾಡುತ್ತಿದ್ದಾರೆ. ಭಕ್ತಿಗೀತೆ, ಭಾವಗೀತೆ, ದಾಸರ ಕೀರ್ತನೆಗಳು, ಶಾಸ್ತ್ರೀಯ ಸಂಗೀತ, ಗಜಲ್ ಗಾಯನ-ಈ ಎಲ್ಲ ಪ್ರಕಾರಗಳಲ್ಲೂ ವಿಶೇಷ ಸಾಧನೆ ಮಾಡಿರುವ ಡಾ. ಕುಮಾರ್ ಕಣವಿ ಅವರ ವಚನಗಾಯನವು ಈ ಸರಣಿಗೆ ಆಕರ್ಷಣೆಯನ್ನು ಒದಗಿಸಿದೆ. ಪ್ರತಿದಿನವೂ ಒಂದೊಂದು ವಚನಕ್ಕೆ ರಾಗ ಸಂಯೋಜಿಸಿ ಹಾಡುವುದು ಸುಲಭದ ಕೆಲಸವಲ್ಲ. ಈಗಾಗಲೇ ಅವರು ಮೂನ್ನೂರಾ ಐವತ್ತಕ್ಕೂ ಹೆಚ್ಚಿನ ಸಂಖ್ಯೆಯ ವಚನಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದು ಗಮನಾರ್ಹ ಸಾಧನೆ.

ಮೊದಲು ವಚನವರ್ಷ ಎಂಬ ಹೆಸರಿನಿಂದ ವಾಟ್ಸ್ಯಾಪ್ ಮೂಲಕ ಅಸಂಖ್ಯ ಕೇಳುಗರನ್ನು ತಲುಪುತ್ತಿದ್ದ ಈ ಸರಣಿಯು, ಏಪ್ರಿಲ್ ಮೂವತ್ತಕ್ಕೆ ಒಂದು ವರ್ಷವನ್ನು (365 ವಚನಗಳು) ಪೂರೈಸುತ್ತಿದೆ. ಅನಂತರ ಇದು ವಚನವಾಣಿ ಸರಣಿಯಾಗಿ ಪ್ರಜಾವಾಣಿಯ ಪಾಡ್‌ಕಾಸ್ಟ್ ಮೂಲಕ ವಾರಕ್ಕೆ ಒಂದು ಸಲ ಪ್ರಸಾರವಾಗತೊಡಗಿತು. ಆಗ ಇದರ ನಿರ್ಮಾಣದ ಕಾರ್ಯವನ್ನು ಕೈಗೊಂಡವರು ಕವಿತಾ ಸಾದರ ಅವರು. ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ ವಾಹಿನಿಯ ಕೇಳುಗರ ಬೇಡಿಕೆಗೆ ಅನುಗುಣವಾಗಿ ಈ ಸರಣಿಯು ದಿನಾಂಕ. 2021ರ ಜನವರಿ 01ರಿಂದ ಪ್ರತಿದಿನವೂ ಪ್ರಸಾರವಾಗತೊಡಗಿ, ಈಗ ನೂರನೆಯ (10 ಏಪ್ರಿಲ್ 2021) ದಿನಕ್ಕೆ ತಲುಪಿದೆ. ನಿತ್ಯನೂತನತೆಯಿಂದ ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವ ವಚನವಾಣಿ ಪಾಡ್‌ಕಾಸ್ಟ್ ಸರಣಿಯ ಕಾರ್ಯಕ್ರಮಗಳನ್ನು ನಮ್ಮ ರಾಜ್ಯ ಮತ್ತು ದೇಶದ ಕೇಳುಗರಲ್ಲದೆ, ಇಂಗ್ಲೆಂಡ್, ಅಮೆರಿಕಾ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿರುವ ಕನ್ನಡಿಗರೂ ಆಸಕ್ತಿಯಿಂದ ಕೇಳಿ, ಪ್ರತಿನಿತ್ಯವೂ ಪ್ರತಿಕ್ರಿಯೆ ನೀಡುತ್ತಿರುವುದು ಗಮನಾರ್ಹ.

ಓದಿದರೆ ಸಂಪೂರ್ಣ ಅರ್ಥ ಬಿಟ್ಟುಕೊಡದ ಶರಣರ ವಚನಗಳನ್ನು, ಅವುಗಳ ವಾಚನ, ಸರಳ ಅರ್ಥವಿವರಣೆಯ ಜೊತೆಗೆ, ವರ್ತಮಾನದ ವಿದ್ಯಮಾನಗಳಿಗೆ ಅನ್ವಯಿಸಿ ಹೇಳುವ ಮೂಲಕ ಕೇಳುಗರಿಗೆ ಅಚ್ಚರಿ ಮೂಡಿಸುತ್ತಿರುವ ಡಾ. ಬಸವರಾಜ ಸಾದರ ಅವರ ಶ್ರಮವು ಸಾರ್ಥಕವಾಗುತ್ತಿದೆ. ವಚನಗಳಿಗಿರುವ ಸಮಕಾಲೀನ ಮತ್ತು ಸಾರ್ವಕಾಲೀನ ಮಹತ್ವವನ್ನು ಮನವರಿಕೆ ಮಾಡಿಕೊಡುವ ಅವರ ಈ ಪ್ರಯತ್ನವು ನಿಜಕ್ಕೂ ಸ್ತುತ್ಯರ್ಹ. ಈ ವಚನಗಳಿಗೆ ಸಂಗೀತದ ಮೆರುಗನ್ನು ಕೊಡುತ್ತಿರುವ ಡಾ. ಕುಮಾರ್ ಕಣವಿ ಅವರ ಗಾಯನ ಪ್ರತಿಭೆ ಕೂಡ ಮೆಚ್ಚುವಂಥದ್ದು. ಇಂಥ ಅಪರೂಪದ ಸರಣಿಯನ್ನು, ಕನ್ನಡ ಧ್ವನಿ ಪಾಡ್‌ಕಾಸ್ಟ್ ಮೂಲಕ ಅಂತರ್ಜಾಲದಲ್ಲಿ ವಿಶ್ವಕ್ಕೇ ತಲುಪಿಸುತ್ತಿರುವ ಪ್ರಜಾವಾಣಿಯ ಕಾರ್ಯವು ಶ್ಲಾಘನೀಯ. ವಚನವಾಣಿ ಸರಣಿಯು ನಿರಂತರ ಮೂಡಿ ಬರಲಿ ಎಂಬುದೇ ಇದರ ಕೇಳುಗರ ಮನದಾಳದ ಅಪೇಕ್ಷೆ.

ಲೇಖಕರು: ಡಾ. ರಾಮಕೃಷ್ಣ ಮರಾಠೆ, ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಸಂಶೋಧಕರು, ಬೆಳಗಾವಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು