ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯಸಂದೇಶ: ಕಾಂಚಾಣಮೃಗದ ಸಾಕಾಣಿಕೆ ಬೇಡ

ಅಕ್ಷರ ಗಾತ್ರ

ಆಧುನಿಕ ಜಗತ್ತಿನ ಅಮಾನವೀಯ ಲೆಕ್ಕಾಚಾರದಲ್ಲಿ ಮನುಷ್ಯರು ಮುಳುಗಿಹೋಗಿದ್ದಾರೆ. ಹಣದ ಹುಚ್ಚುಹೊಳೆಯಲ್ಲಿ ಈಜಲುಹೋದ ಮನುಷ್ಯರೆಲ್ಲ ಕಳೆದುಹೋಗುತ್ತಿದ್ದಾರೆ. ದುರಾಸೆಯ ರಕ್ಕಸ ಅಲೆಯಲ್ಲಿ ಕೊಚ್ಚಿ ಹೋಗಿರುವ ಮನುಷ್ಯರನ್ನು ಹುಡುಕುವುದೇ ದುಸ್ತರ. ಇನ್ನೂ ಅಂತಸ್ತು-ಅಹಂನ ಗತ್ತಿನಲ್ಲಿ ನಾಪತ್ತೆಯಾಗಿರುವ ಮನುಷ್ಯರನ್ನ ಗುರುತಿಸುವುದು ಬಹಳ ಕಷ್ಟ. ಕಾಂಚಾಣ ಎಂಬ ಮಾಯಾಮೃಗ ಬೆನ್ನತ್ತಿ ‘ತಾನು-ತನ್ನವರು’ ಎಂಬ ಸ್ಮೃತಿಯನ್ನೇ ಕಳೆದುಕೊಂಡಿರುವ ಮಾನವರಿಗೆ ನೆನಪಿನ ಶಕ್ತಿ ತುಂಬುವುದು ಸುಲಭವಲ್ಲ. ಹಣದ ಹುಚ್ಚು ಕೊರೊನಾರೋಗಕ್ಕಿಂತ ಭಯಂಕರ ಸಾಂಕ್ರಾಮಿಕ ರೋಗ. ಒಬ್ಬರ ಮನಸ್ಸನಿಂದ ಮತ್ತೊಬ್ಬರ ಮನಸ್ಸಿಗೆ ಬಹುಬೇಗ ಹರಡುವ ಈ ಹುಚ್ಚುರೋಗಕ್ಕೆ ಬಹಳಷ್ಟು ಜನ ಬಲಿಯಾಗುತ್ತಿದ್ದಾರೆ.

ಜಗತ್ತು ಎದುರಿಸುತ್ತಿರುವ ಇಂದಿನ ಬಹುತೇಕ ಸಮಸ್ಯೆಗಳಿಗೆ ಹಣದ ಪಿಡುಗೇ ಕಾರಣ. ಹಣದ ಬಲೆಯಲ್ಲಿ ಸಿಲುಕಿ ಉನ್ಮಾದ ಸ್ಥಿತಿಯಲ್ಲಿರುವವರಿಗೆ ಗುಣ ಮೌಲ್ಯದ ಔಷಧ ನೀಡಬೇಕಾಗಿದೆ. ಇಲ್ಲದಿದ್ದರೆ, ಹಣದ ಹುಚ್ಚರು ಇಡೀ ಜಗತ್ತನ್ನೇ ನಿರ್ನಾಮ ಮಾಡುತ್ತಾರೆ. ಈಗಾಗಲೇ ಅಂತಹ ಅಪಾಯಕಾರಿ ಹಂತವನ್ನ ಜಗತ್ತು ಮುಟ್ಟಿದೆ ಎಂಬುದನ್ನ ಇತ್ತೀಚಿನ ವಿದ್ಯಮಾನಗಳು ತಿಳಿಸುತ್ತಿವೆ. ಮನುಷ್ಯ ಬದುಕಲು ಬೇಕಿರುವುದು ಮೂರೇ ವಸ್ತು; ಗಾಳಿ-ನೀರು-ಆಹಾರ. ಇವನ್ನು ಪ್ರಕೃತಿದತ್ತವಾಗಿ ಭಗವಂತ ನೀಡಿದ್ದಾನೆ. ಇನ್ನು ಉಳಿದ ಸೌಕರ್ಯಗಳಾದ ಐಷಾರಾಮಿ ಬದುಕಿನ ಸವಲತ್ತುಗಳು ಮನುಷ್ಯನ ಸೃಷ್ಟಿ. ಭಗವಂತ ಕೊಡುವ ಅಮೂಲ್ಯ ವಸ್ತುವಿಗೆ ಬೆಲೆ ಇಲ್ಲದಂತೆ ಮಾಡಿರುವ ಮನುಷ್ಯ, ತನ್ನ ಉತ್ಪನ್ನಕ್ಕೆ ಮಾತ್ರ ದುಬಾರಿ ಬೆಲೆ ಕಟ್ಟಿದ್ದಾನೆ. ತಾನು ಇನ್ನೊಬ್ಬನಿಗಿಂತ ಹೆಚ್ಚು ಅಂತ ತೋರಿಸಲು ಮಾನವರು ಸೃಷ್ಟಿಸಿದ ಕೃತಕ ಸಾಧನವೇ ಹಣ. ಇದಕ್ಕೆ ಮಾನವರು ದಾಸಾನುದಾಸರಾಗಿ ಜೀತದಾಳುಗಳಂತೆ ಜೀವ ತೇಯುತ್ತಾ ತಮ್ಮ ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ.

ಇಲಿಯ ಬೆನ್ನತ್ತಿದ ಬೆಕ್ಕಿಗೆ, ತನ್ನ ಬೆನ್ನಟ್ಟಿದ ಸೀಳುನಾಯಿಯ ಅರಿವಿಲ್ಲದಂತೆಯೇ, ಮಾನವರು ಒಬ್ಬರ ಜೇಬಿನಿಂದ ಹಣ ಕಸಿಯುವಾಗ, ತನ್ನ ಜೇಬಿಗೆ ಕೈ ಹಾಕಿದ ಅರಿವು ಇರುವುದಿಲ್ಲ. ಒಬ್ಬರ ತಿಂದು ಒಬ್ಬರು ಬಾಳುವ ಕಾಡುನ್ಯಾಯದಂತೆ, ಒಬ್ಬರಿಂದ ಒಬ್ಬರು ಕಸಿದು ಬಾಳುವುದು ನಾಡಿನ ನ್ಯಾಯವಾಗಿದೆ. ಕಾಡಿನ ಬುದ್ಧಿಗೆ ಹಸಿವಿಲ್ಲ. ಹೊಟ್ಟೆಗೆ ಮಾತ್ರ ಹಸಿವು. ಹೀಗಾಗಿ ಬಲಾಢ್ಯ ಪ್ರಾಣಿ ಬಡಕಲು ಪ್ರಾಣಿಯನ್ನು ತಿಂದು ಬದುಕುತ್ತದೆ. ಆದರೆ, ನಾಡಿನಲ್ಲಿ ಬುದ್ಧಿಗೆ ಹಸಿವಿದೆ, ರಟ್ಟೆಗೆ ಕಸಿವಿದೆ. ಹಾಗಾಗಿ ಇಲ್ಲಿ ದುಡಿದು ತಿಂದು, ಮಿಕ್ಕದ್ದನ್ನು ಹಂಚಿ ತಿನ್ನುವ ಮನುಷ್ಯತನ ಇದೆ. ಇಂಥ ಮನುಷ್ಯತನ ಸಾಕಾರವಾಗಿದ್ದರಿಂದಲೇ ಮನುಕುಲ ಸಾವಿರಾರು ವರ್ಷಗಳಿಂದ ಬೆಳೆಯುತ್ತಾ ಬಂದಿತ್ತು. ಆದರೆ ಕಳೆದೆರಡು ಶತಮಾನಗಳಿಂದ ಹುಟ್ಟಿಕೊಂಡ ಕಾಂಚಾಣಮೃಗ ಸಾಕುವ ವಾಣಿಜ್ಯತಂತ್ರಗಾರಿಕೆ ಮನುಷ್ಯರ ಸೌಹಾರ್ದ ವ್ಯವಸ್ಥೆಯನ್ನೇ ಹಾಳುಮಾಡಿತು.

ಕಾಂಚಾಣಮೃಗ ಸಾಕುವುದು ಮತ್ತು ರೋಗಾಣು ಸಾಕುವುದು ಎರಡೂ ಒಂದೇ. ಕಾಂಚಾಣಮೃಗ ಮಾನಸಿಕ ರೋಗಿಗಳನ್ನು ಸೃಷ್ಟಿಸಿದರೆ, ರೋಗಾಣುಗಳು ದೈಹಿಕ ರೋಗ ತರುತ್ತದೆ. ಮಾನವರ ಬದುಕನ್ನೇ ಹಾಳು ಮಾಡುವ ಇಂಥ ದುರಾಚಾರದ ಸಾಕಾಣಿಕಾ ಕೇಂದ್ರಗಳು ಹೆಚ್ಚಾದಷ್ಟು ಮನುಷ್ಯತನ ಕಳೆದು, ಅಲ್ಲಿ ರಾಕ್ಷಸೀತನ ಕಾಣಿಸುತ್ತದೆ. ಮನುಷ್ಯರನ್ನು ಮನುಷ್ಯರ ರೀತಿ ನೋಡದೆ, ಹಣದ ದುರ್ಬೀನು ಹಿಡಿದು ನೋಡುವ ದುರ್ಭಾವನೆ ಬೆಳೆಯುತ್ತದೆ. ಕಾಂಚಾಣ ಮಾಯಾಮೃಗದ ಮಹಿಮೆ ತಿಳಿದೇ, ಯೋಗಿಗಳು ಹಣವನ್ನ ಕಾಲ ಕಸದಂತೆ ಕಂಡರು. ಶ್ರೀಮಂತಿಕೆ ಅಹಂನ್ನು ಅದುಮಿ, ಜೀವನದ ಜ್ಞಾನಾಮೃತ ನೀಡಿದರು. ಇಂಥ ಜ್ಞಾನಾಮೃತವನ್ನ ಈಗಲಾದರೂ ನಾವೆಲ್ಲಾ ಸವಿದು,‘ಸಚ್ಚಿದಾನಂದ’ ಲೋಕ ಸೃಷ್ಟಿಸಿ ನೆಮ್ಮದಿಯಾಗಿ ಬಾಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT