ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಕಾಲಯಾನವೇ ಯುಗದ ಧರ್ಮ

ಅಕ್ಷರ ಗಾತ್ರ

ಕಾಲ ಯಾರನ್ನೂ ಕಾಯುವುದಿಲ್ಲ, ತನ್ನ ಪರ್ಯಟನೆ ಮಾಡುತ್ತಲೇ ಇರುತ್ತದೆ. ಈ ಕಾಲನ ಹೆಜ್ಜೆಯೊಂದಿಗೆ ಇಷ್ಟವಿರಲಿ, ಇಲ್ಲದಿರಲಿ, ಎಲ್ಲರೂ ಹೆಜ್ಜೆ ಹಾಕಲೇಬೇಕು. ಹುಟ್ಟಿದ ಎಲ್ಲಾ ಜೀವಿಗಳು ನವ ಚೈತನ್ಯಕ್ಕಾಗಿ ಕಾಲನ ಯಾನದಲ್ಲಿ ಪಾಲ್ಗೊಳ್ಳಲೇಬೇಕು. ಗತಿಸಿದ ಜೀವಗಳು ಸಹ ಮರುಹುಟ್ಟಿಗೆ ಕಾಲನ ಗತಿಯನ್ನು ಚಾತಕಪಕ್ಷಿಯಂತೆ ಕಾಯಲೇಬೇಕು. ಸೃಷ್ಟಿಯ ಈ ಜೀವ-ಜೀವನಯಾನದಲ್ಲಿ ಕಾಲ ಉರುಳುತ್ತಲೇ ಇರುತ್ತದೆ. ಇದೇ ಯುಗಧರ್ಮ. ಇದನ್ನು ಬಿಟ್ಟು, ಸೃಷ್ಟಿಪಥದಾಚೆ ನಡೆದರೆ, ಅದರ ದುಷ್ಫಲವನ್ನು ಅನುಭವಿಸಬೇಕಾಗುತ್ತದೆ.

ಇಂದು ಮನುಷ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಸೃಷ್ಟಿನಿಯಮವನ್ನು ಮೀರಿದ್ದೇ ಕಾರಣ. ಅದರ ಪಾಪದ ಫಲವನ್ನು ಅನಾರೋಗ್ಯ, ಅನಾಹುತ, ಅನಾಚಾರದ ರೂಪದಲ್ಲಿ ಅನುಭವಿಸುತ್ತಿದ್ದಾನೆ. ಈ ಭೂಮಿಯಲ್ಲಿ ಹುಟ್ಟಿದ ಪ್ರತಿ ಜೀವಿಗೂ ಒಂದೇ ನಿಯಮ. ಮನುಷ್ಯನಿಗಾಗೇ ಪ್ರತ್ಯೇಕ ನಿಯಮವನ್ನ ಭಗವಂತ ರೂಪಿಸಿಲ್ಲ. ಆದರೆ ಮನುಷ್ಯನಿಗೆ ಒಂದಷ್ಟು ಹೆಚ್ಚು ಬುದ್ದಿ ಕೊಟ್ಟಿದ್ದಾನಷ್ಟೆ. ಅಷ್ಟಕ್ಕೆ ತಾನೇ ಜಗತ್ತಿಗೆ ಅತಿ ಬುದ್ಧಿವಂತ ಅಂದುಕೊಂಡ ಮಾನವ, ಭೂಮಂಡಲದಲ್ಲಿ ಕೂತು ಬ್ರಹ್ಮಾಂಡವನ್ನು ಅಳೆಯುತ್ತಾ ಬಾವಿಕಪ್ಪೆಯಂತಾದ.

ಮನುಷ್ಯ ಎಂಥ ಮೂರ್ಖನೆಂದರೆ, ತನ್ನ ದೇಹ ಪ್ರಕೃತಿ ಸಹಜವಾಗಿ ಬೆಳೆಯುವುದರ ಬದಲು, ಕೃತಕವಾಗಿ ಬೆಳೆಸಲು ಹೋಗಿ ಆರೋಗ್ಯ ಹಾಳು ಮಾಡಿಕೊಂಡ. ನೀರಲ್ಲಿ ಬೆಳೆಯುವ ಪಾಚಿ ಒಂದು ಸಸ್ಯ ಅಂತ ಗುರುತಿಸಿದರೂ, ಪಾಚಿಗಟ್ಟಿದ ನೀರನ್ನು ಅಸಹ್ಯಿಸಿದ. ಆದರೆ, ಅದೇ ಪಾಚಿಯಿಂದ ಗುಳಿಗೆ ತಯಾರಿಸಿ, ಪೌಷ್ಟಿಕ ಆಹಾರ ಅಂತ ಸಂಭ್ರಮಿಸಿದ. ತನ್ನ ದೇಹ ಸಹ ಸೂಕ್ಷ್ಮ ಜೀವಿಗಳಿಂದಲೇ ನಿರ್ಮಿತವಾಗಿದೆ ಎಂಬ ಪರಮ ಸತ್ಯ ತಿಳಿಯದೆ, ತಾನು ತಿನ್ನುವ ಅನ್ನ, ಕುಡಿಯುವ ನೀರು, ಧರಿಸುವ ಬಟ್ಟೆ ಎಲ್ಲದಕ್ಕೂ ಕೀಟನಾಶಕ ಬಳಸಿ ಹಾಳಾದ.

ಬಹುಶಃ ಮನುಷ್ಯ ಒಂದಿಷ್ಟು ಹಾಳಾಗಿದ್ದು ಕೂಡಿಡುವ ದುರ್ಬುದ್ಧಿಯಿಂದಾದರೆ, ಮತ್ತಷ್ಟು ಹಾಳಾಗಿದ್ದು ಜಗತ್ತನ್ನು ಸೂಕ್ಷ್ಮದರ್ಶಕ ಹಿಡಿದು ನೋಡುವ ಅಲ್ಪಬುದ್ಧಿಯಿಂದ. ಭಗವಂತನ ಬ್ರಹ್ಮಾಂಡ ಸೃಷ್ಟಿಯನ್ನು ಸೂಕ್ಷ್ಮದರ್ಶಕದಿಂದ ನೋಡಲು ಹೋಗಿ ವಿಭ್ರಾಂತನಾದ. ತನ್ನ ಸುತ್ತಾ ಇಷ್ಟೊಂದು ಕ್ರಿಮಿಗಳಿವೆಯೇ ಅಂತ ಬೆಚ್ಚಿಬಿದ್ದು ಅವುಗಳ ನಿರ್ನಾಮಕ್ಕೆ ಮುಂದಾದ. ಆದರೆ ಅಲ್ಪಜ್ಞನಿಗೆ ಈ ಸಣ್ಣ ಸಣ್ಣ ಸೂಕ್ಷ್ಮ ಜೀವಿಗಳಿಂದಲೇ ಈ ಬ್ರಹ್ಮಾಂಡ ಸೃಷ್ಟಿಯಾಗಿದೆ ಎಂಬ ಅವನೇ ಪ್ರತಿಪಾದಿಸಿದ ಪರಮಾಣುತತ್ವವನ್ನು ಮರೆತುಬಿಟ್ಟ.

ಈ ಭೂಮಿ ಸೃಷ್ಟಿಯಾಗಿ ಕೋಟ್ಯಂತರ ವರ್ಷಗಳಾಗಿವೆ. ಮನುಷ್ಯ ಭೂಮಿಗೆ ಬಂದು ಲಕ್ಷಾಂತರ ವರ್ಷಗಳಾಗಿವೆ. ಇಲ್ಲಿಯವರೆಗೆ ಮನುಷ್ಯ ಬದುಕಿದ್ದಾನೆಂದರೆ ಹಿಂದೆ ಅವನು ಬದುಕಿದ ರೀತಿ ಸರಿ ಇದೆ ಎಂದರ್ಥ. ಇಂಥ ಸೂಕ್ಷ್ಮ ಅರಿಯದ ಮನುಷ್ಯ ಸೂಕ್ಷ್ಮ ಜೀವಿಗಳ ನಾಶಕ್ಕೆ ಯತ್ನಿಸಿ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಿದ್ದಾನೆ. ಭಗವಂತ ಭೂಮಿಗೆ ಕಳುಹಿಸುವಾಗ ಒಂದಷ್ಟು ಜೀವಾಣುಗಳನ್ನು ನಮ್ಮ ದೇಹದೊಳಗೆ ತುಂಬಿಸಿ ಕಳುಹಿಸಿರುತ್ತಾನೆ. ಅದನ್ನ ಜತನದಿಂದ ಕಾಪಾಡಿಕೊಂಡು, ವೃದ್ದಿಸಿಕೊಂಡು ಬರುತ್ತೇವೋ ಅಲ್ಲಿವರೆಗೆ ಈ ದೇಹ ಸುರಕ್ಷಿತವಾಗಿರುತ್ತದೆ. ಇಂಥ ರಕ್ಷಕ ಜೀವಾಣುಗಳನ್ನೆ ಮೂರ್ಖನಂತೆ ಕೊಂದು, ಈಗ ಸಣ್ಣ ಕ್ರಿಮಿಗೂ ಬೆಚ್ಚಿ ಬೀಳುತ್ತಿದ್ದಾನೆ.

ವೈವಸ್ವತ ಮನ್ವಂತರದ ಪ್ಲವನಾಮ ಸಂವತ್ಸರದಲ್ಲಾದರೂ ಮಾನವ ತನ್ನ ಅಲ್ಪಬುದ್ಧಿ ಬಿಟ್ಟು, ವಿಶಾಲಬುದ್ಧಿಯಿಂದ ಪ್ರಕೃತಿಯೊಂದಿಗೆ ಒಡನಾಡುವುದನ್ನು ರೂಢಿಸಿಕೊಳ್ಳಲಿ. ಬಿಸಿಲಲ್ಲಿ ಬೆವರಿಸುವ, ಮಳೆಯಲ್ಲಿ ತೊಯ್ಯಿಸುವ, ಚಳಿಯಲ್ಲಿ ನಡುಗಿಸುವ ಪ್ರಕೃತಿಯ ಒಸಗೆಯನ್ನು ಪ್ರಾಂಜಲ ಮನಸ್ಸಿನಿಂದ ಆಸ್ವಾದಿಸಲಿ. ಯುಗದ ಯುಗಳ ಗೀತೆಗೆ ಕೊರಳೊಡ್ಡುವ ಪಕ್ಷಿಗಳಂತೆ, ಹಸಿರ ಹರ್ಷದಿಂದ ತೂಗಾಡುವ ಗಿಡಮರಗಳಂತೆ ಮನುಷ್ಯ ಭೂರಮೆಯ ವಸಂತೋತ್ಸವದಲ್ಲಿ ಮಿಂದೆದ್ದರೆ ‘ಸಚ್ಚಿದಾನಂದ’ದ ಯುಗಧರ್ಮ ಸಾಕಾರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT