ಸೋಮವಾರ, ಜನವರಿ 17, 2022
20 °C

ವೇದವ್ಯಾಸರ ಶಿವಪುರಾಣಸಾರ: ಸಂಕ್ರಮಣ ಬದಲಾವಣೆ ಪರ್ವಕಾಲ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಈ ಜಗತ್ತಲ್ಲಿ ಹುಟ್ಟಿದ ಪ್ರತಿ ಜೀವಿಯಲ್ಲೂ ಬದಲಾವಣೆ ಕಾಣುತ್ತಿರುತ್ತದೆ. ಪ್ರಕೃತಿಯಲ್ಲಂತೂ ಕ್ಷಣಕ್ಷಣಕ್ಕೂ ಅದರ ಕಣಕಣದಲ್ಲೂ ಬದಲಾವಣೆಯಾಗುತ್ತಿರುತ್ತದೆ. ಆದರೆ ಬದಲಾವಣೆಯ ಗಾಳಿಗೆ ಮೈಮನಸ್ಸು ತೆರೆದುಕೊಳ್ಳದ ಜೀವಿ ಇದ್ದರೆ ಅದು ಮನುಷ್ಯ ಮಾತ್ರ. ಮನುಷ್ಯ ಭೂಮಿಗೆ ಬಂದಾಗಿನಿಂದ ಇಲ್ಲಿವರೆಗೆ ತನ್ನ ಕಂಕುಳಲ್ಲಿ ಕಟ್ಟಿಕೊಂಡು ಬಂದ ಸ್ವಾರ್ಥತನ ಬಿಟ್ಟು, ಉತ್ತಮವಾಗಿ ಬದುಕುವುದನ್ನು ರೂಢಿಸಿಕೊಳ್ಳಲಿಲ್ಲ. ಕೋಟೆಕಟ್ಟಿ ಮೆರೆದವರಾರೂ ಶಾಶ್ವತವಾಗಿ ಉಳಿಯಲಿಲ್ಲ ಎಂಬ ಹಸಿಸತ್ಯ ನೆನಪಿದ್ದರೂ, ಪರರ ಶೋಷಿಸಿ ಬದುಕುವುದನ್ನು ಬಿಡಲಿಲ್ಲ. ಜಗತ್ತು ನಾವು ಕಂಡಷ್ಟು ಸರಳವೂ ಅಲ್ಲ, ತಿಳಿಯದಷ್ಟು ವಿರಳವೂ ಇಲ್ಲಿಲ್ಲ. ಇಲ್ಲಿ ಮೊಗೆದಷ್ಟು ಸತ್ಯದ ಅರಳು ಅನಾವರಣವಾಗುತ್ತದೆ; ಇಲ್ಲಿ ಮುಚ್ಚಿದಷ್ಟು ಮಿಥ್ಯದ ಉರುಳು ತಲೆಮಾರಿನಿಂದ ತಲೆಮಾರಿಗೆ ಬಿಗಿಯುತ್ತದೆ ಎಂಬ ಕಟು ಸತ್ಯ ತಿಳಿಯದಾದ. ತನ್ನ ಅಂಗೈಯಲ್ಲೇ ಸುಖವಿದ್ದರೂ, ಪರರ ಅಂಗಳದಲ್ಲಿ ಸುಖ ಅರಸುವ ಅಲೆಮಾರಿಯಾದ. ಇದರಿಂದಾಗಿಯೇ, ಇರುವ ಸುಖವ ಬಿಟ್ಟು, ಇಲ್ಲದಿರುವ ಸುಖದತ್ತ ತುಡಿಯುವುದನ್ನೇ ಜೀವನವಾಗಿಸಿಕೊಂಡು ಹಲುಬುತ್ತಿದ್ದಾನೆ.

ಪ್ರಕೃತಿಯ ಸತ್ಯದ ಮುಂದೆ ನಮ್ಮೆಲ್ಲ ಕಲ್ಪನೆಗಳು ಕುರುಡು ನಂಬಿಕೆಗಳಷ್ಟೆ. ಈ ಅಖಂಡ ಬ್ರಹ್ಮಾಂಡಕ್ಕೊಂದು ಜೀವವಿದೆ. ಆ ಜೀವ ಸೆಲೆಯಿಂದ ಮನುಷ್ಯನಂಥ ನಾನಾ ಜೀವಿಗಳು ಬದುಕುತ್ತಿವೆ ಎಂಬ ವಾಸ್ತವವನ್ನು ಒಳಗಣ್ಣಿನಿಂದ ನೋಡಿದಾಗ ಸತ್ಯದರ್ಶನವಾಗುತ್ತದೆ. ಅಲ್ಲಿ ಕೋಟ್ಯಂತರ ನಕ್ಷತ್ರರಾಶಿಗಳಿವೆ. ಪ್ರತಿ ನಕ್ಷತ್ರಕ್ಕೂ ಭೂಮಿಯಂಥ ಗ್ರಹಗಳು, ಅದರೊಳಗೆ ಜೀವಿಗಳು ವಾಸಿಸುತ್ತಿವೆ. ಇದನ್ನೆಲ್ಲ ಸೃಷ್ಟಿಸಿದವರಾರು? ನಮ್ಮ ಬ್ರಹ್ಮಾಂಡದ ಆಚೆಗೂ ಮತ್ತೊಂದು ಬ್ರಹ್ಮಾಂಡವಿದೆಯಾ? ಇಂಥ ಪ್ರಶ್ನೆಗಳು ನಮ್ಮನ್ನು ಕೊರೆಯುತ್ತವೆ. ಇಂಥ ಕೊರೆತ-ಕೊರತೆಗಳ ಅನುಜ್ಞೆಯನ್ನು ತಾಳಲಾರದೆ ನಮ್ಮ ಋಷಿಮುನಿಗಳು ಕಾಡುಮೇಡುಗಳಲ್ಲಿ ತಪಸ್ಸಿಗೆ ಕುಳಿತು ಚಿಂತನೆ ನಡೆಸಿದರು. ಅವರ ಚಿಂತನ ಸಾರವೇ ಪಾರಮಾರ್ಥಿಕ ಚಿಂತನೆಗಳಾಗಿ ಹರಿದು ಬಂದಿವೆ. ಭಾರತದ ನೆಲದಲ್ಲಿ ನಡೆದಷ್ಟು ಬ್ರಹ್ಮಾಂಡದಾಚೆಗಿನ ಚಿಂತನ-ಮಂಥನಗಳು ವಿಶ್ವದ ಯಾವ ಭೂಭಾಗದಲ್ಲೂ ನಡೆಯಲಿಲ್ಲ. ಆಧ್ಯಾತ್ಮಿಕ ಚಿಂತನೆಗಳು ಮನುಷ್ಯನ ಬೌದ್ದಿಕ ಪ್ರಪಂಚವನ್ನೇ ಬದಲಿಸಿದವು. ನಿಸ್ಸಾರವಾದ ಭೌತಿಕ ಪ್ರಪಂಚದಲ್ಲಿ ಬುದ್ಧಿಗೆ ಶೂನ್ಯ ಆವರಿಸದಂತೆ ಮೈಮನಸ್ಸುಗಳನ್ನು ನಿಯಂತ್ರಿಸಲು ಧ್ಯಾನ-ಯೋಗಗಳು ಆವಿಷ್ಕಾರವಾದವು.

ಇಲ್ಲಿ ಸಾವಿರಾರು ದೇವರುಗಳು ಇದ್ದಾಗ್ಯೂ, ಅವರೆಲ್ಲಿದ್ದಾರೆ ಅಂತ ನಾಸ್ತಿಕರಾಗಿ ಶೋಧಿಸಿದವರ ಸಂಖ್ಯೆ ಕಡಿಮೆ ಇಲ್ಲ. ಹಾಗೆ ನೋಡಿದರೆ, ಈ ದೇಶದಲ್ಲಿ ಆಸ್ತಿಕಧರ್ಮಗಳಿಗಿಂತ ನಾಸ್ತಿಕಧರ್ಮ-ಪಂಥಗಳೇ ಹೆಚ್ಚಾಗಿ ಹುಟ್ಟಿವೆ. ಚಾರ್ವಾಕ ಸಿದ್ಧಾಂತವಂತೂ ಹಲವು ಚಿಂತನೆಗಳಿಗೆ ದಾರಿದೀಪವಾಗಿದೆ. ಆಸ್ತಿಕ-ನಾಸ್ತಿಕ ಸಿದ್ಧಾಂತಗಳ ಮಧ್ಯೆ ಸತ್ಯಶೋಧಕವರ್ಗವೂ ಹುಟ್ಟಿಕೊಂಡಿತು. ಲೋಕದ ಅಂಕುಡೊಂಕುಗಳನ್ನು ತಿದ್ದುವ, ಜನರ ಆಷಾಢಭೂತಿತನವನ್ನು ವಿಡಂಬಿಸುವ ಸತ್ಯವಾಚಕರು ಸಹ ಹುಟ್ಟಿ, ಪದಕಟ್ಟಿ ಹಾಡಿದರು. ಆದರೆ ನಮ್ಮಲ್ಲಿ ಬದಲಾವಣೆ ಪರ್ವ ಮಾತ್ರ ಕಾಣಲಿಲ್ಲ. ಬದಲಿಗೆ ಮತ್ತಷ್ಟು ಬೌದ್ಧಿಕವಾಗಿ ಹಿಂದುಳಿಯುತ್ತಾ ಹೋದೆವು. ಏಕೆಂದರೆ ಸೈದ್ಧಾಂತಿಕ ಘರ್ಷಣೆಯಲ್ಲಿ ಸತ್ಯಪರಿಶೋಧಕ ಕಣ್ಣು ತೆರೆಯುವ ಬದಲು, ವಿಕಾರ ಮನಃಸ್ಥಿತಿಯನ್ನು ರೂಢಿಸಿಕೊಂಡೆವು. ನಮ್ಮ ಪಂಥವೇ ಶ್ರೇಷ್ಠ, ನಮ್ಮ ಸಿದ್ಧಾಂತವೇ ಸರಿ ಅನ್ನೋ ಹಟಕ್ಕೆ ಬಿದ್ದೆವು. ಇದರಿಂದ ನಮ್ಮ ನೆಲದಲ್ಲಿ ಹುಟ್ಟಿದ ಸತ್ಯದ ಝರಿ ಮಿಥ್ಯದತ್ತ ಹೊರಳಿತು. ಸತ್ಯ ಅರಗಿಸಿಕೊಳ್ಳುವ ಶಕ್ತಿ ನಮ್ಮ ಮಸ್ತಿಷ್ಕ ಕಳೆದುಕೊಳ್ಳುತ್ತಾ ಬಂತು. ಆಸ್ತಿಕತೆ ಅಂದರೆ ಅಂಧಶ್ರದ್ದೆಯೂ ಅಲ್ಲ, ನಾಸ್ತಿಕತೆ ಎಂದರೆ ಉಢಾಳತನವೂ ಅಲ್ಲ. ಎಲ್ಲವೂ ಭಗವಂತನ ಸತ್ಯದ ಹಾದಿಗೆ ಸಾಗುವ ಪರಿಕ್ರಮಗಳಾಗಬೇಕು. ಸಂಕ್ರಾಂತಿ ಜ್ಞಾನದ ಸಂಕೇತವಾದ ಸೂರ್ಯ ದಕ್ಷಿಣದಿಂದ ಉತ್ತರದತ್ತ ಸಾಗುವ ಕಾಲ. ಅಂದರೆ ಸೂರ್ಯ ಮೇಲ್‌ಸ್ತರದಲ್ಲಿ ಕಾಣುವ ಪುಣ್ಯಕಾಲ. ಈ ಕಾಲಘಟ್ಟದಲ್ಲಿ ನಮ್ಮ ಬುದ್ಧಿ ಭೇದಭಾವವಿಲ್ಲದೆ ಸತ್ಯವನ್ನು ಸ್ವೀಕರಿಸುವಂತಾಗಬೇಕು. ಆಗ ‘ಸಚ್ಚಿದಾನಂದ’ಮಯ ಬೆಳಕು ಜಗಮಗಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು