ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಗುಣವೇ ಸಚ್ಚಿದಾನಂದರೂಪ

ಅಕ್ಷರ ಗಾತ್ರ

ಮನಸ್ಸನ್ನು ಸ್ವಸ್ಥವಾಗಿಟ್ಟುಕೊಂಡು ಒಳ್ಳೆಯ ರೀತಿಯಿಂದ ನೋಡಿದರೆ ಪ್ರಪಂಚ ಸುಂದರವಾಗಿ ಕಾಣುತ್ತೆ. ಅದೇ ಅಸ್ವಸ್ಥ ಮನಸ್ಸಿಂದ ನೋಡಿದರೆ ಪ್ರಪಂಚ ಕುರೂಪವಾಗೇ ಕಾಣುತ್ತೆ. ಬುದ್ಧಿಯನ್ನು ಕುಟುಂಬದ ನೆಮ್ಮದಿಗೆ, ಸಮಾಜದ ಒಳಿತಿಗೆ ಬಳಸಬೇಕು. ಮನಸ್ಸಿಗೆ ಒಪ್ಪದವರ ಹಣಿಯಲು, ಕುಯುಕ್ತಿ ಯೋಜಿಸಲು ಬುದ್ಧಿವ್ಯಯ ಮಾಡಬಾರದು. ಮನಸ್ಸು ಗಾಜಿನಂತೆ ಬಹಳ ಸೂಕ್ಷ್ಮ; ಒಮ್ಮೆ ಒಡೆದರೆ, ಜೋಡಿಸಲು ಸಾಧ್ಯವಿಲ್ಲ. ಸಂಬಂಧಗಳು ಹಾಗೆಯೇ, ಒಮ್ಮೆ ಒಡೆಯಿತೆಂದರೆ ಮತ್ತೆ ಒಗ್ಗೂಡುವುದು ಕಷ್ಟಸಾಧ್ಯ. ಒಡೆದ ಗಾಜಿನ ಚೂರುಗಳಲ್ಲಿ ಪ್ರತಿಬಿಂಬಗಳಿದ್ದರೆ, ಒಡೆದ ಮನಸ್ಸಿನಲ್ಲಿ ಛಿದ್ರವಾದ ಭಾವನೆಗಳಿರುತ್ತವೆ.

ಜಗತ್ತಿನ ಎಲ್ಲ ವಿಘಟನೆಗಳು ಮಾನವರ ವಿಕಲ್ಪಗಳಿಂದ ಸಂಭವಿಸುತ್ತದೆ. ಇಂಥ ವಿಕಲ್ಪಗಳಿಗೆ ಮಾನವರ ವಿಕೃತ ಮನಸ್ಸುಗಳೇ ಕಾರಣ. ಇವತ್ತಿದ್ದು, ನಾಳೆ ಸಾಯುವ ಮನುಷ್ಯ ತಾನೇನೊ ಭೂಮಿಯಲ್ಲಿ ಶಾಶ್ವತವಾಗಿ ನೆಲೆಸುವವನಂತೆ ದುರಾಸೆತನದಲ್ಲಿ ಧಾಂಗುಡಿ ಇಡುತ್ತಿದ್ದಾನೆ. ಮಾನವ ಶಾಶ್ವತವಾಗಿ ಬದುಕಿದ್ದಿದ್ದರೆ ಇನ್ನೆಂಥ ಸ್ವಾರ್ಥತನದಲ್ಲಿ ಭೂಮಿ ಕುಲಗೆಡಿಸುತ್ತಿದ್ದನೋ? ಮನುಷ್ಯನ ದುರ್ಬುದ್ಧಿಯನ್ನು ಅರಿತೇ ಭಗವಂತ ಆಯುಷ್ಯವನ್ನು ಸೀಮಿತಗೊಳಿಸಿದ್ದಾನೆ. ಇದನ್ನರಿಯದ ದುರಾಸೆ ಜನ ಅಮರತ್ವ ಪಡೆಯುತ್ತೇನೆಂದು ಪ್ರಯತ್ನಿಸಿ ಸೋತಿದ್ದಾರೆ. ಅಮರತ್ವಕ್ಕೆ ಬಯಸಿದವರೆ ಬಹಳ ಬೇಗ ಜೀವ ಕಳೆದುಕೊಂಡಿದ್ದಾರೆ. ಏಕೆಂದರೆ, ಮನುಷ್ಯನೊಳಗಿನ ಅವನ ಆಸೆಯೇ ಆಯುಷ್ಯವನ್ನು ಕ್ಷೀಣಿಸುವಂತೆ ಮಾಡುತ್ತದೆ.

ಆಸೆಯೇ ದುಃಖಕ್ಕೆ ಕಾರಣ ಅಂತ ಬುದ್ಧ ಹೇಳಿದ್ದು, ಶಾಂತಿ-ಸಹನೆಯೇ ಮಾನವ ಲಕ್ಷಣ ಅಂತ ಗಾಂಧೀಜಿ ಹೇಳಿದ್ದು ಇದೇ ಅರ್ಥದಲ್ಲಿ. ಮನಸ್ಸು ಕೆಟ್ಟದ್ದನ್ನು ಯೋಚಿಸಿದಷ್ಟು ದೇಹ ರೋಗದ ಗೂಡಾಗುತ್ತದೆ. ಒಳ್ಳೆಯದನ್ನು ಆಲೋಚಿಸಿದಷ್ಟು ದೇಹ ಆರೋಗ್ಯವಾಗಿರುತ್ತದೆ. ಒಳ್ಳೆಯದನ್ನು ಮಾಡುವಾಗ ಮನಸು ನೆಮ್ಮದಿಯಾಗಿರುವಷ್ಟು, ಕೆಟ್ಟದ್ದನ್ನು ಮಾಡುವಾಗ ಇರುವುದಿಲ್ಲ. ಒಳ್ಳೆಯದನ್ನು ಮಾಡಿದಾಗ ಮನಸ್ಸು ನಿರಾಳವಾಗಿರುತ್ತದೆ. ನಮ್ಮ ಪಾಪ-ಪುಣ್ಯಗಳನ್ನು ಲೆಕ್ಕ ಹಾಕಲು ಚಿತ್ರಗುಪ್ತ ಯಮಲೋಕದಲ್ಲಿಲ್ಲ, ನಮ್ಮ ಅಂತರಾತ್ಮದಲ್ಲಿರುತ್ತಾನೆ. ಈ ಕಾರಣಕ್ಕೆ ನಾವು ತಪ್ಪು ಮಾಡಿದಾಗಲೆಲ್ಲ ನಮ್ಮೊಳಗಿನ ಆತ್ಮ ಚಡಪಡಿಸುತ್ತದೆ. ಈ ಚಡಪಡಿಕೆಯಿಂದ ಮನಸು ಶಾಂತಿ ಇಲ್ಲದೆ, ದೇಹವನ್ನು ಬಹಳ ಬೇಗ ಸಾವಿನ ಹತ್ತಿರಕ್ಕೆ ತರುತ್ತದೆ.

ಧರ್ಮ, ಜಾತಿ, ದೇಶವನ್ನು ದ್ವೇಷಿಸುತ್ತಾ ಬದುಕುವುದು ಮನುಷ್ಯನ ಮನೋವಿಕಾರಕ್ಕೆ ಕಾರಣವಾಗುತ್ತೆ. ಅದು ದ್ವೇಷಕಾರನ ಮನಸನ್ನೇ ತಿಂದು, ದೇಹ ಗುಣಪಡಿಸಲಾಗದಷ್ಟು ಅನಾರೋಗ್ಯಪೀಡಿತವಾಗಿಸುತ್ತೆ. ಎಲ್ಲರೂ ತನ್ನವರು ಎಂದು ಪ್ರೀತಿಸುವ ಮನಸ್ಸು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಇದನ್ನರಿತೆ, ಎಲ್ಲಾ ಧರ್ಮಗಳು ಮನೋನಿಗ್ರಹಕ್ಕೆ ಧ್ಯಾನ-ಪೂಜಾ ಮಾರ್ಗಗಳನ್ನು ತಿಳಿಸಿವೆ. ಧರ್ಮವನ್ನು ಸರಿಯಾಗಿ ಅನುಸರಿಸಿದಾಗ ಯಾವ ಮನುಷ್ಯನೂ ಪರದ್ವೇಷದಲ್ಲಿ ನಿರತನಾಗುವುದಿಲ್ಲ. ಸರಿಯಾಗಿ ಧರ್ಮ ಅನುಸರಿಸದವರೆ ಅನ್ಯದ್ವೇಷದಲ್ಲಿ ತೊಡಗುತ್ತಾರೆ. ಇಂಥವರಿಗೆ ಧರ್ಮದ ನಿಜವಾದ ಅರ್ಥ ತಿಳಿಸದಿದ್ದರೆ, ಅಪಾಯ ತಪ್ಪಿದ್ದಲ್ಲ.

ಒಂದು ಮನೆಯಲ್ಲಿ ವಾಸಿಸುವವರು ಮನೆಯ ಒಳಿತಿಗೆ ಮನೆಯವರೆಲ್ಲರ ಉನ್ನತಿ ಬಯಸಿದರೆ ಆ ಕುಟುಂಬದಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುತ್ತದೆ. ಒಂದು ಸೂರಿನಡಿ ಕೆಲಸ ಮಾಡುವವರು ತಾವೆಲ್ಲಾ ಒಂದು ಕುಟುಂಬದವರಿದ್ದಂತೆ ಭಾವಿಸಿ ದುಡಿದರೆ ಸಂಸ್ಥೆಗಳು ಉದ್ಧಾರವಾಗುವುದಲ್ಲದೆ, ಆ ಸ್ಥಳ ನೌಕರರ ಸೌಹಾರ್ದದ ಬೀಡಾಗುತ್ತದೆ. ಯಾರನ್ನೊ ಹಣಿದು, ಯಾರನ್ನೊ ಅಣಕಿಸಿ ತಾವು ವಿಕೃತಾನಂದ ಪಡೆಯಬೇಕೆನ್ನುವ ವಿಕಾರಬುದ್ಧಿಯನ್ನು ಬಿಟ್ಟರೆ ಸಮಾಜ ಆಹ್ಲಾದತೆಯಿಂದ ಬೀಗುತ್ತದೆ. ಇಂಥ ಸದ್ಗುಣ ಸಾಕಾರವೇ ಸಚ್ಚಿದಾನಂದರೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT