ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ತಿಸುಧೆಯ ಸವಿಯಲ್ಲಿ ಜೀವನ ದರ್ಶನ

ಅರಿವು
Last Updated 3 ಜನವರಿ 2020, 19:31 IST
ಅಕ್ಷರ ಗಾತ್ರ

‘ಶೋಭನಂ ಭಾಷಿತಂ ಸುಭಾಷಿತಮ್’ ಎಂಬ ನಿರ್ವಚನದಂತೆ ಸುಭಾಷಿತ, ಸೂಕ್ತಿ, ಸದುಕ್ತಿ - ಇವೆಲ್ಲ ಶಬ್ದಗಳಿಗೂ ಒಳ್ಳೆಯ ಮಾತು ಎಂದರ್ಥ. ಇಂತಹ ಸಾವಿರಾರು ಸುಭಾಷಿತಗಳ ಸಂಗ್ರಹರೂಪದಲ್ಲಿರುವ ಸುಭಾಷಿತಾವಲಿ, ಸೂಕ್ತಿಮುಕ್ತಾವಲಿ, ಸದುಕ್ತಿಕರ್ಣಾಮೃತ, ಶಾರ್ಙ್ಗಧರಪದ್ಧತಿ, ಸುಭಾಷಿತರತ್ನಭಾಂಡಾಗಾರವೇ ಮೊದಲಾದ ಗ್ರಂಥಗಳು ಸಂಸ್ಕೃತದಲ್ಲಿ ಹಲವಾರಿವೆ. ಇವುಗಳಲ್ಲದೆ ವೇದೋಪನಿಷತ್ತುಗಳಲ್ಲಿ, ಪುರಾಣೇತಿಹಾಸಗಳಲ್ಲಿ, ಮಹಾಕವಿಗಳ ಕಾವ್ಯಗಳಲ್ಲಿ ಜೀವನಾನುಭವವು ಹರಳುಗಟ್ಟಿರುವ ಬಹಳಷ್ಟು ಸೂಕ್ತಿಗಳನ್ನು ಕಾಣಬಹುದು. ಸಂಗ್ರಹಗ್ರಂಥಗಳಲ್ಲಿರುವ ಸುಭಾಷಿತಗಳಲ್ಲಿ ನೀತಿ, ಅನ್ಯೋಕ್ತಿ, ವರ್ಣನೆ ಇತ್ಯಾದಿ ಪ್ರಕಾರಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಸುಭಾಷಿತಗಳು ನಿರ್ದಿಷ್ಟವಾದ ಕವಿಗಳಿಂದ ರಚಿಸಲ್ಪಟ್ಟಿದ್ದರೆ, ಇನ್ನು ಕೆಲವು ಅಜ್ಞಾತಕರ್ತೃಕವಾಗಿವೆ. ಸುಭಾಷಿತರತ್ನಭಾಂಡಾಗಾರದಲ್ಲಿರುವ ನೀತಿಬೋಧಕವಾದ ಶ್ಲೋಕವೊಂದು ಹೀಗಿದೆ:

ಅಕೃತ್ವಾ ಪರಸಂತಾಪಮಗತ್ವಾ ಖಲನಮ್ರತಾಮ್ |

ಅನುತ್ಸೃಜ್ಯ ಸತಾಂ ವರ್ತ್ಮ ಯತ್ ಸ್ವಲ್ಪಮಪಿ ತದ್ ಬಹು ||

(ಇನ್ನೊಬ್ಬರಿಗೆ ನೋವನ್ನುಂಟುಮಾಡದೆ, ದುಷ್ಟರಿಗೆ ತಲೆಬಾಗದೆ, ಸಜ್ಜನರ ದಾರಿಯನ್ನು ಬಿಡದೆ ಮಾಡಿದ ಕೆಲಸವು ಸಣ್ಣದಾದರೂ ದೊಡ್ಡದೆನಿಸುತ್ತದೆ.)

ಈ ಶ್ಲೋಕವು ಅನುಷ್ಟುಪ್ ಎಂಬ ಸಣ್ಣ ಛಂದಸ್ಸಿನಲ್ಲಿ ರಚಿತವಾಗಿದ್ದರೂ ಮಾನವಜೀವನದ ಸಾರ್ಥಕ್ಯಮೀಮಾಂಸೆಯೇ ಇದರಲ್ಲಿ ಅಡಗಿದೆ.

ಅನ್ಯೋಕ್ತಿ, ಅನ್ಯಾಪದೇಶ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಸೂಕ್ತಿಗಳಲ್ಲಿ ಅಪ್ರಸ್ತುತಪ್ರಶಂಸಾ ಎಂಬ ಅಲಂಕಾರವಿರುತ್ತದೆ. ಈ ಪದ್ಯಗಳು ಮೋಡ, ದುಂಬಿ, ಮಲ್ಲಿಗೆ, ಕೋಗಿಲೆ, ಸಮುದ್ರ ಮೊದಲಾದವುಗಳ ಕುರಿತಾಗಿ ರಚಿಸಲ್ಪಟ್ಟಿದ್ದರೂ ಅವುಗಳಿಂದ ಪ್ರಸ್ತುತಕ್ಕೆ ಸಂಬಂಧಿಸಿದ ಬೇರೊಂದು ಅರ್ಥವು ಹೊರಹೊಮ್ಮುತ್ತದೆ. ವಲ್ಲಭದೇವನ ಸುಭಾಷಿತಾವಲಿಯಲ್ಲಿರುವ ಈ ಮುಂದಿನ ಪದ್ಯವು ಅದೇ ಜಾಡಿಗೆ ಸೇರಿದೆ.

ಪರಾರ್ಥೇ ಯಃ ಪೀಡಾಮನುಭವತಿ ಭಂಗೇ ಪಿ ಮಧುರೋ

ಯದೀಯಃ ಸರ್ವೇಷಾಮಿಹ ಖಲು ವಿಕಾರೋ ಪ್ಯಭಿಮತಃ |

ನ ಸಂಪ್ರಾಪ್ತೋ ವೃದ್ಧಿಂ ಯದಿ ಸ ಭೃಶಮಕ್ಷೇತ್ರಪತಿತಃ

ಕಿಮಿಕ್ಷೋರ್ದೋಷೋ ಸೌ ನ ಪುನರಗುಣಾಯಾ ಮರುಭುವಃ ||

‘ಕಬ್ಬು ಬೇರೆಯವರಿಗಾಗಿ ತೊಂದರೆಯನ್ನು ಅನುಭವಿಸುತ್ತದೆ. ತುಂಡರಿಸಿದರೂ ಸಿಹಿಯಾಗಿಯೇ ಇರುತ್ತದೆ. ಅದರ ಹಾಲು, ಬೆಲ್ಲವೇ ಮುಂತಾದ ವಿಕಾರಗಳು ಎಲ್ಲರಿಗೂ ಇಷ್ಟ. ಇಂತಹ ಕಬ್ಬು ಹಸನಾಗಿರದ ಭೂಮಿಯಲ್ಲಿ ಬಿದ್ದು ಬೆಳೆಯದಿದ್ದರೆ ಅದು ಕಬ್ಬಿನ ದೋಷವೇ ಅಥವಾ ಸಾರವಿಲ್ಲದ ಮರುಭೂಮಿಯ ದೋಷವೇ?‘

ಈ ಪದ್ಯವು ಕಬ್ಬಿನ ಕುರಿತಾಗಿರುವಂತೆ ಕಂಡರೂ ಅದು ಅಪ್ರಸ್ತುತವೇ ಸರಿ. ಬದಲಾಗಿ ಇಲ್ಲಿ ಇನ್ನೊಬ್ಬರ ಪ್ರಯೋಜನಕ್ಕಾಗಿ ಕಷ್ಟವನ್ನು ಅನುಭವಿಸುವ, ಆದರೆ ವಿಧಿವಶಾತ್ ಅನುಚಿತವಾದ ಸ್ಥಳದಲ್ಲಿ ಇರಬೇಕಾಗಿ ಬಂದು ಬೆಳೆಯಲಾಗದ ಸ್ಥಿತಿಯನ್ನು ತಲುಪಿರುವ ಒಬ್ಬ ಸಜ್ಜನನ ಪಾಡು ತೋರಿಬರುತ್ತದೆ. ಈ ಪದ್ಯವನ್ನು ಆಲಂಕಾರಿಕವರೇಣ್ಯನಾದ ಆನಂದವರ್ಧನನೂ ಧ್ವನ್ಯಾಲೋಕದಲ್ಲಿ ಉಲ್ಲೇಖಿಸಿದ್ದಾನೆ.

ಸುಭಾಷಿತಸಂಗ್ರಹಗಳಲ್ಲಿ ನವರಸಗಳ ವಿಭಾವ, ಅನುಭಾವ, ಸಂಚಾರಿಭಾವಗಳಿಗೆ ಸಂಬಂಧಿಸಿದ ವರ್ಣನೆಗಳನ್ನೂ ನೋಡಬಹುದು. ಉದಾಹರಣೆಗಾಗಿ ಸರ್ವದಾಸನೆಂಬ ಕವಿಯ ಹೆಸರಿನಲ್ಲಿ ಜಲ್ಹಣನ ಸೂಕ್ತಿಮುಕ್ತಾವಲಿಯಲ್ಲಿ ಕಂಡುಬರುವ, ಶೃಂಗಾರರಸಕ್ಕೆ ಉದ್ದೀಪಕವಿಭಾವವೆನಿಸಿದ ಮಳೆಗಾಲದ ವರ್ಣನೆಯನ್ನು ಗಮನಿಸಬಹುದು:

ಶೀತಲಾದಿವ ಸಂತ್ರಸ್ತಂ ಪ್ರಾವೃಷೇಣ್ಯಾನ್ನಭಸ್ವತಃ |

ನಭೋ ಬಭಾರ ನೀರಂಧ್ರಂ ಜೀಮೂತಕುಲಕಂಬಲಮ್ ||

‘ತಂಪಾದ ಮಳೆಗಾಲದ ಗಾಳಿಯಿಂದ ತೊಳಲಾಟವನ್ನು ಅನುಭವಿಸಿತೋ ಎನ್ನುವಂತೆ ಆಗಸವು ಒತ್ತೊತ್ತಾದ ಮೋಡಗಳ ಸಮೂಹವೆನ್ನುವ ರಂಧ್ರವಿಲ್ಲದ ಕಂಬಳಿಯನ್ನು ಹೊದ್ದುಕೊಂಡಿತು.’

ಇಲ್ಲಿರುವ ಉತ್ಪ್ರೇಕ್ಷಾಲಂಕಾರವು ಪದ್ಯದ ಸೊಗಸನ್ನು ಹೆಚ್ಚಿಸಿದೆ. ‘ಯಾರು ಸುಭಾಷಿತರೂಪವಾದ ದ್ರವ್ಯವನ್ನು ಸಂಗ್ರಹಿಸುವುದಿಲ್ಲವೋ ಅವರು ಯಾವುದೇ ವಿಷಯಗಳನ್ನು ಪ್ರಸ್ತಾಪಿಸುವುದು ಎಂಬ ಯಜ್ಞದಲ್ಲಿ ಯಾವುದನ್ನು ದಕ್ಷಿಣೆಯನ್ನಾಗಿ ನೀಡುತ್ತಾರೆ?’ ಎಂದು ಶಾರ್ಙ್ಗಧರಪದ್ಧತಿಯಲ್ಲಿ ಉದ್ಗರಿಸಲಾಗಿದೆ. ಅದರಂತೆ ಸುಭಾಷಿತವು ಭಾಷಣ-ಲೇಖನವ್ಯವಸಾಯಗಳಿಗೆ ಮತ್ತು ಅಲ್ಲಿ ಹೇಳಿದಂತೆ ಸನ್ಮಾರ್ಗದಲ್ಲಿ ನಡೆದರೆ ನಮ್ಮ ಬಾಳಿಗೂ ಸತ್ತ್ವವನ್ನು ತುಂಬುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT