ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸವಿ: ಸ್ತ್ರೀಸ್ವಾಭಿಮಾನದ ಸಂಕೇತ

Published 29 ಏಪ್ರಿಲ್ 2023, 20:35 IST
Last Updated 29 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

–ಸೌಜನ್ಯ ದತ್ತರಾಜ

ಹನ್ನೊಂದನೆಯ ಶತಮಾನದಲ್ಲಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಣಕು ತಾಲೂಕಿನ ಪೆನುಗೊಂಡೆಯನ್ನು ಕುಸುಮಶ್ರೇಷ್ಠಿ ಎಂಬ ಸಾಮಂತ ರಾಜ ಆಳುತ್ತಿದ್ದ. ಆತನ ಪತ್ನಿಯ ಹೆಸರು ಕುಸುಮಾಂಬೆ. ಆತ ತನ್ನ ಚಕ್ರವರ್ತಿ ವಿಮಲಾದಿತ್ಯನಿಗೆ (ಏಳನೆಯ ವಿಷ್ಣುವರ್ಧನ) ವಿಧೇಯನಾಗಿಯೂ ತನ್ನ ಪ್ರಜೆಗಳಿಗೆ ಮೆಚ್ಚಿನ ರಾಜನಾಗಿಯೂ ರಾಜ್ಯಭಾರ ಮಾಡುತ್ತಿದ್ದ. ಜನಾದರ, ಅಧಿಕಾರ, ಹಣ, ಐಶ್ವರ್ಯಗಳೆಲ್ಲಾ ಇದ್ದರೂ ಮಕ್ಕಳಿಲ್ಲದ ಕೊರಗು ರಾಜ–ರಾಣಿಯರನ್ನು ಕಾಡುತ್ತಿತ್ತು. ಅವರ ನೋವನ್ನು ಅರಿತ ಕುಲಗುರುಗಳಾದ ಭಾಸ್ಕರಾಚಾರ್ಯರು ಪುತ್ರಕಾಮೇಷ್ಟಿಯಾಗವನ್ನು ಮಾಡುವ ಸಲಹೆಯನ್ನಿತ್ತರು. ಅವರ ಸಲಹೆಯಂತೆ ಯಾಗವನ್ನು ಮಾಡಿದ ದಂಪತಿಗೆ ವೈಶಾಖ ಶುದ್ಧ ದಶಮಿಯಂದು ಅವಳಿ ಮಕ್ಕಳ ಜನನವಾಯಿತು. ಮಗ - ವಿರೂಪಾಕ್ಷ, ಮಗಳು – ವಾಸವಿ.

ದಿನಗಳೆದಂತೆ ವಿರೂಪಾಕ್ಷ ಯುದ್ಧಕಲೆಯಲ್ಲಿ ಪಾರಂಗತನಾದ; ವಾಸವಿ ಸಂಗೀತ, ನೃತ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ಹರೆಯಕ್ಕೆ ಕಾಲಿಡುವ ಹೊತ್ತಿಗೆ ಚೆಲುವೆ ವಾಸವಿ ಲೌಕಿಕಕ್ಕೆ ಅಂಟಿಯೂ ಅಂಟದವಳಂತೆ ಇರುತ್ತಾ ಆಧ್ಯಾತ್ಮದೆಡೆಗೆ ಹೆಚ್ಚು ಆಕರ್ಷಿತಳಾಗತೊಡಗಿದ್ದಳು. ತನ್ನ ಕುಲದೈವವಾದ ನಗರೇಶ್ವರನ ಆರಾಧನೆಯಲ್ಲಿ ಸಂಪೂರ್ಣವಾಗಿ ತಲ್ಲೀನಳಾಗುತ್ತಿದ್ದಳು. ಮಗಳ ಜಪತಪಾದಿ ಪೂಜಾ ಕೈಂಕರ್ಯಗಳಿಗೆ ಅನುಕೂಲವಾಗಲೆಂದು, ಕುಸುಮಶ್ರೇಷ್ಠಿಯು ಏಕಾಂತ ಸ್ಥಳವೊಂದರಲ್ಲಿ ಪುಟ್ಟ ನಗರೇಶ್ವರ ದೇಗುಲವನ್ನು ಕಟ್ಟಿಸಿಕೊಟ್ಟಿದ್ದ.

ಹೀಗಿರುವಾಗ ಒಂದು ಮುಂಜಾನೆ ಕೊಳದಲ್ಲಿ ಮಿಂದು ಶ್ವೇತವಸ್ತ್ರವನುಟ್ಟು ನಗರೇಶ್ವರ ದೇಗುಲಕ್ಕೆ ಹೋಗುತ್ತಿದ್ದ ವಾಸವಿಯು ವಿಷ್ಣುವರ್ಧನನ ಕಣ್ಣಿಗೆ ಬಿದ್ದಳು. ಅವಳಲ್ಲಿ ಮೋಹಗೊಂಡ ವಿಷ್ಣುವರ್ಧನ ಅವಳನ್ನು ಪಡೆಯಲೇಬೇಕೆಂದು ನಿರ್ಧರಿಸಿದ. ಆದಾಗ ತಾನೇ ಯುದ್ಧದಲ್ಲಿ ಗೆದ್ದು ಜೈತ್ರಯಾತ್ರೆ ಮುಗಿಸಿ ವಿಶ್ರಾಂತಿಗಾಗಿ ಪೆನುಗೊಂಡೆಯ ಕಡೆಗೆ ಬಂದಿದ್ದ ಚಕ್ರವರ್ತಿಯ ಕೀರ್ತಿ ಎಲ್ಲೆಡೆ ಹಬ್ಬಿತ್ತು. ತನ್ನ ಮಾತಿಗೆ ಯಾರೂ ಎದುರಾಡರು ಎಂಬ ಅಹಂ ಕೂಡ ಅವನಲ್ಲಿ ತುಂಬಿತ್ತು. ಆ ಕ್ಷಣವೇ ತಾನು ಕಂಡ ಹುಡುಗಿ ಯಾರೆಂದು ವಿಚಾರಿಸಿ, ಮದುವೆಯ ಪ್ರಸ್ತಾಪವನ್ನು ಕಳುಹಿಸಿದ.

ಇಂಥದ್ದೊಂದು ಅನಿರೀಕ್ಷಿತ ಪ್ರಸ್ತಾಪವನ್ನು ನಿರೀಕ್ಷಿಸಿರದ ಪೆನುಗೊಂಡೆಯ ಜನರು ಅಚ್ಚರಿಗೊಂಡರು. ಅದಾಗಲೇ ವಿವಾಹಿತನಾಗಿದ್ದ ಚಕ್ರವರ್ತಿ ಇನ್ನೊಂದು ಮದುವೆಯ ಪ್ರಸ್ತಾಪ ಕಳುಹಿಸಿರುವುದನ್ನು ಒಪ್ಪಿಕೊಳ್ಳುವುದು ಕುಸುಮಶ್ರೇಷ್ಠಿ ದಂಪತಿಗೂ ಸರಿಯೆನಿಸಲಿಲ್ಲ. ಮಗಳ ಅಭಿಪ್ರಾಯವನ್ನು ಕೇಳಿದಾಗ ವಾಸವಿ ತನಗೆ ಈ ಮದುವೆ ಸ್ವಲ್ಪವೂ ಇಷ್ಟವಿಲ್ಲವೆಂದೂ ನಗರೇಶ್ವರನೇ ತನ್ನ ಪತಿಯೆಂದು ಹೇಳಿಬಿಟ್ಟಳು. ವಿರೂಪಾಕ್ಷನೂ ತನ್ನ ಸೋದರಿಯ ಪರವಾಗಿ ನಿಂತನು. ವಿಷಯ ತಿಳಿದ ವಿಷ್ಣುವರ್ಧನನು ಅತ್ಯಂತ ಕ್ರುದ್ಧನಾಗಿ, ವಾಸವಿಯನ್ನು ತನಗೆ ಕೊಟ್ಟು ಮದುವೆ ಮಾಡದಿದ್ದರೆ, ರಾಜ್ಯದ ಮೇಲೆ ಆಕ್ರಮಣ ಮಾಡಿಯಾದರೂ ಅವಳನ್ನು ಪಡೆದೇ ತಿರುವೆನೆಂದು ಪ್ರತಿಜ್ಞೆ ಮಾಡಿದ.

ಇದರಿಂದ ವಿಚಲಿತನಾದ ಪ್ರಜಾಪಾಲಕ ಕುಸುಮಶ್ರೇಷ್ಠಿಯು ಈ ಸಂಗತಿಯನ್ನು ನಿಭಾಯಿಸುವ ಬಗೆ ಹೇಗೆಂದು ಚರ್ಚಿಸಲು ಪುರಪ್ರಮುಖರ ಸಭೆಯನ್ನು ಕರೆದನು. ಸಭೆಯಲ್ಲಿದ್ದ 714 ಗೋತ್ರದವರಲ್ಲಿ 612 ಗೋತ್ರದವರು ವಾಸವಿಯನ್ನು ವಿಷ್ಣುವರ್ಧನನಿಗೆ ಮದುವೆ ಮಾಡಿಕೊಟ್ಟು ಯುದ್ಧವನ್ನು ತಪ್ಪಿಸಬೇಕೆಂದರು. ಉಳಿದ 102 ಗೋತ್ರದವರು ವಾಸವಿಯ ನಿರ್ಧಾರವನ್ನು ಗೌರವಿಸಬೇಕೆಂದು ಹೇಳಿದರು. ವಿಷ್ಣುವರ್ಧನನ ಬಲಾತ್ಕಾರಕ್ಕೆ ಮಣಿಯಬಾರದೆಂದು ಹೇಳಿದರು.

ರಕ್ತಪಾತವಾಗದೆಯೇ, ಕಾಮಾಂಧ ವಿಷ್ಣುವರ್ಧನನಿಗೆ ಪಾಠ ಕಲಿಸಬೇಕೆಂದು ವಾಸವಿ ನಿರ್ಧರಿಸಿದಳು. ಅಗಾಧ ಸೈನ್ಯದೊಂದಿಗೆ ಪೆನುಗೊಂಡೆಯ ಮೇಲೆ ಆಕ್ರಮಣ ಮಾಡಲು ಚಕ್ರವರ್ತಿ ವಿಷ್ಣುವರ್ಧನನು ಬಂದನು. ಅಷ್ಟರಲ್ಲಿ ಗೋದಾವರೀತೀರದಲ್ಲಿ ಅಗ್ನಿಕುಂಡಗಳು ಹೊತ್ತಿದ್ದವು. ತನ್ನ ಬೆಂಬಲಕ್ಕೆ ನಿಂತ 102 ಗೋತ್ರದ ಹಿರಿಯ ದಂಪತಿಗಳೊಂದಿಗೆ ವಾಸವಿಯು ಪ್ರಾಣಾರ್ಪಣೆ ಮಾಡಿಕೊಂಡಿದ್ದಳು. ತನ್ನ ಬಲ–ಪರಾಕ್ರಮಗಳಿಂದ ಹೇಗಾದರೂ ವಾಸವಿಯನ್ನು ಪಡೆದೇ ತೀರುವೆನೆಂದು ಬಂದಿದ್ದ ವಿಷ್ಣುವರ್ಧನ ವಿಷಯ ತಿಳಿದು ದಾರಿಯಲ್ಲಿಯೇ ಎದೆಯೊಡೆದು ಸತ್ತ.

ಅಂದಿನಿಂದ ವಾಸವಿಯು ಶ್ರೀ ಕನ್ಯಕಾಪರಮೇಶ್ವರಿಯೆಂಬ ಹೆಸರಿನಿಂದ ಸ್ವಾಭಿಮಾನದ ಪ್ರತೀಕವಾಗಿ, ಆರ್ಯವೈಶ್ಯ ಸಮುದಾಯದ ಕುಲದೇವತೆಯಾಗಿ ಪೂಜಿಸಲ್ಪಡುತ್ತಿದ್ದಾಳೆ. ವಾಸವಿ ಜಯಂತಿಯಂದು ವಿಶೇಷವಾಗಿ ಕನ್ಯೆಯರನ್ನು ಪೂಜಿಸಲಾಗುತ್ತದೆ. ಕನ್ಯೆಯರ ಪಾದಗಳನ್ನು ತೊಳೆದು, ಆರತಿ ಬೆಳಗಿ ದಕ್ಷಿಣೆ ತಾಂಬೂಲಗಳನ್ನು ನೀಡುತ್ತಾರೆ. ಕೆಲವೆಡೆ ಚಿಮ್ಲಿ ಮತ್ತು ಅಕ್ಕಿ-ಬೆಲ್ಲವನ್ನು ಸೇರಿಸಿ ಮಾಡಿದ ಉಂಡೆಗಳನ್ನು ಅವರಿಗೆ ತಾಂಬೂಲದೊಡನೆ ನೀಡಿ, ಎಗಚಿಹಣ್ಣುಗಳನ್ನು ಮಕ್ಕಳ ತಲೆಯ ಮೇಲೆ ಸುರಿದು ನಂತರ ಆರತಿ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT