ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥ ವಿವರಣೆ ಮತ್ತು ವಚನ ಗಾಯನ ಸರಣಿ–9

ರಾಗಸಂಯೋಜನೆ ಮತ್ತು ವಚನಗಾಯನ ಡಾ. ಕುಮಾರ್ ಕಣವಿ
Last Updated 14 ಸೆಪ್ಟೆಂಬರ್ 2020, 3:30 IST
ಅಕ್ಷರ ಗಾತ್ರ

ನೀರು ನೆಲನಿಲ್ಲದೆ ಇರಬಹುದೆ?
ಬೀಜ ನೆಲೆಯಿಲ್ಲದೆ ಹುಟ್ಟಬಹುದೆ?
ಜ್ಞಾನ, ಕ್ರಿಯೆಯಿಲ್ಲದೆ ಅರಿಯಬಹುದೆ?
ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ?
ಇಂತೀ ಕ್ರೀಜ್ಞಾನ ಸಂಬಂಧಸ್ಥಲಭಾವ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಉಭಯಸ್ಥಲಭೇದ.
ಮೋಳಿಗೆ ಮಹಾದೇವಿ

***

ಯಾವುದೇ ಒಂದು ವಸ್ತುವಿನ ಅಸ್ತಿತ್ವಕ್ಕೆ ಮತ್ತೊಂದು ವಸ್ತು ನೆಲೆಯಾಗಿರುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಪರಸ್ಪರಾವಲಂಬನದ ಇಂಥ ಸತ್ಯವನ್ನೇ ಮೋಳಿಗೆ ಮಹಾದೇವಿಯು ಪ್ರಸ್ತುತ ವಚನದಲ್ಕಿ ಉದಾಹರಣೆ ಸಹಿತ ಪ್ರತಿಪಾದಿಸುತ್ತಾಳೆ.

ನೀರು ಸ್ವತಂತ್ರ ವಸ್ತು ನಿಜ, ಆದರೆ ನೆಲವಿಲ್ಲದೆ ಅದಕ್ಕೆ ಅಸ್ತಿತ್ವವೇ ಇಲ್ಲ. ನೀರಿನ‌ ಅಸ್ತಿತ್ವ ಸ್ಥಾಪಿತವಾಗಲು ನೆಲ, ಅಥವಾ ನೆಲಕ್ಕೆ ಸಮನಾದ ಒಂದು ವಸ್ತು ಅತ್ಯಗತ್ಯ.

ಅದೇ ರೀತಿ, ಬೀಜವೊಂದು ಮೊಳಕೆಯೊಡೆದು, ಬೆಳೆಯಲು ಭೂಮಿ ಆದ್ಯ ಅಗತ್ಯ. ಬರೀ ಭೂಮಿಯೊಂದೇ ಅಲ್ಲ, ಅದರ ಜೊತೆಗೆ ನೀರು, ಶಾಖದಂಥ ಇತರ ಪರಿಕರಗಳೂ ಅದರ ಅಸ್ತಿತ್ವ ಮತ್ತು ಬೆಳವಣಿಗೆಗೆ ಬೇಕೇ ಬೇಕು. ಇವೆಲ್ಲ ಪೂರಕ ಸಂಬಂಧದಲ್ಲಿ ಒಂದುಗೂಡಿದಾಗಲೇ ಒಂದೊಂದಕ್ಕೂ ಅರ್ಥ ಬರಲು ಸಾಧ್ಯ. ಹೀಗೆ ಅರ್ಥ ಬರಲು ಆಧಾರವಾಗುವುದೇ ಅಸ್ತಿತ್ವಾವಲಂಬನದ ಸಂಬಂಧ.

ಇಂಥ ವೈಜ್ಞಾನಿಕ ಪ್ರಮೇಯವನ್ನು ಅನುಭಾವ ಪ್ರಪಂಚಕ್ಕೂ ವಿಸ್ತರಿಸುವ ಮೋಳಿಗೆ ಮಹಾದೇವಿಯು, ಅಲ್ಲಿ ಪ್ರಚಲಿತವಿರುವ ಜ್ಞಾನ ಮತ್ತು ಕ್ರಿಯೆಗಳಲ್ಲಿ ಅದು ಹೇಗೆ ಪ್ರಕರ್ಷಕ್ಕೆ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತಾಳೆ. ಬರೀ ಜ್ಞಾನ ಒಂದೇ ಇದ್ದರೆ ಅದಕ್ಕೆ ಯಾವ ಅರ್ಥವೂ ಇಲ್ಲ. ಆ ಜ್ಞಾನವು ಕ್ರಿಯೆಯ ರೂಪ ಪಡೆದಾಗಲೇ ಅದಕ್ಕೆ ನಿಜವಾದ ನೆಲೆ- ಬೆಲೆ. ಅಂದರೆ, ಜ್ಞಾನದ ಅಸ್ತಿತ್ವಕ್ಕೆ ಕ್ರಿಯೆ, ಹಾಗೂ ಕ್ರಿಯೆಯ ಅಸ್ತಿತ್ವಕ್ಕೆ ಜ್ಞಾನ ಪೂರಕವಾಗಿರುತ್ತವೆ ಎಂದರ್ಥ. ಇವುಗಳಲ್ಲಿ ಒಂದು ಮಾತ್ರ ಇದ್ದರೆ ಅದಕ್ಕೆ ಅಸ್ತಿತ್ವವೇ ಇರಲಾರದು. ಈ ಕಾರಣಕ್ಕಾಗಿಯೆ ಶರಣರು, ಜ್ಞಾನ ಮತ್ತು ಕ್ರಿಯೆ ಎರಡಕ್ಕೂ ಸಮಾನ ಮಹತ್ವ ಕೊಟ್ಟರು. 'ಜ್ಞಾನದಲರಿದಡೇನಯ್ಯ, ಕ್ರಿಯೆಯಾಚರಿಸದನ್ನಕ್ಕ?' ಎಂದು ಹೇಳಿದ ಅವರ ಮಾತೇ ಇದಕ್ಕೆ ಸಾಕ್ಷಿ.

ಈ ಸಿದ್ಧಾಂತವನ್ನು ಮನೋವೈಜ್ಞಾನಿಕ ಕ್ಷೇತ್ರಕ್ಕೂ ಒಯ್ಯುವ ವಚನಕಾರ್ತಿಯು, ‘ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಲ್ಲುದೆ?’ಎಂದು ಪ್ರಶ್ನಿಸುವ ಮೂಲಕ, ಮನಸ್ಸಿನ ವಿವಿಧ ಪದರುಗಳೂ ಪರಸ್ಪರಾವಲಂಬನದ ಮೂಲಕವೇ ಕ್ರಿಯಾಶೀಲವಾಗುತ್ತವೆ ಎಂಬುದನ್ನು ಖಚಿತಪಡಿಸುತ್ತಾಳೆ. ನಮ್ಮ ಚಿತ್ತ , ಅಂದರೆ ಮನಸ್ಸು, ಚಿತ್ತುವಿನಲ್ಲಿ, ಅಂದರೆ ಮೂಲ ಮನಸ್ಸಿನಲ್ಲಿ ನೆಲೆಗೊಳ್ಳದೆ ಎದುರಿಗಿರುವ ವಸ್ತು ಅರಿವಿಗೆ ಬರಲಾರದು. ಅಂದರೆ, ಚಿತ್ತ ಮತ್ತು ಚಿತ್ತು, ಅಸ್ತಿತ್ವದ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರಾವಲಂಬಿಗಳು.

ಹೀಗೆ, ವಿಭಿನ್ನ ವಸ್ತುಗಳ ಅಸ್ತಿತ್ವವು ಪರಸ್ಪರಾವಲಂಬನದಲ್ಲಿಯೇ ಇರುತ್ತದೆ ಎಂಬ ಜ್ಞಾನವು ನಮ್ಮ ಅರಿವಿಗೆ ಬರುವುದು ಅದು ಕ್ರಿಯೆಯ ರೂಪ ಪಡೆದಾಗ ಮಾತ್ರ. ಇಲ್ಲಿರುವ ಒಟ್ಟು ಅರ್ಥವೆಂದರೆ, ಜ್ಞಾನಕ್ಕೆ ಕ್ರಿಯೆ, ಮತ್ತು ಕ್ರಿಯೆಗೆ ಜ್ಞಾನ ಪರಸ್ಪರ ಅಸ್ತಿತ್ವದ ಮೂಲ ನೆಲೆಯಾಗಿವೆ ಎಂಬುದು. ಇದನ್ನೇ ಮೋಳಿಗೆ ಮಹಾದೇವಿಯು ‘ಕ್ರೀ ಜ್ಞಾನ ಸಂಬಂಧಸ್ಥಲಭಾವ’ ಎಂದಿರುವುದು.

ನಮ್ಮ ಒಟ್ಟು ಅಸ್ತಿತ್ವ ಇರುವುದೇ ಇಂಥ ಭಿನ್ನ ಸ್ಥಲಭಾವ ಸಂಬಂಧದಲ್ಲಿ. ಇದನ್ನು ವಚನದ ಕೊನೆಯ ಪಂಕ್ತಿಯಲ್ಲಿ- ‘ಉಭಯಸ್ಥಲಭೇದ’ ಎಂಬ ವಿಶಿಷ್ಟ ಶಬ್ದದ ಮೂಲಕ ಮೋಳಿಗೆ ಮಹಾದೇವಿಯು ಧ್ವನಿಸುತ್ತಾಳೆ.

ಸೃಷ್ಟಿ- ವಿಕಾಸ ಎಲ್ಲದಕ್ಕೂ ‘ಉಭಯಸ್ಥಲಭೇದ’ ವೇ, ಅಂದರೆ, ಎರಡು ಸ್ಥಲ ಭೇದವೇ ಮೂಲ ಆಧಾರ. ಇಂಥ ಪರಸ್ಪರಾವಲಂಬಿ ಅಸ್ತಿತ್ವದ ಸಿದ್ಧಾಂತವನ್ನು ಆಧುನಿಕ ವಿಜ್ಞಾನವೂ ಸಮರ್ಥಿಸುತ್ತದೆ. ಹನ್ನೆರಡನೆಯ ಶತಮಾನದಷ್ಟು ಮುಂಚೆಯೇ ಈ ಬಗೆಯ ವೈಜ್ಞಾನಿಕ ಸತ್ಯವನ್ನು ತನ್ನ ವಚನದ ಮೂಲಕ ಕಟ್ಟಿಕೊಟ್ಟ ಮೋಳಿಗೆ ಮಹಾದೇವಿಯ ಚಿಂತನೆಯ ಮಟ್ಟ ಬೆರಗು ಹುಟ್ಟಿಸುವಂಥದ್ದು. ಇದು ಶರಣರ ವೈಜ್ಞಾನಿಕ ಮನೋಭಾವಕ್ಕೂ ಸಾಕ್ಷಿಯಾಗಿದೆ.

‘ಉಭಯಸ್ಥಲಭೇದ’ಸಂಬಂಧ ಸಿದ್ಧಾಂತವನ್ನು ಬರೀ ಭೌತಿಕ ಪ್ರಪಂಚಕ್ಕಷ್ಟೇ ಅಲ್ಲ, ಅದನ್ನು ಅಧ್ಯಾತ್ಮ ಮತ್ತು ಆನುಭಾವಿಕ ಜಗತ್ತಿಗೂ ಅನ್ವಯಿಸಿ, ಅದರ ಸ್ವರೂಪ, ಫಲಿತ ಮತ್ತು ಪರಿಣಾಮಗಳನ್ನು ಖಚಿತವಾಗಿ ಪ್ರತಿಪಾದಿಸಿದ್ದು ಶರಣರ ಹೆಗ್ಗಳಿಕೆ. ಮೋಳಿಗೆ ಮಹಾದೇವಿಯ ಪ್ರಸ್ತುತ ವಚನವೇ ಅದಕ್ಕೊಂದು ಸಮರ್ಥ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT