ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಾಸಕ್ಕೆ ಮನೆ ಕೋರಿದ ಸತಿ

ಭಾಗ 161
ಅಕ್ಷರ ಗಾತ್ರ

ಶಿವ-ಸತೀದೇವಿಯರ ದಾಂಪತ್ಯಜೀವನ ಸುಖದಿಂದ ಸಾಗುವಾಗ ಮಳೆಗಾಲ ಪ್ರಾರಂಭವಾಗುತ್ತದೆ. ಆಗ ಸತೀದೇವಿಯು ‘ಓ ದೇವದೇವ, ಈಗ ಸಹಿಸಲು ಅಸಾಧ್ಯವಾದ ಮಳೆಗಾಲದಲ್ಲಿ ಮೇಘಗಳು ಭಯಂಕರವಾಗಿ ಆರ್ಭಟಿಸುತ್ತಿವೆ. ಮಿಂಚು ಮೇಘಗಳ ಘರ್ಜನೆಗೆ ಮನಸ್ಸು ಕ್ಷೋಭೆಗೊಳ್ಳುವಂತಾಗಿದೆ. ಆಕಾಶವು ಮೋಡಗಳಿಂದ ಮುಚ್ಚಿ ರುವುದರಿಂದ ಹಗಲು ಸೂರ್ಯನೂ, ರಾತ್ರಿ ಚಂದ್ರನೂ ಕಾಣಿಸುತ್ತಿಲ್ಲ. ಹಗಲು ರಾತ್ರಿಯಂತೆ ಕಾಣುತ್ತಿರುವ ಈ ಕಾಲವು ವಿರಹಿಗಳಿಗೆ ದುಃಖವ ನ್ನುಂಟುಮಾಡುತ್ತಿದೆ. ಓ ಶಂಕರ, ಮಹಾಗಾಳಿಯಿಂದ ಮೇಘಗಳು ಘರ್ಜಿಸುತ್ತಾ ಒಂದೆಡೆಯಲ್ಲಿ ನಿಲ್ಲದೇ ಆಕಾಶದಲ್ಲೆಲ್ಲಾ ಸಂಚರಿಸುತ್ತಿವೆ. ಬಿರುಗಾಳಿಯಿಂದ ಕೆಡಹಲ್ಪಟ್ಟ ದೊಡ್ಡದೊಡ್ಡ ಮರಗಳು ಗಾಳಿಯ ಹೊಡೆತದಿಂದ ಆಕಾಶದಲ್ಲಿ ತೂರಿಹೋಗುತ್ತಿವೆ. ಈ ಸನ್ನಿವೇಶವು ನೋಡುಗರಿಗೆ ಭಯವನ್ನುಂಟುಮಾಡುತ್ತಿದೆ. ಆಕಾಶದಲ್ಲಿ ನಿಬಿಡವಾಗಿ ನೀಲಮೇಘಗಳು ತುಂಬಿವೆ. ಅದರ ಮಧ್ಯೆ ಬೆಳ್ಳಕ್ಕಿಗಳು ಸಾಲಾಗಿ ಹಾರುತ್ತಿವೆ. ಇದನ್ನು ನೋಡಿದರೆ ಯಮುನಾನದಿಯ ನೀಲವಾದ ಜಲದಲ್ಲಿ ತೇಲುತ್ತಿರುವ ಬಿಳಿಯ ನೊರೆಗಳ ಸಾಲಿನಂತೆ ಕಾಣಿಸುತ್ತಲಿದೆ.

‘ನೀಲವಾದ ಮೇಘಗಳ ನಡುವೆ ಹೊಳೆಯುವ ಮಿಂಚು, ಕರೀ ನೀರಿನ ಸಮುದ್ರದಲ್ಲಿ ವಡವಾಗ್ನಿಯು ಜ್ವಲಿಸುವಂತೆ ಕಾಣಿಸುತ್ತಿದೆ. ಮನೆಯ ಅಂಗಳಗಳಲ್ಲಿ ಸಸ್ಯಗಳು ಹುಟ್ಟುತ್ತಲಿವೆ ಎಂದರೆ, ಬಯಲು ಪ್ರದೇಶಗಳಲ್ಲಿ ಸಸ್ಯಗಳು ಹೇಗೆ ದಟ್ಟವಾಗಿ ಹುಟ್ಟುತ್ತವೆ ಎಂಬುದನ್ನು ಹೇಳುವ ಅವಶ್ಯಕತೆಯೇ ಇಲ್ಲ. ಸಮುದ್ರವನ್ನು ಕಡೆಯುವ ಕಾಲದಲ್ಲಿ ಮಂದಾರಪರ್ವತದಲ್ಲಿದ್ದ ವೃಕ್ಷಗಳ ಬಗೆಬಗೆಯ ಬಣ್ಣದ ಎಲೆಗಳು ಕ್ಷೀರಸಮುದ್ರದಲ್ಲಿ ಬಿದ್ದು ಯಾವರೀತಿ ಕಾಣಿಸುತ್ತಿದ್ದವೋ, ಅದರಂತೆ ಕಪ್ಪಗೂ ಬೆಳ್ಳಗೂ ಇರುವ ವೃಕ್ಷಲತಾಗುಲ್ಮಗಳ ಸಮೂಹದಿಂದ ಈ ಹಿಮಾಲಯಪರ್ವತವು ಕಾಣಿಸುತ್ತಿದೆ.

‘ಕಲಿಯುಗದಲ್ಲಿ ಲಕ್ಷ್ಮಿಯು ಸತ್ಪುರುಷರನ್ನು ಬಿಟ್ಟು ಕುಟಿಲರನ್ನಾ ಶ್ರಯಿಸುವಂತೆ, ಮುತ್ತುಗದ ಗಿಡಗಳಲ್ಲಿ ಹೂ ಬರದೆ ಕ್ಷುದ್ರಗಿಡಗಳಲ್ಲಿ ಹೂಗಳು ಬರುತ್ತಿವೆ. ಮೇಘಘರ್ಜನೆಯನ್ನು ಕೇಳಿ ಹರ್ಷಗೊಂಡ ನವಿಲುಗಳು ನರ್ತನಮಾಡುವಾಗ ಮತ್ತು ಮಳೆಯನ್ನ ಸೂಚಿಸುವ ಚಾತಕಪಕ್ಷಿಗಳು ಸಂತೋಷದಿಂದ ಹಾಡುತ್ತಾ ಹಾರುವಾಗ ಮೇಘ ಗಳು ಆಲಿಕಲ್ಲುಗಳನ್ನು ಸುರಿಸಿ ತೊಂದರೆಕೊಡುತ್ತಿವೆ. ಬಂಧುವಾದ ಮೇಘದಿಂದಲೇ ನವಿಲು ಮತ್ತು ಚಾತಕಗಳಿಗೆ ಆದ ಅನ್ಯಾಯವನ್ನು ನೋಡಿ, ಹೆದರಿಕೆಯಿಂದ ಹಂಸಗಳು ದೂರವನ್ನು ಲೆಕ್ಕಿಸದೆ ಹಿಮಾ ಲಯ ತಪ್ಪಲಲ್ಲಿರುವ ಮಾನಸಸರೋವರಕ್ಕೆ ತೆರಳುತ್ತಿವೆ. ಇಂತಹ ವಿಷಮವಾದ ಮಳೆಗಾಲದಲ್ಲಿ ಕಾಗೆ ಮತ್ತು ಚಕೋರಗಳೂ ರಕ್ಷಣೆಗಾಗಿ ಗೂಡನ್ನು ಕಟ್ಟಿಕೊಂಡು ವಾಸಮಾಡುತ್ತಲಿವೆ. ಹೀಗಿರುವಾಗ ಓ ಶಂಕರ, ನೀನು ವಾಸಕ್ಕೆ ಮನೆಯಿಲ್ಲದೇ ಹೇಗೆ ಸುಖವನ್ನು ಹೊಂದುವೆ? ಇಂತಹ ಘೋರವಾದ ಮಳೆಗಾಲದಲ್ಲಿ ನನಗೂ ತುಂಬಾ ಭಯವಾಗುತ್ತಿದೆ. ಆದಕಾರಣ ನಮ್ಮ ವಾಸಕ್ಕೆ ಕೈಲಾಸದಲ್ಲಿಯಾಗಲೀ ಹಿಮಾಚಲದ ಲ್ಲಿಯಾಗಲೀ ಮಹಾಕೋಪೀ ಎಂಬ ಜಲಪಾತದ ತಪ್ಪಲಲ್ಲಿಯಾಗಲೀ ನಮ್ಮ ವಾಸಕ್ಕೆ ಯೋಗ್ಯವಾದಂತಹ ಮನೆಯನ್ನು ನಿರ್ಮಿಸು’ ಎಂದು ಸತೀದೇವಿ ಪ್ರಾರ್ಥಿಸುತ್ತಾಳೆ.

ಆಗ ಶಿವ ಮಂದಹಾಸವನ್ನು ಸೂಸುತ್ತಾ ನಕ್ಕ. ಬಳಿಕ ‘ಎಲೈ ಪ್ರಿಯೆ! ನಿನ್ನ ಸಂತೋಷಕ್ಕಾಗಿ ನಾನು ಎಲ್ಲಿ ವಾಸವನ್ನು ಕಲ್ಪಿಸುವೆನೋ, ಅಲ್ಲಿ ಎಂದೂ ಮೇಘಗಳು ಹೋಗಲಾರವು. ಅಂತಹ ಸ್ಥಳದಲ್ಲಿ ವಾಸವನ್ನು ನಿನ್ನ ಪ್ರೀತಿಗಾಗಿ ಕಲ್ಪಿಸುವೆ. ಮಳೆಗಾಲದಲ್ಲೂ ಮೇಘಗಳು ಹಿಮವತ್ಪರ್ವತದ ಮಧ್ಯಭಾಗದವರೆಗೇ ಮಾತ್ರ ಸಂಚರಿಸುವುವು. ಕೈಲಾಸ ಪರ್ವತದಲ್ಲಿ ಕಾಲುಭಾಗದ ಮೇಲೆ ಸಂಚರಿಸಲಾರವು. ಹಾಗೇ, ಮೇರುಪರ್ವತದಲ್ಲಿ ಪುಷ್ಕರ, ಆವರ್ತ, ಸಂವರ್ತ, ಕುಂಭಗಳೆಂಬ ಬ್ರಹ್ಮನ ರೇತಸ್ಸಿನಿಂದ ಹುಟ್ಟಿದ ಪ್ರಳಯರೂಪಿ ಮಹಾಮೇಘಗಳೂ ಜಂಬೂಮೂಲವೆಂಬ ಆ ತಪ್ಪಲುಪ್ರದೇಶದವರೆಗೆ ಮಾತ್ರ ಸಂಚರಿಸು ವವು. ಅದರಿಂದ ಮುಂದಕ್ಕೆ ಹೋಗಲಾರವು. ಈಗ ನಾನು ಹೇಳಿದ ಮೂರು ಬೆಟ್ಟಗಳಲ್ಲಿ ಯಾವ ಬೆಟ್ಟದ ಮೇಲ್ಭಾಗವು ವಾಸಕ್ಕೆ ಇಷ್ಟವಾಗಿ ತೋರುವುದೋ ಅದನ್ನು ಹೇಳು. ಹಿಮಾಲಯದಲ್ಲಿ ಮಾನಸಸರಸ್ಸಿನ ಹಂಸಗಳು ತಮ್ಮ ಸುಂದರವಾದ ಸುವರ್ಣದ ರೆಕ್ಕೆಗಳಿಂದ ನಿನಗೆ ಗಾಳಿಯನ್ನು ಹಾಕುತ್ತವೆ. ಕೋಗಿಲೆ ಮುಂತಾದ ಪಕ್ಷಿಗಳು ಇಂಪಾಗಿ ಹಾಡಿ ನಿನ್ನನ್ನು ಮುದಗೊಳಿಸುತ್ತವೆ. ವಸಂತಋತುವಿಗೆ ಜನ್ಮಸ್ಥಾನವಾದ ಹಾಗೂ ನಿರ್ಮಲವಾದ ಸರೋವರಗಳಿರುವ ಹಿಮಾಲಯವನ್ನು ವಾಸಕ್ಕಾಗಿ ಅಪೇಕ್ಷೆಸುವಿಯಾ?’ ಎಂದು ಕೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT