ಬುಧವಾರ, ಜುಲೈ 6, 2022
22 °C

ವೇದವ್ಯಾಸರ ಶಿವಪುರಾಣಸಾರ: ಕ್ಷಮೆ ಬೇಡಿದ ನಾರದ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ನಾರದ ತನ್ನ ಅಜ್ಞಾನ, ಮೋಹಪಾಶದಿಂದ ಮತ್ತು ಕೋಪಕ್ಕೆ ಬುದ್ಧಿ ಕೊಟ್ಟು ವಿಷ್ಣುವನ್ನು ಶಪಿಸಿಬಿಟ್ಟ. ವಿಷ್ಣುವೂ ಅನಾದಿಯಾದ ಶಿವನ ಮಾಯೆಯನ್ನು ಹೊಗಳುತ್ತಾ, ಆ ಶಾಪವನ್ನು ಪರಿಗ್ರಹಿಸಿದ. ಯಾವ ಮಾಯೆಯ ಪ್ರಭಾವಕ್ಕೆ ಸಿಲುಕಿ, ಜ್ಞಾನಿಯಾದ ನಾರದ ಮೋಹಿತನಾಗಿದ್ದನೋ, ಆ ಸರ್ವಮೋಹಕವಾದ ತನ್ನ ಮಾಯೆಯನ್ನು ಲೀಲಾಮಯನಾದ ಶಿವನು ಉಪಸಂಹರಿಸಿಬಿಟ್ಟ. ಆಗ ನಾರದ ಭ್ರಮೆ ಕಳೆದುಕೊಂಡು ವಾಸ್ತವಕ್ಕೆ ಬಂದ.

ಶಿವಮಾಯೆಯು ಬಿಟ್ಟುಹೋದಮೇಲೆ ನಾರದ ಮೊದಲಿನಂತೆ ಬುದ್ಧಿಯನ್ನು ಪಡೆದ.ಬುದ್ಧಿಸ್ತಿಮಿತವಿಲ್ಲದೆ ಏನೇನೋ ಮಾತಾಡಿಬಿಟ್ಟೆ ಎಂದು ವ್ಯಥಿಸಿದ. ತನಗೆ ಭ್ರಾಂತಿ ಬಂದಿದ್ದು, ಅದರಿಂದಾದ ಅವಾಂತರವನ್ನೆಲ್ಲ ನೆನೆದು ನಾಚಿಕೆಪಟ್ಟ. ತನ್ನನ್ನು ತಾನು ನಿಂದಿಸಿಕೊಂಡ. ಜ್ಞಾನಿಗಳಿಗೂ ಮಂಕುಹಿಡಿಸುವ ಶಿವನ ಮಾಯೆಯನ್ನು ನೆನೆದು, ಶಿವನ ಮಹಿಮೆಯನ್ನು ಹೊಗಳಿದ.

ನಂತರ ವಿಷ್ಣುವಿನ ಭಕ್ತಾಗ್ರೇಸರನಾದ ನಾರದಮಹರ್ಷಿಯು ತನ್ನ ಮಂಕುತನದಿಂದ ವಿಷ್ಣುವನ್ನು ನಿಂದಿಸಿದ್ದನ್ನು ತಿಳಿದು, ಪಶ್ಚಾತ್ತಾಪಪಟ್ಟ. ಶ್ರೀಮನ್ನಾರಾಯಣನ ಪಾದಗಳ ಮೇಲೆ ಬಿದ್ದು ಕ್ಷಮೆ ಬೇಡಿದ. ಕ್ಷಮೆ ಬೇಡುತ್ತಿದ್ದ ನಾರದನನ್ನು ವಿಷ್ಣು ಮೇಲೆತ್ತಿ ಕುಳ್ಳಿರಿಸಿದ. ಆದರೆ ನಾರದ ತನ್ನ ಕೆಟ್ಟಬುದ್ಧಿಯಿಂದಾದ ಪ್ರಮಾದಕ್ಕೆ ಪರಿತಪಿಸುತ್ತಿದ್ದ. ತನ್ನ ಸಲ್ಲದ ಮಾತುಗಳೆಲ್ಲವೂ ತೊಲಗಬೇಕೆಂದು ನಾರದ ಕೈವಲ್ಯಪತಿಯಾದ ವಿಷ್ಣುವನ್ನು ಪ್ರಾರ್ಥಿಸಿದ. ‘ಭ್ರಮಾಮೋಹಿತನೂ ಕೆಟ್ಟಬುದ್ಧಿಯುಳ್ಳವನೂ ಆದ ನಾನು, ನಿನ್ನ ವಿಷಯದಲ್ಲಿ ಕೆಟ್ಟ ಮಾತುಗಳನ್ನು ಆಡಿಬಿಟ್ಟೆ. ಅಲ್ಲದೆ, ನಿನಗೆ ಶಾಪವನ್ನೂ ಕೊಟ್ಟುಬಿಟ್ಟೆ. ಆ ಶಾಪವು ನಿನಗೆ ತಟ್ಟದೆ, ವ್ಯರ್ಥವಾಗುವಂತೆ ಮಾಡು. ನಾನು ಮಹಾಪಾಪವನ್ನು ಮಾಡಿಬಿಟ್ಟೆ. ಖಂಡಿತವಾಗಿಯೂ ನನಗೆ ನರಕವೆ ಸಿಗಲಿದೆ’ ಎಂದು ಪ್ರಲಾಪಿಸಿದ.

‘ಓ ಹರೀ! ನಾನು ಮಾಡಿರುವ ಪಾಪಕಾರ್ಯ ಕೊನೆಯಾಗಲು ಯಾವ ಪರಿಹಾರೋಪಾಯವನ್ನು ಮಾಡಲಿ? ನಾನು ನಿನ್ನ ಸೇವಕ, ಅಪ್ಪಣೆ ಮಾಡು. ನಾನು ಮಾಡಿದ ಈ ಪಾಪರಾಶಿಯು ಹೇಗೆ ನಾಶವಾಗುವುದು? ನಾನು ನರಕದಿಂದ ಪಾರಾಗುವ ಮಾರ್ಗ ಯಾವುದು?’ ಎಂದು ನಾರದ ವಿಷ್ಣುವಿನ ಪಾದ ಹಿಡಿದು ಗೋಳಾಡಿದ. ಆಗ ನಾರದನನ್ನು ಮೇಲಕ್ಕೆಬ್ಬಿಸಿದ ವಿಷ್ಣು, ಪ್ರಿಯವಾದ ಮಾತುಗಳನ್ನಾಡಿ ಸಂತೈಸಿದ.

‘ಓ ಭಕ್ತಾಗ್ರೇಸರ, ನೀನು ವ್ಯಥೆಪಡಬೇಡ. ನೀನು ಶ್ರೇಷ್ಠ ಯತಿ. ನೀನೆಂದಿಗೂ ನರಕಕ್ಕೆ ಹೋಗಲಾರೆ. ಶಿವ ನಿನಗೆ ಒಳ್ಳೆಯದನ್ನು ಮಾಡುತ್ತಾನೆ. ನೀನು ಅಹಂಕಾರದಿಂದ ಮೈಮರೆತು ಶಿವನ ಮಾತನ್ನು ಕಡೆಗಾಣಿಸಿದೆ. ಆದುದರಿಂದಲೇ ಶಿವನು ನಿನಗೆ ಇಂತಹ ಪ್ರತಿಫಲವನ್ನು ನೀಡಿದ. ಇದೆಲ್ಲವೂ ಶಿವನ ಇಚ್ಛೆಯಿಂದಲೇ ನಡೆಯಿತೆಂದು ತಿಳಿದುಕೋ. ಎಲ್ಲರಿಗೂ ಪ್ರಭುವಾದ ಆ ಶಂಕರನು ದುರಹಂಕಾರವನ್ನು ಅಣಗಿಸಿಬಿಡುವನು. ಆತನೇ ಪರಬ್ರಹ್ಮನು, ಸಚ್ಚಿದಾನಂದಸ್ವರೂಪನಾದ ಪರಮಾತ್ಮನು, ಗುಣಶೂನ್ಯನು, ವಿಕಾರರಹಿತನು. ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ಗುಣಗಳಿಗೂ ಮೀರಿದವನು. ಆ ಶಿವನೇ ತನ್ನ ಮಾಯೆಯಿಂದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂರು ರೂಪಗಳನ್ನು ಧರಿಸುತ್ತಾನೆ. ಅವನು ನಿರ್ಗುಣನೂ ಸಗುಣನೂ ಆಗಿರುವನು. ನಿರ್ಗುಣತ್ವದ ಅವಸ್ಥೆಯಲ್ಲಿ ಶಿವನೆಂದು ಹೆಸರನ್ನು ಪಡೆದ ಪರಮಾತ್ಮನಾದ ಆ ಮಹೇಶ್ವರನು ಪರಬ್ರಹ್ಮ, ಅವ್ಯಯ, ಅನಂತ, ಮಹಾದೇವ ಎಂಬುದಾಗಿಯೂ ಕರೆಯಲ್ಪಡುತ್ತಾನೆ. ಶಿವನನ್ನು ಸೇವಿಸಿಯೇ ಬ್ರಹ್ಮ ಜಗತ್ತಿಗೆ ಸೃಷ್ಟಿಕರ್ತನಾದ. ನಾನು ಅದನ್ನು ಕಾಪಾಡುವವನಾದೆ. ಆ ಶಿವನು ತಾನಾಗಿಯೇ ರುದ್ರರೂಪವನ್ನು ಧರಿಸಿ ಇವೆಲ್ಲವನ್ನೂ ಸಂಹರಿಸುವವನಾದ’ ಎಂದು ವಿಷ್ಣುವು ಶಿವನ ಮಹಿಮೆಯನ್ನು ನಾರದನಿಗೆ ತಿಳಿಸುತ್ತಾನೆ.

 ಸರ್ವ ಪಾಪಗಳನ್ನೂ ಹೋಗಲಾಡಿಸುವ ಮತ್ತು ಭೋಗಗಳನ್ನೂ ಮೋಕ್ಷವನ್ನೂ ಕೊಡುವ ಒಂದು ಒಳ್ಳೆಯ ಉಪಾಯವನ್ನು ನಾರದನಿಗೆ ವಿಷ್ಣು ಹೇಳುತ್ತಾನೆ. ‘ನಿನ್ನ ಮನದಲ್ಲಿರುವ ಸಂಶಯವೆಲ್ಲನ್ನೂ ಬಿಟ್ಟು, ಶಂಕರನ ಸತ್ಕೀರ್ತಿಯನ್ನು ಮಾಡು. ಯಾವುದನ್ನು ಜಪಿಸಿದರೆ ನಿನ್ನ ಪಾಪವೆಲ್ಲವೂ ಬಹು ಬೇಗನೇ ನಾಶವಾಗುವುದೋ ಅಂತಹ ಶಿವಶತನಾಮ ಸ್ತೋತ್ರವನ್ನು ಅನನ್ಯ ಮನಸ್ಸಿನಿಂದ ಸದಾ ಜಪಿಸುತ್ತಿರು’ ಎಂದು ವಿಷ್ಣು ಪರಿಹಾರ ಸೂಚಿಸಿದರೂ, ನಾರದನಿಗೆ ಸಮಾಧಾನವಾಗದೆ ರೋದಿಸುತ್ತಿದ್ದ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು