ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ದುರ್ಗೆಯ ದೇಗುಲಗಳು, ಹಲವು ವಿಶೇಷಗಳು

Last Updated 20 ಅಕ್ಟೋಬರ್ 2020, 7:10 IST
ಅಕ್ಷರ ಗಾತ್ರ

ದೇಶದಲ್ಲಿ ದುರ್ಗೆಯ ಆರಾಧನೆಯ ಸಮಯವಿದು. ದುರ್ಗಾ ದೇವಿಯ ಅಸಂಖ್ಯಾತ ದೇಗುಲಗಳು ದೇಶದಾದ್ಯಂತ ಇವೆ. ಕೆಲವು ಐತಿಹಾಸಿಕವಾಗಿದ್ದರೆ, ಕೆಲವು ಪೌರಾಣಿಕ ವಿಶೇಷತೆ ಹೊಂದಿವೆ. ಬೆಟ್ಟದ ನೆತ್ತಿಯಲ್ಲಿ ನೈಸರ್ಗಿಕ ಸೌಂದರ್ಯವನ್ನು ಹೊತ್ತು ಭಕ್ತರ ಮನಸ್ಸಿಗೆ ಮುದ ನೀಡುವಂಥ ನೆಲೆಗಳೆನಿಸಿದ್ದರೆ, ಇನ್ನೂ ಕೆಲವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡು ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಅಪಾರ ಸಂಖ್ಯೆಯ ಭಕ್ತ ಗಣ ಇರುವುದರಿಂದ ಧಾರ್ಮಿಕ ಪ್ರವಾಸೋದ್ಯಮವೂ ಬೃಹತ್ತಾಗಿ ಬೆಳೆದಿದೆ.

ಕೋವಿಡ್‌ ಸಂಕಷ್ಟದ ನಡುವೆಯೂ ದೇಶದಾದ್ಯಂತ ಇರುವ ಸಾವಿರಾರು ದೇವಿ ದೇವಾಲಯಗಳಲ್ಲಿ ಈ ಬಾರಿ ಪೂಜೆ, ಧಾರ್ಮಿಕ ಕಾರ್ಯಗಳು ಸರಳವಾಗಿ ನಡೆಯುತ್ತಿವೆ.

ಜಮ್ಮುವಿನ ತ್ರಿಕೂಟ ಪರ್ವತಗಳ ರಮಣೀಯ ಪರಿಸರದಲ್ಲಿರುವ ವೈಷ್ಣೋದೇವಿ ದೇವಾಲಯ ದೇಶದ ಪ್ರಖ್ಯಾತ ಧಾರ್ಮಿಕ ಕ್ಷೇತ್ರ. 5,200 ಅಡಿ ಎತ್ತರದಲ್ಲಿರುವ ಈ ದೇವಾಲಯವನ್ನು ತಲುಪಲು ಭಕ್ತರು 12 ಕಿ.ಮೀ ನಡೆದು ಹೋಗಬೇಕಾಗುತ್ತದೆ. ಗುಹೆಯಲ್ಲಿರುವ ಮೂರು ಕಲ್ಲಿನ ನೈಸರ್ಗಿಕ ರಚನೆಗಳೇ ಇಲ್ಲಿ ದೇವಿಯ ಪ್ರತಿರೂಪ. ಚಳಿಗಾಲದಲ್ಲಿ ಇಲ್ಲಿ ಓಡಾಡುವುದು ಕಷ್ಟಕರ. ಜೀವನದಲ್ಲಿ ಒಮ್ಮೆಯಾದರೂ ವೈಷ್ಣೋದೇವಿ ಯಾತ್ರೆಗೆ ಹೋಗಿ ಬರಬೇಕೆನ್ನುವುದು ಹಲವು ಭಕ್ತರು ಅಭೀಷ್ಟೆ. ವರ್ಷಕ್ಕೆ 1 ಕೋಟಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ದೇವಸ್ಥಾನದ ವೆಬ್‌ಸೈಟ್‌ ತಿಳಿಸುತ್ತದೆ.

ಹಿಮಾಚಲ ಪ್ರದೇಶದ ಚಾಮುಂಡಾ ದೇವಿ ದೇವಸ್ಥಾನ ಬಾನರ್‌ ನದಿ ದಂಡೆಯಲ್ಲಿದೆ. ಇಲ್ಲಿ ಭಕ್ತರು ತಮ್ಮ ಹಿರಿಯರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಾಲಯದ ಒಳಗೆ ಪವಿತ್ರ ಜಲ ಇರುವ ಕೊಳವಿದೆ. ಕೆಂಪು ವಸ್ತ್ರ ಧರಿಸಿ ಬರುವುದು ಶ್ರೇಷ್ಠ ಎನ್ನುವುದು ಭಕ್ತರ ನಂಬಿಕೆ. ನವರಾತ್ರಿಯ ಸಮಯದಲ್ಲೇ ಇಲ್ಲಿ ಭಕ್ತಗಣ ಹೆಚ್ಚು. ಅಸ್ಸಾಂ ರಾಜ್ಯದ ಗುವಾಹಟಿಯ ನೀಲಾಚಲ ಬೆಟ್ಟದಲ್ಲಿ ಇರುವ ಕಾಮ್ಯಕಾ ದೇವಿ ದೇವಾಲಯವು ದುರ್ಗಾ ದೇವಿಯ ಶಕ್ತಿಪೀಠಗಳಲ್ಲಿ ಒಂದೆನ್ನಲಾಗಿದೆ. ಸತಿದೇವಿಯ ದೇಹದ ಯೋನಿ ಭಾಗ ಬಿದ್ದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ಪ್ರತೀತಿಯಿದೆ. ತಾಂತ್ರಿಕರಿಗೆ ಈ ದೇವಾಲಯ ಪ್ರಮುಖವಾಗಿದೆ.

ಗರ್ಭಾ ನೃತ್ಯ ಆಕರ್ಷಣೆ

ಗುಜರಾತ್‌ ಹಾಗೂ ರಾಜಸ್ಥಾನದ ಗಡಿಯಲ್ಲಿರುವ ಅಂಬಾಮಾತಾ ದೇವಾಲಯ ಅಪಾರ ಭಕ್ತರನ್ನು ಸೆಳೆಯುವ ದೇವಸ್ಥಾನವಾಗಿದೆ. ಗಬ್ಬರ್‌ ಪರ್ವತದ ಮೇಲಿರುವ ಈ ಸುಂದರ ದೇವಾಲಯದ ಇತಿಹಾಸ 12ನೇ ಶತಮಾನದಿಂದ ಇದೆ. ಈ ದೇವಾಲಯಕ್ಕೆ ಭೇಟಿ ನೀಡಿದವರ ವೈವಾಹಿಕ ಬದುಕು ಸುಂದರವಾಗಿರುತ್ತದೆ ಎಂಬ ನಂಬಿಕೆ ಭಕ್ತರದ್ದು. ಬೆಟ್ಟದ ಮೇಲೆ ಪ್ರಾಚೀನ ದೇವಾಲಯವಿದ್ದರೆ, ಸ್ವಲ್ಪ ಕೆಳಗೆ ಸಂಗಮರಮರಿ ಕಲ್ಲಿನಿಂದ ನಿರ್ಮಿತ ಸುಂದರ ನೂತನ ದೇಗುಲವಿದೆ. ನವರಾತ್ರಿ ಹಬ್ಬದಂದು ಇಲ್ಲಿ ಭವಯೀ ಹಾಗೂ ಗರ್ಭಾ ನೃತ್ಯಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿಗೆ ಹೋದರೆ ಬೆಟ್ಟದ ಮೇಲಿಂದ ಮನಮೋಹಕ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಹರಿದ್ವಾರದ ಮಂಸಾ ದೇವಿ ದೇವಾಲಯ ಪ್ರಖ್ಯಾತವಾದದ್ದು. ಭಕ್ತರ ಮನಸ್ಸಿನ ಇಚ್ಛೆಗಳನ್ನು ಪೂರೈಸುತ್ತಾಳೆ ಎನ್ನಲಾದ ಈ ದೇವಿಯ ದೇವಾಲಯವು ಬಿಲ್ವ ಪರ್ವತದ ಮೇಲೆ ಇದ್ದು ಇಲ್ಲಿಗೆ ಹೋಗಲು ರೋಪ್‌ವೇ ಸಹ ಇದೆ. ದೇವಿ ಪೂಜೆ ಮಾಡುತ್ತ ರಾಮಕೃಷ್ಣ ಪರಮಹಂಸರು ಧ್ಯಾನಸ್ಥರಾಗಿ ಎಚ್ಚರ ತಪ್ಪುತ್ತಿದ್ದ ಕಥೆಗಳನ್ನು ಕೇಳಿದವರು ಕೋಲ್ಕತ್ತದ ದಕ್ಷಿಣೇಶ್ವರ ಕಾಳಿ ದೇವಾಲಯದ ಬಗ್ಗೆ ಖಂಡಿತ ತಿಳಿದಿರುತ್ತಾರೆ. ಹೂಗ್ಲಿ ನದಿದಡದಲ್ಲಿ 1855ರಲ್ಲಿ ರಾಣಿ ರಾಶ್ಮೋನಿ ನಿರ್ಮಿಸಿದ ಈ ಕಾಳಿ ದೇವಾಲಯ ದೇಶದ ಪ್ರಮುಖ ದುರ್ಗಾ ದೇಗುಲಗಳಲ್ಲಿ ಒಂದು. ಬಂಗಾಳಿ ವಾಸ್ತುಶಿಲ್ಪದ ನವರತ್ನ ಮಾದರಿಯು ಈ ದೇಗುಲದಲ್ಲಿ ಸುಂದರವಾಗಿ ಪ್ರತಿಬಿಂಬಿತವಾಗಿದೆ.

ನೈಸರ್ಗಿಕ ಜ್ವಾಲೆ

ಹಿಮಾಚಲ ಪ್ರದೇಶದ ಕಾಂಗ್ರಾ ಕಣಿವೆಯ ದಕ್ಷಿಣದಲ್ಲಿರುವ ಜ್ವಾಲಾಜಿ ದೇಗುಲದಲ್ಲಿ ಜ್ವಾಲಾಮುಖಿ ದೇವಿಯ ಪೂಜೆ ನಡೆಯುತ್ತದೆ. ಸದಾ ಉರಿಯುವ ನೈಸರ್ಗಿಕ ಅಗ್ನಿ ಇರುವುದು ಇಲ್ಲಿಯ ವಿಶೇಷ. ಇದು ಇಂಧನವಿಲ್ಲದೇ ನೈಸರ್ಗಿಕವಾಗಿ ಉರಿಯುತ್ತದೆ ಎನ್ನುವುದು ಭಕ್ತರ ನಂಬಿಕೆ.

ರಾಜಸ್ಥಾನದ ಕರ್ಣಿ ಮಾತಾ ಮಂದಿರವು 600 ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ ದೇಗುಲದೊಳಗೇ ಇಲಿಗಳು ಓಡಾಡುತ್ತಿರುತ್ತವೆ. ಅವುಗಳನ್ನೂ ಇಲ್ಲಿ ಪೂಜ್ಯ ಭಾವದಿಂದ ನೋಡಲಾಗುತ್ತದೆ, ಪ್ರಸಾದ ನೀಡಲಾಗುತ್ತದೆ. ಇಲ್ಲಿಯ ಬೃಹತ್‌ ಬೆಳ್ಳಿಯ ಬಾಗಿಲುಗಳು ಹಾಗೂ ಮಾರ್ಬಲ್‌ ಕೆತ್ತನೆಗಳು ಗಮನ ಸೆಳೆಯುತ್ತವೆ. ನವರಾತ್ರಿಯಲ್ಲಿ ಇಲ್ಲಿ ಭಕ್ತಸಾಗರವೇ ಇರುತ್ತದೆ.

ಉತ್ತರಾಖಂಡದ ನೈನಿತಾಲ್‌ನ ನೈನಾದೇವಿ ದೇವಾಲಯವು ಬೆಟ್ಟದ ಮೇಲಿದೆ. ಸಮೀಪದಲ್ಲೇ ಗೋವಿಂದ ಸಾಗರ ಸರೋವರವಿದೆ. ಶಿವನು ಸತಿದೇವಿಯ ಸುಟ್ಟ ಶರೀರವನ್ನು ಕೊಂಡೊಯ್ಯವಾಗ ದೇವಿಯ ಕಣ್ಣುಗಳು ಬಿದ್ದ ಸ್ಥಳವಿದು ಎಂದು ಹೇಳಲಾಗಿದೆ. ದೇಗುಲಕ್ಕೆ ತಲುಪಲು ಕೇಬಲ್‌ ಕಾರ್‌ ವ್ಯವಸ್ಥೆಯಿದೆ. ಇಲ್ಲಿ ಬೃಹತ್ತಾದ ಅಶ್ವತ್ಥ ವೃಕ್ಷವಿದೆ. ದೇಗುಲದ ಒಳಗೆ ನೈನಾದೇವಿಯನ್ನು ಸಾಂಕೇತಿಸುವ ನೇತ್ರಗಳ ಕೆತ್ತನೆ ಇದೆ.

ಉತ್ತರಪ್ರದೇಶದ ತುಲಸೀಪುರದ ದೇವಿ ಪಾಟನ್‌ ದೇಗುಲವು 51 ಶಕ್ತಿಪೀಠಗಳಲ್ಲಿ ಒಂದು. ಸತಿದೇವಿಯ ಬಲಭುಜವು ಇಲ್ಲಿ ಬಿದ್ದಿದೆ ಎನ್ನಲಾಗಿದೆ. ನವರಾತ್ರಿಯಲ್ಲಿ ಇಲ್ಲಿ ಉತ್ಸವ ನಡೆಯುತ್ತದೆ. ಮಕ್ಕಳ ಕೂದಲು ನೀಡುವುದಕ್ಕೂ ಭಕ್ತರು ಈ ದೇಗುಲಕ್ಕೆ ಹೋಗುವುದು ಶ್ರೇಷ್ಠ ಎಂದು ಭಾವಿಸುತ್ತಾರೆ. ನೃತ್ಯ–ಗಾಯನಗಳಿಂದ ದೇವಿಯನ್ನು ಒಲಿಸಿಕೊಳ್ಳಬಹುದು ಎಂಬುದು ಇಲ್ಲಿಯ ಪ್ರತೀತಿ.

ಆಂಧ್ರಪ್ರದೇಶದ ವಿಜಯಮಾಡಾದಲ್ಲಿ ಕೃಷ್ಣಾ ನದಿತೀರದಲ್ಲಿ ಕನಕದುರ್ಗಾ ದೇಗುಲವಿದೆ. ಈ ದೇವಿ ಶಕ್ತಿ, ಸಂಪತ್ತು ಹಾಗೂ ಪರೋಪಕಾರದ ಪ್ರತೀಕವೆಂದು ನಂಬಲಾಗಿದೆ. ಇಂದ್ರಕಿಲಾದ್ರಿ ಬೆಟ್ಟದಲ್ಲಿರುವ ಈ ದೇಗುಲದಲ್ಲಿ ದೇವಿ ಸ್ವಯಂಭೂ ಎನ್ನಲಾಗಿದ್ದು, ನವರಾತ್ರಿಯಲ್ಲಿ ನಡೆಯುವ ಸರಸ್ವತಿ ಉತ್ಸವ ಹಾಗೂ ತೆಪ್ಪೋತ್ಸವಗಳು ಇಲ್ಲಿಯ ಪ್ರಮುಖ ಆಕರ್ಷಣೆಗಳು. ಆಷಾಢದಲ್ಲಿ ನಡೆಯುವ ಶಾಖಾಂಬರಿ ಉತ್ಸವವೂ ಜನಪ್ರಿಯ.

ಕೆಂಪು ಬಣ್ಣದ ಸುಂದರ ದುರ್ಗಾ ದೇವಿ ದೇಗುಲ ವಾರಾಣಸಿಯಲ್ಲಿದೆ. ಬಂಗಾಳದ ಮಹಾರಾಣಿ ಭಾಬನಿ ನಿರ್ಮಿಸಿದ ಈ ದೇಗುಲವು ನಾಗರ ವಾಸ್ತುಶಿಲ್ಪ ಹೊಂದಿದೆ. ಇಲ್ಲಿ ಅಪಾರ ಮಂಗಗಳು ಕಂಡು ಬರುವುದರಿಂದ ಮಂಗಗಳ ದೇವಾಲಯ ಎಂಬ ಅಡ್ಡ ಹೆಸರೂ ಇದಕ್ಕಿದೆ.

ಕರ್ನಾಟಕದ ದುರ್ಗಾ ದೇಗುಲಗಳು

ಕರ್ನಾಟಕದಲ್ಲಿ ದುರ್ಗೆಯ ದೇವಾಲಯಗಳಲ್ಲಿ ಮೊದಲು ನೆನಪಾಗುವುದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ. ಇದರ ದೇಗುಲ 12ನೇ ಶತಮಾನದಲ್ಲಿ ನಿರ್ಮಿಸಿದ್ದು ಎನ್ನಲಾಗಿದ್ದು, ಇಷ್ಟಾರ್ಥಗಳನ್ನು ಈಡೇರಿಸುವ ದೇವಿ ಎಂದು ಭಕ್ತರು ಹರಕೆ ಹೊತ್ತು ಬರುತ್ತಾರೆ. ಇಲ್ಲಿಯ ಜಂಬೂಸವಾರಿ ಸಹಿತ ದಸರಾ ಉತ್ಸವ ನಾಡಹಬ್ಬವೆಂದೇ ಜನಜನಿತ ಹಾಗೂ ವಿಶ್ವವಿಖ್ಯಾತ ಕೂಡ. 16 ಅಡಿ ಎತ್ತರದ ಮಹಿಷಾಸುರವ ಪ್ರತಿಮೆಯೂ, ನಂದಿಯ ಬೃಹತ್ ಮೂರ್ತಿಯೂ ಈ ಕ್ಷೇತ್ರದ ಇನ್ನೆರಡು ಆಕರ್ಷಣೆಗಳು.

ಕಟೀಲಿನ ದುರ್ಗಾಪರಮೇಶ್ವರಿ ದೇವಾಲಯವೂ ದೇಶದ ಪ್ರಮುಖ ದೇವಿ ದೇಗುಲಗಳಲ್ಲಿ ಒಂದೆಂದು ಗುರುತಿಸಲಾಗಿದೆ. ನದಿಯ ಮಧ್ಯದ ನಯನಮನೋಹರ ತಾಣದಲ್ಲಿರುವ ಈ ದೇಗುಲವು ಸಾಂಸ್ಕೃತಿಕವಾಗಿಯೂ ಬಹಳ ಮಹತ್ವ ಪಡೆದಿದೆ. ದೇವಿಯ ಹೆಸರಿನಲ್ಲಿ ಯಕ್ಷಗಾನ ತಂಡವನ್ನೇ ಸಿದ್ಧ ಮಾಡಲಾಗಿದೆ.

ಬಾದಾಮಿಯ ಬನಶಂಕರಿ ದೇವಾಲಯವು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದು. ಅರಣ್ಯದಲ್ಲಿ ಇರುವ ದೇವಿಯಾಗಿದ್ದ ಕಾರಣ ಬನಶಂಕರಿ ದೇವಿ ಎನ್ನಲಾಗಿದ್ದು, ಸಿಂಹದ ಮೇಲೆ ಕುಳಿತಿರುವ ದೇವಿಯ ಮೂರ್ತಿಯನ್ನು ದೇಗುಲದಲ್ಲಿ ಕಾಣಬಹುದು. ಇನ್ನೂ ನೂರಾರು ದೇವಿ ದೇವಾಲಯಗಳು ಭಕ್ತರಲ್ಲಿ ಆಶಾಭಾವ ತುಂಬುವ ಸ್ಫೂರ್ತಿಚಿಲುಮೆಗಳಂತೆ ಆಕರ್ಷಿಸುತ್ತವೆ.

ಶಂಕರಾಚಾರ್ಯರು ಗುರುತಿಸಿದ 18 ಶಕ್ತಿಪೀಠಗಳು

ಶ್ರೀಲಂಕಾದ ಶಂಕರಿದೇವಿ, ತಮಿಳುನಾಡಿನ ಕಂಚಿ ಕಾಮಾಕ್ಷಿ, ಬಂಗಾಳದ ಶೃಂಖಲಾದೇವಿ, ಮೈಸೂರಿನ ಚಾಮುಂಡೇಶ್ವರಿ, ಆಂಧ್ರಪ್ರದೇಶದ ಅಲಂಪುರದ ಜೋಗುಲಾಂಬಾ, ಶ್ರೀಶೈಲಂನ ಭ್ರಮರಾಂಬಾ, ಕೊಲ್ಹಾಪುರದ ಮಹಾಲಕ್ಷ್ಮಿದೇವಿ, ಮಹಾರಾಷ್ಟ್ರದ ಏಕವೀರಿಕಾ ದೇವಿ, ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳಿ, ಆಂಧ್ರಪ್ರದೇಶದ ಪೀಠಪುರಂನ ಪುರುಹುತಿಕಾ ದೇವಿ, ಒಡಿಶಾ ಜಜ್‌ಪುರದ ಬಿರಜಾದೇವಿ, ಆಂಧ್ರಪ್ರದೇಶದ ಮಾಣಿಕ್ಯಾಂಬಾ ದೇವಿ, ಅಸ್ಸಾಂನ ಕಾಮಾಕ್ಯಾ ದೇಗುಲ, ಉತ್ತರಪ್ರದೇಶದ ಮಾಧವೇಶ್ವರಿ, ಹಿಮಾಚಲ ಪ್ರದೇಶದ ಜ್ವಾಲಾಮುಖಿ (ವೈಷ್ಣವಿ) ದೇವಿ, ಬಿಹಾರದ ಸರ್ವಮಂಗಳಾ ದೇವಿ, ವಾರಾಣಸಿಯ ವಿಶಾಲಾಕ್ಷಿ, ಛತ್ತೀಸ್‌ಘಡದ ದಂತೇಶ್ವರಿ, ಕಾಶ್ಮೀರದ ಸರಸ್ವತಿ.

ಪುರಾಣಗಳಲ್ಲಿ ಸತಿದೇವಿಯ ದೇಹದ ಭಾಗಗಳು ಬಿದ್ದ 51 ಪ್ರದೇಶಗಳನ್ನು 51 ಶಕ್ತಿಪೀಠಗಳು ಎಂದು ಗುರುತಿಸಲಾಗಿದೆ. ಅಲ್ಲಿ ಪ್ರತಿಷ್ಠಾಪಿಸಲಾಗಿರುವ ದುರ್ಗೆಯ ದೇವಾಲಯಗಳು ಪ್ರಖ್ಯಾತವಾಗಿವೆ. ಇವುಗಳಲ್ಲೇ 18 ಪೀಠಗಳನ್ನು ಮಹಾಶಕ್ತಿಪೀಠಗಳು ಎಂದು ಹೇಳಲಾಗಿದೆ. 51 ಶಕ್ತಿಪೀಠಗಳಲ್ಲಿ 7 ಬಾಂಗ್ಲಾದೇಶದಲ್ಲಿ, 3 ಪಾಕಿಸ್ತಾನದಲ್ಲಿ, 3 ನೇಪಾಳದಲ್ಲಿ, ತಲಾ 1 ಚೀನಾ ಹಾಗೂ ಶ್ರೀಲಂಕಾದಲ್ಲಿ ಇರುವುದು ಗಮನಾರ್ಹ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT