ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಶಿವನ ಮನದಿಂದ ದೂರಾದ ಸತಿ

ಅಕ್ಷರ ಗಾತ್ರ

‘ನಾನು ಈಗ ರಾಮನ ಅವತಾರ ತಾಳಿದ್ದೇನೆ. ನನ್ನ ತಂದೆ ದಶರಥನ ಅಪ್ಪಣೆಯಂತೆ ಸೀತೆ ಮತ್ತು ಲಕ್ಷ್ಮಣರೊಡನೆ ಈ ಕಾಡಿಗೆ ಬಂದಿರುವೆ. ಓರ್ವ ರಾಕ್ಷಸ ನನ್ನ ಹೆಂಡತಿಯಾದ ಸೀತೆಯನ್ನು ಅಪಹರಿಸಿರುವ. ನಾನು ತಮ್ಮನೊಡನೆ ನನ್ನ ಪತ್ನಿಯನ್ನು ಹುಡುಕುತ್ತಲಿದ್ದೆ. ಇದರ ಮಧ್ಯೆ ಸರ್ವಮಂಗಳೆಯಾದ ನಿನ್ನ ದರ್ಶನವಾಗಿರುವುದರಿಂದ ಮಂಗಳವಾಗುವುದೆಂದು ಭಾವಿಸುವೆ. ಸೀತೆಯನ್ನ ಅಪಹರಿಸಿದ ದುಷ್ಟ ರಾಕ್ಷಸನನ್ನು ಸಂಹರಿಸಿ, ಸೀತೆಯನ್ನು ಮರಳಿ ಪಡೆಯುವಂತೆ ನನ್ನ ಅನುಗ್ರಹಿಸು’ ಎಂದು ಪ್ರಾರ್ಥಿಸುತ್ತಾನೆ ರಾಮ. ನಂತರ ಸತೀದೇವಿಯ ಆಶೀರ್ವಾದ ಪಡೆದು, ಸೀತೆಯನ್ನು ಹುಡುಕಲು ಹೊರಡುತ್ತಾನೆ.

‘ಎಲೈ ಸತಿ, ರಾಮನ ಪರೀಕ್ಷೆ ಮಾಡಿದೆಯಾ?’ ಎಂದು ಪ್ರೀತಿಯಿಂದ ಕೇಳಿದ ಶಿವ. ಆಗ ಸತೀದೇವಿಯು ಏನನ್ನೂ ಹೇಳದೆ, ಮುಖವನ್ನು ಬಗ್ಗಿಸಿ ಸುಮ್ಮನೆ ನಿಂತಳು. ಲೋಕಮರ್ಯಾದೆಯನ್ನು ರಕ್ಷಿಸುವ ಶಿವನು ತಾನು ಹಿಂದೆ ಮಾಡಿದ ಪ್ರತಿಜ್ಞೆಯನ್ನು ಸ್ಮರಿಸಿದ. ಧರ್ಮಕರ್ತನೂ ಧರ್ಮವಕ್ತೃವೂ ಧರ್ಮಪಾಲಕನೂ ಆದ ತಾನು ಸತಿಯಲ್ಲಿ ಸ್ನೇಹವನ್ನಿಟ್ಟರೆ ತನ್ನ ಪ್ರತಿಜ್ಞೆ ನಷ್ಟವಾಗುವುದು. ಆದ್ದರಿಂದ ಸತಿಯು ನನ್ನ ಮಾತಿನಲ್ಲಿ ಅಪನಂಬಿಕೆಯುಳ್ಳವಳಾದರೆ ಅವಳನ್ನು ತ್ಯಜಿಸುವೆ – ಎಂದು ತಾನು ಮಾಡಿದ ಪ್ರತಿಜ್ಞೆಯಂತೆ ಸತೀದೇವಿಯನ್ನು ಮನಸ್ಸಿನಿಂದಲೇ ಬಿಟ್ಟು, ತನ್ನ ವಾಸಸ್ಥಾನವಾದ ಕೈಲಾಸಗಿರಿಗೆ ತೆರಳಿದ. ಮುಂದೆ ತನಗೂ ಸತೀದೇವಿಗೂ ಸಂಬಂಧವಿಲ್ಲವೆಂದು ಪ್ರಕಟಿಸಿದ.

ಆಗ ಆಕಾಶವಾಣಿಯೊಂದು ಹೇಳಿತು: ‘ಓ ಪರಮೇಶ್ವರ ನೀನು ಧನ್ಯ. ನಿನ್ನಂತೆ ಪ್ರತಿಜ್ಞೆಯನ್ನು ನಿರ್ವಹಿಸುವವರು ದುರ್ಲಭ.’ ಆಕಾಶವಾಣಿಯನ್ನು ಕೇಳಿದ ಸತೀದೇವಿಯು ‘ಓ ನಾಥ, ನೀನೇನು ಪ್ರತಿಜ್ಞೆಯನ್ನು ಮಾಡಿರುವೆ? ನನಗೆ ಹೇಳು’ ಎಂದು ಶಿವನನ್ನು ಕೇಳಿದಳು. ಪರಮೇಶ್ವರನು ಹಿಂದೆ ತನ್ನ ಮದುವೆಯ ಕಾಲದಲ್ಲಿ ಹರಿ-ಬ್ರಹ್ಮರ ಎದುರಿಗೆ ತಾನು ಮಾಡಿದ ಪ್ರತಿಜ್ಞೆಯನ್ನು ಹೇಳಲಿಲ್ಲ. ಆಗ ಸತೀದೇವಿ ಶಿವನನ್ನು ಭಕ್ತಿಯಿಂದ ಧ್ಯಾನಿಸಿ, ಹಿಂದೆ ನಡೆದ ಪ್ರತಿಜ್ಞೆಯನ್ನು ತಿಳಿದುಕೊಂಡಳು. ಪ್ರತಿಜ್ಞೆಯಂತೆ ಶಿವ ತನ್ನನ್ನು ಮನಸ್ಸಿನಿಂದ ತ್ಯಾಗ ಮಾಡಿರುವನೆಂದು ತಿಳಿದು ತುಂಬಾ ಶೋಕಿಸಿದಳು.

ಸತಿಯ ದುಃಖವನ್ನು ತಿಳಿದ ಶಿವ, ಅವಳ ದುಃಖ ಮರೆಯುವಂತೆ ಅನೇಕ ಮನೋಹರವಾದ ಕಥೆಗಳನ್ನು ಹೇಳಿದ. ಕಥೆಯನ್ನು ಹೇಳುತ್ತಾ ಶಿವನು ಸತಿಯೊಡನೆ ಕೈಲಾಸಗಿರಿಗೆ ಹೋದ. ಅಲ್ಲಿ ಸಮಾಧಿಸ್ಥನಾಗಿ ತನ್ನ ಪರಮಾತ್ಮಸ್ವರೂಪವನ್ನು ಧ್ಯಾನಿಸತೊಡಗಿದ. ಸತೀದೇವಿಯೂ ದುಃಖಿತಳಾಗಿ ಸ್ವಸ್ವರೂಪನದಲ್ಲಿ ಧ್ಯಾನಾಸಕ್ತಳಾದಳು. ಬಹಳ ಕಾಲ ಸತೀ–ಶಿವರು ಸಮಾಧಿಸ್ಥರಾಗಿ ಧ್ಯಾನಿಸುತ್ತಿದ್ದರು. ಕೆಲವುಕಾಲದ ನಂತರ ಪರಮೇಶ್ವರ ಸಮಾಧಿಸ್ಥಿತಿಯಿಂದ ಹೊರಬಂದ. ಇದನ್ನು ತಿಳಿದ ಸತೀದೇವಿಯು ಶಿವನ ಬಳಿಗೆ ದುಗುಡ ತುಂಬಿದ ಮನದಿಂದ ಬಂದು ನಮಸ್ಕರಿಸಿದಳು. ಆಗ ದಯಾಮಯನಾದ ಶಿವ ಮನೋಹರವಾದ ಅನೇಕ ಕಥೆಗಳನ್ನು ಹೇಳಿ, ಸತೀದೇವಿಯ ಶೋಕವನ್ನು ಹೋಗಲಾಡಿಸಿದ. ಮತ್ತೆ ಮೊದಲಿನಂತೆ ಸತೀದೇವಿ ಸಂತೋಷವನ್ನು ಹೊಂದಿದಳು.

ಹೀಗೆ ಶಿವಸತಿಯರ ವಿಯೋಗದ ಕಥೆಯನ್ನು ನಾರದನಿಗೆ ಹೇಳಿದ ಬ್ರಹ್ಮ, ‘ಎಲೈ ನಾರದ, ಶಿವ ತನ್ನ ಪ್ರತಿಜ್ಞೆಯನ್ನು ನಿರ್ವಹಿಸಿದ ಎಂದು ಕೆಲವು ಮುನಿಗಳು ಶಿವಸತೀದೇವಿಯರ ವಿಯೋಗವನ್ನು ವರ್ಣಿಸುವರು. ಆದರೆ ಇದು ಸರಿಯಾದುದಲ್ಲ. ವಾಗರ್ಥಗಳಂತೆ ಸದಾ ಸೇರಿರುವ ಶಿವಸತಿಯರಿಗೆ ನಿಜವಾಗಿ ವಿಯೋಗವಿಲ್ಲ. ಶಿವ–ಸತೀದೇವಿಯರ ಚರಿತ್ರೆಯನ್ನು ಪಾರಮಾರ್ಥಿಕವಾಗಿ ಯಾರೂ ತಿಳಿಯಲಾರರು. ಅವರು ಅನಾದಿದಂಪತಿಗಳು. ಅವರಿಗೆ ಎಂದಿಗೂ ವಿಯೋಗವೆಂಬುದಿಲ್ಲ. ಆದರೆ ಸ್ವೇಚ್ಛೆಯಿಂದಲೇ ಅವರಿಗೆ ವಿಯೋಗವು ಆದರಾಗಬಹುದು’ ಅಂತ ಬ್ರಹ್ಮ ಹೇಳುವಲ್ಲಿಗೆ ಸತೀಖಂಡದ ಇಪ್ಪತ್ತೈದನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT