ಮಂಗಳವಾರ, ಮಾರ್ಚ್ 31, 2020
19 °C
ನಗರದ ವಿವಿಧ ದೇಗುಲಗಳಲ್ಲಿ ಶಿವರಾತ್ರಿಯ ಸಡಗರ

ಕಾರವಾರದಲ್ಲಿ ಅನುರಣಿಸಿದ ಶಿವನಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಶಿವ ದೇವಾಲಯಗಳಲ್ಲಿ ಶುಕ್ರವಾರ ಶಿವರಾತ್ರಿಯ ಸಡಗರ ಮೇಳೈಸಿತ್ತು. ಮಧ್ಯರಾತ್ರಿಯಿಂದಲೇ ದೇವರ ದರ್ಶನ ಪಡೆದ ಭಕ್ತರು, ವಿಶೇಷ ಪೂಜೆ ಸಲ್ಲಿಸಿ ಧನ್ಯತಾಭಾವ ಕಂಡರು.

ನಗರ ಸಮೀಪದ ಶೇಜವಾಡದಲ್ಲಿರುವ ಪುರಾಣ ಪ್ರಸಿದ್ಧ ಶೆಜ್ಜೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದಲ್ಲಿ ಸಾಮೂಹಿಕ ಫಲ ಪಂಚಾಮೃತ ಅಭಿಷೇಕವನ್ನು ನೂರಾರು ಭಕ್ತರು ನೆರವೇರಿಸಿದರು. ಈ ಬಾರಿ ಶಿವಲಿಂಗವನ್ನು ಸ್ಪರ್ಶಿಸಲು ಅವಕಾಶ ಇರದ ಕಾರಣ ಭಕ್ತರು ಹೊರಗಿನಿಂದಲೇ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು.

ದೇವಸ್ಥಾನದ ಹೊರಾಂಗಣದಲ್ಲಿ ಭಕ್ತರ ಅನುಕೂಲಕ್ಕಾಗಿ ತೆಂಗಿನ ಗರಿಗಳ ಚಪ್ಪರ ನಿರ್ಮಿಸಲಾಗಿತ್ತು. ಇದರಿಂದ ದೇವಸ್ಥಾನ ಪ್ರವೇಶಿಸಲು ಸಾಲಿನಲ್ಲಿ ನಿಂತಿದ್ದ ಭಕ್ತರು ಬಿಸಿಲಿನ ಝಳದಿಂದ ಪಾರಾದರು.

ಬಾಡ ಮಹಾದೇವ ದೇವಸ್ಥಾನದಲ್ಲಿ ಭಕ್ತರು ಶಿವಲಿಂಗಕ್ಕೆ ಬಿಲ್ವಪತ್ರೆ, ಕ್ಷೀರಾಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಶಿವರಾತ್ರಿಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಅಖಂಡ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರೀರಾಮ ಬಾಂದೇಕರ, ಸಂಕೇತ ಸಪ್ರೆ, ಉಲ್ಲಾಸ ಭೋವಿ, ಪದ್ಮಜಾ ಜೋಯಿಸ್, ಸಾಯಿಷಾ ಶೇಟ್, ಕೇದಾರ ವೈಂಗಣಕರ, ಮಹೇಶ ಭಟ್, ಮೀನಾಕ್ಷಿ ಪಾಟೀಲ, ಸಂಗೀತಾ ಬಾಂದೇಕರ, ವಿಲಾಸ ರೇವಣಕರ, ಅಶೋಕ ಶೆಟ್ಟಿ ಹಾಗೂ ದಿನೇಶ ಗಡಕರ ಕಾರ್ಯಕ್ರಮ ನಡೆಸಿಕೊಟ್ಟರು. 

ಸನ್ಮಾನ: ಸಂಗೀತ ಕಾರ್ಯಕ್ರಮವು ಕಾರವಾರದ ಗೆಳೆಯರ ಬಳಗ ಹಾಗೂ ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆಯಿತು. ಸಮಾರಂಭದಲ್ಲಿ ಸಂಗೀತ ಶಿಕ್ಷಕರಾದ ದಿನೇಶ ಗಡಕರ, ಚಂದ್ರಕಾಂತ ಗಡಕರ, ಕೃಷ್ಣಾನಂದ ಗುರವ, ಮಾರುತಿ ನಾಯ್ಕ ಇಡಗುಂಜಿ, ಗಣಪತಿ ಹೆಗಡೆ ಹೊನ್ನಾವರ, ರಾಮ ಬಾಂದೇಕರ, ಅಶೋಕ ಶೆಟ್ಟಿ, ಸಂಗೀತಾ ಬಾಂದೇಕರ ಹಾಗೂ ಶ್ಯಾಮಲಾ ಭಟ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಎಂ.ಪಿ.ಕಾಮತ್, ವಿಲಾಸ ರೇವಣಕರ್, ಅಶೋಕ ಶೆಟ್ಟಿ, ಪರಮೇಶ್ವರ ಭಟ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)