ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ಗುರುಪೂರ್ಣಿಮೆ: ಅರಿವಿನ ಪೂಜೆ

Published : 3 ಜುಲೈ 2023, 0:00 IST
Last Updated : 3 ಜುಲೈ 2023, 0:00 IST
ಫಾಲೋ ಮಾಡಿ
Comments

ಗುರುಪೂರ್ಣಿಮೆಯನ್ನು ವ್ಯಾಸಪೂಜೆಯನ್ನಾಗಿ ಆಚರಿಸುವುದು ಅಥವಾ ವ್ಯಾಸಪೂಜೆಯನ್ನೇ ಗುರುಪೂರ್ಣಿಮೆಯಂದು ಆಚರಿಸುವುದು ತುಂಬ ಔಚಿತ್ಯಪೂರ್ಣವಾಗಿದೆ. ಇಡಿಯ ನಮ್ಮ ಸಂಸ್ಕೃತಿಗೆ ಗುರುಸ್ವರೂಪದಲ್ಲಿರುವವರು ವ್ಯಾಸಮಹರ್ಷಿಗಳು. 

ನಮ್ಮ ಜೀವನಕ್ಕೆ ಬೇಕಾದ ಅರಿವನ್ನು ಕೊಡುವವನೇ ಗುರು; ಬದುಕಿನ ಕತ್ತಲೆಯನ್ನು ತೊಲಗಿಸುವವನು ಗುರು. ನಮ್ಮ ಸಂಸ್ಕೃತಿಯಲ್ಲಿ ಜ್ಞಾನಕ್ಕೆ, ಅರಿವಿಗೆ ಸಂಕೇತವಾಗಿ ‘ವೇದ’ವನ್ನು ಕಾಣಿಸಲಾಗಿದೆ. ಅರಿವಿಗೆ ಎಲ್ಲೆ ಎಂಬುದು ಇರದು; ಹೀಗೆಯೇ ವೇದಕ್ಕೆ ಕೊನೆ ಎಂಬುದು ಇಲ್ಲ, ಅದು ಅನಂತ. ಹೀಗೆ ಅನಂತವಾಗಿರುವ ವೇದವನ್ನು ನಾವು ಸಾಮಾನ್ಯರು ಹೇಗೆ ದಕ್ಕಿಸಿಕೊಳ್ಳುವುದು? ಆದುದರಿಂದಲೇ ವೇದವ್ಯಾಸಮಹರ್ಷಿಗಳು ಅಪಾರಕಾರುಣ್ಯದಿಂದ ನಮಗೆ ವೇದಗಳನ್ನು ವಿಭಾಗಿಸಿಕೊಟ್ಟರು; ನಮ್ಮ ಅಧ್ಯಯನವನ್ನು ಸುಗಮಗೊಳಿಸಿದರು. ಆ ಮೂಲಕ ನಮಗೆ ಅರಿವಿನ ದಾರಿ ತೋರಿದರು. ಹೀಗಾಗಿ ಅವರು ನಮಗೆಲ್ಲ ಗುರುವಾದರು.

ವೇದಗಳನ್ನು ಎಲ್ಲರೂ ಅಧ್ಯಯನ ಮಾಡಲು ಸಾಧ್ಯವಾಗದು. ಅಂಥವರಿಗಾಗಿ ವ್ಯಾಸಮಹರ್ಷಿಗಳು ಪುರಾಣಗಳನ್ನು ರಚಿಸಿ, ಸಾಮಾನ್ಯರಿಗೂ ಅರಿವಿನ ಧಾರೆ ಎರೆದರು. ಹೀಗಿದ್ದರೂ ವೇದಗಳ ತಾತ್ಪರ್ಯ ಏನೆಂದು ತಿಳಿಯುವುದು ಸುಲಭವಾಗಲಿಲ್ಲ. ಆಗ ಅವರು ಮಹಾಭಾರತ ರಚಿಸಿ, ವೇದಗಳ ನಿಲುವು ಏನೆಂಬುದನ್ನು ಜಗತ್ತಿಗೆ ವಿಶದಗೊಳಿಸಿದರು. ಇಲ್ಲಿ ಇನ್ನೊಂದು ಪ್ರಶ್ನೆ ಎದುರಾಯಿತು. ವೇದಗಳು, ಎಂದರೆ ಜ್ಞಾನ ನಮಗೆ ಏಕಾದರೂ ಬೇಕು? ಈ ಪ್ರಶ್ನೆಗೂ ವೇದವ್ಯಾಸರು ಉತ್ತರ ನೀಡಿದರು. ಇಡಿಯ ವೇದವಾಙ್ಮಯದ ಸಾರವೇ ಉಪನಿಷತ್ತುಗಳಲ್ಲಿದೆ. ಉಪನಿಷತ್ತುಗಳ ಸಾರವನ್ನು ಅವರು ವೇದಾಂತಸೂತ್ರಗಳಲ್ಲಿ ಸಂಗ್ರಹಿಸಿ, ನಮ್ಮ ಅರಿವಿಗೆ ದಿಕ್ಸೂಚಿಯನ್ನೂ ಒದಗಿಸಿದರು. ಹೀಗಾಗಿ ವ್ಯಾಸಮಹರ್ಷಿಗಳು ಲೋಕಕ್ಕೆ ಬೇಕಾದ ಅರಿವಿನ ಮೂಲಗಳನ್ನು ವ್ಯವಸ್ಥೆಗೊಳಿಸಿ, ಲೋಕಗುರುವಾದರು. ಅವರ ಸ್ಮರಣೆಯೇ ಗುರು‍ಪೂರ್ಣಿಮೆಯ ಉದ್ದೇಶ ಎಂಬುದು ಪರಂಪರೆಯ ಒಕ್ಕಣೆ.

ಒಂದಕ್ಷರವನ್ನು ಕಲಿಸಿದವರೂ ನಮಗೆ ಗುರುವೇ ಹೌದು – ಎಂಬುದು ಪರಂಪರೆಯ ಒಕ್ಕಣೆ. ನಮಗೆ ವಿದ್ಯೆ ಎಂಬುದು ಕೇವಲ ಮನುಷ್ಯಮೂಲದಿಂದಲೋ ಅಥವಾ ನಮಗಿಂತ ಹಿರಿಯರಾದವರಿದಂದ ಮಾತ್ರವೋ ಒದಗುವಂಥದ್ದಲ್ಲ; ನಮ್ಮ ಸುತ್ತಲಿನ ಪರಿಸರ, ಮರ, ಗಿಡ, ಪ್ರಾಣಿ, ಪಕ್ಷಿ, ಮಕ್ಕಳು, ನದಿಗಿರಿಗಳೂ – ಯಾರೂ ಯಾವುದೂ ನಮಗೆ ಗುರುವಾಗಿ ಒದಗಬಲ್ಲದು. ಹೀಗಾಗಿ ನಮ್ಮ ಲೌಕಿಕ ಸಾಧನೆಗೂ, ಅಲೌಕಿಕ ಸಿದ್ಧಿಗೂ ಕಾರಣರಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ಹಬ್ಬವನ್ನಾಗಿ ನಮ್ಮ ಸಂಸ್ಕೃತಿಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಗಿದೆ. ‘ವ್ಯಾಸ’ ಎಂಬುದು ಕೇವಲ ಒಬ್ಬ ವ್ಯಕ್ತಿಯ ಹೆಸರಲ್ಲ; ಅದು ಒಂದು ಮಹಾತತ್ತ್ವ. ನಮ್ಮ ಎಲ್ಲ ಅರಿವಿನ ಮೂಲಸ್ರೋತಕ್ಕೆ ಅದು ಸಂಕೇತ ಎಂಬುದನ್ನು ನಾವು ಗಮನಿಸತಕ್ಕದ್ದು.

ನಮ್ಮಲ್ಲಿ ಅರಿವಿನ ಸೊಗಸನ್ನು ತ್ಯಾಗ ಎಂಬ ತತ್ತ್ವದಲ್ಲಿ ಆರಾಧಿಸಲಾಗಿದೆ. ಈ ತತ್ತ್ವದ ಶಿಖರವನ್ನಾಗಿ ಸನ್ಯಾಸತತ್ತ್ವದಲ್ಲಿ ಕಾಣಲಾಗಿದೆ. ಸನ್ಯಾಸವನ್ನು ಸ್ವೀಕರಿಸಿರುವ ಸನ್ಯಾಸಿಗಳು ತ್ಯಾಗಕ್ಕೂ ಸಮ್ಯಕ್‌ ಜ್ಞಾನಕ್ಕೂ ಸಂಕೇತ. ಜೀವನದ ಸಮಗ್ರತೆಯನ್ನು ಕಂಡವರು; ಅರಿವಿನ ತುದಿಯನ್ನು ಮುಟ್ಟಿದವರು; ಎಲ್ಲರ ಒಳಿತನ್ನು ಬಯಸುವವರು ಅವರು; ರಾಗ–ದ್ವೇಷಗಳಿಂದ ಮುಕ್ತರಾದ ಜೀವರು ಅವರು ಎಂಬುದು ಪರಂಪರೆಯ ಶ್ರದ್ಧೆ. ಹೀಗಾಗಿಯೇ ಸನ್ಯಾಸಿಗಳನ್ನು ನಾವು ಗುರುತತ್ತ್ವದ ಮೂರ್ತರೂಪವನ್ನಾಗಿ ಕಾಣುತ್ತೇವೆ. ಇಂಥ ಸನ್ಯಾಸಿಗಳ ಚಾತುರ್ಮಾಸ್ಯವ್ರತ ಆರಂಭವಾಗುವುದು ಕೂಡ ವ್ಯಾಸಪೂಜೆಯಿಂದಲೇ ಎಂಬುದು ಮನನೀಯ. ಸದಾ ಸಂಚಾರದಲ್ಲಿಯೇ ಇರುವ ಸನ್ಯಾಸಿಗಳು, ಈ ಕಾಲದಲ್ಲಿ ಒಂದೆಡೆ ನಿಲ್ಲಬೇಕು; ಜನರಿಗೆ ಅವರು ಉಪದೇಶವನ್ನು ನೀಡಬೇಕು ಎಂಬುದು ಈ ವ್ರತದ ನಿಲುವು. ಈ ಆಶಯಕ್ಕೆ ಪೂರಕವಾಗಿ ನಮಗೆ ಬುದ್ಧ ಭಗವಂತನ ಜೀವನವೂ ಮಾರ್ಗಸೂಚಿಯಾಗಿದೆ. ಸಿದ್ಧಾರ್ಥನು ಅರಿವನ್ನು ಪಡೆದು, ‘ಬುದ್ಧ’ನಾದ ಮೇಲೆ, ತಾನು ಪಡೆದ ಅರಿವನ್ನು ಲೋಕಕ್ಕೆ ಉಪದೇಶ ಮಾಡಿದ ದಿನವು ಕೂಡ ಈ ಗುರುಪೂರ್ಣಿಮೆಯ ಪರ್ವದಿನವೇ ಹೌದು. ಹೀಗೆ ಹಲವು ನೆಲೆಗಳಿಂದ ಗುರುಪೂರ್ಣಿಮೆಯು ನಮ್ಮ ಜೀವನಕ್ಕೆ ಬೇಕಾದ ಅರಿವಿನ ಸಂದೇಶವಾಗಿದೆ. ಈ ಅರಿವಿನ ಪೂಜೆಯನ್ನು ನಾವು ಹಲವು ಸ್ವರೂಪಗಳಲ್ಲಿ ನಡೆಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT