ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಕರೆಯದ ಯಜ್ಞಕ್ಕೆ ಹೊರಟ ಸತಿ

ಭಾಗ 172
ಅಕ್ಷರ ಗಾತ್ರ

‘ಎಲೈ ನಾರದ, ದಕ್ಷಯಜ್ಞಕ್ಕೆ ದೇವತೆಗಳು ಮತ್ತು ದೇವಮುನಿಗಳು ಹೋಗುತ್ತಿರುವಾಗ ಸತೀದೇವಿಯು ಗಂಧಮಾದನ ಪರ್ವತದಲ್ಲಿರುವ ಧಾರಾಗೃಹವೆಂಬ ಜಲವಿಹಾರಗೃಹದಲ್ಲಿ ಸಖಿಯರೊಡನೆ ವಿತಾನಾದಿಗಳಿಂದ ಜಲಕೇಳೀವಿನೋದದಲ್ಲಿ ಮಗ್ನಳಾಗಿದ್ದಳು.

ಹೀಗೆ ಸತಿಯು ಕ್ರೀಡಿಸುತ್ತಿರುವಾಗ ಚಂದ್ರನು ರೋಹಿಣಿಯ ಅನುಮತಿಯನ್ನು ಪಡೆದು ದಕ್ಷಯಜ್ಞಕ್ಕೆ ತ್ವರೆಯಿಂದ ಹೊರಟ. ಚಂದ್ರನು ತ್ವರೆಯಿಂದ ಹೊರಟುದನ್ನು ನೋಡಿದ ಸತೀದೇವಿ ತನ್ನ ಸಖಿಯಾದ ವಿಜಯೆಯನ್ನು ಕೇಳುತ್ತಾಳೆ. ‘ಎಲೈ ವಿಜಯೇ, ಈಗ ರೋಹಿಣಿಯಿಂದ ಬೀಳ್ಕೊಂಡ ಚಂದ್ರನು ಎಲ್ಲಿಗೆ ಹೋಗುತ್ತಿದ್ದಾನೆ’ ಎಂದಾಗ, ವಿಜಯೇ ಚಂದ್ರನಬಳಿಗೆ ಹೋಗಿ ‘ಇಷ್ಟು ಆತುರದಿಂದ ಎಲ್ಲಿಗೆ ಹೊರಟಿರುವೆ? ಅಂತಹ ಅವಶ್ಯಕವಾದ ಕೆಲಸ ಯಾವುದು?’ ಎಂದು ಕೇಳುತ್ತಾಳೆ. ಆಗ ಚಂದ್ರ ತಾನು ದಕ್ಷಯಜ್ಞಕ್ಕೆ ಹೋಗುತ್ತಲಿರುವುದಾಗಿ ತಿಳಿಸಿದ. ವಿಜಯೆ ಆಶ್ಚರ್ಯದಿಂದ ಸತೀದೇವಿಯ ಬಳಿಗೆ ಬಂದು ಚಂದ್ರನು ಹೇಳಿದುದೆಲ್ಲವನ್ನೂ ಹೇಳಿದಳು. ಕೇಳಿದ ಸತೀದೇವಿ ಆಶ್ಚರ್ಯಗೊಂಡಳು.

ತಂದೆಯಾದ ದಕ್ಷ ಮತ್ತು ತಾಯಿ ವೀರಿಣಿಯ ಮಕ್ಕಳಲ್ಲಿ ತಾನು ಪ್ರಿಯಳಾದ ಮಗಳು. ತನ್ನನ್ನೇಕೆ ಅವರು ಯಜ್ಞಕ್ಕೆ ಕರೆಯಲಿಲ್ಲ? ಕಾರಣವೇನೆಂದು ತಿಳಿಯಲು ಶಿವನ ಬಳಿಗೆ ತೆರಳಿದಳು. ಪರಮೇಶ್ವರನ ಬಳಿ ಬಂದ ಸತೀದೇವಿ ‘ಓ ಸ್ವಾಮಿ, ನನ್ನ ತಂದೆಯಾದ ದಕ್ಷನು ದೊಡ್ಡ ಯಜ್ಞವೊಂದನ್ನು ಮಾಡುತ್ತಿರುವನೆಂದು ಕೇಳಿದೆ. ದೇವದೇವನಾದ ನೀನು ನನ್ನ ತಂದೆ ಮಾಡುವ ಯಜ್ಞಕ್ಕೆ ಹೋಗದಿರಲು ಕಾರಣವೇನು?’ ಎಂದು ಕೇಳಿದಳು. ‘ಎಲೈ ದೇವಿ, ನಿನ್ನ ತಂದೆಯಾದ ದಕ್ಷಬ್ರಹ್ಮ ನನ್ನನ್ನು ದ್ವೇಷಿಸುತ್ತಲಿರುವನು. ನನ್ನನ್ನು ಯಾಗಕ್ಕೆ ಆಹ್ವಾನಿಸಿಲ್ಲ. ದುರಹಂಕಾರಿಯಾದ ಅವನ ಯಾಗಕ್ಕೆ ಹೋಗಿರುವವರು ಮೂಢರು, ತಿಳಿವಳಿಕೆಯಿಲ್ಲದವರು’ ಎಂದು ಮೂದಲಿಸಿದ. ಆಗ ಸತೀದೇವಿ ‘ನನ್ನ ತಂದೆಯ ಕಾರ್ಯಕ್ಕೆ ಕರೆಯದೇ ಇದ್ದರೇನು? ನಾವು ಹೋಗೋಣ ಬನ್ನಿ’ ಎಂದು ಶಿವನನ್ನು ಒತ್ತಾಯಿಸಿದಳು.

‘ಕರೆಯದೆ ಪರರ ಮನೆಗೆ ಹೋಗಕೂಡದು. ಹಾಗೆ ಹೋದರೆ, ಅವಮಾನವಾಗುವುದು. ಅವಮಾನವೆಂಬುದು ಮರಣಕ್ಕಿಂತಲೂ ಹೆಚ್ಚಾದುದು. ನಮ್ಮ ಬಂಧುಗಳಿಂದ ಆಗುವ ಅವಮಾನ ಶತ್ರುಗಳ ಬಾಣದ ಏಟಿಗಿಂತಲೂ ತೀಕ್ಷ್ಣವಾಗಿರುತ್ತದೆ. ಆದುದರಿಂದ ನಾವು ದಕ್ಷನ ಯಜ್ಞಕ್ಕೆ ಹೋಗಬಾರದು, ಅದು ಉಚಿತವಲ್ಲ’ ಎಂದು ತಿಳಿವಳಿಕೆ ಹೇಳುತ್ತಾನೆ. ಆದರೆ ಸತೀದೇವಿಯು ಅದನ್ನು ಆಲಿಸದೆ ಕೋಪಗೊಳ್ಳುತ್ತಾಳೆ.

‘ಓ ಶಂಕರ, ನೀನು ಯಜ್ಞಗಳ ಫಲದಾತೃ. ಇಂತಹ ನಿನ್ನನ್ನು ದುಷ್ಟನಾದ ನನ್ನ ತಂದೆ ದಕ್ಷನು ಆಹ್ವಾನಿಸಿಲ್ಲ. ಆದಕಾರಣ ಅವನಿಗೆ ಯಜ್ಞದಲ್ಲಿ ಒಳ್ಳೆಯ ಫಲವು ದೊರೆಯಲಾರದು. ಈ ವಿಷಯವನ್ನು ನನ್ನ ತಂದೆ ದಕ್ಷ ಮತ್ತು ಅಲ್ಲಿ ಸೇರಿರುವ ದೇವ ಋಷಿಗಳಿಗೆಲ್ಲ ತಿಳಿಯುವಂತೆ ಹೇಳಿ ಬರುವೆ. ನಾನು ಯಜ್ಞಶಾಲೆಗೆ ಹೋಗಲು ಅನುಮತಿಯನ್ನು ಕೊಡು’ ಎಂದು ಕೋರಿದಳು.

‘ಎಲೈ ದೇವಿ, ದಕ್ಷಯಜ್ಞಕ್ಕೆ ಹೋಗುವುದು ಅವಶ್ಯಕವೆಂದು ನಿನಗೆ ತೋರಿದರೆ ನೀನು ಹೋಗಬಹುದು. ಆದರೆ, ನಿನಗೆ ಅಲ್ಲಿ ಯೋಗ್ಯರೀತಿಯಲ್ಲಿ ಗೌರವ ಸಿಗಲಾರದು. ಆದ್ದರಿಂದ ಮತ್ತೊಮ್ಮೆ ಯೋಚಿಸು’ ಎಂದ ಶಿವ. ಆದರೆ ಸತೀದೇವಿ ದಕ್ಷನ ಯಜ್ಞಶಾಲೆಗೆ ಹೋಗುವ ನಿಲುವು ಸಡಿಲಿಸದಿದ್ದಾಗ ‘ಎಲೈ ಸತೀದೇವಿ, ರಾಜಯೋಗ್ಯವಾದಂತಹ ಅಲಂಕಾರಗಳಿಂದ ಶೋಭಿತಳಾಗಿ, ನಂದಿಕೇಶ್ವರನನ್ನೇರಿ ದಕ್ಷನ ಯಜ್ಞಶಾಲೆಗೆ ತೆರಳು’ ಎಂದು ಶಂಕರ ಕಳುಹಿಸಿಕೊಟ್ಟ. ಶಿವನ ಅಪ್ಪಣೆಯಂತೆ ಅರವತ್ತು ಸಾವಿರ ರುದ್ರಗಣಗಳು ಸತೀದೇವಿಯನ್ನು ಹಿಂಬಾಲಿಸಿದರು ಎಂಬಲ್ಲಿಗೆ ಸತೀಖಂಡದ ಇಪ್ಪತ್ತೆಂಟನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT