ಭಾನುವಾರ, ಸೆಪ್ಟೆಂಬರ್ 27, 2020
27 °C

ವಚನ ವಾಣಿ | ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ-4

ಡಾ. ಬಸವರಾಜ ಸಾದರ Updated:

ಅಕ್ಷರ ಗಾತ್ರ : | |

ಕುಡಿವ ನೀರೆನ್ನಬಹುದೆ, ಹುಡುಕುನೀರಲದ್ದುವಾಗ?
ಅಡುವ ಕಿಚ್ಚೆನ್ನಬಹುದೆ, ಮನೆಯ ಸುಡುವಾಗ?
ಒಡಲು ತನ್ನದೆನ್ನಬಹುದೆ, ಪುಣ್ಯ-ಪಾಪವನುಂಬಾಗ?
ಒಡಲಜೀವವೆನ್ನಬಹುದೆ, ಇಕ್ಕಿ ಹೋಹಾಗ?
ಇವನೊಡೆಬಡಿದು ಕಳೆಯೆಂದಾತನಂಬಿಗ ಚೌಡಯ್ಯ.

-ಅಂಬಿಗರ ಚೌಡಯ್ಯ

***

ನಮ್ಮ ಪರಂಪರೆ ಕೆಲವು ಭಾವನಾತ್ಮಕ ಮಿಥ್ಯಗಳನ್ನು ಗತಾನುಗತಿಕವಾಗಿ ಮುಂದುವರೆಸಿಕೊಂಡು ಬಂದಿದೆಯೇ ಹೊರತು, ಅವುಗಳೊಳಗಿನ ಸತ್ಯಶೋಧನೆ ಮಾಡಲೇ ಇಲ್ಲ. ಒಂದು ವಸ್ತುವಿನ ಸತ್ಯಸ್ವರೂಪವನ್ನರಿಯದೆ, ಅದನ್ನು ಕಣ್ಣುಮುಚ್ಚಿಕೊಂಡು ಆರಾಧಿಸುವುದು ಅಪಾಯಕಾರಿ. ಕನ್ನಡ ವಚನಕಾರರು ಅಂಥ ಅನೇಕ ಮಿಥ್ಯಗಳನ್ನು ಒಡೆದು, ಅವುಗಳ ಒಳಗಿನ ಸತ್ಯಗಳನ್ನು ಕಣ್ಣಿಗೆ ಕಾಣುವ ಉದಾಹರಣೆಗಳ ಮೂಲಕ ತೋರಿಸಿದ್ದು ಅವರ ವೈಚಾರಿಕ ಮತ್ತು ವೈಜ್ಞಾನಿಕ ಧೋರಣೆಗೆ ಸಾಕ್ಷಿ. ಅಂಬಿಗರ ಚೌಡಯ್ಯನ ಪ್ರಸ್ತುತ ವಚನ ಅಂಥ ಧೋರಣೆಗೆ ಒಂದು ಸಶಕ್ತ ಉದಾಹರಣೆ.

ನಾವು ಕುಡಿಯುವ ನೀರು ಜೀವದಾಯಿ ನಿಜ. ಆದರೆ, ಕತಕತ ಕುದಿಯುವ ನೀರಲ್ಲಿ ಒಬ್ಬ ವ್ಯಕ್ತಿ ಮುಳುಗಿ ಸಾಯುವಾಗ ಅದು ಜೀವದಾಯಿ ಆಗಬಲ್ಲುದೆ? ಪಂಚಭೂತಗಳಲ್ಲಿ ನೀರಿನ ಹಾಗೆ ಅಗ್ನಿಯೂ ಒಂದು. ನಾವು ಮಾಡುವ ಅಡುಗೆಗೆ ಅಗ್ನಿಯೇ ಮೂಲಶಾಖವೆಂಬುದು ಸತ್ಯ. ಆದರೆ ಅದೇ ಬೆಂಕಿ ಬಿದ್ದು ಮನೆಯನ್ನು ಸುಡುವಾಗಲೂ ಅದನ್ನು ಅಡುವ ಬೆಂಕಿಯೆಂದು ಸುಮ್ಮನಿರಬಹುದೆ? ಇಂಥ ಪ್ರಶ್ನೆಗಳು ನಮ್ಮ ಶರೀರ ಮತ್ತು ಆತ್ಮಕ್ಕೆ ಸಂಬಂಧಿಸಿದ ಆನುಭಾವಿಕ ಪ್ರಪಂಚದಲ್ಲೂ ಸಾಕಷ್ಟು ಸಿಗುತ್ತವೆ. ನಾವು ಸಾಮಾನ್ಯವಾಗಿ ಶರೀರ ನನ್ನದು ಎಂದು ಬೀಗುತ್ತಿರುತ್ತೇವೆ. ಆದರೆ ನಮ್ಮ ಪುಣ್ಯ-ಪಾಪಗಳನ್ನು  ನುಂಗಿಹಾಕುವಾಗ ಅದೇ ಶರೀರ ನನ್ನದು ಎಂಬ ಪ್ರಜ್ಞೆ ಕೂಡ ನಮಗಿರುವುದಿಲ್ಲ. ಅಂತೆಯೇ, ನಮ್ಮ ಜೀವವು ಶರೀರವನ್ನು ಇಲ್ಲಿಯೇ ಬಿಟ್ಟು ಹೋಗುವಾಗ ಒಡಲು ಅದಕ್ಕೆ ಆಧಾರವೆಂದು ಹೇಳಬಹುದೆ? ಇವೆಲ್ಲವೂ ಬಹುಮುಖ್ಯ ಪ್ರಶ್ನೆಗಳು. ನೀರು ಮತ್ತು ಬೆಂಕಿ ಯಾವಾಗಲೂ ಜೀವಸ್ನೇಹಿ ಆಗಲಾರವು, ಶರೀರವೂ ಸದಾ ಹಿತಕಾರಿಯಲ್ಲ, ಅದು ಯಾವಾಗಲೂ ಜೀವದ ಆಧಾರವಲ್ಲ ಎಂಬ ಸತ್ಯದ ದರ್ಶನ ಮಾಡಿಸುವ ಉದ್ದೇಶದಿಂದಲೇ ಅಂಬಿಗರ ಚೌಡಯ್ಯ ಈ ಎಲ್ಲ ಪ್ರಶ್ನೆಗಳನ್ನು ಇಲ್ಲಿ ಕೇಳಿರುವುದು.

ಇಷ್ಟೆಲ್ಲ ಪ್ರಶ್ನೆಗಳನ್ನು ಕೇಳಿ ಅಲ್ಲಿಗೇ ನಿಲ್ಲದ ಚೌಡಯ್ಯ, ಈ ಪ್ರಶ್ನೆಗಳನ್ನು ಒಡೆಯುವ ಹಾಗೆ ಬಡಿದು, ಅವುಗಳೊಳಗಿನ ಸತ್ಯ ಅಥವಾ ಉತ್ತರ ಕಂಡುಕೊಳ್ಳಬೇಕೆಂದು ಸೂಚಿಸುತ್ತಾನೆ. ಪ್ರಶ್ನೆಗಳನ್ನು ಒಡೆಯುವ ಈ ಕ್ರಿಯೆಗೆ ವೈಚಾರಿಕತೆ ಮತ್ತು ವೈಜ್ಞಾನಿಕತೆಗಳೇ ಆಧಾರವೆಂಬುದು ಮುಖ್ಯ. 

ನಾವು ನೋಡುವ ಯಾವುದೇ ವಸ್ತು, ಕ್ರಿಯೆ ಅಥವಾ ಮುಖಗಳು ಹೊರಗೆ ತೋರುವ ಆವರಣವನ್ನು ಮಾತ್ರ ಹೊಂದಿರುವುದಿಲ್ಲ. ಆ ಆವರಣದ ಹಿಂದೆ ಅವುಗಳಿಗೆ ಮತ್ತೆ ಒಂದೋ ಅಥವಾ ಹಲವೋ ಮುಖಗಳಿರುತ್ತವೆ. ಅದರಲ್ಲೂ ಪಂಚಭೂತಗಳು, ಧರ್ಮ ಮತ್ತು ದೇವರುಗಳ ವಿಷಯದಲ್ಲೇ ಇಂಥ ಆವರಣಗಳು ಹೆಚ್ಚು. ಆ ಆವರಣಗಳನ್ನು ಸರಿಸಿ, ಸತ್ಯದ ದರ್ಶನ ಮಾಡಿಕೊಳ್ಳಬೇಕಾದರೆ, ನಮ್ಮ ಕಣ್ಣು, ಮನಸ್ಸು ಮತ್ತು ಆಲೋಚನೆಗಳು ಪೂರ್ವಗ್ರಹೀತವಲ್ಲದ  ನಿರ್ಲಿಪ್ತ ಮತ್ತು ಮುಕ್ತ ಧೋರಣೆ ಅನುಸರಿಸುವುದು ಅಗತ್ಯ. ಹಾಗೆ ಮಾಡಿದರೆ ಮಾತ್ರ, ಕತ್ತಲ ಹಿಂದಿರುವ ಬೆಳಕು ಮತ್ತು ಬೆಳಕಿನ ಒಡಲಲ್ಲಿರುವ ಕತ್ತಲೆ ಕಾಣಲು ಸಾಧ್ಯ. ಅಂಬಿಗರ ಚೌಡಯ್ಯನ ಈ ವಚನ ಅಂಥ ಸತ್ಯದರ್ಶನದ ಕ್ರಿಯೆಗೆ ಸಮರ್ಥ ಮಾರ್ಗಸೂಚಿಯಾಗಿದೆ.

ವಚನ ವಾಣಿ ಪಾಡ್‌ಕಾಸ್ಟ್‌ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಕನ್ನಡ ಧ್ವನಿ Podcast | ಶರಣರ ವಚನಗಳ ವಾಚನ, ಅರ್ಥವಿವರಣೆ, ವಚನ ಗಾಯನ ಸರಣಿ-4

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು