ಸೋಮವಾರ, ನವೆಂಬರ್ 29, 2021
21 °C

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ | ಶಿವ-ಗಣೇಶ ಯುದ್ಧ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವನ ಆಜ್ಞೆಯಂತೆ ಅವನ ಗಣಗಳೆಲ್ಲಾ ಯುದ್ಧಸನ್ನದ್ದರಾಗಿ ಹೊರಟರು. ಶಿವಗಣಗಳು ತನ್ನ ಕಡೆಗೆ ಬರುತ್ತಿರುವುದನ್ನು ಕಂಡು ಗಣೇಶ ಹೇಳಿದ ‘ಎಲೈ ಗಣಗಳೇ, ನೀವೆಲ್ಲರೂ ಶಿವನ ಅಪ್ಪಣೆಯಂತೆ ಬರುತ್ತಿರುವಿರಿ. ನಾನೂ ಪಾರ್ವತಿಯ ಅನುಜ್ಞೆಯಂತೆ ನಡೆಯುವವ. ಗಿರಿಜೆಯ ಪುತ್ರನಾದ ನನ್ನ ಬಲ ಹೆಚ್ಚೋ, ಇಲ್ಲ ಗಣಗಳ ಬಲ ಹೆಚ್ಚೋ ಎಂಬುದನ್ನು ಶಿವ ನೋಡಲಿ. ಪಾರ್ವತೀಪಕ್ಷದಲ್ಲಿ ಬಾಲಕನಾದ ನಾನು ಒಬ್ಬನು ಮಾತ್ರ. ಶಿವನ ಪಕ್ಷ ದಲ್ಲಿ ಬಲಿಷ್ಠರಾದ ನೀವೆಲ್ಲರೂ ಇರುವಿರಿ.

ಇಂತಹ ನಮ್ಮಿಬ್ಬರಿಗೂ ಯುದ್ಧ ವಾಗಬೇಕು. ನೀವಾದರೆ ಯುದ್ಧದಲ್ಲಿ ವಿಶಾರದರು. ಹಿಂದೆ ಎಷ್ಟೋ ಯುದ್ಧ ವನ್ನು ಮಾಡಿರುವಿರಿ. ನಾನೂ ಹಿಂದೆಂದೂ ಯುದ್ಧ ಮಾಡಿಲ್ಲ. ನೀವು ನಿಮ್ಮ ಸ್ವಾಮಿಯಾದ ಶಿವನ ಪರವಾಗಿ ಯುದ್ಧ ಮಾಡಿರಿ. ನಾನು ನನ್ನ ತಾಯಿಯಾದ ಭವಾನಿಯ ಪರವಾಗಿ ಯುದ್ಧ ಮಾಡುವೆ. ಈ ಯುದ್ಧವನ್ನು ನಿಲ್ಲಿಸಲು ಮೂರು ಲೋಕದಲ್ಲಿ ಯಾರಿಗೂ ಸಾಧ್ಯವಿಲ್ಲ’ ಎಂದು ಶಿವಗಣಗಳನ್ನು ಲೇವಡಿ ಮಾಡಿದ.

ಗಣೇಶನ ಮಾತಿನಿಂದ ಆಕ್ರೋಶಗೊಂಡ ನಂದಿಯು ನುಗ್ಗಿ ಬಂದು ಗಣಪತಿಯ ಒಂದು ಕಾಲನ್ನು ಹಿಡಿದೆಳೆದನು. ಭೃಂಗಿಯು ಸಹ ಧಾವಿಸಿ ಬಂದು ಗಣಪತಿಯ ಮತ್ತೊಂದು ಪಾದವನ್ನು ಹಿಡಿದೆಳೆದನು. ಅವರಿಬ್ಬರೂ ಕಾಲನ್ನು ಹಿಡಿದೆಳೆಯುತ್ತಿರುವಾಗ ಗಣಪತಿಯು ತನ್ನ ಎರಡು ಕೈಗಳಿಂದ ಅವರಿಬ್ಬರನ್ನು ಬಲವಾಗಿ ತಳ್ಳಿದ. ಅವರು ದೂರಹೋಗಿ ಬಿದ್ದರು. ಬಳಿಕ ವೀರನಾದ ಗಣಪತಿಯು ಪರಿಘಾಯುಧವನ್ನು ಬಾಗಿಲಿನಲ್ಲಿ ನಿಂತುಕೊಂಡೇ ಎಸೆದನು.

ಅದರ ಏಟಿನಿಂದ ಕೆಲ ಶಿವಗಣಗಳ ಕೈಗಳು ಮುರಿದುಹೋದವು. ಕೆಲವರ ಬೆನ್ನುಗಳು ಮುರಿದವು. ಕೆಲವರ ತಲೆಗಳು ಉರುಳಿದವು. ಕೆಲವರ ಹಣೆಗಳು ಚೂರಾದವು. ಕೆಲವರ ಮಂಡಿಗಳು, ಕೆಲವರ ಬಾಹುಗಳೂ ಚೂರುಚೂರಾದವು. ಗಣಪತಿಯ ಎದುರಿಗೆ ನುಗ್ಗಿ ಬರುವವರ ಹೃದಯಕ್ಕೆ ಏಟುಬಿದ್ದು ಸಾಯುತ್ತಿದ್ದರು. ಕೆಲವರು ದಿಕ್ಕೆಟ್ಟು ಓಡಿದರು. ಮತ್ತೆ ಕೆಲವರ ಕಾಲುಗಳು ಕತ್ತರಿಸಿಬಿದ್ದವು. ಹೆದರಿಕೊಂಡ ಕೆಲವರು ಪಲಾಯನ ಮಾಡಿ, ಶಿವನ ಹತ್ತಿರಕ್ಕೆ ಓಡಿಹೋದರು. ಗಣಪತಿ ಮಾತ್ರ ಬಾಗಿಲಿನಲ್ಲಿ ನಿಂತೇ ಇದ್ದನು. ಆ ಸಮಯದಲ್ಲಿ ಅವನು ಪ್ರಳಯಕಾಲದ ಕಾಲಪುರುಷನಂತೆ ಭಯಂಕರನಾಗಿ ಕಾಣಿಸುತ್ತಿದ್ದ.

ಈ ಸಂದರ್ಭದಲ್ಲಿ ಬ್ರಹ್ಮ ವಿಷ್ಣು ಮೊದಲಾದ ದೇವತೆಗಳು ನಾರದನಿಂದ ಶಿವ-ಗಣೇಶ ಯುದ್ಧ ಮಾಡುತ್ತಿರುವ ವಿಷಯ ತಿಳಿದು, ಶಿವನ ಪರವಾಗಿ ಗಣೇಶನ ಮೇಲೆ ಯುದ್ಧ ಮಾಡಲು ಬಂದರು. ಗಣಪತಿ ಪರಿಘಾಯುಧವನ್ನು ತೆಗೆದುಕೊಂಡ ತಕ್ಷಣವೇ ಬ್ರಹ್ಮನ ಸಹಿತ ಎಲ್ಲ ದೇವತೆಗಳು ಓಡಿಹೋದರು. ದೇವತೆಗಳೆಲ್ಲರೂ ಓಡಿಬಂದುದನ್ನೂ ನೋಡಿ ಶಂಕರನು ಅತಿಕೋಪಗೊಂಡ. ಇಂದ್ರ, ಷಣ್ಮುಖ ಮುಂತಾದ ಪ್ರಮಥಗಳನ್ನೂ, ಭೂತ, ಪ್ರೇತ, ಪಿಶಾಚಗಳನ್ನೂ ಕಳುಹಿಸಿದ. ಅವರೆಲ್ಲಾ ದಾಳಿ ಮಾಡಿ ಗಣಪತಿಗೆ ಬಲವಾಗಿ ಹೊಡೆಯುತ್ತಿದ್ದರು. ವಿಷಯ ತಿಳಿದ ಪಾರ್ವತಿ ಕೋಪಗೊಂಡು ಗಣಪತಿಗೆ ಸಹಾಯಮಾಡಲು ಇಬ್ಬರು ಶಕ್ತಿ ದೇವತೆಯನ್ನು ಸೃಷ್ಟಿಮಾಡಿದಳು. ಅವರಲ್ಲಿ ಒಬ್ಬಳು ಭಯಂಕರವಾಗಿದ್ದಳು.

ಕಪ್ಪಗೆ ಪರ್ವತದ ಗಾತ್ರವಾಗಿದ್ದಳು. ಗುಹೆಯಂತಿರುವ ತನ್ನ ಬಾಯನ್ನು ತೆರೆದುಕೊಂಡಿದ್ದಳು. ಮತ್ತೊಬ್ಬಳು ಮಿಂಚಿನಂತೆ ಹೊಳೆಯುತ್ತಿರುವ ರೂಪವುಳ್ಳವಳು. ಅವಳಿಗೆ ಅನೇಕ ಕೈಗಳಿದ್ದವು. ದುಷ್ಟರನ್ನು ಶಿಕ್ಷಿಸಲು ಸಮರ್ಥಳಾಗಿದ್ದಳು. ಅವರಿಬ್ಬರೂ ದೇವತೆಗಳ ಆಯುಧಗಳನ್ನು ತಮ್ಮ ಬಾಯಿಯಲ್ಲಿ ಹಾಕಿಕೊಳ್ಳುತ್ತಿದ್ದರು. ಇದರಿಂದ ಇಂದ್ರಾದಿ ದೇವತೆಗಳೆಲ್ಲರೂ ಪರಾಜಿತರಾದರು. ಮಹಾವೀರನಾದ ಷಣ್ಮುಖನು ಮಾತ್ರ ಯುದ್ಧದಲ್ಲಿ ಹಿಮ್ಮೆಟ್ಟದೆ ದೇವತೆಗಳನ್ನೆಲ್ಲಾ ಹಿಂದಿಟ್ಟುಕೊಂಡು ಧೈರ್ಯವಾಗಿ ಮುಂದೆ ನಿಂತಿದ್ದ. ಉಳಿದ ದೇವತೆಗಳೆಲ್ಲರೂ ಯುದ್ಧರಂಗದಿಂದ ಓಡಿ ಶಿವನ ಬಳಿ ದಯನೀಯವಾಗಿ ನಿಂತರು. ರುದ್ರನು ಅತ್ಯಂತ ಕೋಪದಿಂದ ಗಣಪತಿ ಇದ್ದೆಡೆಗೆ ಹೊರಟನು. ವಿಷ್ಣು ಮತ್ತು ದೇವಸೈನ್ಯವೂ ಹಿಂಬಾಲಿಸಿತು. ಈ ಸಂದರ್ಭದಲ್ಲಿ ‘ನಿನ್ನ ವಿರೋಧಿಯನ್ನು ನಾಶಮಾಡು’ ಎಂದು ಶಿವನಿಗೆ ಹೇಳಿ ನಾರದ ಅಂತರ್ಧಾನನಾದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು