ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಭೀಮೇಶ್ವರ ವ್ರತ

ಅಕ್ಷರ ಗಾತ್ರ

ಆಧುನಿಕತೆ ಬೆಳೆದಂತೆ ಮಾನವರಲ್ಲಿ ಹಿಂದಿನ ಸಂಪ್ರದಾ ಯಗಳನ್ನು ಮರೆಯುವ, ಮೂದಲಿಸುವ ದುರ್ವರ್ತನೆ ಬೆಳೆಯುತ್ತಿದೆ. ನಮ್ಮ ಹಿರಿ ಯರು ಹಾಕಿ ಕೊಟ್ಟ ಸತ್ಸಂಪ್ರದಾಯವನ್ನು ಮುರಿಯುವುದೇ ಆಧುನಿಕತೆಯ ಲಕ್ಷಣ ಅನ್ನುವ ಅವಲಕ್ಷಣಗಳೂ ಹೆಚ್ಚುತ್ತಿವೆ. ಹಿಂದಿನ ಕಾಲದವರು ದಡ್ಡರು, ತಾವೇನೋ ಮಹಾನ್ ಬುದ್ಧಿವಂತರು ಅನ್ನೋ ಅಹಂ ಮೆತ್ತಿಕೊಂಡ ಜನ ರಿಂದ ಸಮಾಜದ ನೈತಿಕ ಚೌಕಟ್ಟು ಒಡೆದು, ಮನೆಮನಗಳಲ್ಲಿ ಅಶಾಂತಿಯ ಕ್ಷೋಭೆ ಆವರಿಸುತ್ತಿದೆ. ಯಾವುದನ್ನು ನಮ್ಮ ಸಮಾಜದಲ್ಲಿ ಆಗಬಾರದೆಂದು ನಮ್ಮ ಹಿರಿಯರು ಯೋಚಿಸಿ-ಯೋಜಿಸಿ ಧರ್ಮ-ಸಂಸ್ಕೃತಿಯನ್ನು ರೂಪಿಸಿ ದ್ದರೋ, ಅದರ ಅಸ್ತಿತ್ವವನ್ನೆ ಅಲುಗಾಡಿಸುತ್ತಾ ತಮ್ಮ ನೆಮ್ಮದಿಯನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ನಮ್ಮ ಪೂರ್ವಿಕರು ಯಾವ ನಿಯಮವನ್ನೂ ಯೋಚಿಸದೆ ಮಾಡಿಲ್ಲ. ಸಾವಿರಾರು ವರ್ಷಗಳ ದೃಷ್ಟಾಂತಗಳನ್ನು ತೂಗಿ ನೋಡಿ ಮನುಷ್ಯನ ಮರ್ಕಟದಂಥ ಮನಸ್ಸಿಗೆ ಕಡಿವಾಣ ಹಾಕುವ ನೀತಿ-ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಆಧುನಿಕ ಮನುಷ್ಯರು ಸಂಪ್ರದಾಯಗಳ ಹಿಂದಿನ ಸದುದ್ದೇಶ ತಿಳಿಯದೆ ನಿರ್ಲಕ್ಷಿಸುತ್ತಿದ್ದಾರೆ. ಅದರ ದುಷ್ಪರಿಣಾಮವನ್ನು ಆಧುನಿಕ ಮಾನವರು ಈಗ ಅನುಭವಿಸುತ್ತಿದ್ದಾರೆ. ಎಲ್ಲಾ ಇದ್ದರೂ, ಏನೋ ಕಳೆದುಕೊಂಡ ಭಾವದಲ್ಲೇ ಜೀವನ ಸವೆಸುತ್ತಿದ್ದಾರೆ. ಮನುಷ್ಯ ಮಿತಿ ಅನ್ನುವ ಜೀವನದ ಲೆಕ್ಕಾಚಾರದಲ್ಲಿ ಎಡವಿ, ವೈವಾಹಿಕ ಸಂಬಂಧಗಳನ್ನು ಶಿಥಿಲಗೊಳಿಸಿಕೊಳ್ಳುತ್ತಿದ್ದಾರೆ.

ನಮ್ಮ ಸುಖ-ದುಃಖಗಳಿಗೆ ಮನಸ್ಸೇ ಕಾರಣ. ಮನಸ್ಸಿನ ಆಮಿಷಕ್ಕೆ ಬೀಳದೆ, ಸಂಯಮದಿಂದ ಸಂಸಾರ ನಿರ್ವಹಿಸಬೇಕು. ಮನುಷ್ಯನ ಆಸೆಗೆ ಕೊನೆ ಎಂಬುದಿಲ್ಲ. ಅವನ ಅತಿ ಆಸೆಯಿಂದ ಸಮಾಜದ ವ್ಯವಸ್ಥೆ ಹೇಗೆ ಹಾಳಾಗುತ್ತದೆ ಎಂಬುದನ್ನು ಅರಿತ ನಮ್ಮ ಗುರು-ಹಿರಿಯರು ನೈತಿಕ ಚೌಕಟ್ಟುಗ ಳನ್ನು ಹಾಕಿದ್ದಾರೆ. ಅಂಥ ಚೌಕಟ್ಟು ಮುರಿದರೆ ಬದುಕಿನಲ್ಲಿ ಮತ್ತೆಂದೂ ಏಳಲಾರದ ಪ್ರಪಾತಕ್ಕೆ ಬೀಳಬೇಕಾಗುತ್ತದೆ. ಸಿಹಿ ಮಿತಿಯಾಗಿ ತಿಂದರೆ ಚೆನ್ನ. ಅತಿಯಾಗಿ ತಿನ್ನಲು ಯತ್ನಿ ಸಿದರೆ ವಾಕರಿಕೆ ಬರುತ್ತದೆ. ಹಾಗೇ, ಆಸೆ ಎಂಬುದು ಮಿತಿಯಾಗಿದ್ದರೆ ಬದುಕು ಚೆನ್ನಾಗಿರುತ್ತದೆ; ಅತಿ ಆಸೆ ಪಟ್ಟರೆ ಬದುಕು ಕೆಡುತ್ತದೆ. ಇಂದಿನ ದಿನಗಳಲ್ಲಿ ವೈವಾಹಿಕ ಬಂಧಗಳನ್ನು ಸಡಿಲಗೊಳಿಸುತ್ತಿರುವುದು ಮಿತಿಮೀರಿದ ಆಸೆಗಳು. ಹಿರಿಯರ ಅನುಭವ ಕೇಳಿ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳಬೇಕು. ಇಲ್ಲದಿದ್ದರೆ, ಭವಿಷ್ಯದ ಬದುಕು ಬರ್ಬರವಾಗುತ್ತದೆ. ಪತಿ-ಪತ್ನಿಯರ ಸಂಬಂಧ ದೈವಾಂಶ ಸಂಭೂತವಾಗಿದೆ ಎಂಬುದನ್ನು ತಿಳಿಸಲು ನಮ್ಮ ಧರ್ಮ-ಸಂಸ್ಕೃತಿಯಲ್ಲಿ ದೇವರುಗಳ ದಾಂಪತ್ಯದ ವಿವರವಿದೆ. ಆ ಜಗನ್ಮಾತೆ ಪಾರ್ವತಿಯೇ ಶಿವನನ್ನು ಮದುವೆಯಾದಾಗ ಪತಿವ್ರತಾಧರ್ಮದ ಉಪದೇಶ ಪಡೆಯುತ್ತಾಳೆ ಎಂಬುದನ್ನ ವೇದವ್ಯಾಸರ ಶಿವಮಹಾಪುರಾಣದಲ್ಲಿ ಹೇಳಲಾಗಿದೆ. ತಾಯಿ ಮೇನಾದೇವಿಯು ಮಗಳು ಪಾರ್ವತಿ ಗಂಡನ ಮನೆಯಲ್ಲಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿಕೊಡುತ್ತಾಳೆಂದಮೇಲೆ, ಹುಲುಮಾನವರಾದ ನಾವು ಬದುಕಿನ ಪಾಠವನ್ನು ಅನುಭಾವಿಗಳಿಂದ ಕೇಳಿ ಅನುಸರಿಸಲೇಬೇಕು.

ವೇದವ್ಯಾಸರ ಮತ್ತೊಂದು ಉತ್ಕೃಷ್ಟ ಪುರಾಣವಾದ ಸ್ಕಂದಪುರಾಣದಲ್ಲಿ ‘ಜ್ಯೋತಿರ್ಭೀಮೇಶ್ವರ ವ್ರತ’ದ ಬಗ್ಗೆ ಉಲ್ಲೇಖವಿದೆ. ಸತ್ತ ರಾಜಕುಮಾರನನ್ನು ಮದುವೆಯಾದ ಪತಿವ್ರತೆ ಆಷಾಢಮಾಸದ ಅಮಾವಾಸ್ಯೆಯಂದು ಶಿವಪಾರ್ವತಿಯನ್ನು ಆರಾಧಿಸಿ ಪತಿಯನ್ನು ಬದುಕಿಸಿಕೊಂಡ ವಿವರವಿದೆ. ವಾರಾಹ ಋಷಿಯ ಶಾಪಕ್ಕೆ ಮೃತನಾದ ಬ್ರಾಹ್ಮಣನನ್ನು ಅನಸೂಯಾದೇವಿ ತನ್ನ ಪಾತಿವ್ರತ್ಯದಿಂದ ಬದುಕಿಸಿದ ಕತೆ ಇದೆ. ಈಶ್ವರನಿಗೆ ಸಂಬಂಧಿಸಿದ ದಿನವಾದ ಭೀಮನ ಅಮಾವಾಸ್ಯೆಯಂದು ಮುತ್ತೈದೆಯರುಭೀಮೇಶ್ವರವ್ರತವನ್ನು ಮಾಡಿದರೆ, ಪತಿಯ ಆಯುಷ್ಯ ವೃದ್ಧಿಸುತ್ತದೆ. ಕನ್ಯೆಯರು ಭೀಮೇಶ್ವರವ್ರತವನ್ನು ಮಾಡಿದರೆ ಒಳ್ಳೆಯ ಗಂಡ ಸಿಗುತ್ತಾನೆ ಎಂಬ ನಂಬಿಕೆ ಇದೆ. ಇಂಥ ನಂಬಿಕೆ-ಆಚರಣೆಗಳೇ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಇದೇ ‘ಸಚ್ಚಿದಾನಂದ’ದ ನೆಮ್ಮದಿಯ ಬದುಕಿಗೂ ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT